ಶನಿವಾರ, ಡಿಸೆಂಬರ್ 7, 2019
16 °C
ಸಮಿತಿ ವರದಿ ತಳ್ಳಿಹಾಕಿದ ಕಾನೂನು ತಂಡ

ಜೆಐಟಿ ವಿರುದ್ಧ ತಿರುಗಿಬಿದ್ದ ಷರೀಫ್‌

ಪಿಟಿಐ Updated:

ಅಕ್ಷರ ಗಾತ್ರ : | |

ಜೆಐಟಿ ವಿರುದ್ಧ ತಿರುಗಿಬಿದ್ದ ಷರೀಫ್‌

ಇಸ್ಲಾಮಾಬಾದ್‌: ಸುಪ್ರೀಂಕೋರ್ಟ್‌ ವಿರುದ್ಧ ಸಂಘರ್ಷಕ್ಕಿಳಿದಿರುವ ಪಾಕಿಸ್ತಾನ ಪ್ರಧಾನಿ ನವಾಜ್‌ ಷರೀಫ್‌ ಅವರ ಕಾನೂನು ತಂಡ, ಜಂಟಿ ತನಿಖಾ ಸಮಿತಿ(ಜೆಐಟಿ) ನೀಡಿದ ಅಂತಿಮ ವರದಿಯು ಪೂರ್ವಗ್ರಹ ಪೀಡಿತ ಎಂದು ಆರೋಪಿಸಿದೆ.

ಪನಾಮಾ ಪೇಪರ್ಸ್‌ ಪ್ರಕರಣದ ತನಿಖೆ ನಡೆಸಿದ ಜಂಟಿ ತನಿಖಾ ಸಮಿತಿಯು (ಜೆಐಟಿ) ಪಾಕಿಸ್ತಾನ ಪ್ರಧಾನಿ ನವಾಜ್‌ ಷರೀಫ್‌  ಮತ್ತು ಅವರ ಮಕ್ಕಳ ವಿರುದ್ಧ ಭ್ರಷ್ಟಾಚಾರ ಪ್ರಕರಣ ದಾಖಲಿಸುವಂತೆ ಶಿಫಾರಸು ಮಾಡಿದೆ.

ಹಣ ಅಕ್ರಮ ವರ್ಗಾವಣೆ ಮೂಲಕ ಷರೀಫ್‌ ಕುಟುಂಬವು ಅಕ್ರಮ ಆಸ್ತಿ ಸಂಪಾದಿಸಿದೆ ಎಂಬ ಆರೋಪದ ಕುರಿತಂತೆ  ತನಿಖೆ ನಡೆಸಿದ ಆರು ಸದಸ್ಯರನ್ನೊಳಗೊಂಡ ಜೆಐಟಿ, ಇದೇ 10ರಂದು ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಸಿತ್ತು.

ಷರೀಫ್‌ ಅವರು ನಿಷ್ಕಳಂಕರು ಎಂದು ಸಾಬೀತಾಗುವವರೆಗೆ ಅವರು ಅಧಿಕಾರದಿಂದ ದೂರವಿರಬೇಕು ಎಂದು ಪ್ರಮುಖ ಪ್ರತಿಪಕ್ಷಗಳು ಒತ್ತಾಯಿಸಿವೆ. ಆದರೆ  ಸಮಿತಿ ವರದಿಯನ್ನು ತಿರಸ್ಕರಿಸಿರುವ ಷರೀಫ್‌ ಅವರು ರಾಜೀನಾಮೆ ನೀಡಲು ನಿರಾಕರಿಸಿದ್ದಾರೆ.

ವರದಿಯನ್ನು ತಳ್ಳಿಹಾಕಿರುವ ಷರೀಫ್‌ ಪರ ವಕೀಲ ಖ್ವಾಜಾ ಹ್ಯಾರಿಸ್‌, ವರದಿಯು ಪೂರ್ವಗ್ರಹ ಪೀಡಿತ ಹಾಗೂ ದೇಶದ ಕಾನೂನನ್ನು ಉಲ್ಲಂಘಿಸಿದೆ ಎಂದು ದೂರಿದ್ದಾರೆ.

ವರದಿಗೆ ನ್ಯಾಯಾಲಯದಲ್ಲಿ ಪ್ರತಿಕ್ರಿಯೆ ನೀಡಿದ ಅವರು ‘ಜೆಐಟಿ ವರದಿಯು ಕಾನೂನು ಹಾಗೂ ಸಂವಿಧಾನಕ್ಕೆ ವಿರುದ್ಧವಾದುದು. ವರದಿಯಲ್ಲಿ ಪ್ರಸ್ತಾಪಿಸಿರುವ ಅಂಶಗಳು ಕಾನೂನಿನ ಯಾವುದೇ ಮಾನ್ಯತೆ ಹೊಂದಿಲ್ಲ’ ಎಂದು ಆರೋಪಿಸಿದ್ದಾರೆ.

ವಿದೇಶದಿಂದ ದಾಖಲೆಗಳನ್ನು ಪಡೆದು ಸಲ್ಲಿಸಿರುವುದು ಕೂಡ ದೇಶದ ಕಾನೂನಿಗೆ ವಿರುದ್ಧವಾದುದು ಎಂದು ದೂರಿದ್ದಾರೆ. ಜೆಐಟಿ ಮನವಿಯಂತೆ ಗೋಪ್ಯವಾಗಿಡಲಾಗಿರುವ ವರದಿಯ 10ನೇ ಸಂಪುಟವನ್ನು ನೀಡುವಂತೆ  ಹಾಗೂ ಸಮಿತಿಯವ ಶಿಫಾರಸನ್ನು ತಿರಸ್ಕರಿಸುವಂತೆ ಸುಪ್ರೀಂಕೋರ್ಟ್‌ಗೆ ಅವರು ಮನವಿ ಮಾಡಿದ್ದಾರೆ.

ಇಮ್ರಾನ್‌ ಖಾನ್‌ ಅವರ ಪಾಕಿಸ್ತಾನ ತೆಹ್ರಿಕ್‌ ಎ ಇನ್ಸಾಫ್‌ ಪಕ್ಷದ ಪ್ರತಿನಿಧಿ  ನಯೀಂ ಬೊಕಾರಿ ಅವರು ವಾದ ಮಂಡಿಸಿ ಜಂಟಿ ತನಿಖಾ ಸಮಿತಿಯನ್ನು ಶ್ಲಾಘಿಸಿದ್ದಾರೆ ಅಲ್ಲದೆ ವರದಿ ಜಾರಿಗೊಳಿಸಿ ಪ್ರಧಾನಿಯನ್ನು ಅನರ್ಹಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ನ್ಯಾಯಾಲಯದ ತೀರ್ಮಾನವನ್ನು ಸರ್ಕಾರ ಒಪ್ಪಿಕೊಳ್ಳುತ್ತದೆ ಎಂದು ಸಚಿವ ಮರಿಯಂ ಔರಂಗಜೇಬ್‌ ಹೇಳಿದ್ದಾರೆ.

ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ.

ಸೋರಿಕೆಯಾದ ವರದಿಯಲ್ಲೇನಿದೆ...?

ಷರೀಫ್‌ ಅವರು ಅಕ್ರಮ ಹಣ ವರ್ಗಾವಣೆ ಮಾಡಿ, ಲಂಡನ್‌ನಲ್ಲಿ ಆಸ್ತಿ ಖರೀದಿಸಿದ್ದಾರೆ. ಅಲ್ಲದೇ ಕಂಪೆನಿಗಳನ್ನು ಸ್ಥಾಪಿಸಿದ್ದು, ಈ ಎಲ್ಲವೂ ಮಕ್ಕಳ ಹೆಸರಿನಲ್ಲಿ ದಾಖಲಾಗಿವೆ ಎಂದು ಪನಾಮಾ ಪೇಪರ್ಸ್‌ ಸೋರಿಕೆಯಿಂದ ಬಹಿರಂಗವಾಗಿತ್ತು.

ಪ್ರತಿಕ್ರಿಯಿಸಿ (+)