ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಂಪಲ್ ಅವಿರೋಧ ಆಯ್ಕೆಯಲ್ಲಿ ಅಕ್ರಮ ಆರೋಪ: ತನಿಖೆ ಚುರುಕು

Last Updated 17 ಜುಲೈ 2017, 19:30 IST
ಅಕ್ಷರ ಗಾತ್ರ

ಲಖನೌ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಪತ್ನಿ ಡಿಂಪಲ್ ಯಾದವ್ ಅವರು ಕನೌಜ್ ಲೋಕಸಭಾ ಕ್ಷೇತ್ರದಿಂದ 2012ರಲ್ಲಿ ಅವಿರೋಧವಾಗಿ ಆಯ್ಕೆಯಾಗುವಂತೆ ಮಾಡಲು ಅಕ್ರಮ ಎಸಗಲಾಗಿದೆ ಎಂಬ ಆರೋಪದ ಬಗೆಗಿನ ತನಿಖೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಚುರುಕಾಗಿದೆ.

ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳ ತಂಡವು ಭಾನುವಾರ ಕನೌಜ್ ತಲುಪಿದೆ. ಚುನಾವಣೆಯಲ್ಲಿ ಸ್ಪರ್ಧಿಸಲು ಬಯಸಿದ್ದ ಅಭ್ಯರ್ಥಿಗಳನ್ನು ಸಮಾಜವಾದಿ ಪಕ್ಷದ ಕಾರ್ಯಕರ್ತರು ಅಪಹರಿಸಿ ನಾಮಪತ್ರ ಸಲ್ಲಿಕೆ ಆಗದಂತೆ ನೋಡಿಕೊಂಡಿದ್ದರು ಎಂದು ದೂರಲಾಗಿದೆ.

ಅಧಿಕಾರಿಗಳು ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಕಾರ್ಯಕರ್ತರು, ಮಾಧ್ಯಮ ಪ್ರತಿನಿಧಿಗಳ ಹೇಳಿಕೆಯನ್ನು ದಾಖಲಿಸಿಕೊಂಡರು. ಇದಲ್ಲದೆ ಜಿಲ್ಲೆಯ ಕೆಲವು ಅಧಿಕಾರಿಗಳ ಹೇಳಿಕೆಗಳನ್ನೂ ದಾಖಲಿಸಿ ಕೊಳ್ಳಲಾಗಿದೆ ಎಂದು ಸಿಐಡಿ ಮೂಲಗಳು ತಿಳಿಸಿವೆ.

ಕನೌಜ್ ಲೋಕಸಭಾ ಕ್ಷೇತ್ರದಲ್ಲಿ  2009ರಲ್ಲಿ ಅಖಿಲೇಶ್ ಯಾದವ್ ಗೆದ್ದಿದ್ದರು. 2012ರಲ್ಲಿ ಸಮಾಜವಾದಿ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದರಿಂದ ಅಖಿಲೇಶ್ ಮುಖ್ಯಮಂತ್ರಿ ಆದರು.  ನಂತರ ಅವರು ಲೋಕಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಕಾರಣ 2012ರಲ್ಲಿ ಉಪ ಚುನಾವಣೆ ನಡೆಸಲಾಯಿತು. ಸಮಾಜವಾದಿ ಪಕ್ಷದಿಂದ ಡಿಂಪಲ್ ಸ್ಪರ್ಧಿಸಿದ್ದರು. ಅವರ ವಿರುದ್ಧ ಯಾರೂ ಸ್ಪರ್ಧಿಸದ ಕಾರಣ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.

ನಾಮಪತ್ರ ಸಲ್ಲಿಸಲು ಬಯಸಿದ್ದ ಅಭ್ಯರ್ಥಿಗಳನ್ನು ಸಮಾಜವಾದಿ ಪಕ್ಷದ ಕಾರ್ಯಕರ್ತರು ಅಪಹರಿಸಿದ್ದರ ಕುರಿತು ನ್ಯಾಯಾಲಯದಲ್ಲೂ ದೂರು ದಾಖಲಾಗಿದೆ. 2012ರಲ್ಲೇ ಈ ಬಗ್ಗೆ ತನಿಖೆಗೆ ಆದೇಶಿಸಲಾಗಿತ್ತು. ಆದರೆ ಸಮಾಜವಾದಿ ಪಕ್ಷವೇ ಆಡಳಿತದಲ್ಲಿ ಇದ್ದುದರಿಂದ ತನಿಖೆ ಆರಂಭವಾಗಿರಲಿಲ್ಲ.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ತನಿಖೆ ಚುರುಕಾಗಿದೆ.

2014ರಲ್ಲಿ ನಡೆದ ಚುನಾವಣೆಯಲ್ಲಿ ಕನೌಜ್ ಕ್ಷೇತ್ರದಲ್ಲಿ ಡಿಂಪಲ್ ಮತ್ತೆ ಗೆದ್ದು ಲೋಕಸಭಾ ಸದಸ್ಯರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT