ಶುಕ್ರವಾರ, ಡಿಸೆಂಬರ್ 13, 2019
17 °C

ತಕ್ಕ ಉತ್ತರ ನಮ್ಮ ಹಕ್ಕು: ಭಾರತದ ಆಕ್ರೋಶ

ಪಿಟಿಐ Updated:

ಅಕ್ಷರ ಗಾತ್ರ : | |

ತಕ್ಕ ಉತ್ತರ ನಮ್ಮ ಹಕ್ಕು: ಭಾರತದ ಆಕ್ರೋಶ

ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ ಕದನ ವಿರಾಮ ಉಲ್ಲಂಘಿಸಿದರೆ, ಅದಕ್ಕೆ ತಕ್ಕ ರೀತಿಯಲ್ಲಿ ಉತ್ತರಿಸುವ ಹಕ್ಕು ತನಗಿದೆ ಎಂದು ಭಾರತದ ಸೇನೆ ಪಾಕಿಸ್ತಾನಕ್ಕೆ ಕಟು ಎಚ್ಚರಿಕೆ ನೀಡಿದೆ.

ಸೇನಾ ಕಾರ್ಯಾಚರಣೆಗಳ ಮಹಾ ನಿರ್ದೇಶಕ (ಡಿಜಿಎಂಒ) ಲೆಫ್ಟಿನೆಂಟ್‌ ಜನರಲ್‌ ಎ.ಕೆ. ಭಟ್‌ ಅವರು ಪಾಕಿಸ್ತಾನದ ತಮ್ಮ ಸಹವರ್ತಿ ಮೇಜರ್‌ ಜನರಲ್‌ ಸಾಹೀರ್‌ ಸಂಶಾದ್‌ ಮಿರ್ಜಾ ಅವರೊಂದಿಗೆ ಸೋಮವಾರ ನಡೆಸಿದ ದೂರವಾಣಿ ಮಾತುಕತೆಯಲ್ಲಿ ಈ ಎಚ್ಚರಿಕೆ ನೀಡಿದ್ದಾರೆ. ಗಡಿ ನಿಯಂತ್ರಣ ರೇಖೆಯಲ್ಲಿ ಶಾಂತಿ ಕಾಪಾಡುವ ವಿಚಾರದಲ್ಲಿ ಭಾರತೀಯ ಸೇನೆ ಪ್ರಾಮಾಣಿಕವಾಗಿ ನಡೆದುಕೊಂಡಿದೆ ಎಂಬುದನ್ನೂ ಅವರು ಪಾಕಿಸ್ತಾನ ಸೇನೆಯ ಗಮನಕ್ಕೆ ತಂದಿದ್ದಾರೆ.

ಪೂಂಚ್‌ ಮತ್ತು ರಜೌರಿ ಜಿಲ್ಲೆಗಳಲ್ಲಿ ಎಲ್‌ಒಸಿಯಲ್ಲಿ ಪಾಕಿಸ್ತಾನ ಸೇನೆ ನಡೆಸಿದ ಷೆಲ್ ದಾಳಿಯಲ್ಲಿ ಯೋಧರೊಬ್ಬರು ಮತ್ತು ಒಂಬತ್ತು ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ಮೂರು ಗಂಟೆಗಳ ನಂತರ ಈ ಮಾತುಕತೆ ನಡೆದಿದೆ. ಎರಡೂ ರಾಷ್ಟ್ರಗಳ ಡಿಜಿಎಂಒಗಳು 10 ನಿಮಿಷ ಮಾತುಕತೆ ನಡೆಸಿದ್ದಾರೆ. ಪಾಕಿಸ್ತಾನದ ಕಮಾಂಡರ್‌ ಮಿರ್ಜಾ ಅವರು ಮೊದಲು ಮಾತನಾಡಿದರು. ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಅತ್ಮುಕಮ್‌ ವಲಯದಲ್ಲಿ ಕಳೆದ ವಾರ ನಾಲ್ವರು ಪಾಕಿಸ್ತಾನ ಸೈನಿಕರು ಮತ್ತು ನಾಗರಿಕರೊಬ್ಬರು ಮೃತಪಟ್ಟದ್ದನ್ನು ಪ್ರಸ್ತಾಪಿಸಿದರು.

‘ಪಾಕಿಸ್ತಾನ ಸೇನೆಯನ್ನು ಗುರಿಯಾಗಿಸಿಕೊಂಡು ಭಾರತ ದಾಳಿ ನಡೆಸುತ್ತಿದೆ ಎಂದು ಹೇಳಿದರು’ ಎಂದು   ಸೇನಾ ವಕ್ತಾರ ಲೆಫ್ಟಿನೆಂಟ್‌ ಕರ್ನಲ್‌ ಅಮನ್‌ ಆನಂದ್‌ ಹೇಳಿದ್ದಾರೆ.

‘ಇದಕ್ಕೆ ಪ್ರತಿಕ್ರಿಯಿಸಿದ ಲೆ.ಜ ಭಟ್‌,  ಎಲ್ಲ ಪ್ರಕರಣಗಳಲ್ಲೂ ಪಾಕಿಸ್ತಾನವೇ ಕದನ ವಿರಾಮ ಉಲ್ಲಂಘಿಸಿದೆ. ಭಾರತ ಅವುಗಳಿಗೆ ಸೂಕ್ತವಾಗಿ ಪ್ರತಿಕ್ರಿಯೆ ನೀಡಿದೆಯಷ್ಟೆ ಎಂದು ಪಾಕಿಸ್ತಾನದ ಡಿಜಿಎಂಒಗೆ ತಿಳಿಸಿದರು’ ಎಂದು ಅವರು ಹೇಳಿದ್ದಾರೆ.

‘ಪಾಕಿಸ್ತಾನದ ಸೇನಾ ಠಾಣೆಗಳ ಸಮೀಪದಲ್ಲೇ ಶಸ್ತ್ರಸಜ್ಜಿತ ಉಗ್ರರು ಭಾರತದೊಳಕ್ಕೆ ನುಸುಳಲು ಯತ್ನಿಸಿದಾಗ ಭಾರತೀಯ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ ಎಂಬುದನ್ನು ಪಾಕಿಸ್ತಾನ ಸೇನೆಯ ಗಮನಕ್ಕೆ ತರಲಾಗಿದೆ’ ಎಂದು ಆನಂದ್‌ ವಿವರಿಸಿದ್ದಾರೆ.

‘ಪಾಕಿಸ್ತಾನ ಸೇನೆಯ ಮುಂಚೂಣಿ ಠಾಣೆಗಳ ಬೆಂಬಲದೊಂದಿಗೆ ಉಗ್ರರು ಭಾರತದೊಳಕ್ಕೆ ನುಸುಳುತ್ತಿರುವ ಪ್ರವೃತ್ತಿಯು ಗಡಿ ಭಾಗದಲ್ಲಿನ  ಪರಿಸ್ಥಿತಿ ಮತ್ತು ಆಂತರಿಕ ಭದ್ರತೆ ಮೇಲೆ ಪ್ರಭಾವ ಬೀರುತ್ತಿದೆ ಎಂಬ ಸಂಗತಿಯನ್ನು ಭಟ್‌ ಅವರು ಒತ್ತಿ ಹೇಳಿದ್ದಾರೆ’ ಎಂದು  ಅವರು ಹೇಳಿದ್ದಾರೆ.

ಗಡಿ ನಿಯಂತ್ರಣ ರೇಖೆಯಲ್ಲಿ ಪಾಕಿಸ್ತಾನವು ಕದನ ವಿರಾಮ ಉಲ್ಲಂಘಿಸುತ್ತಿರುವ ಮತ್ತು ಜಮ್ಮು ಮತ್ತು ಕಾಶ್ಮೀರದಲ್ಲಿ ಹಿಂಸಾಚಾರ  ಪ್ರಕರಣಗಳು ಹೆಚ್ಚಾಗುತ್ತಿರುವ ಸಂದರ್ಭದಲ್ಲೇ ಈ ಮಾತುಕತೆ ನಡೆದಿದೆ.

ಪ್ರತಿಕ್ರಿಯಿಸಿ (+)