ಶನಿವಾರ, ಡಿಸೆಂಬರ್ 7, 2019
16 °C

ತೇಜಸ್ವಿ ಯಾದವ್‌ ತಲೆದಂಡ: ಮೆತ್ತಗಾದ ಜೆಡಿಯು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತೇಜಸ್ವಿ ಯಾದವ್‌ ತಲೆದಂಡ: ಮೆತ್ತಗಾದ ಜೆಡಿಯು

ಪಟ್ನಾ: ಬಿಹಾರ ಉಪ ಮುಖ್ಯಮಂತ್ರಿ ತೇಜಸ್ವಿ ಯಾದವ್‌ ಅವರ ರಾಜೀನಾಮೆಗೆ ಸಂಬಂಧಿಸಿ ಜೆಡಿಯು ಮೃದು ಧೋರಣೆ ತಳೆದಂತೆ ಕಾಣಿಸುತ್ತಿದೆ.

ತೇಜಸ್ವಿ ರಾಜೀನಾಮೆ ಕೊಡಬೇಕು ಎಂದು ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಕೇಳಿಲ್ಲ. ಅದಕ್ಕಾಗಿ ಗಡುವನ್ನೂ ವಿಧಿಸಿಲ್ಲ ಎಂದು ಜೆಡಿಯು ಪ್ರಧಾನ ಕಾರ್ಯದರ್ಶಿ ಕೆ.ಸಿ. ತ್ಯಾಗಿ ಇತ್ತೀಚೆಗೆ ಹೇಳಿದ್ದರು. ‘ತೇಜಸ್ವಿ ಅವರು ತಮ್ಮ ವಿರುದ್ಧದ ಆರೋಪಗಳಿಗೆ ಸ್ಪಷ್ಟನೆ ಕೊಟ್ಟು ರಾಜಕೀಯ ಅನಿಶ್ಚಿತ ಸ್ಥಿತಿಯನ್ನು ಕೊನೆಗೊಳಿಸಬೇಕು’ ಎಂದು ತ್ಯಾಗಿ ಅವರು ಸೋಮವಾರ ಹೇಳಿದ್ದಾರೆ.

ತೇಜಸ್ವಿ ಅವರು ತಮ್ಮ ಹುದ್ದೆ ತ್ಯಜಿಸಲು ನಾಲ್ಕು ದಿನಗಳ ಗಡುವು ವಿಧಿಸಲಾಗಿದೆ ಎಂದು ಕಳೆದ ವಾರ ಹೇಳಿದ್ದ ಜೆಡಿಯು ಮುಖಂಡ ಮತ್ತು ಮಾಜಿ ಸಚಿವ ರಾಮಯ್‌ ರಾಮ್‌ ಅವರು ತಮ್ಮ ಹೇಳಿಕೆ ಬದಲಿಸಿದ್ದಾರೆ. ‘ಗಡುವಿನ ಬಗ್ಗೆ ನಾನು ಯಾವತ್ತೂ ಮಾತಾಡಿಲ್ಲ. ತೇಜಸ್ವಿ ಅವರು ಮುಖ್ಯಮಂತ್ರಿಗೆ ವಿವರಣೆ ಕೊಟ್ಟು ಗೊಂದಲ ನಿವಾರಿಸಬೇಕು ಎಂದಷ್ಟೇ ಹೇಳಿದ್ದೆ’ ಎಂದು ಅವರು ತಿಳಿಸಿದ್ದಾರೆ.

ತಮ್ಮ ರಾಜೀನಾಮೆಗೆ ಒತ್ತಡ ಇದೆ ಎಂಬುದು ಮಾಧ್ಯಮದ ಸೃಷ್ಟಿ ಎಂದು ತೇಜಸ್ವಿ ಯಾದವ್‌ ಹೇಳಿದ್ದಾರೆ.

ಹೋಟೆಲ್‌ ಗುತ್ತಿಗೆ ನೀಡುವುದಕ್ಕಾಗಿ ಜಮೀನು ಪಡೆದ ಆರೋಪದ ಪ್ರಕರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ನಿವಾಸದ ಮೇಲೆ ಸಿಬಿಐ ದಾಳಿ ನಡೆದ ನಂತರ ತೇಜಸ್ವಿ ವಿವಾದದ ಕೇಂದ್ರ ಬಿಂದುವಾಗಿದ್ದಾರೆ. ತೇಜಸ್ವಿ ಸೇರಿ ಲಾಲು ಕುಟುಂಬದ ಹಲವರ ವಿರುದ್ಧ ಸಿಬಿಐ ದೂರು ದಾಖಲಿಸಿಕೊಂಡಿದೆ.

ತೇಜಸ್ವಿ ರಾಜೀನಾಮೆ ನೀಡಬೇಕು ಎಂದು ವಿರೋಧ ಪಕ್ಷ ಬಿಜೆಪಿ ಒತ್ತಾಯಿಸಿತ್ತು. ಜೆಡಿಯು ಕೂಡ ಇದೇ ನಿಲುವು ತಳೆದಿದೆ ಎಂದು ವರದಿಯಾಗಿತ್ತು.

ಪ್ರತಿಕ್ರಿಯಿಸಿ (+)