ಭಾನುವಾರ, ಡಿಸೆಂಬರ್ 8, 2019
21 °C

ಯೋಜನೆಗಳಿಗೆ ಫಲಾನುಭವಿಗಳ ಆಯ್ಕೆ ಮಾಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯೋಜನೆಗಳಿಗೆ ಫಲಾನುಭವಿಗಳ ಆಯ್ಕೆ ಮಾಡಿ

ಚಿತ್ರದುರ್ಗ: ‘2017-18ನೇ ಸಾಲಿನ ಜಿಲ್ಲೆ, ರಾಜ್ಯ ವಲಯಗಳಿಂದ ಅನುಸೂಚಿತ ಜಾತಿ, ಬುಡಕಟ್ಟು ಉಪ ಯೋಜನೆಯಡಿ  ವಿವಿಧ ಇಲಾಖೆ ಗಳಿಗೆ ನೀಡಿರುವ ಅನುದಾನಕ್ಕೆ ಅನುಗುಣವಾಗಿ ಕ್ರಿಯಾಯೋಜನೆ ತಯಾರಿಸಿ ಫಲಾನುಭವಿಗಳನ್ನು ಆಯ್ಕೆಮಾಡಿ’ ಎಂದು ಜಿಲ್ಲಾಧಿಕಾರಿ ಶ್ರೀರಂಗಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸೋಮವಾರ ನಡೆದ ಎಸ್‌ಸಿಪಿ, ಟಿಎಸ್‌ಪಿ ಅನುಮೋದಿತ ಕ್ರಿಯಾಯೋಜನೆಗಳ ಸಮರ್ಪಕ ಅನುಷ್ಠಾನ ಕುರಿತ 2ನೇ ತ್ರೈಮಾಸಿಕ ಸಭೆಯಲ್ಲಿ ಅವರು ಮಾತನಾಡಿದರು.

‘ಪ್ರಸಕ್ತ ಹಣಕಾಸಿನ ವರ್ಷದ ಮೊದಲೇ ತ್ರೈಮಾಸಿಕ ಅವಧಿ ಮುಗಿದಿದ್ದು, ಎರಡನೇ ತ್ರೈಮಾಸಿಕದಲ್ಲಿ ಆಯಾ ಇಲಾಖೆಗಳಿಗೆ ಹಂಚಿಕೆಯಾಗಿರುವ ಅನುದಾನ ಮತ್ತು ನಿಗದಿಪಡಿಸಿರುವ ಗುರಿಯಂತೆ ಫಲಾನುಭವಿಗಳನ್ನು ಆಯಾ ಕ್ಷೇತ್ರದ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರು ಹಾಗೂ ಜಿಲ್ಲಾ ಪಂಚಾಯಿತಿ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಆಯ್ಕೆಪಟ್ಟಿ ತಯಾರಿಸಿ  ಎಂದು ಸೂಚಿಸಿದರು.

‘ಜಿಲ್ಲಾಮಟ್ಟದ ಇಲಾಖೆಗಳ ಅನುಷ್ಠಾನ ಅಧಿಕಾರಿಗಳು, ತಾಲ್ಲೂಕುಗಳಿಗೆ ಅನುದಾನ ಬಿಡುಗಡೆ ಮಾಡಿ ಸುಮ್ಮನಿರಬಾರದು. ಪ್ರತಿ ತಾಲ್ಲೂಕುವಾರು ಅನುಷ್ಠಾನಾಧಿಕಾರಿಗಳ ಸಭೆ ನಡೆಸಿ ಕಾರ್ಯಾನುಷ್ಠಾನದ ಬಗ್ಗೆ ಖಾತರಿಪಡಿಸಿ ಕೊಳ್ಳಬೇಕು’ ಎಂದು ಅಧಿಕಾರಿಗಳಿಗೆ  ತಾಕೀತು ಮಾಡಿದರು.‘ಜುಲೈ, ಆಗಸ್ಟ್  ತಿಂಗಳಲ್ಲಿ  ಫಲಾನುಭವಿಗಳ  ಪಟ್ಟಿ ಅನುಮೋದಿಸಿ  ಸಾಲಸೌಲಭ್ಯಗಳಿಗಾಗಿ  ಬ್ಯಾಂಕುಗಳಿಗೆ ಪಟ್ಟಿ ಸಲ್ಲಿಸಬೇಕು’ ಎಂದು ಸೂಚಿಸಿದರು.

ನಂತರ ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನೆ, ಆರೋಗ್ಯ, ಶಿಕ್ಷಣ, ಅರಣ್ಯ, ಮೀನುಗಾರಿಕೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಲೋಕೋಪ

ಯೋಗಿ ಇಲಾಖೆಗಳ ಕಾರ್ಯಾನುಷ್ಠಾನದ ಬಗ್ಗೆ ಚರ್ಚಿಸಿ,  ಜಿಲ್ಲೆಯಲ್ಲಿ ಈ ವರ್ಷವೂ ಮಳೆ ಕೊರತೆಯಾಗಬಹುದು.

ಈ ಹಿನ್ನೆಲೆಯಲ್ಲಿ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು. ಪ್ರತಿ ಹೋಬಳಿಗೊಬ್ಬರಂತೆ ಎಲ್ಲಾ ಅಭಿವೃದ್ಧಿ ಕಾಮಗಾರಿಗಳ ಮತ್ತು ಬರ ನಿರ್ವಹಣೆಗೆ ಆಯಾ ಭಾಗದ ಸಾರ್ವಜನಿಕ ಸಮಸ್ಯೆಗಳಿಗೆ ಕೂಡಲೇ ಸ್ಪಂದಿಸಲು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುವುದು’ ಎಂದರು.

‘ಸರ್ಕಾರಿ ಯೋಜನೆಗಳ ಲಾಭ ಅರ್ಹ ಫಲಾನುಭವಿಗಳಿಗೆ ಕಾಲಮಿತಿಯಲ್ಲಿ ತಲುಪಿಸಬೇಕು. ಇದಕ್ಕಾಗಿ ಸಮರೋಪಾದಿಯಲ್ಲಿ ಕೆಲಸ ಮಾಡಬೇಕು’ ಎಂದು ತಿಳಿಸಿದರು.  ಯೋಜನೆ ಕಾರ್ಯಾನುಷ್ಠಾನ ಹಾಗೂ ಅನುದಾನ ಬಳಕೆಯ ಖಚಿತ ಮಾಹಿತಿಯನ್ನು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳಿಗೆ ಕಾಲಕಾಲಕ್ಕೆ ನೀಡಬೇಕು’ ಎಂದರು .

‘ಇದೇ 27ರಂದು ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಜಿಲ್ಲೆಗೆ ಬರಲಿದ್ದಾರೆ. ಅನುಸೂಚಿತ ಜಾತಿ, ಬುಡಕಟ್ಟು ಉಪಯೋಜನೆ ಅಧಿನಿಯಮ-2013ರ ಪ್ರಮುಖ ಅಂಶಗಳ ಮಾಹಿತಿ, ಅಭಿವೃದ್ಧಿ ಕ್ರಿಯಾ ಯೋಜನೆ ರೂಪಿಸಲಿದ್ದಾರೆ.

ಆರ್ಥಿಕ ಸಂಪನ್ಮೂಲಗಳ ಹಂಚಿಕೆ ಮತ್ತು ಬಳಕೆ ಬಗ್ಗೆ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಕಾರ್ಯಾಗಾರ ನಡೆಸಲಿದ್ದಾರೆ. ಜಿಲ್ಲೆಗೆ ನೀಡಿರುವ ಅನುದಾನ, ಕಾಮಗಾರಿಗಳು, ಫಲಾನುಭವಿಗಳ ನಿಖರ ಮಾಹಿತಿಯೊಂದಿಗೆ ಅಧಿಕಾರಿಗಳು ಭಾಗವಹಿಸಬೇಕು’ ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದರು. ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಬಸವರಾಜ್, ಯೋಜನಾಧಿಕಾರಿ ಓಂಕಾರಪ್ಪ, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)