ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತ ಚಲಾಯಿಸಿದ 222 ಶಾಸಕರು

Last Updated 17 ಜುಲೈ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರಪತಿ ಆಯ್ಕೆಗೆ ಸೋಮವಾರ ನಡೆದ ಚುನಾವಣೆಯಲ್ಲಿ ರಾಜ್ಯ ವಿಧಾನ ಸಭೆಯ ಚುನಾಯಿತ 224 ಸದಸ್ಯರ ಪೈಕಿ 222 ಸದಸ್ಯರು ಮತ ಚಲಾಯಿಸಿದರು.

ವಿಧಾನಸೌಧದ ಕೊಠಡಿ ಸಂಖ್ಯೆ 106ರಲ್ಲಿ ಮತಗಟ್ಟೆ ಸ್ಥಾಪಿಸಲಾಗಿತ್ತು. ಅಮೆರಿಕ ಪ್ರವಾಸದಲ್ಲಿರುವ ಜೆಡಿಎಸ್‌ ಭಿನ್ನಮತೀಯ ಶಾಸಕ ಎನ್. ಚೆಲುವರಾಯ ಸ್ವಾಮಿ ಮತ್ತು ಸಹೋದರಿ ನಿಧನರಾದ ಕಾರಣ ಜೆಡಿಎಸ್‌ ಶಾಸಕ ವೈ.ಎಸ್‌.ವಿ.ದತ್ತ ಮತ ಚಲಾಯಿಸಲಿಲ್ಲ.

ಸಂಸದರಿಗೆ ದೆಹಲಿಯ ಸಂಸತ್ ಭವನದಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಆದರೆ, ಕಾಂಗ್ರೆಸ್‌ ಸಂಸದ ಪ್ರಕಾಶ್ ಹುಕ್ಕೇರಿ ವಿಶೇಷ ಅನುಮತಿ ಪಡೆದು ವಿಧಾನಸೌಧದಲ್ಲೇ ಮತದಾನ ಮಾಡಿದರು.

ಸೋಮವಾರ ಬೆಳಿಗ್ಗೆ 10 ಗಂಟೆಗೆ ಮತದಾನ ಆರಂಭವಾಗುತ್ತಿದ್ದಂತೆ ಬಿಜೆಪಿ ಶಾಸಕ ಸಿ.ಟಿ. ರವಿ ಮೊದಲಿಗರಾಗಿ ಮತ ಹಾಕಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಧ್ಯಾಹ್ನದ ವೇಳೆಗೆ ಶಾಸಕರ ಜತೆ ಬಂದು ಮತ ಚಲಾಯಿಸಿದರು. ವಿಧಾನಸಭೆ ವಿರೋಧ ಪಕ್ಷದ ನಾಯಕ ಜಗದೀಶ್ ಶೆಟ್ಟರ್‌, ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಅವರೂ ಮಧ್ಯಾಹ್ನದ ಹೊತ್ತಿಗೆ ಮತಗಟ್ಟೆಗೆ ಬಂದು ಮತ ಹಾಕಿದರು.

ಹಕ್ಕು ಚಲಾಯಿಸಲು ಸಾಲುಗಟ್ಟಿ ನಿಂತ ಶಾಸಕರು, ಹರಟೆ, ಹಾಸ್ಯ, ಪರಸ್ಪರ ಲೇವಡಿ ಮಾಡಿಕೊಳ್ಳುತ್ತಿದ್ದುದು ಕಂಡುಬಂತು. ಮಧ್ಯಾಹ್ನ ಒಂದು ಗಂಟೆ ವೇಳೆಗೆ 204 ಸದಸ್ಯರು ಮತ ಚಲಾಯಿಸಿದ್ದರು.

‘ನಮ್ಮ ಅಭ್ಯರ್ಥಿ ಮೀರಾಕುಮಾರ್.  ಸಂಖ್ಯಾಬಲ ಕಡಿಮೆ ಇರಬಹುದು. ಇದು ಸೈದ್ಧಾಂತಿಕ ಹೋರಾಟ. ಎಲ್ಲರೂ ತಮ್ಮ ಆತ್ಮಸಾಕ್ಷಿಗೆ ಅನುಗುಣವಾಗಿ ಮತ ಹಾಕುವಂತೆ ಶಾಸಕರಲ್ಲಿ ಮೀರಾಕುಮಾರ್ ಮನವಿ ಮಾಡಿದ್ದಾರೆ ’ ಎಂದು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ ಹೇಳಿದರು.

‘ಜೆಡಿಎಸ್‌ನ ಕೆಲವರು ಅಡ್ಡ ಮತದಾನ ಮಾಡುತ್ತಾರೆ ಎಂದು ಬಿಜೆಪಿಯ ಸಿ.ಟಿ. ರವಿ ಹೇಳಿಕೆ ನೀಡಿದ್ದರು. ಆದರೆ, ಪಕ್ಷ ತೆಗೆದುಕೊಂಡ ತೀರ್ಮಾನದಂತೆ ಮೀರಾ ಕುಮಾರ್‌ ಅವರಿಗೆ ಪಕ್ಷದ ಎಲ್ಲ 33 ಶಾಸಕರು ಮತ ಚಲಾಯಿಸಿದ್ದಾರೆ’ ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.

ವ್ಹೀಲ್‌ ಚೇರ್‌ನಲ್ಲಿ ಬಂದ ಶಾಸಕರು: ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ, ಕಾಂಗ್ರೆಸ್‌ ಶಾಸಕರಾದ ವೈ.ಎನ್‌. ರುದ್ರೇಶ ಗೌಡ, ಎಂ.ಎಚ್‌. ಅಂಬರೀಷ್‌  ಮತ್ತು ಮತ್ತು ಬಿಜೆಪಿ ಶಾಸಕ ಎಸ್‌.ಆರ್‌. ವಿಶ್ವನಾಥ್‌ ಅವರು ವ್ಹೀಲ್‌ಚೇರ್‌ನಲ್ಲಿ ಬಂದು ಮತ ಚಲಾಯಿಸಿದರು.

ಜೆಡಿಎಸ್ ಭಿನ್ನಮತೀಯ ಶಾಸಕರಿಗೆ ದೂರವಾಣಿ ಕರೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಯುಪಿಎ ಮೈತ್ರಿಕೂಟದ ಅಭ್ಯರ್ಥಿಗೆ ಮತ ಹಾಕುವಂತೆ ಮನವಿ ಮಾಡಿದರು. ಮುಖ್ಯಮಂತ್ರಿ ಮನವಿಗೆ  ಭಿನ್ನಮತೀಯ ಶಾಸಕರು ಸ್ಪಂದಿಸಿ  ಮತ ಚಲಾಯಿಸಿದರು.   ಅಮೆರಿಕ ಪ್ರವಾಸದಲ್ಲಿರುವ ಚೆಲುವರಾಯಸ್ವಾಮಿ ಚುನಾವಣೆಯಿಂದ ದೂರ ಉಳಿದರು.

ಅಡ್ಡ ಮತದಾನ
ನವದೆಹಲಿ: ರಾಷ್ಟ್ರಪತಿ ಚುನಾವಣೆಯಲ್ಲೂ ಅಡ್ಡ ಮತದಾನವಾಗಿರುವ ದಟ್ಟ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ತೃಣಮೂಲ ಕಾಂಗ್ರೆಸ್‌ನಿಂದ ಉಚ್ಚಾಟಿಸಲಾದ ತ್ರಿಪುರದ ಶಾಸಕರು, ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಶಾಸಕರು, ದೆಹಲಿ ಮತ್ತು ಪಂಜಾಬ್‌ನ ಆಮ್‌ ಆದ್ಮಿ ಪಕ್ಷದ  (ಎಎಪಿ) ಶಾಸಕರು ಅಡ್ಡ ಮತದಾನ ಮಾಡಿರುವ ಸಾಧ್ಯತೆ ಇದೆ. ಆ ಮತಗಳು ಬಿಜೆಪಿಗೆ ಬಂದಿರುವ ಸಾಧ್ಯತೆ ಇದೆ ಎಂದು ಆ ಪಕ್ಷದ ಮೂಲಗಳು ಹೇಳುತ್ತವೆ.  

ಒಟ್ಟು ಮತಗಳ ಶೇ 63ರಷ್ಟು ಮತಗಳನ್ನು ಹೊಂದಿರುವ 40 ರಾಜಕೀಯ ಪಕ್ಷಗಳ ಬೆಂಬಲ ಪಡೆದ ಎನ್‌ಡಿಎ ಅಭ್ಯರ್ಥಿ  ರಾಮನಾಥ ಕೋವಿಂದ್‌ ಅವರು ಮೀರಾ ಕುಮಾರ್‌ ವಿರುದ್ಧ ನಿರಾಯಾಸ ಗೆಲವು ಸಾಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

ಹತ್ತು ನಿಮಿಷ ಕಾಯ್ದ ಪ್ರಧಾನಿ: ಪ್ರಧಾನಿ ನರೇಂದ್ರ ಮೋದಿ ಮತದಾನಕ್ಕಾಗಿ ಹತ್ತು ನಿಮಿಷ ಕಾಯ್ದು ನಿಂತ ಕುತೂಹಲಕಾರಿ ಪ್ರಸಂಗ ಸೋಮವಾರ ಸಂಸತ್‌ ಭವದಲ್ಲಿ ನಡೆಯಿತು. 

ಮತದಾನ ಆರಂಭವಾಗುವುದಕ್ಕೂ 10 ನಿಮಿಷ ಮೊದಲೇ ಮೋದಿ  ಬಂದರು. ಇದರಿಂದ  ಗಲಿಬಿಲಿಗೊಂಡ ಸಿಬ್ಬಂದಿ ಹತ್ತು ನಿಮಿಷ ಕಾಯುವಂತೆ ಪ್ರಧಾನಿಗೆ ಮನವಿ ಮಾಡಿದರು. ಹತ್ತು ನಿಮಿಷ ಕಾಯ್ದ ಮೋದಿ ನಂತರ ಮೊದಲಿಗರಾಗಿ ಮತದಾನ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT