ಭಾನುವಾರ, ಡಿಸೆಂಬರ್ 8, 2019
25 °C

ನಟನೆಗೂ ಸೈ, ನಿರ್ದೇಶನಕ್ಕೂ ಸೈ

Published:
Updated:
ನಟನೆಗೂ ಸೈ, ನಿರ್ದೇಶನಕ್ಕೂ ಸೈ

ನಟಿ ಸ್ವಪ್ನಾ ಕೃಷ್ಣ ಕಿರುತೆರೆಯಲ್ಲಿ ತಮ್ಮ ಎರಡನೇ ಇನಿಂಗ್ಸ್‌ ಶುರು ಮಾಡಿದ್ದಾರೆ. ರಾಧಾ, ಮನೆಯೊಂದು ಮೂರು ಬಾಗಿಲು, ದಂಡಪಿಂಡಗಳು, ತುಳಸಿ, ವಾತ್ಸಲ್ಯ.. ಹೀಗೆ ಸುಮಾರು 25ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿ ಮನೆಮಾತಾಗಿರುವ ಸ್ವಪ್ನಾ ಈಗ ನಿರ್ದೇಶಕರ ಟೋಪಿ ಧರಿಸಿ ಗಮನ ಸೆಳೆಯುತ್ತಿದ್ದಾರೆ.

ಜೀ ಕನ್ನಡ ವಾಹಿನಿಯಲ್ಲಿ ‘ಗೃಹಲಕ್ಷ್ಮಿ’ ಧಾರಾವಾಹಿಯ ಮೂಲಕ ನಿರ್ದೇಶನಕ್ಕೆ ಬಂದ ಅವರು ಈಗ ‘ಗಂಗಾ’ ಹಾಗೂ ‘ಸುಬ್ಬುಲಕ್ಷ್ಮಿ ಸಂಸಾರ’ ಧಾರಾವಾಹಿಗಳಿಗೂ ನಿರ್ದೇಶನ ಮಾಡುತ್ತಿದ್ದಾರೆ. ನಟನೆಯ ಅನುಭವಗಳು ನಿರ್ದೇಶನವನ್ನು ಸುಲಭವಾಗಿಸಿವೆ. ನಟಿಯಾಗಿದ್ದಾಗ ಕತೆ, ನಟನೆ ಬಗ್ಗೆ ಗಮನ ನೀಡುತ್ತಿದ್ದ ಅವರು ಈಗ ನಿರ್ದೇಶಕಿಯಾಗಿ ಕಲಾವಿದರ ನಟನೆ, ಛಾಯಾಗ್ರಾಹಣ, ಹಿನ್ನೆಲೆ ಸಂಗೀತ... ಹೀಗೆ ಕ್ಯಾಮೆರಾದ ಹಿಂದೆ ಸಂಪೂರ್ಣವಾಗಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

’ಒಂದು ಧಾರಾವಾಹಿ ನಿರ್ದೇಶಕಿಯಾಗಿ ಕತೆ, ಪಾತ್ರಗಳ ನಿರ್ವಹಣೆ, ಹಿನ್ನೆಲೆ ಸಂಗೀತ, ಚಿತ್ರೀಕರಣ ಈ ಎಲ್ಲವುಗಳ ಬಗ್ಗೆ ನಾನು ಗಮನ ಕೊಡಬೇಕು. ನಿರ್ದೇಶನ ದೊಡ್ಡ ಜವಾಬ್ದಾರಿ. ಕತೆಗೆ ನ್ಯಾಯ ಒದಗಿಸಿಕೊಡುವುದು ನಿರ್ದೇಶಕರ ಕರ್ತವ್ಯ. ನಾಜೂಕಾಗಿ ಕತೆಯನ್ನು ಮುಂದುವರಿಸಿಕೊಂಡು ಹೋಗಬೇಕು. ಅದರೊಟ್ಟಿಗೆ ಪ್ರೇಕ್ಷಕರಿಗೆ ಕುತೂಹಲದೊಂದಿಗೆ ಒಂದಿಷ್ಟು ಹೊಸತವನ್ನೂ ನೀಡಬೇಕು. ಈ ಮೊದಲು ನಟಿಯಾಗಿದ್ದಾಗ ನಾನು ನಿರ್ದೇಶಕರ ನಟಿಯಾಗಿದ್ದೆ. ಈಗ ನಾನೇ ನಿರ್ದೇಶನ ಮಾಡುತ್ತಿರುವುದರಿಂದ ನಿರ್ದೇಶಕರ ಸವಾಲು, ಕಷ್ಟ ಅರ್ಥವಾಗುತ್ತಿದೆ’ ಎನ್ನುತ್ತಾರೆ ಸ್ವಪ್ನಾ.

ಆರಂಭದಲ್ಲಿ ತಮ್ಮದೇ ಪ್ರೊಡಕ್ಷನ್‌ ಹೌಸ್‌ನಲ್ಲಿ ನಿರ್ಮಾಣವಾಗುತ್ತಿರುವ ‘ಗೃಹಲಕ್ಷ್ಮಿ’ ಧಾರಾವಾಹಿಯ ಎಡಿಟಿಂಗ್‌ ಜವಾಬ್ದಾರಿಯನ್ನು ಸ್ವಪ್ನಾ ವಹಿಸಿಕೊಂಡಿದ್ದರು. ಆದರೆ ಧಾರಾವಾಹಿಯ ನಿರ್ದೇಶಕರು ಕಾರಣಾಂತರಗಳಿಂದ ಮಧ್ಯದಲ್ಲಿ  ಹೊರಬಂದಿದ್ದರಿಂದ ಪತಿ ಕೃಷ್ಣ ಅವರ ಪ್ರೋತ್ಸಾಹದಿಂದ ನಿರ್ದೇಶನ ಮಾಡುವ ಅವಕಾಶವನ್ನು ತಮ್ಮದಾಗಿಸಿಕೊಂಡರು ಸ್ವಪ್ನಾ.

ಸ್ವಪ್ನಾ ನಿರ್ದೇಶಿಸುತ್ತಿರುವ ಗೃಹಲಕ್ಷ್ಮಿ, ಗಂಗಾ ಹಾಗೂ ಸುಬ್ಬಲಕ್ಷ್ಮಿ ಸಂಸಾರ ಧಾರಾವಾಹಿಗಳಿಗೆ ಪ್ರೇಕ್ಷಕರಿಂದ ಮೆಚ್ಚುಗೆ ಗಿಟ್ಟಿಸಿಕೊಂಡಿದ್ದರೂ, ‘ನಿರ್ದೇಶನದ ಒಳಹೊರಗನ್ನು ನಾನು ಕಲಿಯುತ್ತಿದ್ದೇನಷ್ಟೇ. ಇನ್ನೂ ಕಲಿಯುವುದು ಸಾಕಷ್ಟಿದೆ’ ಎಂದು ವಿನಮ್ರವಾಗಿ ಹೇಳುತ್ತಾರೆ.

ನಿರ್ದೇಶನ ಹೊಸತಾದರೂ ಕಷ್ಟ ಎಂದು ಯಾವತ್ತೂ ಅನಿಸಿಲ್ಲವಂತೆ. ಇದಕ್ಕೆ ಕುಟುಂಬ ಸದಸ್ಯರ ಪ್ರೋತ್ಸಾಹ ಕಾರಣ ಅಮ್ಮ ಮತ್ತು ವಾರಗಿತ್ತಿ ನಾನು ನಿರ್ದೇಶನದಲ್ಲಿ ಸಂಪೂರ್ಣ ತೊಡಗಿಸಿಕೊಳ್ಳುವ ಅವಕಾಶ ಒದಗಿಸಿದ್ದಾರೆ ಎಂದು ಸಂತಸ ವ್ಯಕ್ತಪಡಿಸುತ್ತಾರೆ.

ನಿರ್ದೇಶಕಿಯಾಗಿ ದೃಶ್ಯಗಳು, ಕತೆಯ ಸ್ವರೂಪದ ಬಗ್ಗೆ ಸ್ವಪ್ನಾ ಹೆಚ್ಚು ಮುತುವರ್ಜಿ ವಹಿಸುತ್ತಾರೆ. ಚಿತ್ರೀಕರಣಕ್ಕೂ ಮುಂಚೆ ಅಂದಿನ ದೃಶ್ಯಗಳ ಬಗ್ಗೆ ಮನೆಯಲ್ಲಿಯೇ ಹೋಂ ವರ್ಕ್‌ ಮಾಡಿಕೊಳ್ಳುತ್ತಾರೆ. ಜತೆಗೆ ಚಿತ್ರೀಕರಣದ ಸ್ಥಳದಲ್ಲಿ ಕೆಲಸಕ್ಕೆ ಪೂರಕವಾದ ವಾತಾವರಣ ನಿರ್ಮಿಸುತ್ತಾರೆ. ಇದು ತಮ್ಮ ಅನುಭವದಿಂದ ಕಲಿತ ಪಾಠ ಎಂಬುದು ಅವರ ವಿವರಣೆ.

ಸ್ವಪ್ನಾ ಗೃಹಲಕ್ಷ್ಮಿ ಧಾರಾವಾಹಿಯಲ್ಲಿ ವಕೀಲೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ತಮ್ಮಿಷ್ಟದ ಪಾತ್ರ ಸಿಕ್ಕರೆ ನಟಿಸುವುದು ಬಿಡುವುದಿಲ್ಲ ಎನ್ನುವ  ಈ ಗಟ್ಟಿಗಿತ್ತಿಗೆ ನಿರ್ದೇಶನದಲ್ಲಿಯೇ ಮುಂದುವರಿಯುವಾಸೆ.

ಪ್ರತಿಕ್ರಿಯಿಸಿ (+)