ಶನಿವಾರ, ಡಿಸೆಂಬರ್ 14, 2019
25 °C

ಬಿ–ಫಾರ್ಮಾ ಕೌನ್ಸೆಲಿಂಗ್: ಪ್ರಕಟವಾಗದ ಸೀಟ್‌ ಮ್ಯಾಟ್ರಿಕ್ಸ್‌ –ವಿದ್ಯಾರ್ಥಿಗಳಲ್ಲಿ ಗೊಂದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿ–ಫಾರ್ಮಾ ಕೌನ್ಸೆಲಿಂಗ್: ಪ್ರಕಟವಾಗದ ಸೀಟ್‌ ಮ್ಯಾಟ್ರಿಕ್ಸ್‌ –ವಿದ್ಯಾರ್ಥಿಗಳಲ್ಲಿ ಗೊಂದಲ

ಬೆಂಗಳೂರು: ಸಿಇಟಿ ಎರಡನೇ ಸುತ್ತಿನ ಕೌನ್ಸೆಲಿಂಗ್‌ ಆರಂಭವಾಗಿದ್ದರೂ ಬಿ–ಫಾರ್ಮಾ ಸೀಟ್ ಮ್ಯಾಟ್ರಿಕ್ಸ್‌ ಪ್ರಕಟಿಸದಿರುವುದರಿಂದ ವಿದ್ಯಾರ್ಥಿಗಳು ಗೊಂದಲಕ್ಕೆ ಸಿಲುಕಿದ್ದಾರೆ.

ಸರ್ಕಾರ ಮತ್ತು ಖಾಸಗಿ ಬಿ–ಫಾರ್ಮಾ ಕಾಲೇಜುಗಳ ಮಧ್ಯೆ ಸೀಟು ಹಂಚಿಕೆಯನ್ನು 20:80ರಿಂದ 50:50ಕ್ಕೆ ಹೆಚ್ಚಿಸಲಾಗಿದೆ. ಸರ್ಕಾರಕ್ಕೆ ಶೇ 50ರಷ್ಟು ಸೀಟು ಬಿಟ್ಟುಕೊಡುವುದನ್ನು ವಿರೋಧಿಸಿ ಖಾಸಗಿ ಕಾಲೇಜು ಆಡಳಿತ ಮಂಡಳಿಗಳು ಹೈಕೋರ್ಟ್‌ ಮೆಟ್ಟಿಲೇರಿವೆ. ಇದರಿಂದ ಸೀಟು ಹಂಚಿಕೆ ಕೌನ್ಸೆಲಿಂಗ್‌ ವಿಳಂಬ ಆಗುತ್ತಿದೆ. ಬಿ–ಫಾರ್ಮಾ ಮತ್ತು ಫಾರ್ಮಾ–ಡಿ ಕೋರ್ಸ್‌ಗಳು ಔಷಧ ನಿಯಂತ್ರಣ ಇಲಾಖೆ ವ್ಯಾಪ್ತಿಯಲ್ಲಿ ಬರುತ್ತವೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಪ್ರತಿ ವರ್ಷ ಎಂಜಿನಿಯರಿಂಗ್, ಬಿಎಸ್ಸಿ, ಪಶುವೈದ್ಯ ವಿಜ್ಞಾನ ಸೇರಿದಂತೆ ವೃತ್ತಿಪರ ಕೋರ್ಸ್‌ಗಳ ಜೊತೆಗೆ ಬಿ–ಫಾರ್ಮಾ ಸೀಟು ಹಂಚಿಕೆಯೂ ನಡೆಯುತಿತ್ತು.

ಈ ಬಾರಿ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಮೊದಲ ಸುತ್ತಿನ ಕೌನ್ಸೆಲಿಂಗ್‌ನಲ್ಲಿ ಬಿ–ಫಾರ್ಮಾ ಸೀಟು ಮ್ಯಾಟ್ರಿಕ್ಸ್‌ ಪ್ರಕಟಿಸಲಿಲ್ಲ. ಎರಡನೇ ಸುತ್ತಿನ ಕೌನ್ಸೆಲಿಂಗ್‌ ವೇಳೆ ಬೆಂಗಳೂರಿನಲ್ಲಿರುವ ಸರ್ಕಾರಿ ಫಾರ್ಮಸಿ ಕಾಲೇಜಿನಲ್ಲಿ ಲಭ್ಯವಿರುವ 50 ಸೀಟುಗಳನ್ನು ಮಾತ್ರ ಪ್ರಕಟಿಸಲಾಯಿತು.

ಶುಲ್ಕ ಹೆಚ್ಚಿಸಿದ ಖಾಸಗಿ ಕಾಲೇಜುಗಳು: ಬಿ– ಫಾರ್ಮಾ ಸರ್ಕಾರಿ ಕಾಲೇಜು ಶುಲ್ಕ ₹14,030 ಮತ್ತು ಖಾಸಗಿ ಕಾಲೇಜುಗಳಲ್ಲಿನ ಸರ್ಕಾರಿ ಕೋಟಾದ ಸೀಟುಗಳಿಗೆ ₹ 21,430 ನಿಗದಿ ಮಾಡಲಾಗಿದೆ. ಕೌನ್ಸೆಲಿಂಗ್ ವಿಳಂಬ ಆಗುತ್ತಿರುವುದರಿಂದ ಖಾಸಗಿ ಕಾಲೇಜುಗಳು ತಮ್ಮ ಆಡಳಿತ ಮಂಡಳಿ ಕೋಟಾದ ಸೀಟುಗಳಿಗೆ ₹ 4 ಲಕ್ಷದಿಂದ ₹ 5 ಲಕ್ಷದವರೆಗೂ ಶುಲ್ಕ ನಿಗದಿ ಮಾಡಿವೆ ಎಂದು ವಿದ್ಯಾರ್ಥಿಗಳು, ಪೋಷಕರು ಆರೋಪಿಸಿದ್ದಾರೆ.

ಒಂದೇ ಬಾರಿ ಕೌನ್ಸೆಲಿಂಗ್ ನಡೆದರೆ ವಿದ್ಯಾರ್ಥಿಗಳಿಗೆ ಕೋರ್ಸ್‌ ಆಯ್ಕೆಯ ಅವಕಾಶ ಇರುತ್ತದೆ. ಬಿ–ಫಾರ್ಮಾ ಸೀಟು ಪಡೆಯಲು ಕಾದು ಕುಳಿತು ಮುಂದೆ ಸೀಟು ಸಿಗದಿದ್ದರೆ, ಆ ವೇಳೆಗೆ ಉಳಿದ ಕೋರ್ಸ್‌ಗಳಿಗೆ ಕೌನ್ಸೆಲಿಂಗ್‌ ಮುಕ್ತಾಯವಾಗಿದ್ದರೆ ಏನು ಮಾಡಬೇಕು ಎಂಬ ಚಿಂತೆ ವಿದ್ಯಾರ್ಥಿಗಳನ್ನು ಕಾಡುತ್ತಿದೆ.

ಅಂಕಿ ಅಂಶ

* 55 ರಾಜ್ಯದಲ್ಲಿ ಬಿ–ಫಾರ್ಮಾ ಕಾಲೇಜುಗಳು.

* 3,870 2017–18ನೇ ಸಾಲಿಗೆ ಲಭ್ಯವಿರುವ ಸೀಟುಗಳು.

*

ಬಿ–ಫಾರ್ಮಾ ಸೀಟ್ ಮ್ಯಾಟ್ರಿಕ್ಸ್‌ ಸಿದ್ಧವಿದೆ. ಆದರೆ, ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಕೌನ್ಸೆಲಿಂಗ್ ನಡೆಸಲು ಸಾಧ್ಯವಾಗುತ್ತಿಲ್ಲ.

-ಭಾಗೋಜಿ ಟಿ. ಖಾನಾಪುರೆ,

ಔಷಧ ನಿಯಂತ್ರಕ

ಪ್ರತಿಕ್ರಿಯಿಸಿ (+)