ಭಾನುವಾರ, ಡಿಸೆಂಬರ್ 8, 2019
21 °C

ಹೊಸೂರು– ಯಶವಂತಪುರ ರೈಲು ತಡೆದು ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೊಸೂರು– ಯಶವಂತಪುರ ರೈಲು ತಡೆದು ಪ್ರತಿಭಟನೆ

ಬೆಂಗಳೂರು: ರೈಲು ನಿಗದಿತ ಸಮಯದಲ್ಲಿ ಸಂಚರಿಸದ ಕಾರಣ ಆಕ್ರೋಶಗೊಂಡ ಪ್ರಯಾಣಿಕರು, ರಾಮಮೂರ್ತಿನಗರ ಸಮೀಪದ ಕಸ್ತೂರಿನಗರ ರೈಲ್ವೆ ಹಳಿಯ ಬಳಿ ಸೋಮವಾರ ಹೊಸೂರು– ಯಶವಂತಪುರ ರೈಲನ್ನು ತಡೆದು ಪ್ರತಿಭಟನೆ ನಡೆಸಿದರು.

ಯಶವಂತಪುರ ನಿಲ್ದಾಣದಿಂದ ಬೆಳಿಗ್ಗೆ 6.30ಕ್ಕೆ ಹೊರಟ ರೈಲು (ಸಂಖ್ಯೆ 06592) ಬೈಯಪ್ಪನಹಳ್ಳಿ ತಲುಪುವಾಗಲೇ ಬೆಳಿಗ್ಗೆ 7.30 ಆಗಿತ್ತು. ಇದರಿಂದ ಸಿಟ್ಟಿಗೆದ್ದ ಪ್ರಯಾಣಿಕರು ಸುಮಾರು 2 ಗಂಟೆ ರೈಲನ್ನು ತಡೆಹಿಡಿದರು. 

ಟೆಕಿಗಳೇ ಹೆಚ್ಚು: ‘ಸಾವಿರಾರು ಉದ್ಯೋಗಿಗಳು ಕಚೇರಿಗೆ ತೆರಳಲು ಈ ರೈಲನ್ನು ಅವಲಂಬಿಸಿದ್ದಾರೆ. ಸಾಕಷ್ಟು ಮಂದಿ ಸಾಫ್ಟ್‌ವೇರ್‌ ಎಂಜಿನಿಯರ್‌ಗಳು  ಈ ರೈಲನ್ನು ಬಳಸುತ್ತಾರೆ. ರೈಲು ನಿಗದಿತ ಸಮಯಕ್ಕಿಂತ 1 ಗಂಟೆ ತಡವಾಗಿ ಸಂಚರಿಸುತ್ತಿದೆ. ಕೆಲಸಕ್ಕೆ ತೆರಳುವವರಿಗೆ ಇದರಿಂದ ತೀವ್ರ ತೊಂದರೆ ಉಂಟಾಗುತ್ತಿದೆ’ ಎಂದು ಪ್ರತಿಭಟನಾಕಾರರು ದೂರಿದರು.

‘ಬಾಣಸವಾಡಿ ರೈಲು ನಿಲ್ದಾಣದಲ್ಲಿ  ರೈಲನ್ನು  ನಿಮಿಷಗಟ್ಟಲೆ ತಡೆಯುತ್ತಾರೆ. ಪ್ರಶ್ನಿಸಿದರೆ ಬೇಜವಾಬ್ದಾರಿ ಉತ್ತರ ನೀಡುತ್ತಾರೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಉದ್ಯೋಗಿಗಳು ಕಚೇರಿಗೆ ತೆರಳಲು  ರೈಲು ಬಳಸಿದರೆ ವಾಯುಮಾಲಿನ್ಯ ಹಾಗೂ ರಸ್ತೆ ಸಂಚಾರ ದಟ್ಟಣೆ ಸಮಸ್ಯೆ  ತಕ್ಕಮಟ್ಟಿಗೆ ಕಡಿಮೆ ಆಗುತ್ತದೆ. ಆದರೆ, ರೈಲುಗಳು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ಇದರಿಂದಾಗಿ ಸಕಾಲದಲ್ಲಿ ಕಚೇರಿಯನ್ನು ತಲುಪಲು   ಕಷ್ಟವಾಗುತ್ತಿದೆ’ ಎಂದು ನಂದನ್ ಅಳಲು ತೋಡಿಕೊಂಡರು.

ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿ ರಾಮಕೃಷ್ಣ ಸ್ಥಳಕ್ಕೆ ಬಂದು ಪ್ರತಿಭಟನಾಕಾರರ ಮನವೊಲಿಸಲು ಪ್ರಯತ್ನಿಸಿದರು.

‘ಹೊಸೂರು– ಯಶವಂತಪುರ ಮಾರ್ಗದಲ್ಲಿ ಈ ಸಮಯದಲ್ಲಿ ಇದೊಂದೇ ರೈಲು ಸಂಚರಿಸುತ್ತದೆ. ಆದರೂ ರೈಲಿನ ಸಂಚಾರದ ಸಮಯದಲ್ಲಿ ವ್ಯತ್ಯಯವಾಗುತ್ತಿದೆ. ಈ ಸಮಸ್ಯೆಗಳ ಬಗ್ಗೆ ಮೇಲಧಿಕಾರಿಗಳ ಜತೆ ಚರ್ಚಿಸಿ ಪರಿಹರಿಸುತ್ತೇನೆ’ ಎಂದು ಭರವಸೆ ನೀಡಿದರು.

ಬಳಿಕವಷ್ಟೇ ಪ್ರತಿಭಟನಾಕಾರರು ರೈಲು ಮುಂದಕ್ಕೆ ಹೋಗಲು ಅನುವು ಮಾಡಿಕೊಟ್ಟರು.

‘ರೈಲನ್ನು ತಡೆಯುವುದು ಸಮಸ್ಯೆಗೆ ಪರಿಹಾರವಲ್ಲ. ಇದರಿಂದ ಇನ್ನಷ್ಟು ಪ್ರಯಾಣಿಕರಿಗೆ ತೊಂದರೆ ಉಂಟಾಗುತ್ತದೆ. 9,000ಕ್ಕೂ ಹೆಚ್ಚು ಮಂದಿ  ಈ ರೈಲಿನಲ್ಲಿ ನಿತ್ಯವೂ ಪ್ರಯಾಣಿಸುತ್ತಾರೆ. ಅವರ ಸಮಸ್ಯೆಯನ್ನು ರೈಲ್ವೆ ಅಧಿಕಾರಿಗಳೂ ಅರ್ಥ ಮಾಡಿಕೊಳ್ಳಬೇಕು’ ಎಂದು ಸಾಫ್ಟ್‌ವೇರ್‌ ಎಂಜಿನಿಯರ್‌ ಸುಹಾಸ್‌ ನಾರಾಯಣ ಮೂರ್ತಿ ಹೇಳಿದರು.

‘ಜಂಕ್ಷನ್‌ಗಳಲ್ಲಿ ರೈಲ್ವೆ ಕ್ರಾಸಿಂಗ್‌ಗೆ ಅವಕಾಶ ನೀಡುವಾಗ ಸಬ್‌ಅರ್ಬನ್‌ ರೈಲಿಗೆ ಆದ್ಯತೆ ನೀಡಬೇಕು ಎಂದು ರೈಲ್ವೆ ಮಂಡಳಿಯ ನಿಯಮಗಳು ಹೇಳುತ್ತವೆ. ಆದರೆ, ನಮ್ಮಲ್ಲಿ ಇಂಟರ್‌ಸಿಟಿ ರೈಲುಗಳ ಕ್ರಾಸಿಂಗ್‌ಗೆ ಅಧಿಕಾರಿಗಳು ಆದ್ಯತೆ ನೀಡುತ್ತಿದ್ದಾರೆ. ಇದು ಸಮಸ್ಯೆಗೆ ಕಾರಣವಾಗುತ್ತಿದೆ’ ಎಂದು ಪ್ರಜಾ ರಾಗ್‌ ಸಂಘಟನೆಯ ಸದಸ್ಯ ಸಂಜೀವ ದ್ಯಾಮಣ್ಣವರ್‌ ಅಭಿಪ್ರಾಯಪಟ್ಟರು.

ಕಾರ್ಮೆಲಾರಾಮ್ ರೈಲ್ವೆ ನಿಲ್ದಾಣದಲ್ಲಿ ಕಳೆದ ಗುರುವಾರ ಪ್ರಯಾಣಿಕರು ರೈಲು ವಿಳಂಬವನ್ನು ಪ್ರಶ್ನಿಸಿ  ಪ್ರತಿಭಟನೆ  ನಡೆಸಿದ್ದರು. ರೈಲನ್ನು ಸುಮಾರು ಒಂದು ಗಂಟೆ ತಡೆದಿದ್ದರು.

ಪ್ರತಿಕ್ರಿಯಿಸಿ (+)