ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಜೆಂಟೀನಾಕ್ಕೆ ಶರಣಾದ ಭಾರತ

ಮಹಿಳೆಯರ ವಿಶ್ವ ಹಾಕಿ ಲೀಗ್‌ ಸೆಮಿಫೈನಲ್‌ ಟೂರ್ನಿ
Last Updated 17 ಜುಲೈ 2017, 19:30 IST
ಅಕ್ಷರ ಗಾತ್ರ

ಜೊಹಾನ್ಸ್‌ಬರ್ಗ್‌: ಗುಣಮಟ್ಟದ ಆಟ ಆಡಲು ವಿಫಲವಾದ ಭಾರತ ತಂಡದವರು ವಿಶ್ವ ಹಾಕಿ ಲೀಗ್‌ ಸೆಮಿಫೈನಲ್‌ ಟೂರ್ನಿಯ ಅಂತಿಮ ಲೀಗ್‌ ಪಂದ್ಯದಲ್ಲಿ ಸೋತಿದ್ದಾರೆ.

ಸೋಮವಾರ ನಡೆದ ಹಣಾಹಣಿಯಲ್ಲಿ ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಮೂರನೇ ಸ್ಥಾನ ಹೊಂದಿರುವ ಅರ್ಜೆಂಟೀನಾ 3–0 ಗೋಲುಗಳಿಂದ ರಾಣಿ ರಾಂಪಾಲ್‌ ಬಳಗದ ಸವಾಲು ಮೀರಿ ನಿಂತಿತು.

ಪ್ರತಿಭಾನ್ವಿತ ಆಟಗಾರ್ತಿಯರ ಕಣಜ ಎನಿಸಿದ್ದ ಅರ್ಜೆಂಟೀನಾ ತಂಡ ಶುರುವಿನಿಂದಲೇ ಭಾರತದ ರಕ್ಷಣಾ ಕೋಟೆ ಭೇದಿಸುವ ತಂತ್ರ ಅನುಸರಿಸಿತು. ಈ ತಂಡದ ಪ್ರಯತ್ನಕ್ಕೆ ಎರಡನೇ ನಿಮಿಷದಲ್ಲಿ ಯಶಸ್ಸು ಸಿಕ್ಕಿತು. ರೊಷಿಯೊ ಸ್ಯಾಂಚೆಸ್‌ ಚೆಂಡನ್ನು ಗುರಿ ತಲುಪಿಸಿ ತಂಡದ ಸಂಭ್ರಮಕ್ಕೆ ಕಾರಣರಾದರು.

ಇದರ ಬೆನ್ನಲ್ಲೇ ತಂಡಕ್ಕೆ ಮುನ್ನಡೆ ಹೆಚ್ಚಿಸಿಕೊಳ್ಳುವ ಉತ್ತಮ ಅವಕಾಶ ಲಭ್ಯವಾಗಿತ್ತು. ಆದರೆ ಎದುರಾಳಿ ಆಟಗಾರ್ತಿ ಬಾರಿಸಿದ ಚೆಂಡನ್ನು ಭಾರತದ ಗೋಲ್‌ ಕೀಪರ್‌ ಸವಿತಾ ಅವರು ಅಮೋಘ ರೀತಿಯಲ್ಲಿ ತಡೆದರು.

ಈ ಹಂತದಲ್ಲಿ ರಾಣಿ ಪಡೆ ಸಮಬಲದ ಗೋಲು ದಾಖಲಿಸುವ ಅವಕಾಶವೊಂದನ್ನು ಹಾಳು  ಮಾಡಿ ಕೊಂಡಿತು. ನಮಿತಾ ಟೊಪ್ಪೊ ಅವರ ಪ್ರಯತ್ನಕ್ಕೆ ಅರ್ಜೆಂಟೀನಾ ಗೋಲ್‌ ಕೀಪರ್‌ ಅಡ್ಡಿಯಾದರು.

ಆರನೇ ನಿಮಿಷಲ್ಲಿ ಅರ್ಜೆಂಟೀನಾ ಪೆನಾಲ್ಟಿ ಕಾರ್ನರ್‌ ಸೃಷ್ಟಿಸಿಕೊಂಡಿತ್ತು. ಆದರೆ ಅದನ್ನು ಗೋಲಾಗಿ ಪರಿವರ್ತಿಸಲು ವಿಫಲವಾಯಿತು.  ಮುಂಚೂಣಿ ವಿಭಾಗದ ಆಟಗಾರ್ತಿ ನಮಿತಾ ಟೊಪ್ಪೊ ಎದುರಾಳಿ ಆಟಗಾರ್ತಿಯ ಪ್ರಯತ್ನವನ್ನು ವಿಫಲಗೊಳಿಸಿದರು.

ಇದರಿಂದ ಕಿಂಚಿತ್ತೂ ವಿಶ್ವಾಸ ಕಳೆದುಕೊಳ್ಳದ ಅರ್ಜೆಂಟೀನಾ ತಂಡ ನಂತರ ವೇಗದ ಆಟಕ್ಕೆ ಅಣಿಯಾಯಿತು. 14ನೇ ನಿಮಿಷದಲ್ಲಿ ಮರಿಯಾ ಗ್ರನಾಟ್ಟೊ ಚೆಂಡನ್ನು ಗುರಿ ಮುಟ್ಟಿಸಿ ಗೆಲುವಿನ ಆಸೆ ಚಿಗುರೊಡೆಯುವಂತೆ ಮಾಡಿದರು. ಎರಡನೇ ಕ್ವಾರ್ಟರ್‌ನಲ್ಲಿ ಭಾರತದ ಆಟಗಾರ್ತಿಯರು ಎದುರಾಳಿಗಳಿಗೆ ಪ್ರಬಲ ಪೈಪೋಟಿ ಒಡ್ಡಿದರು.

23ನೇ ನಿಮಿಷದಲ್ಲಿ ಭಾರತ ಪೆನಾಲ್ಟಿ ಕಾರ್ನರ್‌ ಸೃಷ್ಟಿಸಿಕೊಂಡಿತ್ತು. ಆದರೆ ನಾಯಕಿ ರಾಣಿ ಚೆಂಡನ್ನು ಗುರಿ ಸೇರಿಸುವಲ್ಲಿ ಹಿಂದೆ ಬಿದ್ದರು. 25ನೇ ನಿಮಿಷದಲ್ಲಿ ಭಾರತದ ಸುಶೀಲಾ ಚಾನು ಮಾಡಿದ ತಪ್ಪಿನಿಂದಾಗಿ ಅರ್ಜೆಂಟೀನಾ ತಂಡಕ್ಕೆ ಪೆನಾಲ್ಟಿ  ಲಭ್ಯವಾಯಿತು. ಈ ಅವಕಾಶದಲ್ಲಿ  ನೊಯೆಲ್‌ ಬ್ಯಾರಿವೊನು ಯೆವೊ ಗೋಲು ದಾಖಲಿಸಿದರು. ಹೀಗಾಗಿ ಅರ್ಜೆಂಟೀನಾ ತಂಡ 3–0ರ ಮುನ್ನಡೆಯೊಂದಿಗೆ ವಿರಾಮಕ್ಕೆ ಹೋಯಿತು.

ದ್ವಿತೀಯಾರ್ಧದಲ್ಲಿ ಭಾರತ ಕೆಲ ಬದಲಾವಣೆಗಳೊಂದಿಗೆ ಕಣಕ್ಕಿಳಿಯಿತು. ಗೋಲ್‌ಕೀಪರ್‌ ಸವಿತಾ ಬದಲಿಗೆ ಅಂಗಳಕ್ಕಿಳಿದಿದ್ದ ರಜನಿ ಎತಿಮರ್ಫು ಗೋಡೆಯಂತೆ ನಿಂತು ಎದುರಾಳಿಗಳ ಪ್ರಯತ್ನಗಳನ್ನು ತಡೆದರು.

ಮೂರು ಮತ್ತು ನಾಲ್ಕನೇ ಕ್ವಾರ್ಟರ್‌ಗಳಲ್ಲಿ ರಕ್ಷಣಾ ವಿಭಾಗದಲ್ಲಿ ಶ್ರೇಷ್ಠ ಆಟ ಆಡಿದ ಅರ್ಜೆಂಟೀನಾ ತಂಡ ಭಾರತದ ಆಟಗಾರ್ತಿಯರನ್ನು ಆವರಣ ಪ್ರವೇಶಿಸಿದ ಹಾಗೆ ನೋಡಿಕೊಂಡಿತು.  ಈ ಮೂಲಕ ರಾಣಿ ಬಳಗದ ಮೇಲೆ ಒತ್ತಡ ಹೇರಿ ಏಕಪಕ್ಷೀಯವಾಗಿ ಗೆಲುವು ಒಲಿಸಿಕೊಂಡಿತು.

ಇಂದು ಕ್ವಾರ್ಟರ್ ಫೈನಲ್‌
ಮಂಗಳವಾರದಿಂದ ಕ್ವಾರ್ಟರ್‌ ಫೈನಲ್‌ ಪಂದ್ಯಗಳು ಆರಂಭವಾಗಲಿವೆ. ರಾಣಿ ರಾಂಪಾಲ್‌ ಪಡೆ ಕೂಡ ಎಂಟರ ಘಟ್ಟಕ್ಕೆ ಲಗ್ಗೆ ಇಟ್ಟಿದ್ದು, ಮಹತ್ವದ ಹಣಾಹಣಿಯಲ್ಲಿ ಇಂಗ್ಲೆಂಡ್‌ ತಂಡದ ಸವಾಲಿಗೆ ಎದೆಯೊಡ್ಡಲಿದೆ.

ಇಂಗ್ಲೆಂಡ್‌ ತಂಡ ಎಲ್ಲಾ ವಿಭಾಗಗಳಲ್ಲೂ ಶಕ್ತಿಯುತವಾಗಿದೆ. ಹೀಗಾಗಿ  ಈ ಬಾರಿಯ ಟೂರ್ನಿಯಲ್ಲಿ ಪ್ರಶಸ್ತಿಯ ಮೇಲೆ ಕಣ್ಣು ನೆಟ್ಟಿರುವ ಭಾರತ  ಹಿಂದಿನ ತಪ್ಪುಗಳನ್ನು ತಿದ್ದಿಕೊಂಡು ಆಡಬೇಕಿದೆ. ಹಾಗಾದಲ್ಲಿ ಮಾತ್ರ ಆಂಗ್ಲರ ನಾಡಿನ ತಂಡದ ಸವಾಲು ಮೀರಿ ನಿಲ್ಲಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT