ಶನಿವಾರ, ಡಿಸೆಂಬರ್ 7, 2019
16 °C

ತಾಂತ್ರಿಕತೆ ಎನ್ನುವ ಬಿಸಿತುಪ್ಪ

Published:
Updated:
ತಾಂತ್ರಿಕತೆ ಎನ್ನುವ ಬಿಸಿತುಪ್ಪ

ಅದೊಂದು ಜಮಾನಾ ಇತ್ತು. ನಮ್ಮ ನಮ್ಮ ಮನಃಸಾಕ್ಷಿಗಳೇ ನಮ್ಮನ್ನು ಆಳುವಂತಿತ್ತು. ಆಗ ಜನಜೀವನ ಮೌಲ್ಯಗಳಿಗೆ ತಲೆಬಾಗಿ ಬದುಕುತ್ತಿತ್ತು.  ಅಪ್ಪ–ಅಮ್ಮ ಬುದ್ಧಿ ಕಲಿಸದಿದ್ದರೆ ಊರಿನವರೇ ಆ ಕೆಲಸ ಮಾಡುತ್ತಿದ್ದರು. ಮನೆಯ ಹಿರಿಯರು, ಊರ ಹಿರಿಯರು ಸರಿ–ತಪ್ಪುಗಳಿಗೆ ಹೆದರಿ ನಡೆಯುತ್ತಿದ್ದರು. ‘ಈ ಸಮಾಜ ಇಲ್ಲವೇ ದೈವ ನಮ್ಮನ್ನು ಗಮನಿಸುತ್ತಿರುತ್ತದೆ’ ಎನ್ನುವ ಹೆದರಿಕೆ ಇರುತ್ತಿತ್ತು. ಇವೆಲ್ಲವುಗಳ ಪರಿಣಾಮದ ಹಿನ್ನೆಲೆಯಲ್ಲಿ ಅಪವರ್ತನೆಗಳು, ಅಪಸಂಸ್ಕೃತಿಗಳು ಆಗ ತೀರಾ ಕಡಿಮೆ.

ಈಗ ಪರಿಸ್ಥಿತಿ ಬದಲಾಗಿದೆ. ಮನುಷ್ಯನ ಖಾಸಗಿ ಬದುಕಿಗೆ ಯಾವುದೇ ಬಗೆಯ ನಿಯಂತ್ರಣ ಸಾಧ್ಯವಿಲ್ಲದಂತಾಗಿದೆ. ನಮ್ಮ ಬದುಕು ಈಗ ನಾವು ಬಳಸುವ ಗ್ಯಾಜೆಟ್‌ಗಳಿಗೆ ಒಳಗಾಗಿ ಸಾಗುವಂತಾಗಿದೆ. ನಮ್ಮ ಕಿಸೆಯಲ್ಲಿರುವ ಮೊಬೈಲ್, ಕಿವಿಗೆ ಜೋತುಬಿದ್ದಿರುವ ಬ್ಲೂ ಟೂತ್, ಎರಡೂ ಕಿವಿಯ ತೂತುಗಳನ್ನು ಆಕ್ರಮಿಸಿರುವ ಇಯರ್ ಫೋನ್, ಕೈಯಲ್ಲಿರುವ ಸ್ಮಾರ್ಟ್ ವಾಚ್, ಕಿಸೆಯಲ್ಲಿರುವ ಕ್ಯಾಮೆರಾ ಪೆನ್‌ ಇಂತಹ ವಸ್ತುಗಳು ನಮ್ಮ ಬದುಕನ್ನು ನಿಯಂತ್ರಿಸುವ, ನಿರ್ಧರಿಸುವಂತಾಗಿರುವ ಬಗ್ಗೆ ವಿಷಾದವೆನಿಸುತ್ತದೆ.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಾತನಾಡುವುದಾದರೆ ನಮ್ಮ ಚಲನವಲನಗಳನ್ನು ಸಿ.ಸಿ. ಟಿ.ವಿ. ಕ್ಯಾಮೆರಾ ಎನ್ನುವ ಕಣ್ಣು ನಿತ್ರಾಣಗೊಳ್ಳದೆ  ನಿರಂತರವಾಗಿ ಗಮನಿಸುತ್ತಿರುತ್ತದೆ. ಮನುಷ್ಯನ ಸಹಜಪ್ರವೃತ್ತಿ ಮತ್ತು ಮನೋಪ್ರವೃತ್ತಿಗಳನ್ನು ಕೂಡಾ ಕಣ್ಣಗಲಿಸಿ ನೋಡುವ ಈ ಸಿ.ಸಿ. ಟಿ.ವಿ. ಕ್ಯಾಮೆರಾಗಳು ನಮ್ಮ ಖಾಸಗಿ ಬದುಕನ್ನೇ ಕಸಿದುಕೊಂಡಿವೆ. ನಗುವ, ತಿನ್ನುವ, ಮಲಗುವ, ಕೂಡುವ, ನಿಲ್ಲುವ ಎಲ್ಲ ಚಟುವಟಿಕೆಗಳ ಮೇಲೆ ನಿಗಾ ಇಡುವ ಮೂಲಕ ನಮ್ಮನ್ನು ನಿಯಂತ್ರಿಸುವ ಈ ಬಗೆಯ ತಾಂತ್ರಿಕತೆ, ಮನುಷ್ಯ ಸಹಜವಾದ  ಸ್ವಭಾವವನ್ನೇ ಕಸಿದುಕೊಂಡಿದೆ. ಜೋರಾಗಿ ನಗಬೇಕೆಂದರೂ ಆಗುವುದಿಲ್ಲ. ತುರಿಕೆ ಬಂದರೂ ಸಹಿಸಿಕೊಳ್ಳಬೇಕು ಯಾಕೆಂದರೆ ಕ್ಯಾಮೆರಾ ಕಣ್ಣು ಮಿಟುಕಿಸದೇ ನಿಮ್ಮ ಹಾವಭಾವಗಳನ್ನು ಗಮನಿಸುತ್ತಿದೆ.

ತಾಂತ್ರಿಕತೆಯ ತೀವ್ರತೆಯ ಪರಿಣಾಮವಾಗಿ ಮನುಷ್ಯ ಸಂವೇದನೆಗಳು ನಾಶವಾಗುತ್ತಿವೆ.  ಪ್ರೀತಿಯ ನಾಲ್ಕು ಮಾತು, ಸಾಂತ್ವನದ ಎರಡು ನುಡಿ, ಪ್ರೋತ್ಸಾಹ ತುಂಬುವ ಹುರುಪು ಇವೆಲ್ಲವೂ ಮರೆಯಾಗುತ್ತಿವೆ. ಒಂದೇ ಊರಲ್ಲಿದ್ದರೂ ಮುಖಾಮುಖಿಯಾಗದೆ ವರ್ಷಗಳೇ ಕಳೆಯುತ್ತಿವೆ. ಮನುಷ್ಯನ ವರ್ತನೆಗಳಲ್ಲಿ ಈಗೀಗ ಹೆಚ್ಚೆಚ್ಚು ತಾಂತ್ರಿಕತೆಯ ಪರಿಣಾಮ ಎದ್ದು ತೋರುವಂತಾಗಿದೆ. ಭಾರತದಂತಹ ಸಾಂಪ್ರದಾಯಿಕ ನೆಲದಲ್ಲಿ ಕೇವಲ ಎರಡೇ ಎರಡು ದಶಕಗಳಲ್ಲಿ ಮಹತ್ತರವಾದ ಬದಲಾವಣೆಗಳನ್ನು ತಾಂತ್ರಿಕತೆ ತಂದು ಸುರಿದಿದೆ ಎನ್ನುವ ಸತ್ಯದ ನಡುವೆಯೇ ಅದು ಕಸಿದುಕೊಂಡ ಮನುಷ್ಯನ ಖಾಸಗಿತನದ ಬಗ್ಗೆಯೂ ಯೋಚಿಸಬೇಕಿದೆ.

ರಹಸ್ಯ ಕ್ಯಾಮೆರಾ, ಇಂಟರ್‌ನೆಟ್, ಫೇಸ್‌ಬುಕ್, ಟ್ವಿಟರ್‌ನಂತಹ ಸಂಗತಿಗಳು ನೀವು ಖಾಸಗಿಯಾಗಿ ಜತನ ಮಾಡಿಕೊಂಡು ಬಂದವುಗಳನ್ನು ಕೂಡಾ ಬಯಲು ಮಾಡುವ ಅಪಾಯವಿದೆ. ನೀವು ಎಲ್ಲಿದ್ದೀರಿ, ಯಾರೊಂದಿಗಿದ್ದೀರಿ, ಏನು ಮಾಡುತ್ತಿರುವಿರಿ, ಏನು ಮಾತಾಡುತ್ತಿರುವಿರಿ  ಎನ್ನುವಂಥ ತೀರಾ ಖಾಸಗಿ ವಿಷಯಗಳನ್ನು ಕೂಡಾ ಬಯಲು ಮಾಡುವಲ್ಲಿ ಇವು ಸದಾ ಹಾತೊರೆಯುವಂತಿರುತ್ತವೆ. ಲೊಕೇಷನ್‌ಗಳನ್ನು ಅನಾವರಣಗೊಳಿಸುವ ಗ್ಯಾಜೆಟ್‌ಗಳ ಸಹವಾಸದಲ್ಲಿ ಮನುಷ್ಯ ಬದುಕಬೇಕಾದ ಸ್ಥಿತಿ ಬಂದಿರುವುದರಿಂದ, ಅವನ ಖಾಸಗಿತನವೇ ಮಾಯವಾದಂತಿದೆ.

ಪ್ರತಿಯೊಬ್ಬ ಮನುಷ್ಯ ಯಾರೋ ತನ್ನನ್ನು ಹಿಂಬಾಲಿಸುತ್ತಿದ್ದಾರೆ,  ತನ್ನ ಚಲನವಲನಗಳನ್ನು ಗಮನಿಸುತ್ತಿದ್ದಾರೆ ಎನ್ನುವ ಎಚ್ಚರದ ನಡುವೆಯೇ ವ್ಯವಹರಿಸುವ ಸ್ಥಿತಿ ಬಂದೊದಗಿದೆ. ಹ್ಯಾಕರ್ಸ್‌  ಹಾವಳಿಯ ನಡುವೆ ಬಚ್ಚಿಡಲೇಬೇಕಾದ ಅನೇಕ ಸಂಗತಿಗಳು ಬಯಲಾಗುತ್ತಿವೆ ಇಲ್ಲವೇ ಕಳವಾಗುತ್ತಿವೆ. ತೀರಾ ಅಪರೂಪಕ್ಕೆ ನಿಮಗೆ ಆಪ್ತರಾದವರೊಂದಿಗೆ ಗುಟ್ಟಾಗಿ ಮಾತನಾಡಬೇಕೆಂದು ಕಿವಿಯಲ್ಲಿ ಉಸುರಿದ ಮಾತು ಕೂಡಾ ಸ್ಕ್ಯಾನ್ ಆಗಿ ಬಯಲಾಗುವ ಅಪಾಯದ ಸ್ಥಿತಿಯನ್ನು ಆಧುನಿಕ ತಂತ್ರಜ್ಞಾನ ತಂದಿಟ್ಟಿದೆ.

ಯಾವುದಾದರೂ ಪ್ರವಾಸಿ ತಾಣಗಳಿಗೆ ಕುಟುಂಬ ಸಮೇತ ತೆರಳಿದರೆ, ಹೋಟೆಲ್‌ನಲ್ಲಿ  ರೂಮು ಮಾಡಿ ಉಳಿಯುವ ಪ್ರಸಂಗ ಬಂದರೆ, ಮನೆಯಿಂದ ಹೊರಡುವಾಗಲೇ ಜಗಳವಾಡಿ ಬಂದಂತೆ ಆ ಹೋಟೆಲ್‌ ಕೊಠಡಿಯಲ್ಲಿ ದೂರ ದೂರ ಉಳಿಯುವ, ಮಲಗುವ ಎಚ್ಚರಿಕೆ ಮೈತುಂಬಾ ಆವರಿಸುವಂತಾಗಿರುವ ಸ್ಥಿತಿಗೆ ಯಾರು ಹೊಣೆ? ಎಲ್ಲಿ ಯಾವ ರೀತಿಯ ಕ್ಯಾಮೆರಾಗಳು ತಮ್ಮ ತೆರೆದ ಕಣ್ಣಿನಿಂದ ನಮ್ಮನ್ನು ನೋಡುತ್ತಿರುತ್ತವೆ ಎಂದು ಹೇಳಲಾಗದು. ಕೆಲವೊಮ್ಮೆ ನಾವು ಎಷ್ಟೇ ಎಚ್ಚರ ವಹಿಸಿ ವ್ಯವಹರಿಸಿದರೂ ಎಲ್ಲೋ ಒಂದೆಡೆ ನಮ್ಮ ಖಾಸಗಿ ವಿಷಯ ಸಾರ್ವಜನಿಕವಾಗಿ ಬಿಡುವ ಅಪಾಯವಿದೆ.  ಹಾಗಾಗಿ ಮದುವೆಯಾಗಿ ಹನಿಮೂನ್‌ಗೆ ಹೊರಡುವ ನವದಂಪತಿಗಳಿಗೆ ಹೆತ್ತವರು ‘ಹುಷಾರು...! ಅಲ್ಲಿ ಕ್ಯಾಮೆರಾಗಳಿರಬಹುದು’ ಎಂದು ಹೇಳಿ ಕಳುಹಿಸುವ ಪರಿಸ್ಥಿತಿ ಬಂದೊದಗಿದೆ.  ಫೇಸ್ ಬುಕ್‌ಗಳಲ್ಲಂತೂ ಅನೇಕ ಬಾರಿ ಹಾಗೆ ಯಾರದೋ ಖಾಸಗಿ ವ್ಯವಹಾರಗಳು ಬಯಲಾಗಿ ಪ್ರಮಾದಗಳೇ ಜರುಗಿವೆ. ಹೀಗಾಗಿ ಮನುಷ್ಯ ಈ ತಾಂತ್ರಿಕತೆಯ ಗೊಡವೆಗೆ ಸಿಲುಕಿ  ತನ್ನ ಖಾಸಗಿತನವನ್ನೇ ಕಳೆದುಕೊಂಡಿದ್ದಾನೆ.

ತೀರಾ ಮುಂದುವರಿದ ಅಮೆರಿಕ, ಇಂಗ್ಲೆಂಡ್‌ನಂತಹ ರಾಷ್ಟ್ರಗಳಲ್ಲಿ ಜನ ಸಾಕಷ್ಟು ಎಚ್ಚರಿಕೆಯಿಂದ ವ್ಯವಹರಿಸುತ್ತಾರೆ.  ಹಾಗಿರುವಾಗಲೂ ಇಂಗ್ಲೆಂಡ್‌ನಲ್ಲಿ ಗ್ಯಾಜೆಟ್‌ಗಳ ಮೂಲಕ ಲೊಕೇಷನ್ ಗುರುತಿಸಿ, ಮನೆಯೊಡೆಯರು ಮನೆಯಲ್ಲಿಲ್ಲ ಎನ್ನುವುದನ್ನು ಅರಿತು ಬೇಕಾದಷ್ಟು ಕಳ್ಳತನಗಳು ನಡೆದಿವೆ. ನಮ್ಮಲ್ಲಿ ಜನ ಇನ್ನೂ  ತಾಂತ್ರಿಕವಾಗಿ ಆ ಮಟ್ಟದಲ್ಲಿ ಮುಂದುವರಿದಿಲ್ಲ. ಪರಿಣಾಮವಾಗಿ ನಮ್ಮ ಖಾಸಗಿತನವನ್ನು ನಮಗೆ ಅರಿವಿಲ್ಲದೇ ಸಾರ್ವಜನಿಕಗೊಳಿಸುವ ಅಪಾಯಗಳನ್ನು ತಂದುಕೊಳ್ಳುವ ಸಾಧ್ಯತೆಗಳು ಇಲ್ಲಿ ಹೆಚ್ಚಾಗಿವೆ.

ನಾವೆಲ್ಲರೂ ಈಗ ನಮ್ಮ ಸುತ್ತ ಮುತ್ತಲೂ ಎಲ್ಲೆಂದರಲ್ಲಿ ಮೆತ್ತಿಕೊಂಡಿರುವ ಕ್ಯಾಮೆರಾಗಳು, ಮೊಬೈಲ್‌ಗಳು, ಇನ್ನಿತರ ಗ್ಯಾಜೆಟ್‌ಗಳು ನಮ್ಮನ್ನು ಗಮನಿಸುತ್ತಿವೆ ಎನ್ನುವ ಎಚ್ಚರದ ನಡುವೆ ವ್ಯವಹರಿಸಬೇಕಿದೆ.  ಬಹುಶಃ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಳ್ಳುವುದು ಎಂದರೆ ಇದೇ ಇರಬೇಕು.

ಮನುಷ್ಯ ಬುದ್ಧಿಜೀವಿ. ಇಂಥವೆಲ್ಲಾ ಅವನಿಂದಲೇ ಸಾಧ್ಯ. ಅವನೇ ಅನುಭವಿಸಬೇಕು. ತಾಂತ್ರಿಕತೆ ಎನ್ನುವುದು ಎಲ್ಲ ಕಾಲಕ್ಕೂ ಬಿಸಿ

ತುಪ್ಪವೇ ಸರಿ.

ಪ್ರತಿಕ್ರಿಯಿಸಿ (+)