ಮಂಗಳವಾರ, ಡಿಸೆಂಬರ್ 10, 2019
17 °C
15 ದಿನಗಳ ಒಳಗೆ ಜಾರಿಗೊಳಿಸುವಂತೆ ಆದೇಶ ಹೊರಡಿಸಿದ ಬಿಬಿಎಂಪಿ ಆಯುಕ್ತ

ಕನ್ನಡ ನಾಮಫಲಕ ಕಡ್ಡಾಯಕ್ಕೆ ಗಡುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ನಾಮಫಲಕ ಕಡ್ಡಾಯಕ್ಕೆ ಗಡುವು

ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಚುರುಕು ಮುಟ್ಟಿಸಿದ ಬೆನ್ನಲ್ಲೇ ಎಚ್ಚೆತ್ತುಕೊಂಡ ಬಿಬಿಎಂಪಿ, ನಗರದ ಎಲ್ಲ ಅಂಗಡಿಮುಂಗಟ್ಟು, ವಾಣಿಜ್ಯ ಮಳಿಗೆಗಳ ನಾಮಫಲಕ ಕನ್ನಡದಲ್ಲಿ ಬರೆಸಲು ಮಾಲೀಕರಿಗೆ 15 ದಿನಗಳ ಗಡುವು ನೀಡಿದೆ.

ಬಿಬಿಎಂಪಿ ಮತ್ತು ಬಿಡಿಎ ಕೇಂದ್ರ ಕಚೇರಿಯಲ್ಲಿ ಸೋಮವಾರ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲಿಸಿದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ.ಸಿದ್ಧರಾಮಯ್ಯ ಅವರು, ಆಡಳಿತದಲ್ಲಿ ಕನ್ನಡ ಸಂಪೂರ್ಣ ಅನುಷ್ಠಾನಗೊಳಿಸುವಂತೆ ಬಿಬಿಎಂಪಿ ಆಯುಕ್ತರಿಗೂ ತಾಕೀತು ಮಾಡಿದರು.

ಮೂರು ದಿನಗಳೊಳಗೆ ಸಾರ್ವಜನಿಕ ಪ್ರಕಟಣೆ ಹೊರಡಿಸಿ, ಕಟ್ಟಡಗಳ ಮಾಲೀಕರಿಗೆ ಗಡುವು ನೀಡದಿದ್ದರೆ ಪಾಲಿಕೆ ಮೇಲೆ ಶಿಸ್ತು ಕ್ರಮ ಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡುವುದಾಗಿ ಅವರು ಎಚ್ಚರಿಕೆ ನೀಡಿದರು. 

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌, ‘ಎಲ್ಲ ಅಂಗಡಿಮುಂಗಟ್ಟು, ಶಾಪಿಂಗ್‌ ಮಾಲ್‌, ವಾಣಿಜ್ಯ ಕಟ್ಟಡಗಳು ಕಡ್ಡಾಯವಾಗಿ ಕನ್ನಡದಲ್ಲಿ ನಾಮಫಲಕ ಅಳವಡಿಸಬೇಕು. ನಾಮಫಲಕದಲ್ಲಿ ಶೇ 60ರಷ್ಟು ಕನ್ನಡಕ್ಕೆ ಆದ್ಯತೆ ಇರಬೇಕು. ಶೇ 40ರಷ್ಟು ಅನ್ಯ ಭಾಷೆ ಬಳಸಬಹುದು. 15 ದಿನಗಳೊಳಗೆ ಆದೇಶ ಪಾಲಿಸದಿದ್ದರೆ ವಾಣಿಜ್ಯ ಪರವಾನಗಿ ರದ್ದುಪಡಿಸುತ್ತೇವೆ’ ಎಂದು ತಿಳಿಸಿದರು.

ನಗರದ ಎಲ್ಲ ಉದ್ಯಾನಗಳಲ್ಲಿ ಕನ್ನಡದ ಕವಿಗಳು, ಸಾಹಿತಿಗಳು ಹಾಗೂ ವಚನಕಾರರ ನುಡಿಗಳನ್ನು ಕೆತ್ತಿಸಿ ಅಳವಡಿಸಲು ಪ್ರಾಧಿಕಾರದ ಅಧ್ಯಕ್ಷರು ನೀಡಿದ ಸಲಹೆ ಅನುಷ್ಠಾನಗೊಳಿಸುವುದಾಗಿ ಆಯುಕ್ತರು ತಿಳಿಸಿದರು.

ಕನ್ನಡ ಪತ್ರಿಕೆಯೊಂದಕ್ಕೆ ಇಂಗ್ಲಿಷ್‌ ಭಾಷೆಯಲ್ಲಿ ಜಾಹೀರಾತು ನೀಡಿರುವುದನ್ನು ಉಲ್ಲೇಖಿಸಿ, ಪಾಲಿಕೆ ವಿರುದ್ಧ ಹರಿಹಾಯ್ದ ಪ್ರಾಧಿಕಾರದ ಅಧ್ಯಕ್ಷರು,  ಇಂಗ್ಲಿಷ್ ಪತ್ರಿಕೆಗಳಿಗೂ ಕನ್ನಡ ಭಾಷೆಯಲ್ಲೇ ಜಾಹೀರಾತು ನೀಡಬೇಕು. ಪಾಲಿಕೆ ಜಾಗದಲ್ಲಿರುವ ಜಾಹೀರಾತು ಫಲಕಗಳಲ್ಲೂ ಒಂದೆರಡು ಸಾಲುಗಳಾದರೂ ಕನ್ನಡದಲ್ಲಿರಬೇಕು ಎಂದು ಸೂಚಿಸಿದರು.

ಬುಲ್‌ ಟೆಂಪಲ್‌ ರೋಡ್‌ ಎಲ್ಲಿದೆ?:  ಬಿಬಿಎಂಪಿ ಅಧಿಕಾರಿಗಳು ಬಸವನಗುಡಿ ರಸ್ತೆಯನ್ನೇ ‘ಬುಲ್‌ ಟೆಂಪಲ್‌ ರೋಡ್‌’ ಎಂದು ಕೆಟ್ಟದಾಗಿ ಭಾಷಾಂತರಿಸಿ ನಾಮಫಲಕ ಹಾಕಿದ್ದಾರೆ. ಬಸವನಗುಡಿಗೆ ಅದರದೇ ಆದ, ಇತಿಹಾಸ, ಸಂಸ್ಕೃತಿ ಇದೆ. ಅದನ್ನು ಉಳಿಸಬೇಕು. ಎರಡು ತಿಂಗಳ ಹಿಂದೆಯೆ ಈ ಬಗ್ಗೆ ಪತ್ರ ಬರೆದು ಗಮನ ಸೆಳೆದರೂ ಏಕೆ ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಆಯುಕ್ತರನ್ನು ಪ್ರಶ್ನಿಸಿದರು.

ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಪೌರಕಾರ್ಮಿಕರು ಶೇ 99ರಷ್ಟು ಅನ್ಯ ಭಾಷಿಗರು. ಕನ್ನಡಬಾರದವರು ಸರ್ಕಾರದ ನೌಕರರಾದರೆ ಆಭಾಸವಾಗುತ್ತದೆ. ಇದನ್ನು ತಪ್ಪಿಸಲು ಪ್ರಾಧಿಕಾರದ ಸಹಯೋಗದಲ್ಲಿ  ಪೌರಕಾರ್ಮಿಕರಿಗೆ ಕನ್ನಡ ಕಲಿಸಲು ಪಾಲಿಕೆ ಕಲಿಕಾ ಕೇಂದ್ರ ತೆರೆಯಬೇಕು ಎಂದು ಕವಿ ಡಾ.ಸಿದ್ದಲಿಂಗಯ್ಯ ಸಲಹೆ ನೀಡಿದರು.

ಬಿಡಿಎ ವಿರುದ್ಧವೂ ಅಸಮಾಧಾನ

 

ಬಿಡಿಎ ವೆಬ್‌ಸೈಟ್‌ ಆದ್ಯತಾ ಪುಟದಲ್ಲಿ ಇಂಗ್ಲಿಷ್‌ಗೆ ಮಣೆ ಹಾಕಿರುವುದಕ್ಕೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

15 ದಿನಗಳಲ್ಲಿ ಈ ಲೋಪ ಸರಿಪಡಿಸಿ, ವೆಬ್‌ಸೈಟ್‌ ಪೂರ್ಣ ಕನ್ನಡ ಭಾಷೆಯಲ್ಲಿರಬೇಕೆಂದು ಬಿಡಿಎ ಕಾರ್ಯದರ್ಶಿಗೆ ಸೂಚಿಸಿದರು.

ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವುದಾಗಿ ಸಿ.ಎ ನಿವೇಶನ ಪಡೆದು ಇಂಗ್ಲಿಷ್‌ ಮಾಧ್ಯಮದಲ್ಲಿ ಶಾಲೆ ನಡೆಸುತ್ತಿರುವ ಶಿಕ್ಷಣ ಸಂಸ್ಥೆಗಳ ಪರವಾನಗಿ ರದ್ದುಪಡಿಸುವಂತೆ ಬಿಡಿಎ  ಆಯುಕ್ತರಿಗೆ ಸೂಚನೆ ನೀಡಿದರು. ಕ್ರಮ ಕೈಗೊಂಡ ಬಗ್ಗೆ ಒಂದು ತಿಂಗಳ ಒಳಗೆ ಪ್ರಾಧಿಕಾರಕ್ಕೆ ವರದಿ ಸಲ್ಲಿಸಲು ಗಡುವು ಕೊಟ್ಟರು.

ಕೇಂದ್ರ ಸರ್ಕಾರದ ಜತೆಗಿನ ಪತ್ರ ವ್ಯವಹಾರ ಹೊರತುಪಡಿಸಿ, ನಾಗರಿಕರು ಸವಲತ್ತುಗಳಿಗಾಗಿ ಸಲ್ಲಿಸುವ ಅರ್ಜಿಗಳೂ ಕನ್ನಡದಲ್ಲೇ ಇರಬೇಕು. ನಗರದ ನಕಾಶೆಗಳೂ ಕನ್ನಡದಲ್ಲೇ ಇರಬೇಕು ಎಂದು ತಾಕೀತು ಮಾಡಿದ ಅವರು, ‘ಈಗ ಆಗಿರುವ ಲೋಪಗಳನ್ನು ಒಂದು ತಿಂಗಳ ಒಳಗಾಗಿ ಸರಿಪಡಿಸಿಕೊಳ್ಳಬೇಕು. ತಪ್ಪಿದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸು ಮಾಡಲಾಗುವುದು’ ಎಂದು ಎಚ್ಚರಿಸಿದರು.

‘ಬೆಂಗಳೂರಿಗೆ ಬರುವ ವಲಸಿಗರ ಸಂಖ್ಯೆ ಹೆಚ್ಚುತ್ತಿದೆ. ಮನೆ ಮಂದಿಯನ್ನು ಹೊರ ಹಾಕಿ, ನೆರೆಮನೆಯವರಿಗೆ ಆಶ್ರಯ ಕೊಡುವ ಕೆಲಸವನ್ನು ಬಿಡಿಎ ಮಾಡಬಾರದು. ನಿವೇಶನ ಮತ್ತು ಫ್ಲ್ಯಾಟ್‌ಗಳನ್ನು ಕನ್ನಡಿಗರಿಗೆ ಮಾತ್ರ ನೀಡಬೇಕು’ ಎಂದು ಸೂಚನೆ ಕೊಟ್ಟರು.

* ನಗರವನ್ನು ಕನ್ನಡಮಯಗೊಳಿಸಲು ಅಧಿಕಾರಿಗಳಾದ ನಾವು ಸಂಕಲ್ಪ ಮಾಡಿದ್ದೇವೆ. ಫಲಿತಾಂಶಕ್ಕೆ 15 ದಿನ ಕಾದು ನೋಡಿ

–ಎನ್‌.ಮಂಜುನಾಥ ಪ್ರಸಾದ್‌, ಬಿಬಿಎಂಪಿ ಆಯುಕ್ತ

* ಹೊರಗಿನವರಿಗೆ ಇದು ಅಪ್ಪಟ ಕನ್ನಡದ ರಾಜಧಾನಿ ಎನ್ನುವುದು ಗೊತ್ತಾಗುವಂತೆ ನಗರದ ಎಲ್ಲ ಪ್ರವೇಶ ದ್ವಾರಗಳಲ್ಲೂ ಕನ್ನಡದ ನಾಮಫಲಕ ಅಳವಡಿಸಬೇಕು

–ಪ್ರೊ.ಚಂದ್ರಶೇಖರ ಪಾಟೀಲ, ಸಾಹಿತಿ

ಪ್ರತಿಕ್ರಿಯಿಸಿ (+)