ಸೋಮವಾರ, ಡಿಸೆಂಬರ್ 16, 2019
25 °C

ಸಿಗರೇಟ್‌ ಮೇಲೆ ಹೆಚ್ಚುವರಿ ಸೆಸ್‌

ಪಿಟಿಐ Updated:

ಅಕ್ಷರ ಗಾತ್ರ : | |

ಸಿಗರೇಟ್‌ ಮೇಲೆ ಹೆಚ್ಚುವರಿ ಸೆಸ್‌

ನವದೆಹಲಿ: ತಂಬಾಕು ಉತ್ಪನ್ನಗಳ ಮೇಲಿನ ಸೆಸ್‌  ಪ್ರಮಾಣ ಹೆಚ್ಚಿಸಲು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯು ನಿರ್ಧರಿಸಿದೆ.

ಈ ಸೆಸ್‌ ಸೋಮವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬಂದಿದೆ.  ಜಿಎಸ್‌ಟಿ ತೆರಿಗೆ ದರ ನಿರ್ಧಾರದಲ್ಲಿನ ವ್ಯತ್ಯಾಸದಿಂದಾಗಿ ಸಿಗರೇಟ್‌ ತಯಾರಿಕಾ ಸಂಸ್ಥೆಗಳು ಬಾಚಿಕೊಳ್ಳುತ್ತಿದ್ದ ಅನಿರೀಕ್ಷಿತ ಲಾಭದ ಮೇಲೆ ಕಡಿವಾಣ ವಿಧಿಸುವ ಕಾರಣಕ್ಕೆ ಈ ಸೆಸ್‌ ವಿಧಿಸಲು ನಿರ್ಧರಿಸಲಾಗಿದೆ.

ಸಿಗರೇಟ್‌ಗಳ ಮೇಲೆ ಗರಿಷ್ಠ ತೆರಿಗೆ ದರವಾದ ಶೇ 28 ಮತ್ತು ವಹಿವಾಟಿನ ಪ್ರಮಾಣ ಆಧರಿಸಿ ಶೇ 5ರಷ್ಟು ಸೆಸ್‌ ವಿಧಿಸಲಾಗುತ್ತಿತ್ತು. ಈಗ ಪ್ರತಿ ಒಂದು ಸಾವಿರ ಸಿಗರೇಟ್‌ಗಳಿಗೆ  ₹ 485 ರಿಂದ ₹ 792ರ ಮಧ್ಯೆ ಸೆಸ್‌ ವಿಧಿಸಲು ತೀರ್ಮಾನಿಸಲಾಗಿದೆ.

‘ಈ ಸೆಸ್‌ ಹೆಚ್ಚಳದಿಂದಾಗಿ ಕೇಂದ್ರ ಸರ್ಕಾರಕ್ಕೆ ವರ್ಷಕ್ಕೆ ₹ 5 ಸಾವಿರ ಕೋಟಿಗಳಷ್ಟು ಹೆಚ್ಚುವರಿ ವರಮಾನ ಬರಲಿದೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ತಿಳಿಸಿದ್ದಾರೆ.

ಸೋಮವಾರ ಇಲ್ಲಿ ನಡೆದ ಮಂಡಳಿಯು ವಿಡಿಯೊ ಕಾನ್‌ಫೆರೆನ್ಸ್‌ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. 65 ಎಂಎಂ ಉದ್ದ ಮೀರದ ಫಿಲ್ಟರ್‌ ಮತ್ತು ಫಿಲ್ಟರ್‌ರಹಿತ ಸಿಗರೇಟ್‌ಗಳ ಮೇಲೆ ಪ್ರತಿ ಒಂದು ಸಾವಿರ ಸಿಗರೇಟ್‌ಗಳಿಗೆ ₹ 1,591 ರಂತೆ ಸೆಸ್‌ ವಿಧಿಸಲಾಗಿತ್ತು.  ಸಿಗರೇಟ್‌ ಗಾತ್ರ ಆಧರಿಸಿ  ಸೆಸ್‌ ದರ ₹ 2,126 ರಿಂದ ₹ 4,170ರವರೆಗೂ ನಿಗದಿ ಪಡಿಸಲಾಗಿತ್ತು.

ಆದರೆ, ಈ ತೆರಿಗೆ ಪ್ರಮಾಣವು  ಜಿಎಸ್‌ಟಿ ಮುಂಚಿನ ದರಕ್ಕಿಂತ ಕಡಿಮೆ ಇತ್ತು. ಸಿಗರೇಟ್‌ ತಯಾರಕರು ಕಡಿಮೆ ತೆರಿಗೆಯ ಲಾಭವನ್ನು ಬಳಕೆದಾರರಿಗೆ ವರ್ಗಾಯಿಸಬೇಕಾಗಿತ್ತು ಇಲ್ಲವೆ  ಈ ಹೆಚ್ಚುವರಿ ಲಾಭವನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಬಹುದಾಗಿತ್ತು. ತಯಾರಕರು  ಬೆಲೆ ಇಳಿಸುವ ಗೋಜಿಗೆ ಹೋಗಿರಲಿಲ್ಲ.

ಹೆಚ್ಚುವರಿ ಸೆಸ್‌ ವಿಧಿಸಿದ್ದರೂ ಸಿಗರೇಟ್‌ಗಳ ಬೆಲೆಯಲ್ಲಿ ಯಾವುದೇ ವ್ಯತ್ಯಾಸ ಆಗಲಾರದು. ತಯಾರಕರು ಪಡೆಯುತ್ತಿದ್ದ ಹೆಚ್ಚುವರಿ ಲಾಭಕ್ಕಷ್ಟೆ ಇದು ಕಡಿವಾಣ ವಿಧಿಸಲಿದೆ.

ಪ್ರತಿಕ್ರಿಯಿಸಿ (+)