ಭಾನುವಾರ, ಡಿಸೆಂಬರ್ 8, 2019
21 °C

ಕಾವೇರಿ ನ್ಯಾಯಮಂಡಳಿ ಐತೀರ್ಪು ಪಾಲನೆ ಕಷ್ಟ: ಎಂ.ಬಿ. ಪಾಟೀಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾವೇರಿ ನ್ಯಾಯಮಂಡಳಿ ಐತೀರ್ಪು ಪಾಲನೆ ಕಷ್ಟ: ಎಂ.ಬಿ. ಪಾಟೀಲ

ಬೆಂಗಳೂರು: ‘ಮಳೆ ಕೊರತೆಯಿಂದ ಕಾವೇರಿ ಕಣಿವೆಯ ನಾಲ್ಕೂ ಜಲಾಶಯಗಳಲ್ಲಿ ಅತಿ ಕಡಿಮೆ ನೀರು ಸಂಗ್ರಹವಾಗಿರುವುದರಿಂದ ನ್ಯಾಯ ಮಂಡಳಿಯ ಐತೀರ್ಪು ಅನ್ವಯ ನೀರು ಹರಿಸುವ ಪ್ರಶ್ನೆಯೇ ಇಲ್ಲ’ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ತಿಳಿಸಿದರು.

‘ಜಲಾಶಯಗಳ ನೀರಿನ ಒಳಹರಿವು ಪ್ರಮಾಣದ ಶೇ 30ರಷ್ಟು ಹೊರ ಬಿಡಲಾಗುತ್ತಿದೆ. ಸಾಮಾನ್ಯ ಮಳೆ ವರ್ಷಗಳಲ್ಲಿ ಜೂನ್‌ನಲ್ಲಿ 10 ಮತ್ತು ಜುಲೈ ತಿಂಗಳಲ್ಲಿ 34 ಟಿಎಂಸಿ ಅಡಿ ನೀರು ತಮಿಳುನಾಡಿಗೆ ಹರಿಸಬೇಕು. ಆದರೆ, ಪ್ರಸಕ್ತ ವರ್ಷ ಜೂನ್‌ನಿಂದ ಈವರೆಗೆ 2.2 ಟಿಎಂಸಿ ಅಡಿ ನೀರು ಬಿಡುಗಡೆ ಮಾಡಲಾಗಿದೆ’ ಎಂದು ಅವರು ಸೋಮವಾರ ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದರು.

‘ಈ ನಾಲ್ಕು ಜಲಾಶಯಗಳಲ್ಲಿ ಕಳೆದ ಜುಲೈನಲ್ಲಿ 57 ಟಿಎಂಸಿ ಅಡಿ ನೀರು ಇತ್ತು. ಈ ವರ್ಷ ಕೇವಲ 26 ಟಿಎಂಸಿ ಅಡಿ ಇದೆ’ ಎಂದೂ ವಿವರಿಸಿದರು.

‘ಕಾವೇರಿ ಕಣಿವೆ ಭಾಗದಲ್ಲಿ ಮುಂದೆ ಮಳೆ ಬರುವ ಸಾಧ್ಯತೆ ಇದೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ. ಹೀಗಾಗಿ, ಕೃಷಿಗೆ ನೀರು ಬಿಡದಿರುವ ಕುರಿತು ಯಾವುದೇ ತೀರ್ಮಾನ ಕೈಗೊಂಡಿಲ್ಲ. ಪರಿಸ್ಥಿತಿ ನೋಡಿಕೊಂಡು ಮುಂದೆ ತೀರ್ಮಾನಿಸಲಾಗುವುದು. ಕುಡಿಯುವ ನೀರಿಗೆ ಮೊದಲ ಆದ್ಯತೆ’ ಎಂದೂ ಅವರು ಹೇಳಿದರು.

ಗೋವಾಕ್ಕೆ ನೀರು ಹರಿಸುವ ಪ್ರಶ್ನೆಯೇ ಇಲ್ಲ: ಮಹದಾಯಿಯಿಂದ ಗೋವಾಕ್ಕೆ ನೀರು ಬಿಡುಗಡೆ ಮಾಡಲಾಗುತ್ತಿದೆ ಎಂಬ ವರದಿಯನ್ನು ಅಲ್ಲಗಳೆದ ಸಚಿವರು, ಗೋವಾಕ್ಕೆ ನೀರು ಹರಿಸುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

‘ಮಹದಾಯಿ ವಿವಾದ ಸೂಕ್ಷ್ಮವಾಗಿದೆ. ನಾಲ್ಕು ಜಿಲ್ಲೆಗಳಲ್ಲಿ ಈ ಬಗ್ಗೆ ಹೋರಾಟ ನಡೆಯುತ್ತಿದೆ. ಗೋವಾಕ್ಕೆ ನೀರು ಬಿಡಲಾಗುತ್ತಿದೆ ಎಂಬ ವರದಿಯಿಂದ ಈ ಜಿಲ್ಲೆಗಳಲ್ಲಿ ಕಾನೂನು ಸುವ್ಯವಸ್ಥೆಗೆ ತೊಂದರೆ ಆಗಬಹುದು. ತಪ್ಪು ವರದಿ ಬಿತ್ತರಿಸಬೇಡಿ’ ಎಂದೂ ಮಾಧ್ಯಮಗಳಿಗೆ ಅವರು ಮನವಿ ಮಾಡಿದರು.

ಪ್ರತಿಕ್ರಿಯಿಸಿ (+)