ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರ್ಚ್‌ ಸ್ಟ್ರೀಟ್ ರಸ್ತೆಗೆ ಯುರೋಪ್‌ ಮಾದರಿ ರೂಪ

ಟೆಂಡರ್‌ ಶ್ಯೂರ್‌ ಯೋಜನೆಯಡಿ ₹8 ಕೋಟಿಯಲ್ಲಿ ರಸ್ತೆ ಅಭಿವೃದ್ಧಿ
Last Updated 17 ಜುಲೈ 2017, 20:05 IST
ಅಕ್ಷರ ಗಾತ್ರ

ಬೆಂಗಳೂರು: ನಗರದ ಪ್ರಮುಖ ವಾಣಿಜ್ಯ ಚಟುವಟಿಕೆ ಕೇಂದ್ರಿತ ರಸ್ತೆಗಳಲ್ಲಿ ಒಂದಾದ ಚರ್ಚ್‌ ಸ್ಟ್ರೀಟ್‌ ರಸ್ತೆ ಮೂರು ತಿಂಗಳಲ್ಲಿ ಹೊಸ ರೂಪ ಪಡೆಯಲಿದೆ.

ಯುರೋಪ್‌ ದೇಶಗಳ ರಸ್ತೆಗಳನ್ನು ಹೋಲುವಂತೆ ‘ಗ್ರಾನೈಟ್‌ ಕಾಬಲ್‌’ ರಸ್ತೆಯಾಗಿ ಮಾರ್ಪಡಲಿದೆ. ರಸ್ತೆಯ ಎರಡೂ ಬದಿ ವಿಶಾಲ ಪಾದಚಾರಿ ಮಾರ್ಗಗಳಲ್ಲಿ ಸಿಮೆಂಟ್‌ ಇಂಟರ್‌ಲಾಕ್‌ ಬದಲಾಗಿ, ಗ್ರಾನೈಟ್‌ ಕರ್ಬ್‌ ಸ್ಟೋನ್ ಅಳವಡಿಸಲಾಗುತ್ತಿದೆ.

ಚರ್ಚ್‌ ಸ್ಟ್ರೀಟ್‌ ರಸ್ತೆ ಅಭಿವೃದ್ಧಿ ಕಾಮಗಾರಿ ಇನ್ನೂ ಮೂರು ತಿಂಗಳೊಳಗೆ ಪೂರ್ಣವಾಗಲಿದೆ ಎಂದು ಬಿಬಿಎಂಪಿ ಮುಖ್ಯ ಎಂಜಿನಿಯರ್‌ (ಯೋಜನೆ) ಕೆ.ಟಿ.ನಾಗರಾಜ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬ್ರಿಗೇಡ್‌ ರಸ್ತೆಯಿಂದ ವಾಸುದೇವ ಅಡಿಗಾಸ್‌ ಹೋಟೆಲ್‌ವರೆಗೆ ಚರ್ಚ್‌ ಸ್ಟ್ರೀಟ್‌ ರಸ್ತೆಯ ಎರಡೂ ಬದಿ 400 ಮೀಟರ್‌ ಒಳಚರಂಡಿ, ಮಳೆ ನೀರು ಚರಂಡಿ, ಕುಡಿಯುವ ನೀರಿನ ಕೊಳವೆ ಮಾರ್ಗ, ಒಎಫ್‌ಸಿ, ವಿದ್ಯುತ್‌, ದೂರವಾಣಿ ಕೇಬಲ್‌ ಅಳವಡಿಸಲು ಯುಟಿಲಿಟಿ ಡಕ್ಟ್‌ ಕಾಮಗಾರಿ ಪೂರ್ಣಗೊಂಡಿದೆ.  ಅಡಿಗಾಸ್‌ ಹೋಟೆಲ್‌ನಿಂದ ಸೇಂಟ್‌ ಮಾರ್ಕ್ಸ್‌ ರಸ್ತೆವರೆಗೆ 300 ಮೀಟರ್‌ ಯುಟಿಲಿಟಿ ಡಕ್ಟ್‌ ಕಾಮಗಾರಿ ಬಾಕಿ ಇದೆ. ವಿದ್ಯುತ್ ಪರಿವರ್ತಕಗಳನ್ನು ಸ್ಥಳಾಂತರಿಸಿದ ಮೇಲೆ ಕಾಮಗಾರಿ ಇನ್ನಷ್ಟು ವೇಗ ಪಡೆಯಲಿದೆ ಎಂದರು.

ಟೆಂಡರ್‌ ಶ್ಯೂರ್‌ ಯೋಜನೆಯಡಿ  ಅಂದಾಜು ₹ 8 ಕೋಟಿ ವೆಚ್ಚದಲ್ಲಿ ಬಿಬಿಎಂಪಿ ಕೈಗೆತ್ತಿಕೊಂಡಿರುವ ಚರ್ಚ್‌ ಸ್ಟ್ರೀಟ್‌ ರಸ್ತೆ ಅಭಿವೃದ್ಧಿಗೆ ತೊಡಕಾಗಿದ್ದ ಟ್ರಾನ್ಸ್‌ಫಾರ್ಮರ್‌ ಮತ್ತು ಆರ್‌ಎಂಯು(ರಿಂಗ್‌ ಮೈನ್‌ ಯೂನಿಟ್‌) ಘಟಕಗಳನ್ನು ಸ್ಥಳಾಂತರಿಸಲು ಬೆಸ್ಕಾಂ ಸಮ್ಮತಿ ನೀಡಿದೆ.

ವಿದ್ಯುತ್ ಪರಿವರ್ತಕಗಳನ್ನು 10 ದಿನಗಳೊಳಗೆ ಬಿಬಿಎಂಪಿಯೇ ಸ್ಥಳಾಂತರಿಸಲಿದೆ. ಶೇ 10ರಷ್ಟು ಸ್ಥಳಾಂತರ ಶುಲ್ಕವನ್ನು ಬೆಸ್ಕಾಂಗೆ ಪಾವತಿಸಲಿದೆ.
ಬಿಬಿಎಂಪಿ ವಿಶೇಷ ಆಯುಕ್ತ ವಿಜಯಶಂಕರ್‌, ಬೆಸ್ಕಾಂ ಮುಖ್ಯ ಎಂಜಿನಿಯರ್‌ ಉದಯ್‌ಕುಮಾರ್‌ ಸ್ಥಳ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT