ಶುಕ್ರವಾರ, ಡಿಸೆಂಬರ್ 13, 2019
17 °C

ಶಶಿಕಲಾಗೆ ವಿಶೇಷ ಆತಿಥ್ಯ; ಚಿತ್ರಗಳು ಬಹಿರಂಗ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಶಿಕಲಾಗೆ ವಿಶೇಷ ಆತಿಥ್ಯ; ಚಿತ್ರಗಳು ಬಹಿರಂಗ

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಬಂದಿಯಾಗಿರುವ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ.ಕೆ.ಶಶಿಕಲಾಗೆ ವಿಶೇಷ ಆತಿಥ್ಯ ನೀಡಿರುವ ಚಿತ್ರಗಳು ಈಗ ಬಹಿರಂಗವಾಗಿವೆ.

ಜೈಲಿನ ಅಧಿಕಾರಿಗಳೇ ಈ ಚಿತ್ರಗಳನ್ನು ಸೆರೆಹಿಡಿದಿದ್ದಾರೆ. ಅವುಗಳು ‘ಪ್ರಜಾವಾಣಿ’ಗೆ ಲಭಿಸಿವೆ.

ಈ ಚಿತ್ರಗಳನ್ನು ಗಮನಿಸಿದಾಗ, ಶಶಿಕಲಾಗೆ ಜೈಲಿನಲ್ಲೇ ವಿಶೇಷ ಸೌಲಭ್ಯ ಸಿಗುತ್ತಿದೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಮಹಿಳಾ ಕಾರಾಗೃಹದ ಬ್ಯಾರಕ್‌ನ ನಾಲ್ಕು ಕೊಠಡಿಗಳನ್ನು ಶಶಿಕಲಾಗೆ ಮೀಸಲಿಡಲಾಗಿದೆ. ಒಂದು ಕೊಠಡಿಯಲ್ಲಿ ಶಶಿಕಲಾ ಹಾಗೂ ಇನ್ನೊಂದರಲ್ಲಿ ಇಳವರಸಿ ಇರುತ್ತಾರೆ. ಇವರಿಬ್ಬರಿಗೂ ಅಡುಗೆ ಮಾಡಲು ಹಾಗೂ ಸ್ನಾನ, ಶೌಚಕ್ಕೆ ಎರಡು ಪ್ರತ್ಯೇಕ ಕೊಠಡಿ ನೀಡಲಾಗಿದೆ. ಈ 4 ಕೊಠಡಿಗಳಿಗೆ ಬೇರೆಯವರು ಹೋಗದಂತೆ ಬ್ಯಾರಿಕೇಡ್‌ ಸಹ ಹಾಕಲಾಗಿದೆ. ಅಲ್ಲಿ ಶಶಿಕಲಾ ಹಾಗೂ ಇಳವರಸಿ ಮಾತ್ರ ಓಡಾಡಲು ಅನುಕೂಲ ಮಾಡಿಕೊಡಲಾಗಿದೆ.

ಉಳಿದ ಮಹಿಳಾ ಕೈದಿಗಳಿಗೆ ಈ ರೀತಿ ಯಾವುದೇ ಸೌಲಭ್ಯ ನೀಡಿಲ್ಲ. ಎಲ್ಲರೂ ಸಾಮೂಹಿಕವಾಗಿ ಒಂದು ಕೊಠಡಿಯಲ್ಲಿ ಐದಕ್ಕೂ ಹೆಚ್ಚು ಜನ ಉಳಿದುಕೊಂಡಿದ್ದಾರೆ ಎಂದು ಕಾರಾಗೃಹದ ಮೂಲಗಳು ತಿಳಿಸಿವೆ.

ಕುರ್ಚಿ, ಪುಸ್ತಕ, ಪ್ರತ್ಯೇಕ ಹಾಸಿಗೆ ಹಾಗೂ ಸೀರೆ ಸೇರಿದಂತೆ ಹಲವು ಬಟ್ಟೆಗಳು ಕೊಠಡಿಯಲ್ಲಿವೆ. ಕುಕ್ಕರ್‌ ಹಾಗೂ ಐದು ಬಗೆಯ ಪಾತ್ರೆಗಳು ಸಹ ಅಲ್ಲಿವೆ. ಪ್ರತಿಯೊಂದು ಕೊಠಡಿಯ ಬಾಗಿಲುಗಳಿಗೆ ಪರದೆ ಹಾಕಲಾಗಿದೆ.

ಅವರಿಬ್ಬರಿಗೂ ಹೊರಗಿ ನಿಂದಲೂ ಊಟ ಸರಬರಾಜು ಮಾಡಲಾಗುತ್ತಿದ್ದು,  ಅದಕ್ಕೆ ಬಳಸುವ ಡಬ್ಬಿಗಳು ಕೊಠಡಿಯಲ್ಲಿರುವುದು ಚಿತ್ರಗಳಲ್ಲಿ ಗೋಚರಿಸುತ್ತದೆ.

ರೂಪಾ ವರ್ಗಾವಣೆ ಖಂಡಿಸಿ ಕೈದಿಗಳ ಪ್ರತಿಭಟನೆ: ಡಿಐಜಿ ಡಿ.ರೂಪಾ ಅವರನ್ನು ವರ್ಗಾವಣೆ ಮಾಡಿದ ಸರ್ಕಾರದ ಕ್ರಮವನ್ನು ಖಂಡಿಸಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೈದಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

ಊಟದ ಅವಧಿಯಲ್ಲಿ ಬ್ಯಾರಕ್‌ನಿಂದ ಹೊರಗೆ ಬಂದಿದ್ದ ಹಲವು ಕೈದಿಗಳು, ಮೈದಾನದಲ್ಲಿ ಸೇರಿ ಘೋಷಣೆ ಕೂಗಲು ಆರಂಭಿಸಿದ್ದರು. ಸ್ಥಳಕ್ಕೆ ಹೋದ ಜೈಲು ಅಧಿಕಾರಿಗಳು, ಪ್ರತಿಭಟನೆ ನಡೆಸಬಾರದು ಎಂದು ಎಚ್ಚರಿಕೆ ನೀಡಿದರು.

ಆಗ ಕೈದಿಗಳು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ  ನಡೆಯಿತು. ಬಳಿಕ ಅರ್ಧ ಗಂಟೆ ಕೈದಿಗಳು ಮೈದಾನದಲ್ಲೇ ಕುಳಿತು ಪ್ರತಿಭಟನೆ ನಡೆಸಿ ಬ್ಯಾರಕ್‌ಗೆ ವಾಪಸ್‌ ಹೋದರು.

‘ಜೈಲಿನಲ್ಲಿ ಅಕ್ರಮಗಳು ನಡೆಯುತ್ತಿದ್ದು, ಭ್ರಷ್ಟಾಚಾರ ವಿಪರೀತವಾಗಿದೆ. ಈ ಬಗ್ಗೆ ಡಿ.ರೂಪಾ ಅವರಿಗೆ ಮಾಹಿತಿ ನೀಡಿದ್ದೆವು. ಅವರು ಈ ವ್ಯವಸ್ಥೆ ವಿರುದ್ಧ ಹೋರಾಟ ನಡೆಸುತ್ತಿದ್ದರು. ಅವರನ್ನೇ ವರ್ಗಾವಣೆ ಮಾಡಿರುವುದು ಖಂಡನೀಯ’ ಎಂದು ಕೈದಿಗಳು ಆಕ್ರೋಶ ವ್ಯಕ್ತಪಡಿಸಿದರು.

‘4 ವರ್ಷಗಳಿಂದ ಜೈಲು ಅಧೀಕ್ಷಕ ಇದೇ ಕಾರಾಗೃಹದಲ್ಲಿದ್ದಾರೆ. ಜೈಲಿನಲ್ಲೇ ಕೈದಿಗಳ ತಂಡ ಕಟ್ಟಿಕೊಂಡು ದೌರ್ಜನ್ಯ ಎಸಗುತ್ತಿದ್ದಾರೆ. ಅಮಾಯಕ ಕೈದಿಗಳು ವಿನಾಕಾರಣ ಕಿರುಕುಳ ಅನುಭವಿಸುತ್ತಿದ್ದಾರೆ’ ಎಂದು ದೂರಿದ ಕೈದಿಗಳು, ‘ರೂಪಾ ಅವರ ವರ್ಗಾವಣೆಯನ್ನು ರದ್ದುಪಡಿಸಬೇಕು. ಜೈಲು ಅಧೀಕ್ಷಕ ಕೃಷ್ಣಕುಮಾರ್‌ ಅವರನ್ನು ವರ್ಗಾವಣೆ ಮಾಡಬೇಕು’ ಎಂದು ಆಗ್ರಹಿಸಿದರು.   

ಸಿಹಿ ಹಂಚಿದ ಕೈದಿಗಳು: ಕಾರಾಗೃಹದ ಕೈದಿಗಳ ಮತ್ತೊಂದು ತಂಡವು ರೂಪಾ  ಅವರು ವರ್ಗಾವಣೆ ಆಗಿದ್ದಕ್ಕೆ ಜೈಲಿನಲ್ಲೇ ಸಕ್ಕರೆ  ಹಂಚಿದರು. ಬಳಿಕ ಅವರು, ಕಾರಾಗೃಹದಲ್ಲಿ  ಅಕ್ರಮ ನಡೆದಿಲ್ಲ ಎಂದು ಸಹಿ ಸಂಗ್ರಹ ಮಾಡಿದರು.  ಅದನ್ನೇ ಕೈದಿಗಳು,  ಜೈಲು ಅಧೀಕ್ಷಕರಿಗೆ ಕೊಟ್ಟಿದ್ದಾರೆ. ಅದು ಪ್ರಕರಣದ ತನಿಖೆ ನಡೆಸುತ್ತಿರುವ ನಿವೃತ್ತ ಐಎಎಸ್‌ ಅಧಿಕಾರಿ ವಿನಯ್‌ಕುಮಾರ್‌ ಅವರ ಕೈ ಸೇರಲಿದೆ.

ಕೈದಿಗಳ ಸ್ಥಳಾಂತರಕ್ಕೆ ಡಿಜಿಪಿಯಿಂದಲೇ ಆದೇಶ

ಕಾರಾಗೃಹದ ಅಕ್ರಮ ಹಾಗೂ ಭ್ರಷ್ಟಾಚಾರದ ಬಗ್ಗೆ ಡಿಐಜಿ ಡಿ.ರೂಪಾ ಅವರಿಗೆ ಮಾಹಿತಿ ನೀಡಿದ್ದ 20 ಕೈದಿಗಳನ್ನು ಸ್ಥಳಾಂತರ ಮಾಡಲು ಡಿಜಿಪಿ ಎಚ್‌.ಎನ್‌.ಸತ್ಯನಾರಾಯಣರಾವ್‌ ಅವರೇ ಆದೇಶಿಸಿದ್ದರು ಎಂಬುದು ಗೊತ್ತಾಗಿದೆ.

ಈ ಅಂಶವನ್ನು ಉಲ್ಲೇಖಿಸಿ  ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧೀಕ್ಷಕ ಕೃಷ್ಣಕುಮಾರ್‌, ಬೆಳಗಾವಿ, ಕಲಬುರ್ಗಿ ಹಾಗೂ ವಿಜಯಪುರ ಜೈಲಿನ ಅಧೀಕ್ಷಕರಿಗೆ ಪತ್ರ ಬರೆದಿದ್ದಾರೆ. ಆ ಪತ್ರ ‘ಪ್ರಜಾವಾಣಿ’ಗೆ ಸಿಕ್ಕಿದೆ.

‘20 ಶಿಕ್ಷಾ ಬಂದಿಗಳನ್ನು ಶಿಸ್ತುಕ್ರಮದ ಮೇಲೆ ವಿವಿಧ ಕೇಂದ್ರ ಕಾರಾಗೃಹಗಳಿಗೆ ವರ್ಗಾವಣೆ ಮಾಡುವಂತೆ ಡಿಜಿಪಿ ದೂರವಾಣಿ ಆದೇಶ ನೀಡಿದ್ದಾರೆ’ ಎಂದು ಕೃಷ್ಣಕುಮಾರ್ ಪತ್ರದಲ್ಲಿ ಬರೆದಿದ್ದಾರೆ.

‘ಈ ಹಿಂದೆಯೂ ಪ್ರತಿಭಟನೆ ಮಾಡಿದ್ದ 20 ಕೈದಿಗಳು, ಈಗ ಪುನಃ ಪೆರೋಲ್‌ ಮೇಲೆ ಬಿಡದ ಕಾರಣಕ್ಕೆ ಹಾಗೂ ಅಕಾಲಿಕ ಬಿಡುಗಡೆಗೆ ಪರಿಗಣಿಸಿರುವುದಿಲ್ಲ ಎಂದು ಆರೋಪಿಸಿ  ಪ್ರತಿಭಟನೆ ನಡೆಸುತ್ತಿದ್ದಾರೆ.  ಜೈಲು ಸಿಬ್ಬಂದಿ ಮೇಲೂ ಹಲ್ಲೆಗೆ ಯತ್ನಿಸಿದ್ದಾರೆ.  ಅವರನ್ನೆಲ್ಲ ಸ್ಥಳಾಂತರ ಮಾಡುವಂತೆ ಡಿಜಿಪಿ ಆದೇಶಿಸಿದ್ದಾರೆ’.

‘ಅದೇ ಆದೇಶದನ್ವಯ ಬಳ್ಳಾರಿ, ಬೆಳಗಾವಿ, ಕಲಬುರ್ಗಿ, ಧಾರವಾಡ, ಮೈಸೂರು ಹಾಗೂ ವಿಜಯಪುರ ಕೇಂದ್ರ ಕಾರಾಗೃಹಗಳಿಗೆ ಬೆಂಗಳೂರಿನ ಸಿ.ಎ.ಆರ್‌ ದಕ್ಷಿಣ ಘಟಕದ ಬೆಂಗಾವಲಿನಲ್ಲಿ ಸ್ಥಳಾಂತರಿಸುತ್ತಿದ್ದೇವೆ’ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕೈದಿಗಳ ಮೇಲೆ ಸಿಬ್ಬಂದಿ ಹಲ್ಲೆ: ಡಿ.ರೂಪಾ ಪರ ಶನಿವಾರ ರಾತ್ರಿ (ಜುಲೈ 15) ಪ್ರತಿಭಟನೆ ನಡೆಸುತ್ತಿದ್ದ 20 ಕೈದಿಗಳ ಮೇಲೆ ಜೈಲು ಸಿಬ್ಬಂದಿ ಹಲ್ಲೆ ಮಾಡಿದ್ದಾರೆ.

ಸ್ಥಳಾಂತರ ವೇಳೆಯಲ್ಲೂ ಹಲವರು ಕುಂಟುತ್ತ, ನರಳುತ್ತ ವಾಹನ ಹತ್ತಿದ್ದಾರೆ. ಕಲಬುರ್ಗಿ, ಬೆಳಗಾವಿ, ಬಳ್ಳಾರಿ ಕಾರಾಗೃಹಕ್ಕೆ ಹೋದ ಕೈದಿಗಳಿಗೆ ಅಲ್ಲಿಯೇ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

‘ಜೈಲಿನ ಅಕ್ರಮದ ಬಗ್ಗೆ ಹೊರಗಿನ ವ್ಯಕ್ತಿಗಳಿಗೆ ಮಾಹಿತಿ ನೀಡಿದ್ದಾರೆ ಹಾಗೂ ಪ್ರತಿಭಟನೆ ನಡೆಸುತ್ತಿದ್ದಾರೆ ಎಂಬ ಕಾರಣಕ್ಕೆ ಕೈದಿಗಳ ಮೇಲೆ ಮನಬಂದಂತೆ ಹಲ್ಲೆ ನಡೆಸಲಾಗಿದೆ. ಜೈಲು ಸಿಬ್ಬಂದಿ  ವಿರುದ್ಧ ಮಾನವ ಹಕ್ಕು ಆಯೋಗಕ್ಕೆ ದೂರು ನೀಡುತ್ತೇವೆ’ ಎಂದು ಕೈದಿಗಳ ಸಂಬಂಧಿಕರು ತಿಳಿಸಿದರು.

ಪ್ರತಿಕ್ರಿಯಿಸಿ (+)