ಭಾನುವಾರ, ಡಿಸೆಂಬರ್ 15, 2019
23 °C

ಶ್ರೀಮಂತರ ಮನೆಯಲ್ಲಿ ಕಳ್ಳತನ ಮಾಡಿ ಆ ಹಣವನ್ನು ಬಡವರಿಗಾಗಿ ವಿನಿಯೋಗಿಸುತ್ತಿದ್ದ ಯುವಕ ಪೊಲೀಸರ ಬಲೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀಮಂತರ ಮನೆಯಲ್ಲಿ ಕಳ್ಳತನ ಮಾಡಿ ಆ ಹಣವನ್ನು ಬಡವರಿಗಾಗಿ ವಿನಿಯೋಗಿಸುತ್ತಿದ್ದ ಯುವಕ ಪೊಲೀಸರ ಬಲೆಗೆ

ನವದೆಹಲಿ: ಈತನ ಹೆಸರು ಇರ್ಫಾನ್, ವಯಸ್ಸು 27. ಈ ಯುವಕ ದೆಹಲಿಯ ಶ್ರೀಮಂತರ ಮನೆಯಲ್ಲಿ ಕಳ್ಳತನ ಮಾಡಿ ಆ ಹಣದಲ್ಲಿ ಬಿಹಾರದಲ್ಲಿ ಆರೋಗ್ಯ ಶಿಬಿರಗಳನ್ನು ಆಯೋಜಿಸಿ ಬಡ ಕುಟುಂಬಗಳಿಗೆ ಸಹಾಯ ಮಾಡುತ್ತಾನೆ. ಸಾಮಾಜಿಕ ಕಾರ್ಯಕರ್ತನಾಗಿ ಕಾರ್ಯವೆಸಗುವ ಈತ ಬಿಹಾರದಲ್ಲಿರುವ ತನ್ನ ಗ್ರಾಮದಲ್ಲಿ ಎಂಟು ಕುಟುಂಬಗಳ ವಿವಾಹಕ್ಕಾಗಿ ಧನ ಸಹಾಯ ಮಾಡಿದ್ದಾನೆ.

5 ನೇ ಕ್ಲಾಸಿನವರೆಗೆ ಮಾತ್ರ ಓದಿರುವ ಈತ ದೆಹಲಿಯಲ್ಲಿ ನಡೆದ 12 ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಈತನ ಕೈಯಲ್ಲಿ ಬೆಲೆ ಬಾಳುವ ಕೈ ಗಡಿಯಾರವಿದೆ. ಐಷಾರಾಮಿ ಕಾರುಗಳೂ ಇವೆ. ಜುಲೈ 6ರಂದು ದೆಹಲಿ ಪೊಲೀಸರು ಈತನನ್ನು ಬಂಧಿಸಿದಾಗ ಈತನ ಕೈಯಲ್ಲಿ ರೋಲೆಕ್ಸ್ ವಾಚ್ ಇತ್ತು. ಅದು ದೆಹಲಿಯ ನ್ಯೂ ಫ್ರೆಂಡ್ಸ್ ಕಾಲೊನಿಯಲ್ಲಿರುವ ಬಂಗಲೆಯೊಂದರಿಂದ ಕದ್ದದ್ದಾಗಿತ್ತು. ಕೆಲವು ತಿಂಗಳ ಹಿಂದೆಯಷ್ಟೇ ಈತ ಬೆಲೆ ಬಾಳುವ ವಾಚ್ ಮತ್ತು ಆಭರಣಗಳನ್ನು ಮಾರಿ ಹೋಂಡಾ ಸಿವಿಕ್ ಕಾರು ಖರೀದಿಸಿದ್ದ. ಈತನಿಂದ ವಾಚ್ ಖರೀದಿ ಮಾಡಿದ್ದ ಅಂಗಡಿಯ ಮಾಲೀಕ ಧರ್ಮೇಂದರ್ ಎಂಬಾತನನ್ನೂ ಪೊಲೀಸರು ಬಂಧಿಸಿದ್ದಾರೆ.

ಇರ್ಫಾನ್ ಅವರನ್ನು ಪೊಲೀಸರು ಬಿಹಾರದ ಪುರಿ ಜಿಲ್ಲೆಯಿಂದ ಬಂಧಿಸಿದಾಗ ಅಲ್ಲಿನ ಜನರು ಈತ ಸಾಮಾಜಿಕ ಕಾರ್ಯಕರ್ತ. ಬಡವರಿಗಾಗಿ ಆರೋಗ್ಯ ಶಿಬಿರವನ್ನು ಆಯೋಜಿಸುತ್ತಾರೆ ಎಂದು ಹೇಳಿದ್ದನ್ನು ಕೇಳಿ ಪೊಲೀಸರು ದಂಗಾಗಿದ್ದರು. ಆ ಗ್ರಾಮದಲ್ಲಿ ಇರ್ಫಾನ್ 'ಉಜಾಲಾ ಬಾಬು' ಎಂದೇ ಕರೆಯಲ್ಪಡುತ್ತಾರೆ ಎಂದು ತನಿಖಾಧಿಕಾರಿಯೊಬ್ಬರು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.

ಈತ ಕಳ್ಳತನ ಮಾಡುತ್ತಾನೆ. ದೆಹಲಿಯಲ್ಲಿ ಈತ ಕಳ್ಳತನ ಮಾಡಿ ಬೆಲೆ ಬಾಳುವ ವಸ್ತುಗಳನ್ನು ಕದಿಯುತ್ತಾನೆ ಎಂದರೆ ಈ ಗ್ರಾಮದ ಜನರು ನಂಬಲಿಲ್ಲ ಅಂತಾರೆ ಪೊಲೀಸರು.

ಇರ್ಫಾನ್ ದೆಹಲಿ ಮತ್ತು ಮುಂಬೈಯ ಬಾರ್ ಮತ್ತು ಕ್ಲಬ್‍ಗಳಲ್ಲಿ ಆಗಾಗ ಕಾಣಿಸಿಕೊಳ್ಳುತ್ತಿರುತ್ತಾರೆ. ಒಂದು ಸಾರಿ ತನ್ನ ಇಷ್ಟದ ಹಾಡು ಪ್ರಸಾರ ಮಾಡಿದ್ದಕ್ಕಾಗಿ ಈತ ಬಾರ್ ಮ್ಯಾನೇಜರ್‍‍ಗೆ ₹10,000  ಪಾವತಿ ಮಾಡಿದ್ದ ಅಂತಾರೆ ಆಗ್ನೇಯ ದೆಹಲಿಯ ಡಿಸಿಪಿ ರೋಮಿಲ್ ಬನಿಯಾ.

ಇರ್ಫಾನ್ ತನ್ನ ಗ್ರಾಮದವರಿಗೆ ಮಾತ್ರ ಅಲ್ಲ ತನ್ನ ಪ್ರೇಯಸಿಗೂ ಸುಳ್ಳು ಹೇಳಿದ್ದನು. ಬೋಜ್‍ಪುರಿ ಸಿನಿಮಾ ನಟಿ ಈತನ ಪ್ರೇಯಸಿ. ನಾಲ್ಕು ವರ್ಷಗಳ ಹಿಂದೆ ಕೆಲಸ ಹುಡುಕುತ್ತಾ ದೆಹಲಿಗೆ ಬಂದ ಈತ ಗಾರ್ಮೆಂಟ್ ವ್ಯವಹಾರ ಆರಂಭಿಸಿದ್ದರೂ ಅದು ಯಶಸ್ವಿಯಾಗಿರಲಿಲ್ಲ.

ಪ್ರತಿಕ್ರಿಯಿಸಿ (+)