ಮಂಗಳವಾರ, ಡಿಸೆಂಬರ್ 10, 2019
18 °C

ವೆಂಕಯ್ಯ ಎನ್‌ಡಿಎ ಅಭ್ಯರ್ಥಿ: ಮತ್ತೆ ಬಿಜೆಪಿಯ ಅಚ್ಚರಿಯ ಆಯ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೆಂಕಯ್ಯ ಎನ್‌ಡಿಎ ಅಭ್ಯರ್ಥಿ: ಮತ್ತೆ ಬಿಜೆಪಿಯ ಅಚ್ಚರಿಯ ಆಯ್ಕೆ

ನವದೆಹಲಿ: ಕೇಂದ್ರ ನಗರಾಭಿವೃದ್ಧಿ ಸಚಿವ ವೆಂಕಯ್ಯ ನಾಯ್ಡು (68) ಅವರನ್ನು ಎನ್‌ಡಿಎ ಉಪರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೆ ಅಚ್ಚರಿ ಮೂಡಿಸಿದ್ದಾರೆ.

ರಾಷ್ಟ್ರಪತಿ ಅಭ್ಯರ್ಥಿಯಾಗಿ ರಾಮನಾಥ ಕೋವಿಂದ್‌ ಅವರ ಆಯ್ಕೆಯ ವಿಚಾರದಲ್ಲಿಯೂ ಕೊನೆ ಕ್ಷಣದವರೆಗೆ ಅವರು ಗುಟ್ಟು ಕಾಪಾಡಿಕೊಂಡಿದ್ದರು. ಅದೇ ರೀತಿ ಉಪರಾಷ್ಟ್ರಪತಿ ಅಭ್ಯರ್ಥಿ ಹೆಸರನ್ನು ಕೊನೆ ಕ್ಷಣದಲ್ಲಿ ಪ್ರಕಟಿಸಲಾಗಿದೆ.

ಉಪರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮಂಗಳವಾರ ಕೊನೆಯ ದಿನವಾಗಿದೆ. ಸೋಮವಾರ ಸಂಜೆ ಅಭ್ಯರ್ಥಿ ಘೋಷಿಸಲಾಗಿದೆ.

ವೆಂಕಯ್ಯ ಅವರನ್ನು ಆಯ್ಕೆ ಮಾಡಲು ನಿಖರವಾದ ಕಾರಣವೇನು ಎಂಬುದು ಬಹಿರಂಗವಾಗಿಲ್ಲ. ದಕ್ಷಿಣ ಭಾರತದಲ್ಲಿ ಅವರು ಬಿಜೆಪಿಯ ಪ್ರಮುಖ ಮುಖಂಡರು. ಜತೆಗೆ ಪಕ್ಷ ಸಂಘಟನೆ ಮತ್ತು ಬೆಳವಣಿಗೆಗೆ ಕೆಲಸ ಮಾಡಿದ್ದಾರೆ. ಹಾಗಾಗಿ ಅವರು ಅನಿವಾರ್ಯ ಆಯ್ಕೆಯೇ ಆಗಿದ್ದರು ಎಂದು ಪಕ್ಷದ ಮುಖಂಡರು ಹೇಳಿದ್ದಾರೆ. ದಕ್ಷಿಣ ಭಾರತದಲ್ಲಿ ನೆಲೆ ವಿಸ್ತರಿಸಿಕೊಳ್ಳುವ ಮಹತ್ವಾಕಾಂಕ್ಷೆಯನ್ನು ಬಿಜೆಪಿ ಹೊಂದಿದೆ. ಹಾಗಾಗಿ ಈ ನಿಟ್ಟಿನಲ್ಲಿ ಇದು ಮಹತ್ವದ ಹೆಜ್ಜೆ ಎಂದೇ ವಿಶ್ಲೇಷಿಸಲಾಗಿದೆ.

ವೆಂಕಯ್ಯ ಅವರ ಆರೋಗ್ಯ ಬಹಳ ಸೂಕ್ಷ್ಮವಾಗಿದೆ. ಹಾಗಾಗಿ ತಮ್ಮ ಸಚಿವ ಹುದ್ದೆಯನ್ನು ನಿಭಾಯಿಸುವುದು ಅವರಿಗೆ ಸ್ವಲ್ಪ ಹೊರೆ ಎನಿಸುತ್ತಿತ್ತು. ನಗರಾಭಿವೃದ್ಧಿ ಮತ್ತು ವಾರ್ತಾ ಹಾಗೂ ಪ್ರಸಾರ ಖಾತೆಗಳೆರಡನ್ನೂ ಅವರು ನಿಭಾಯಿಸುತ್ತಿದ್ದರು.

ಸ್ಮಾರ್ಟ್‌ ಸಿಟಿಯಂತಹ ಮಹತ್ವದ ಯೋಜನೆಗಳ ಪ್ರಗತಿ ಎದ್ದು ಕಾಣುವಂತಿರಬೇಕು ಎಂಬುದು ಪ್ರಧಾನಿಯವರ ಇಂಗಿತ. ಹಾಗಾಗಿ ನಗರಾಭಿವೃದ್ಧಿ ಸಚಿವಾಲಯದ ಕೆಲಸ ಇಮ್ಮಡಿಯಾಗಿದೆ. ಉಪರಾಷ್ಟ್ರಪತಿ ಹುದ್ದೆಗೆ ವೆಂಕಯ್ಯ ಅವರ ಹೆಸರು ಮುಂಚೂಣಿಯಲ್ಲಿದೆ ಎಂಬ ಸುದ್ದಿ ಭಾನುವಾರ ಸಂಜೆಯ ಹೊತ್ತಿಗೇ ವ್ಯಾಪಕವಾಗಿತ್ತು. ಆಗಲೇ ಸ್ಪಷ್ಟೀಕರಣ ನೀಡಿದ್ದ ಅವರು ಉನ್ನತ ಸಾಂವಿಧಾನಿಕ ಹುದ್ದೆಯ ಬಗ್ಗೆ ಇಂತಹ ಊಹಾಪೋಹ ಹರಿಯಬಿಡಬಾರದು ಎಂದು ಮನವಿ ಮಾಡಿದ್ದರು.

ಸಂಸತ್‌ ಭವನದಲ್ಲಿ ಸಂಸದರು ವೆಂಕಯ್ಯ ಅವರಿಗೆ ಬೆಳಗ್ಗಿನಿಂದಲೇ ಶುಭಾಶಯ ಕೋರಲು ಆರಂಭಿಸಿದ್ದರು.

ರಾತ್ರಿ ವೇಳೆಗೆ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಂಕಿ–ಅಂಶ

* ಆಗಸ್ಟ್‌ 5ರಂದು ಚುನಾವಣೆ

* ರಾಜ್ಯಸಭೆ ಮತ್ತು ಲೋಕಸಭೆಯ 790 ಸದಸ್ಯರಿಗೆ ಮತದ ಹಕ್ಕು ಇದೆ

* ಎನ್‌ಡಿಎಗೆ 550ರಷ್ಟು ಸದಸ್ಯರ ಬೆಂಬಲ ಇದೆ

* ಹಾಗಾಗಿ ವೆಂಕಯ್ಯ ಗೆಲುವು ಖಚಿತ

* ಮಂಗಳವಾರ 11 ಗಂಟೆಗೆ ನಾಮಪತ್ರ ಸಲ್ಲಿಕೆ

* 18 ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿಯಾಗಿ ಗೋಪಾಲಕೃಷ್ಣ ಗಾಂಧಿ ಕಣದಲ್ಲಿದ್ದಾರೆ

ಪ್ರತಿಕ್ರಿಯಿಸಿ (+)