ಶುಕ್ರವಾರ, ಡಿಸೆಂಬರ್ 13, 2019
21 °C
ರಾವ್‌ಗೆ ಕಡ್ಡಾಯ ರಜೆ, ಕೃಷ್ಣಕುಮಾರ್‌ಗೂ ಗೇಟ್‌ ಪಾಸ್‌

ಎಚ್.ಎನ್‌. ಸತ್ಯನಾರಾಯಣ ರಾವ್‌, ಡಿ. ರೂಪಾ ಎತ್ತಂಗಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಚ್.ಎನ್‌. ಸತ್ಯನಾರಾಯಣ ರಾವ್‌, ಡಿ. ರೂಪಾ ಎತ್ತಂಗಡಿ

ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ನಡೆಯುತ್ತಿದೆ ಎನ್ನಲಾದ ಲಂಚ ಪ್ರಕರಣ ಕುರಿತು ನಿವೃತ್ತ ಐಎಎಸ್‌ ಅಧಿಕಾರಿ ವಿನಯ ಕುಮಾರ್‌ ವಿಚಾರಣೆ ಆರಂಭಿಸಿದ ದಿನವೇ ಬಂದಿಖಾನೆ ಮಹಾನಿರ್ದೇಶಕ ಎಚ್.ಎನ್‌ ಸತ್ಯನಾರಾಯಣರಾವ್‌, ಡಿಐಜಿ ಡಿ. ರೂಪಾ ಹಾಗೂ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್‌ ಅವರನ್ನು ಎತ್ತಂಗಡಿ ಮಾಡಿ ರಾಜ್ಯ ಸರ್ಕಾರ ಖಡಕ್‌ ಸಂದೇಶ ರವಾನಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಕೋಮುಗಲಭೆಯ ಬಗ್ಗೆ ಗೃಹ ಇಲಾಖೆಗೆ ಸೂಕ್ತ ಮುನ್ನೆಚ್ಚರಿಕೆ ನೀಡಲಿಲ್ಲ ಎಂಬ ಕಾರಣಕ್ಕೆ ಗುಪ್ತಚರ ವಿಭಾಗದ ಡಿಜಿಪಿ ಎಂ.ಎನ್‌.ರೆಡ್ಡಿ ಅವರನ್ನು ವರ್ಗಾವಣೆ ಮಾಡಲಾಗಿದೆ. ಅವರ ಉತ್ತರಾಧಿಕಾರಿಯಾಗಿ ಅಮೃತ್‌ ಪಾಲ್‌ ಅವರನ್ನು ನೇಮಕ ಮಾಡಲಾಗಿದೆ.

ಮೇಘರಿಕ್‌ ಬಂದಿಖಾನೆ ಎಡಿಜಿಪಿ: ಈ ತಿಂಗಳ ಕೊನೆಗೆ ನಿವೃತ್ತಿಯಾಗಲಿರುವ ರಾವ್ ಅವರನ್ನು ವರ್ಗಾವಣೆ ಮಾಡಲಾಗಿದ್ದು, ಹುದ್ದೆ ತೋರಿಸಿಲ್ಲ. ಬಂದಿಖಾನೆ ಹೆಚ್ಚುವರಿ ಡಿಜಿಪಿ ಆಗಿ ಎನ್‌.ಎಸ್‌. ಮೇಘರಿಕ್‌ ಅವರನ್ನು ನೇಮಕ ಮಾಡಲಾಗಿದೆ. ಮೇಘರಿಕ್‌ ಇದುವರೆಗೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಎಡಿಜಿಪಿ ಆಗಿದ್ದರು. ರೂಪಾ ಅವರನ್ನು ಕಾರ್ಯನಿರ್ವಾಹಕ ಹುದ್ದೆಯಲ್ಲದ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗದ ಕಮಿಷನರ್‌ ಆಗಿ ನೇಮಕ ಮಾಡಲಾಗಿದೆ. ಕೃಷ್ಣಕುಮಾರ್‌ಗೂ ಹುದ್ದೆ ತೋರಿಸಿಲ್ಲ. ಅಧೀಕ್ಷಕರಾಗಿರುವ ಆರ್. ಅನಿತಾಗೆ ಮುಖ್ಯ ಅಧೀಕ್ಷಕರ ಹುದ್ದೆ ಹೆಚ್ಚುವರಿ ಹೊಣೆ ನೀಡಲಾಗಿದೆ.

‘ಕಾರಾಗೃಹದಲ್ಲಿ ಬಂದಿಯಾಗಿರುವ ಎಎಐಡಿಎಂಕೆ ಪ್ರಧಾನ ಕಾರ್ಯದರ್ಶಿ ವಿ. ಶಶಿಕಲಾಗೆ ವಿಶೇಷ ಸೌಲಭ್ಯ ನೀಡಲು ಸತ್ಯನಾರಾಯಣರಾವ್‌ ಅವರು ₹ 2 ಕೋಟಿ  ಲಂಚ ಪಡೆದಿದ್ದಾರೆ’ ಎಂದು ಡಿ. ರೂಪಾ ಸರ್ಕಾರಕ್ಕೆ ವರದಿ ಸಲ್ಲಿಸಿದ್ದರು. ಅಲ್ಲದೆ, ತಮ್ಮ ಬಳಿ ದಾಖಲೆ ಇದೆ ಎಂದೂ ಪ್ರತಿಪಾದಿಸಿದ್ದರು.

‘ಕಾರಾಗೃಹದ ಮುಖ್ಯ ಅಧೀಕ್ಷಕ ಕೃಷ್ಣಕುಮಾರ್ ಕೈದಿಗಳನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ. ಅವರಿಂದಲೇ ಕಾರಾಗೃಹದ ಪರಿಸ್ಥಿತಿ ಹದಗೆಟ್ಟಿದೆ’ ಎಂದೂ ಅವರು ವರದಿಯಲ್ಲಿ ಉಲ್ಲೇಖಿಸಿದ್ದರು.

ಈ ವರದಿ ಮಾಧ್ಯಮಗಳಿಗೆ ಸೋರಿಕೆಯಾಗಿದ್ದರಿಂದ ಸರ್ಕಾರ ಮುಜುಗರಕ್ಕೆ ಸಿಲುಕಿತ್ತು. ಈ  ಬಗ್ಗೆ ವಿಚಾರಣೆ ನಡೆಸಲು ವಿನಯಕುಮಾರ್‌ ಅವರನ್ನು  ನೇಮಿಸಲಾಗಿದೆ.

ಇಲಾಖೆಯ ನಿಯಮಗಳಿಗೆ ಹಾಗೂ ಶಿಸ್ತಿಗೆ ಬದ್ಧವಾಗಿ ನಡೆದುಕೊಳ್ಳಬೇಕಾದ ಹೊಣೆ ಹಿರಿಯ ಅಧಿಕಾರಿಗಳಾದ ರಾವ್‌ ಹಾಗೂ ರೂಪಾ ಅವರದ್ದಾಗಿತ್ತು.  ಇಬ್ಬರೂ  ಇದಕ್ಕೆ ವ್ಯತಿರಿಕ್ತವಾಗಿ ನಡೆದುಕೊಂಡಿದ್ದಾರೆ ಎಂಬ ಆಪಾದನೆ ಇಬ್ಬರ ಮೇಲೂ ಇತ್ತು. ಸೇವಾ ನಿಯಮಗಳನ್ನು ಉಲ್ಲಂಘಿಸಿದ ಇಬ್ಬರಿಗೂ ವಿವರಣೆ ಕೇಳಿ ಇದೇ 14ರಂದು ನೋಟಿಸ್‌ ಜಾರಿ ಮಾಡಲಾಗಿತ್ತು.

ಏತನ್ಮಧ್ಯೆ, ‘ಯಾವುದೇ ಅಧಿಕಾರಿ ಮಾಧ್ಯಮಗಳ ಮುಂದೆ ಹೋಗಬಾರದು. ಅಶಿಸ್ತು ಮುಂದುವರಿಸಿದರೆ ಸಹಿಸುವುದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದ್ದರು. ಈ ಸೂಚನೆಗೆ ಇಬ್ಬರೂ ಕಿವಿಗೊಡಲಿಲ್ಲ. ಅದಾದ ಬಳಿಕವೂ ಅವರು ಪ್ರತ್ಯೇಕವಾಗಿ ಕಾರಾಗೃಹಕ್ಕೆ ಭೇಟಿ ನೀಡಿದ್ದರು. ಕೈದಿಗಳು ಪರ– ವಿರುದ್ಧವಾಗಿ ಪ್ರತಿಭಟನೆ ನಡೆಸಿದ್ದರಿಂದ  ಕಾರಾಗೃಹದಲ್ಲಿ ಪ್ರಕ್ಷುಬ್ಧ ವಾತಾವರಣ ಸೃಷ್ಟಿಯಾಗಿತ್ತು.  ಈ ಎಲ್ಲ ಬೆಳವಣಿಗೆಗಳಿಂದ ಸರ್ಕಾರದ ವರ್ಚಸ್ಸಿಗೆ ಧಕ್ಕೆಯಾಯಿತು.  ಸರ್ಕಾರವನ್ನು ಟೀಕಿಸಲು  ವಿರೋಧ ಪಕ್ಷಗಳ ಕೈಗೆ ಇದು ಅಸ್ತ್ರವಾಗಿತ್ತು.

‘ಗೃಹ ಖಾತೆ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲಾಖೆಯ ಮೇಲೆ ಹಿಡಿತ ಹೊಂದಿಲ್ಲ. ಅಧಿಕಾರಿಗಳು ಸ್ವತಃ ಮುಖ್ಯಮಂತ್ರಿಯ ಮಾತೂ ಕೇಳುತ್ತಿಲ್ಲ. ಕಾನೂನು ಮತ್ತು ಸುವ್ಯವಸ್ಥೆ ಹದಗೆಡಲು ಇದೇ ಕಾರಣ’ ಎಂದು ವಿರೋಧ ಪಕ್ಷಗಳಾದ  ಬಿಜೆಪಿ, ಜೆಡಿಎಸ್ ಕಟು ಟೀಕೆ ಮಾಡಿದ್ದವು.

ಕಡ್ಡಾಯ ರಜೆ: ಸೇವೆಯಿಂದ ನಿವೃತ್ತಿಯಾಗಲು ಇನ್ನು 13 ದಿನ ಬಾಕಿ ಉಳಿದಿರುವ ಸತ್ಯನಾರಾಯಣರಾವ್‌ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ ಎಂದು  ಮುಖ್ಯಮಂತ್ರಿ ಸಚಿವಾಲಯ ತಿಳಿಸಿದೆ.ರೂಪಾ ಅವರಿಂದ ತೆರವಾದ ಡಿಜಿಪಿ ಹುದ್ದೆಗೆ ಸದ್ಯಕ್ಕೆ ಯಾರನ್ನೂ ವರ್ಗಾವಣೆ ಮಾಡಿಲ್ಲ.

ರೆಡ್ಡಿಗೆ ತರಾಟೆ

ಗುಪ್ತಚರ ವಿಭಾಗದ ಡಿಜಿಪಿ ರೆಡ್ಡಿ ಅವರನ್ನು ಭಾನುವಾರ ಕರೆಸಿಕೊಂಡಿದ್ದ ಮುಖ್ಯಮಂತ್ರಿ, ದಕ್ಷಿಣ ಕನ್ನಡ ಜಿಲ್ಲೆಯ ಸೂಕ್ಷ್ಮ ಪರಿಸ್ಥಿತಿ ಕುರಿತು  ಸೂಕ್ತ ಮಾಹಿತಿ ನೀಡದ ಬಗ್ಗೆ ತರಾಟೆಗೆ ತೆಗೆದುಕೊಂಡಿದ್ದರು.  ಈ ಘಟನೆ ನಡೆದು 24 ಗಂಟೆಯೊಳಗೆ ರೆಡ್ಡಿ ಅವರನ್ನು ಬದಲಾವಣೆ ಮಾಡಲಾಗಿದೆ.

ವಿಚಾರಣೆ ಆರಂಭ

ಜೈಲು ಕಿತ್ತಾಟ, ಲಂಚ ಪ್ರಕರಣದ  ಬಗ್ಗೆ ನಿವೃತ್ತ ಐಎಎಸ್ ಅಧಿಕಾರಿ ವಿನಯಕುಮಾರ್ ವಿಚಾರಣೆ  ಆರಂಭಿಸಿದರು. ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸುಭಾಷ್‌ ಚಂದ್ರರನ್ನು ಸೋಮವಾರ ಬೆಳಿಗ್ಗೆ ಭೇಟಿಯಾಗಿ ಮುಕ್ಕಾಲು ಗಂಟೆ ಚರ್ಚೆ ನಡೆಸಿದರು.

ಸರ್ಕಾರ ದಿವಾಳಿ: ಕುಮಾರಸ್ವಾಮಿ

ಕಾರಾಗೃಹ ಇಲಾಖೆಯ ಅಧಿಕಾರಿಗಳ ಜಟಾಪಟಿ ಪ್ರಕರಣ ಮುಖ್ಯಮಂತ್ರಿ ಸಿದ್ದರಾಮಯ್ಯ  ಆಡಳಿತ ವೈಫಲ್ಯಕ್ಕೆ ಸಾಕ್ಷಿ ಎಂದು ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)