ಭಾನುವಾರ, ಡಿಸೆಂಬರ್ 8, 2019
21 °C

ದಂಡ ವಿಧಿಸಿ ‘ಬಿ’ ಖರಾಬು ಸಕ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಂಡ ವಿಧಿಸಿ ‘ಬಿ’ ಖರಾಬು ಸಕ್ರಮ

ಬೆಂಗಳೂರು:  ಬೆಂಗಳೂರು ನಗರ ಜಿಲ್ಲೆಯಲ್ಲಿ ‘ಬಿ– ಖರಾಬು’ ಜಮೀನು  ಒತ್ತುವರಿ ಮಾಡಿಕೊಂಡವರಿಂದ ದುಪ್ಪಟ್ಟು ಮಾರ್ಗಸೂಚಿ ದರ ವಸೂಲಿ ಮಾಡಿ ಸಕ್ರಮ ಮಾಡಲು ನಗರ ಜಿಲ್ಲಾಡಳಿತ ಪ್ರಸ್ತಾವ ಸಿದ್ಧಪಡಿಸಿದೆ.

‘ಸಾರ್ವಜನಿಕ ಉದ್ದೇಶಕ್ಕೆ ಮೀಸಲಾದ ಬಿ– ಖರಾಬು ಜಾಗಗಳಾದ ಕಟ್ಟೆ, ಕುಂಟೆಗಳು ಒತ್ತುವರಿಯಾಗಿವೆ. ಹೆಚ್ಚಿನ ಕಡೆಗಳಲ್ಲಿ ಕಟ್ಟಡಗಳು ತಲೆ ಎತ್ತಿವೆ. ಇಂತಹ ಕಟ್ಟಡಗಳ ನೆಲಸಮ ಕಷ್ಟದ ಮಾತು. ಜತೆಗೆ ಸಾರ್ವಜನಿಕ ಬಳಕೆಗೂ ಲಭ್ಯವಾಗುತ್ತಿಲ್ಲ.  ಹೀಗಾಗಿ ದೊಡ್ಡ ಮೊತ್ತ ವಸೂಲಿ ಮಾಡಲು ಯೋಜಿಸಲಾಗಿದೆ. ಬಿ ಖರಾಬು ಸಕ್ರಮ ಮಾಡಿದರೆ ಅಂದಾಜು ₹ 30 ಸಾವಿರ ಕೋಟಿ ವರಮಾನ ಬರಲಿದೆ’ ಎಂದು ಜಿಲ್ಲಾಡಳಿತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ವ್ಯವಸಾಯದ ಭೂಮಿಯನ್ನು ವ್ಯವಸಾಯೇತರ ಉದ್ದೇಶಕ್ಕಾಗಿ  (ವಾಸ/ಕೈಗಾರಿಕೆ/ವಾಣಿಜ್ಯ) ಭೂ ಪರಿವರ್ತನೆ ಮಾಡಲು ಅವಕಾಶ ಇದೆ. ರಾಜ್ಯದ ಭೂ ಕಂದಾಯ ನಿಯಮ 1966ರ ನಿಯಮ 107 (ಎ) ರ ಪ್ರಕಾರ ಭೂಪರಿವರ್ತನೆ ಶುಲ್ಕ ಪಾವತಿಸಿಕೊಂಡು ಸಾಮಾನ್ಯವಾಗಿ ಜಿಲ್ಲಾಧಿಕಾರಿ ಭೂಪರಿವರ್ತನೆ ಆದೇಶ ಹೊರಡಿಸುತ್ತಾರೆ. ವ್ಯವಸಾಯದ ಜಮೀನಿನಲ್ಲಿರುವ ಫೂಟ್‌ ಖರಾಬಿಗೆ (ಎ ಖರಾಬು) ಜಮೀನಿನ ಪ್ರಸಕ್ತ ಮಾರುಕಟ್ಟೆ ದರ ವಿಧಿಸಿ ಭೂಪರಿವರ್ತನೆ ಮಾಡಲಾಗುತ್ತಿತ್ತು. ಆದರೆ, ಬಿ– ಖರಾಬನ್ನು ಯಥಾಸ್ಥಿತಿಯಲ್ಲಿ ಕಾಯ್ದಿರಿಸಲಾಗುತ್ತದೆ.

ಸಚಿವ ಸಂಪುಟಕ್ಕೆ ಪ್ರಸ್ತಾವ:  ಎ– ಖರಾಬು ಭೂ ಪರಿವರ್ತನೆಗೆ ಮಾರುಕಟ್ಟೆ ದರ ವಿಧಿಸುತ್ತಿರುವುದನ್ನು ಪ್ರಶ್ನಿಸಿ ಕೆಲವು ಹಿಡುವಳಿದಾರರು ಹೈಕೋರ್ಟ್‌ ಮೊರೆ ಹೋಗಿದ್ದರು. ಈ ಜಾಗಕ್ಕೆ ಭೂಪರಿವರ್ತನೆ ಶುಲ್ಕಮಾತ್ರ ಪಾವತಿಸಿಕೊಂಡು ಭೂಪರಿವರ್ತನೆ ಮಾಡುವಂತೆ ಹೈಕೋರ್ಟ್‌ ಆದೇಶ ಹೊರಡಿಸಿತ್ತು. ಇದರ ವಿರುದ್ಧ ಕಂದಾಯ ಇಲಾಖೆಯು ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿತ್ತು. ನ್ಯಾಯಾಲಯ ಅದನ್ನು ಮಾನ್ಯ ಮಾಡಿರಲಿಲ್ಲ.

ನಗರ ಜಿಲ್ಲೆಯಲ್ಲಿ ಎ ಖರಾಬು ಜಾಗ 12,901 ಎಕರೆ ಇದೆ. ಜಿಲ್ಲೆಯಲ್ಲಿ ಎಕರೆಗೆ ಕನಿಷ್ಠ ₹ 44 ಲಕ್ಷದಿಂದ ಗರಿಷ್ಠ ₹ 21.8 ಕೋಟಿ ವರೆಗೆ ಮಾರ್ಗಸೂಚಿ ದರ ನಿಗದಿಯಾಗಿದೆ. ಈ ಜಾಗಗಳ ಒಟ್ಟು ಮೌಲ್ಯ ₹ 64,505 ಕೋಟಿ ಎಂದು ಜಿಲ್ಲಾಡಳಿತ ಅಂದಾಜಿಸಿದೆ.

‘ಇದಕ್ಕಾಗಿ ಕಾನೂನು ತಿದ್ದುಪಡಿ ತರಲು ರಾಜ್ಯ ಸರ್ಕಾರ ಮುಂದಾಗಿದೆ. ಭೂಪರಿವರ್ತನೆ ವೇಳೆ ಮಾರುಕಟ್ಟೆ ದರ ವಿಧಿಸುವ ಪ್ರಸ್ತಾವ ಸಚಿವ ಸಂಪುಟದ ಮುಂದಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಪ್ರತಿಕ್ರಿಯಿಸಿ (+)