ಶನಿವಾರ, ಡಿಸೆಂಬರ್ 14, 2019
25 °C

ರಾಷ್ಟ್ರಪತಿ ಚುನಾವಣೆ: ಶೇ99ರಷ್ಟು ದಾಖಲೆ ಮತದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಷ್ಟ್ರಪತಿ ಚುನಾವಣೆ: ಶೇ99ರಷ್ಟು ದಾಖಲೆ ಮತದಾನ

ನವದೆಹಲಿ: ದೇಶದ 14ನೇ ರಾಷ್ಟ್ರಪತಿ ಆಯ್ಕೆಗಾಗಿ ಸೋಮವಾರ ನಡೆದ ಚುನಾವಣೆಯಲ್ಲಿ ಶೇ99ರಷ್ಟು ದಾಖಲೆಯ ಮತದಾನವಾಗಿದೆ.  

ದೆಹಲಿಯ ಸಂಸತ್‌ ಭವನದಲ್ಲಿ ಮತ ಚಲಾಯಿಸಿದವರಲ್ಲಿ ಪ್ರಧಾನಿ ನರೇಂದ್ರ ಮೋದಿ ಮೊದಲಿಗರಾಗಿದ್ದರು. ಗುಜರಾತ್‌ನಿಂದ ಶಾಸಕರಾಗಿ ಆಯ್ಕೆಯಾಗಿರುವ ಬಿಜೆಪಿ ಅಧ್ಯಕ್ಷ ಅಮಿತ್‌ ಷಾ ಕೂಡ ಇಲ್ಲಿಯೇ ಮತದಾನ ಮಾಡಿದರು. ಲೋಕಸಭಾ ಕಲಾಪ ಮುಂದೂಡಿದ ಅವಧಿಯಲ್ಲಿ ಬೆಳಿಗ್ಗೆ 11.30ಕ್ಕೆ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರು ತಮ್ಮ ಹಕ್ಕು ಚಲಾಯಿಸಿದರು.

ಒಟ್ಟು 771 ಸಂಸದರ ಪೈಕಿ 768 ಸಂಸದರು ತಮ್ಮ ಹಕ್ಕು ಚಲಾಯಿಸಿದ್ದು, ಶೇ 99.61ರಷ್ಟು ಮತದಾನವಾಗಿದೆ. ಅದೇ ರೀತಿ 4,109 ಶಾಸಕರ ಪೈಕಿ 4,083 ಶಾಸಕರು ಹಕ್ಕು ಚಲಾಯಿಸಿದ್ದು ಶೇ 99.37ರಷ್ಟು ಮತದಾನವಾಗಿದೆ.

ಇದೇ 20ರಂದು (ಗುರುವಾರ) ಬೆಳಿಗ್ಗೆ 11ಗಂಟೆಗೆ ಮತ ಎಣಿಕೆ ನಡೆಯಲಿದೆ. ಮೊದಲು ಸಂಸತ್‌ ಭವನದ ಮತಪೆಟ್ಟಿಗೆ ತೆಗೆಯಲಾಗುವುದು.  ನಂತರ ವಿವಿಧ ರಾಜ್ಯಗಳ ಮತಪೆಟ್ಟಿಗೆ  ತೆರೆಯಲಾಗುವುದು. ನಾಲ್ಕು ಪ್ರತ್ಯೇಕ ಟೇಬಲ್‌ಗಳಲ್ಲಿ ಒಟ್ಟು ಎಂಟು ಸುತ್ತಿನ ಮತ ಎಣಿಕೆ ನಡೆಯಲಿದೆ.

11 ರಾಜ್ಯಗಳಲ್ಲಿ ಶೇ 100ರಷ್ಟು ಮತದಾನ:  ಅರುಣಾಚಲ ಪ್ರದೇಶ, ಛತ್ತೀಸಗಡ, ಅಸ್ಸಾಂ, ಗುಜರಾತ್, ಬಿಹಾರ, ಹರಿಯಾಣ, ಹಿಮಾಚಲ ಪ್ರದೇಶ, ಜಾರ್ಖಂಡ್‌, ನಾಗಾಲ್ಯಾಂಡ್‌, ಉತ್ತರಾಖಂಡ ಮತ್ತು ಪುದುಚೇರಿಯಲ್ಲಿ ಶೇ 100ರಷ್ಟು ಮತದಾನವಾಗಿದೆ.

ಆಂಧ್ರ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಮಣಿಪುರ ಮತ್ತು ತ್ರಿಪುರ ಬಿಟ್ಟು ಉಳಿದೆಲ್ಲ ರಾಜ್ಯಗಳಿಂದ  ವರದಿ ಬಂದಿದ್ದು,  ಶೇ 99ರಷ್ಟು ಮತದಾನವಾಗಿದೆ ಎಂದು  ಲೋಕಸಭಾ ಕಾರ್ಯದರ್ಶಿ ಹಾಗೂ ಚುನಾವಣಾ ಅಧಿಕಾರಿ ಅನೂಪ್‌ ಮಿಶ್ರಾ ತಿಳಿಸಿದ್ದಾರೆ.

ರಾಷ್ಟ್ರಪತಿ ಚುನಾವಣೆಯಲ್ಲಿಯೇ ಇದು ದಾಖಲೆ ಪ್ರಮಾಣದ ಮತದಾನ ಎಂದು ತಿಳಿಸಿದರು.

ಪ್ರತಿಕ್ರಿಯಿಸಿ (+)