ಸೋಮವಾರ, ಡಿಸೆಂಬರ್ 16, 2019
26 °C

‘ಮುಖ ನೋಡಿದ್ರೇ ‌ಖಳ ಪಾತ್ರ ಕೊಡಲ್ಲ’

ಹೇಮಾ ವೆಂಕಟ್‌ Updated:

ಅಕ್ಷರ ಗಾತ್ರ : | |

‘ಮುಖ ನೋಡಿದ್ರೇ ‌ಖಳ ಪಾತ್ರ ಕೊಡಲ್ಲ’

ಒಂದೂರಲ್ಲಿ ರಾಜಾರಾಣಿ ಧಾರಾವಾಹಿಯ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿರುವ ಪ್ರಿನ್ಸಿ ಕೃಷ್ಣನ್‌ ಕೇರಳ ಮೂಲದವರು. ಹುಟ್ಟಿ ಬೆಳೆದಿದ್ದು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ. ಬಿಬಿಎಂ ಪದವಿ ಮುಗಿಯುತ್ತಿದ್ದಂತೆ ಕಿರುತೆರೆಯಲ್ಲಿ ಅವಕಾಶ ಗಿಟ್ಟಿಸಿಕೊಂಡವರು.

ಒಂದು ವರ್ಷದಿಂದ ತೆಲುಗಿನ ಮಾ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಕುಂಕುಮ ಪೂ’ ಧಾರಾವಾಹಿಯಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತಿದ್ದಾರೆ. ಸದ್ಯ ಉದಯ ವಾಹಿನಿಯ ಹೊಸ ಧಾರಾವಾಹಿ ಕಾವೇರಿಯಲ್ಲಿಯೂ ಮುಖ್ಯ ಭೂಮಿಕೆಯಲ್ಲಿದ್ದಾರೆ. ಕುಂಕುಮ ಪೂ ಧಾರಾವಾಹಿಯಲ್ಲಿ ಅನಾಥ ಹೆಣ್ಣುಮಗಳಾಗಿ, ಕಾವೇರಿ ಧಾರಾವಾಹಿಯಲ್ಲಿ ಇಬ್ಬರು ಮಕ್ಕಳ ತಾಯಿಯ ಪಾತ್ರ ನಿರ್ವಹಿಸುತ್ತಿದ್ದಾರೆ.

* ಚಿಕ್ಕ ವಯಸ್ಸಿಗೆ ಎರಡು ಮಕ್ಕಳ ತಾಯಿಯಾಗಿದ್ದೀರಿ, ಹೇಗನ್ನಿಸುತ್ತಿದೆ?

ನಿಜ. ಮಕ್ಕಳನ್ನು ಸಾಕುವ ಕಷ್ಟ ಏನೆಂದು ಈಗ ಗೊತ್ತಾಗುತ್ತಿದೆ. ನನ್ನ ಮುಂದಿನ ಬದುಕಿಗೆ ಇದರಿಂದ ಸಹಾಯವಾಗಬಹುದು.

* ನಿಮ್ಮ ಕಾಲೇಜು ಗೆಳೆಯರೆಲ್ಲ ಕಾಲೆಳೆಯಲ್ವಾ?

ಹೌದು. ಗೆಳೆಯರೆಲ್ಲ ‘ಏ ... ಆಂಟಿ ಬಂದ್ರು’ ಎಂದು ತಮಾಷೆ ಮಾಡುತ್ತಾರೆ. ನನಗೆ ಮಕ್ಕಳೆಂದರೆ ತುಂಬಾ ಇಷ್ಟ. ಈ ಮಕ್ಕಳೋ ಎಷ್ಟೇ ಹೇಳಿಕೊಟ್ಟರೂ ಕ್ಯಾಮರಾ ಮುಂದೆ ನನ್ನನ್ನು ಅಮ್ಮಾ ಎಂದು ಕರೆಯೋ ಬದಲು ಅಕ್ಕ...ಅಕ್ಕ ಎಂದೇ ಕರೆಯುತ್ತವೆ.

* ಜನರು ಕಾವೇರಿಯನ್ನು ಗುರುತಿಸುತ್ತಾರೋ, ಪ್ರಿನ್ಸಿಯನ್ನು ಗುರುತಿಸುತ್ತಾರೋ?

ಸದ್ಯ ನಾನೇ ಕಾವೇರಿ ಎಂದು ಕೆಲವರಿಗೆ ಗೊತ್ತೇ ಆಗಲ್ಲ. ಸೀರೆ ಉಟ್ಟರಷ್ಟೆ ನಾನು ಸ್ವಲ್ಪ ದೊಡ್ಡವಳಂತೆ ಕಾಣಿಸುತ್ತೇನೆ. ಆಧುನಿಕ ಉಡುಪು ತೊಟ್ಟರೆ ಚಿಕ್ಕವಳಂತೆ ಕಾಣ್ತೇನೆ. ಹಾಗಾಗಿ ಪ್ರಿನ್ಸಿಯಾಗಿಯೇ ಇದ್ದೇನೆ.

* ಕಿರುತೆರೆಯ ಮೆಗಾ ಧಾರಾವಾಹಿಗಳಲ್ಲಿ ಖಳ ನಾಯಕಿಯರೇ ಮಿಂಚುತ್ತಾರಲ್ಲಾ?

ಹೌದು, ನಾಯಕ–ನಾಯಕಿ ತುಂಬಾ ಪಾಪದವರು ಅಂತ ತೋರಿಸಬೇಕಾದರೆ ಅವರ ಎದುರಿಗೆ ಬಲಿಷ್ಠ ವಿಲನ್‌ ಪಾತ್ರ ಬೇಕಾಗುತ್ತದೆ. ಹಾಗಿದ್ದರೆ ಮಾತ್ರ ಜನ ಕುತೂಹಲದಿಂದ ನೋಡುತ್ತಾರೆ. ವಿಲನ್‌ ಆಗಿ ಮಹಿಳೆ ಇದ್ದರೇ ಕೌಟುಂಬಿಕ ಧಾರಾವಾಹಿ ಓಡೋದು. ನಿಜ ಜೀವನದಲ್ಲಿ ಮಹಿಳೆಯರು ಹಾಗಿಲ್ಲಪ್ಪ.

* ನಿಮಗೂ ಖಳ ಪಾತ್ರ ಇಷ್ಟನಾ?

ನನಗೆ ನೆಗೆಟಿವ್‌ ರೋಲ್‌ ಮಾಡಬೇಕು ಎಂಬ ಆಸೆಯಿದೆ. ಆದರೆ ನನ್ನ ಮುಖ ನೋಡಿದವರು ವಿಲನ್ ಪಾತ್ರ ಕೊಡಲ್ಲ ಅಂತ ಗೊತ್ತು. ಅದೇ ಬೇಜಾರು.

* ಕುಂಕುಮ ಪೂ’ ಧಾರಾವಾಹಿಯಲ್ಲಿ ಅಮೃತಾ ತನ್ನ ಸ್ವಂತ ಮಗಳೆಂದು ಅಮ್ಮನಿಗೇ ಗೊತ್ತಿಲ್ಲ, ಗೊತ್ತು ಮಾಡುವ ಇರಾದೆ ಇದೆಯಾ?

ಅಮೃತಾ ಮಗಳೆಂದು ಜನಕ್ಕೆ ಗೊತ್ತಾಗಿದೆ. ಆದ್ರೆ ಅಮ್ಮನಿಗೆ ಗೊತ್ತಾದ್ರೆ ಕತೆ ಮುಗಿದೇ ಹೋಗುತ್ತೆ. ಒಂದು ವರ್ಷದಿಂದ ಈ ವಿಷಯ ಅಮ್ಮನಿಗೆ ಗೊತ್ತಾಗದಂತೆ ಬಚ್ಚಿಟ್ಟಿದ್ದೇವೆ. ಸದ್ಯ ಗೊತ್ತು ಮಾಡೊಲ್ಲ. ಧಾರಾವಾಹಿ ಇನ್ನೂ ಒಂದು ವರ್ಷ ಓಡಲಿ. ನಂತರ ಹೇಳಿದರಾಯಿತು.

* ತೆಲುಗಿನಲ್ಲಿ ಮಾತನಾಡಲು ಹೋಗಿ ಎಡವಟ್ಟಾದ ಪ್ರಸಂಗವಿದೆಯೇ?

ಸದ್ಯ ತೆಲುಗಿನಲ್ಲಿ ನಾನು ಡಬ್ಬಿಂಗ್‌ ಮಾಡುತ್ತಿಲ್ಲ. ಆದರೆ, ಶೂಟಿಂಗ್‌ ಸಂದರ್ಭದಲ್ಲಿ ತೆಲುಗು ಮಾತನಾಡಲು ಹೋಗಿ ಫಜೀತಿಯಾಗಿದ್ದೂ ಇದೆ. ಒಂದು ವರ್ಷವಾದರೂ ತೆಲುಗಿನಲ್ಲಿ ಮಾತನಾಡಲು ಕಷ್ಟವಾಗುತ್ತಿದೆ.

* ಮದುವೆ ಬಗ್ಗೆ ಯೋಚನೆ ಇದೆಯಾ?

ಮದುವೆಯ ಬಗ್ಗೆ ಸದ್ಯ ಯೋಚನೆಯಿಲ್ಲ. ಇನ್ನೂ ಕೆಲ ವರ್ಷ ಕಿರುತೆರೆಯಲ್ಲಿ ಸಕ್ರಿಯವಾಗಿದ್ದು ನಂತರ ಮದುವೆಯಾಗುತ್ತೇನೆ. ಸದ್ಯ ಕಾವೇರಿ ತಂಡವೇ ನನ್ನ ಕುಟುಂಬವಾಗಿದೆ.

ಪ್ರತಿಕ್ರಿಯಿಸಿ (+)