ಶುಕ್ರವಾರ, ಡಿಸೆಂಬರ್ 6, 2019
17 °C

ನರಹತ್ಯೆ ಮಾಡಬೇಡ

Published:
Updated:
ನರಹತ್ಯೆ ಮಾಡಬೇಡ

ತನ್ನದೇ ಸ್ವರೂಪದಲ್ಲಿ ಸೃಷ್ಟಿಸಲ್ಪಟ್ಟ ಮನುಷ್ಯನು ಸೃಷ್ಟಿಕರ್ತನ ಅತ್ಯಮೂಲ್ಯ ಸೃಷ್ಟಿ. ಸೃಷ್ಟಿಯ ಶಿಖರವಾದ ಅವನ ಜೀವವು ಅಮೂಲ್ಯ. ಇದೇ ಕಾರಣಕ್ಕಾಗಿ ‘ನರಹತ್ಯೆ ಮಾಡಬೇಡ’ ಎಂಬುದು ದೇವರ ದಶಾಜ್ಞೆಗಳಲ್ಲಿ ಒಂದಾಗಿದೆ. ಮನುಷ್ಯ ಪರರನ್ನು ಕೊಲ್ಲುವುದಕ್ಕಾಗಿ ಸೃಷ್ಟಿಯಾಗಿಲ್ಲ.

ಮಾನವನ ದೃಷ್ಟಿಯಲ್ಲಿ ನರಹತ್ಯೆಯು ಇನ್ನೊಬ್ಬ ಮಾನವನ ಪ್ರಾಣಹರಣ ಮಾಡುವ ಕೃತ್ಯ. ಆದರೆ, ಅದು ಕೇವಲ ಒಂದು ಬಾಹ್ಯ ಕೃತ್ಯವಲ್ಲ, ಬದಲಾಗಿ ಪರರ ವಿರುದ್ಧ ಹೃದಯದಲ್ಲಿ ಹುಟ್ಟಿ ಬೆಳೆಸಿದ ದ್ವೇಷವನ್ನು ಬಹಿರಂಗವಾಗಿ ಪ್ರಕಟ­ಪಡಿಸುತ್ತದೆ. ತನ್ನ ಸಹೋದರನನ್ನು ದ್ವೇಷಿಸುವವನು ಕೊಲೆಗಾರನೇ ಹೌದು; ಯಾವ ಕೊಲೆಗಾರನಲ್ಲೂ  ನಿತ್ಯಜೀವ ಇರದು ಎಂದು ಬೈಬಲ್ ಶ್ರೀಗ್ರಂಥ ಸ್ಪಷ್ಟಪಡಿಸುತ್ತದೆ. ಆದಿಕಾಂಡ ಗ್ರಂಥದಲ್ಲಿ ಕಾಯೀನನು ತನ್ನ ಸಹೋದರ ಆಬೇಲ­ನನ್ನು ದ್ವೇಷದಿಂದ ಕೊಲೆಮಾಡಿದಾಗ, ‘ನಿನ್ನ ಸಹೋದರನಾದ ಆಬೇಲನು ಎಲ್ಲಿ? ನೀನು ಮಾಡಿದ್ದೇನು? ನಿನ್ನ ಸಹೋದರನ ರಕ್ತವು ಭೂಮಿಯಿಂದ ನನ್ನನ್ನು ಕೂಗುತ್ತಿದೆ. ಈ ರೀತಿ ಮಾಡಿರುವುದರಿಂದ ನೀನು ಶಾಪಕ್ಕೆ ಒಳಗಾಗಿರುವೆ’ ಎಂದು ದೇವರು ಕಾಯೀನನನ್ನು ಖಂಡಿಸಿದರು.

ಆದರೆ ಈ ದೈವಾಜ್ಞೆಯು ಕೇವಲ ಇತರ ಮಾನವರ ದೈಹಿಕ ಪ್ರಾಣಹರಣ ಮಾಡುವುದರ ವಿರುದ್ಧ ಸೀಮಿತವಲ್ಲ. ಅಷ್ಟಕ್ಕೆ ಸೀಮಿತವಾಗಿದ್ದಿದ್ದರೆ, ಬಹುತೇಕ ಎಲ್ಲ ಮಾನವರಿಗೆ ಈ ಆಜ್ಞೆಯು ಅರ್ಥರಹಿತವಾಗಿರುತ್ತಿತ್ತು. ಯೇಸುಸ್ವಾಮಿ ಈ ಆಜ್ಞೆಯನ್ನು ಪರಿಪೂರ್ಣತೆಯ ಎತ್ತರಕ್ಕೆ ಏರಿಸಿದರು. ‘ನರಹತ್ಯೆ ಮಾಡುವವನು ನ್ಯಾಯತೀರ್ಪಿಗೆ ಗುರಿಯಾಗುವನು ಎಂದು ನೀವು ಅರಿತಿದ್ದೀರಿ. ಆದರೆ ನಾನೀಗ ನಿಮಗೆ ಹೇಳುತ್ತೇನೆ, ತನ್ನ ಸಹೋದರನ ಮೇಲೆ (ವಿನಾ ಕಾರಣ) ಕೋಪಗೊಳ್ಳುವ ಪ್ರತಿಯೊಬ್ಬನೂ ನ್ಯಾಯ ತೀರ್ಪಿಗೆ ಈಡಾಗುವನು. ತನ್ನ ಸೋದರನನ್ನು ತುಚ್ಛೀಕರಿಸುವನು ನ್ಯಾಯಸಭೆಯ ವಿಚಾರಣೆಗೆ ಒಳಗಾಗುವನು, ‘ಮೂರ್ಖ’ ಎಂದು ಮೂದಲಿಸುವವನು ನರಕಾಗ್ನಿಗೆ ಗುರಿಯಾಗುವನು’ ಎಂದರವರು. ನರಹತ್ಯೆಯ ಪಾಪವು ಮನುಷ್ಯನ ಆಲೋಚನೆಯಲ್ಲಿ ಹುಟ್ಟಿ, ಹೃದಯದಲ್ಲಿ ಬೆಳೆದು ಕೊನೆಗೆ ಕೃತ್ಯದಲ್ಲಿ ಪ್ರಕಟಗೊಳ್ಳುತ್ತದೆ. ಹೀಗಾಗಿ ದೇಹ, ಮನಸ್ಸು ಹಾಗೂ ಹೃದಯಶುದ್ಧಿಯ ಉಲ್ಲೇಕವಿದೆ.

ಚೂರಿಯಿಂದ ಇರಿದು ಅಥವಾ ಬಂದೂಕಿನಿಂದ ಸುಟ್ಟು ನರಹತ್ಯೆ ಮಾಡುವುದಕ್ಕಿಂತ, ಮಾತುಗಳಿಂದ ಇತರರನ್ನು ಕೊಲ್ಲುವವರೇ ಹೆಚ್ಚಾಗಿದ್ದಾರೆ. ವಿಪರ್ಯಾಸವೆಂದರೆ, ಬಹಳಷ್ಟು ಜನ ಇದರ ಗಂಭೀರತೆಯನ್ನು ಅರಿಯದೆ, ಇತರರನ್ನು ಮಾತುಗಳಿಂದ ಕೊಲ್ಲುತ್ತಾರೆ. ಸಮಾಜದಲ್ಲಿ ಗಳಿಸಿದ ಪ್ರತಿಷ್ಠೆಯನ್ನು ನಾಶಪಡಿಸಿ, ವ್ಯಕ್ತಿಯ ಚಾರಿತ್ರ್ಯ­ಹರಣವನ್ನು ಮಾಡಿ, ಕೊಲ್ಲುವುದೂ ಇದೆ. ಈ ರೀತಿ ಕೊಲೆ ಮಾಡಿದವರು ಯಾವುದೇ ರೀತಿಯ ಪಾಪ ಪ್ರಜ್ಞೆಯಿಲ್ಲದೆ ಜೀವಿಸುತ್ತಾರೆ.

‘ನರಹತ್ಯೆ ಮಾಡಬೇಡ’ ಎಂಬ ಆಜ್ಞೆಯು ಪರರ ಸಚ್ಚಾರಿತ್ರ್ಯ, ಒಳ್ಳೆಯ ಹೆಸರು, ಪ್ರತಿಷ್ಠೆ, ಇತ್ಯಾದಿಗಳನ್ನು ನಾಶ­ಗೊಳಿಸದೆ ಕಾಪಾಡುವ ಜವಾಬ್ದಾರಿಯನ್ನೂ  ಒಳಗೊಂಡಿದೆ ಎಂದು ಎಲ್ಲರೂ ಅರಿತುಕೊಳ್ಳುವಂತಾಗಬೇಕು.

ಪ್ರತಿಕ್ರಿಯಿಸಿ (+)