ಭಾನುವಾರ, ಡಿಸೆಂಬರ್ 15, 2019
18 °C
ಸದಾ ಜನಜಂಗುಳಿಯಿಂದ ತುಂಬಿದ ಅಶೋಕ ರಸ್ತೆ: ಕೇಂದ್ರ ಬಸ್ ನಿಲ್ದಾಣದ ಮುಂದೆ ಜನರ ಪರದಾಟ

ತಾತ್ಕಾಲಿಕ ವಾಹನ ನಿಲುಗಡೆ ವ್ಯವಸ್ಥೆ ಇಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಾತ್ಕಾಲಿಕ ವಾಹನ ನಿಲುಗಡೆ ವ್ಯವಸ್ಥೆ ಇಲ್ಲ

ತುಮಕೂರು: ನಗರದ ಸರ್ಕಾರಿ ಬಸ್‌ ನಿಲ್ದಾಣವಿರುವ ಅಶೋಕ ರಸ್ತೆ ಸದಾ ವಾಹನ ಸಂಚಾರ ದಟ್ಟಣೆಯಿಂದ ಕೂಡಿದೆ. ಬಸ್‌ ನಿಲ್ದಾಣದಲ್ಲಿ ದಿನನಿತ್ಯ ವಾಹನಗಳಲ್ಲಿ ಸ್ನೇಹಿತರು, ಸಂಬಂಧಿಕರನ್ನು ಕರೆದುಕೊಂಡು ಹೋಗಲು ಮತ್ತು ಬಿಡಲು ಬರುವುದು ಸರ್ವೇ ಸಾಮಾನ್ಯ. ಆದರೆ ಅದಕ್ಕಾಗಿ ಬರುವ ಸಾರ್ವಜನಿಕರಿಗೆ ಪ್ರತ್ಯೇಕ ಪಾರ್ಕಿಂಗ್‌ ವ್ಯವಸ್ಥೆ ಇಲ್ಲ.

ಬೆಂಗಳೂರು ಮತ್ತು ವಿವಿಧೆಡೆಯಿಂದ ಬರುವ ಮತ್ತು ಹೋಗುವ ವಾಹನಗಳು ತುಮಕೂರು ಕೇಂದ್ರ ಬಸ್ ನಿಲ್ದಾಣಕ್ಕೆ ಬಂದು ಹೋಗುತ್ತವೆ. ನಿತ್ಯ ಸಾವಿರಾರು ಜನರು ಬಂದು ಹೋಗುತ್ತಾರೆ.

ಬೈಕ್‌ ನಿಲ್ಲಿಸಿ ಬಸ್‌ಗಳಿಗೆ ಹೊರ ಊರುಗಳಿಗೆ ಹೋಗಲು ಪಾರ್ಕಿಂಗ್‌ ವ್ಯವಸ್ಥೆ ಇದೆ. ಆದರೆ ಸಂಬಂಧಿಕರನ್ನೊ, ಮಕ್ಕಳನ್ನೊ ಊರಿಗೆ ಕಳಿಸಲು ಬಸ್‌ ನಿಲ್ದಾಣದೊಳಗಡೆ ಹೋಗಿ ಬಿಟ್ಟು ಬರಲು ಬಂದಂತಹ ದ್ವಿಚಕ್ರವಾಹನ ಸವಾರರಿಗೆ ವಾಹನ ನಿಲ್ಲಿಸಿ ಹೋಗಲೂ ಸ್ಥಳವಿಲ್ಲದಾಗಿದೆ.

ರಸ್ತೆ ಬದಿಗಳಲ್ಲಿ ಪಾರ್ಕ್‌ ಮಾಡಲು ಪುಟ್‌ಪಾತ್‌ ಅಂಗಡಿಗಳಿವೆ. ಆಟೊ ನಿಲ್ದಾಣ, ಹಣ್ಣಿನ ಹೂವಿನ ಅಂಗಡಿಗಳಿವೆ. ಇರುವ ಪಾರ್ಕಿಂಗ್‌ ಜಾಗದಲ್ಲಿ ಬೈಕ್‌ಗಳು ತುಂಬಿರುತ್ತವೆ. ಇನ್ನೆಲ್ಲಿ ನಿಲ್ಲಿಸೋದು ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ. ಹತ್ತಿರವೇ ಮಾರ್ಕೆಟ್‌ ಇರುವುದರಿಂದ ಜನಜಂಗುಳಿಯಿಂದ ತುಂಬಿ ಸಂಚಾರಕ್ಕೆ ತೊಂದರೆಯಾಗುತ್ತಿದೆ ಎಂದು ಸಮಸ್ಯೆ ಹೇಳಿಕೊಳ್ಳುತ್ತಾರೆ.

ನಿಷೇಧ ಸ್ಥಳವೇ ಗತಿ: ವಾಹನಗಳನ್ನು ಎಲ್ಲಿ ನಿಲ್ಲಿಸಬೇಕು ಎಂದು ದಿಕ್ಕು ತೋಚದ ಸವಾರರು ವಾಹನ ನಿಲುಗಡೆ ನಿಷೇಧ ಸ್ಥಳದಲ್ಲಿಯೇ ನಿಲ್ಲಿಸಿ ಹೋಗುವ ಸ್ಥಿತಿ ಇದೆ. ಖಾಲಿ ಜಾಗ ಹುಡುಕಿ ಪಾರ್ಕ್‌ ಮಾಡಲು ಹರ ಸಾಹಸ ಪಡಬೇಕಿದೆ.

ಪಾದಚಾರಿಗಳಿಗೆ ತೊಂದರೆ: ಜನಜಂಗುಳಿಯಿಂದ ವಾಹನ ನಿಲ್ಲಿಸಲು ಸೂಕ್ತ ವ್ಯವಸ್ಥೆ ಇಲ್ಲ. ಹೀಗಾಗಿ ಬಸ್ ನಿಲ್ದಾಣದ ಮುಂದಿರುವ ಅಂಗಡಿ ಮುಂಭಾಗ ರಸ್ತೆ ಬದಿ ನಿಲ್ಲಿಸಿ ಹೋಗುತ್ತಿದ್ದಾರೆ. ಇದು ಪೊಲೀಸ್‌ನವರಿಗೂ ತಲೆನೋವಾಗಿದೆ ಪರಿಣಮಿಸಿದೆ. ಪುಟ್‌ಪಾತ್‌ನಲ್ಲಿನ ಪಾದಚಾರಿಗಳ ಸಂಚಾರಕ್ಕೂ ತೊಂದರೆಯಾಗಿದೆ.

ಸಾವಿರಾರು ವಾಹನ ಬಂದು ಹೋಗುವ ಜಾಗದಲ್ಲಿ ಸರಿಯಾದ ಪಾರ್ಕಿಂಗ್‌ ಸೌಲಭ್ಯ ಇಲ್ಲ. ದೂರದ ಊರಿಗೆ ಹೋಗುವವರಿಗೆ ಹೇಗೆ ಪಾರ್ಕಿಂಗ್ ವ್ಯವಸ್ಥೆ ಇದೆಯೋ ಹಾಗೆಯೇ ನಿಲ್ದಾಣದಲ್ಲಿ ಹೋಗಿ ಬರುವವರಿಗೆ ಒಂದು ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.

**

ಸಾರ್ವಜನಿಕರಿಂದ ದೂರು ಬಂದರೆ ಕ್ರಮ

ಪಾರ್ಕಿಂಗ್‌ ಸಮಸ್ಯೆ ಇಲ್ಲ. ಅದಕ್ಕಾಗಿ ಸಂಸ್ಥೆಯಿಂದ ಎರಡು ಕಡೆ ವ್ಯವಸ್ಥೆ ಕಲ್ಪಿಸಿದೆ. ಅದನ್ನು ಉಪಯೋಗಿಸಿಕೊಳ್ಳುತ್ತಿಲ್ಲ. ಬದಲಾಗಿ ಎಲ್ಲೆಂದರಲ್ಲಿ ನಿಲ್ಲಿಸಿ ಹೋಗುವುದರಿಂದ ಸಮಸ್ಯೆಯಾಗಿ ಕಾಣುತ್ತಿದೆ. ಸಮಸ್ಯೆ ಬಗ್ಗೆ ಸಾರ್ವಜನಿಕರು ಯಾವುದೇ ದೂರು ನೀಡಿಲ್ಲ. ಹಾಗೇನಾದರೂ ದೂರು ನೀಡಿದಲ್ಲಿ ಕ್ರಮ ತೆಗೆದುಕೊಳ್ಳಲಾಗುತ್ತದೆ.

-ಗಜೇಂದ್ರ ಕುಮಾರ್‌, ವಿಭಾಗೀಯ ನಿಯಂತ್ರಣಾಧಿಕಾರಿ

**

ತಾತ್ಕಾಲಿಕ ವಾಹನ ನಿಲುಗಡೆ ವ್ಯವಸ್ಥೆಯಾಗಲಿ

ಬಸ್‌ ನಿಲ್ದಾಣಕ್ಕೆ ಬಂದು ಹೋಗುವವರಿಗೆ ಪ್ರತ್ಯೇಕ  ಪಾರ್ಕಿಂಗ್‌ ವ್ಯವಸ್ಥೆ ಬೇಕು. ಸರ್ಕಾರ ಹಾಗೂ ಸಂಸ್ಥೆಗಳು ಕೇವಲ ಲಾಭದ ಬಗ್ಗೆ ಯೋಚಿಸದೆ ಜನರಿಗೆ ಅನುಕೂಲ ಕಲ್ಪಿಸಲು ಪ್ರಯತ್ನಿಸಬೇಕು. ಜಾಗವಿಲ್ಲದೆ ಸಂಚಾರ ದಟ್ಟಣೆ ಮಿತಿ ಮೀರಿದೆ.  ರಸ್ತೆ ಪಕ್ಕ ನಿಲ್ಲಿಸಿದರೆ ನೋಡು ನೋಡುತ್ತಿದ್ದಂತೆಯೇ ಪೊಲೀಸರು ದಂಡ ಹಾಕುತ್ತಾರೆ, ವಾಹನ ಎತ್ತಾಕಿಕೊಂಡು ಹೋಗುತ್ತಾರೆ. ತಾತ್ಕಾಲಿಕ ವಾಹನ ನಿಲುಗಡೆ ವ್ಯವಸ್ಥೆ ಮಾಡಬೇಕು.

ಶ್ರೀನಿವಾಸ್‌, ತುಮಕೂರು ನಗರ ವಾಸಿ

**

ಬಸ್‌ ನಿಲ್ದಾಣಗಳಲ್ಲಿ ಬೈಕ್‌ಗಳು ಸಾಲುಗಟ್ಟಿ ನಿಂತಿರುತ್ತವೆ. ಜಾಗವಿಲ್ಲದೆ ಪ್ರತಿದಿನ ರಸ್ತೆ ಬದಿ ನಿಲ್ಲಿಸಬೇಕು. ವಾಹನಗಳು ನಿಲ್ಲಿಸಿದ ಬಳಿಕ ಮತ್ತೆ ತೆಗೆಯಲು ಸಾಧ್ಯವಿಲ್ಲ.

-ಬಿ.ಜಿ.ಮೋಹನ್‌ ಕುಮಾರ್‌,

ಸಿದ್ದಗಂಗಾ ಪದವಿ ಕಾಲೇಜು ವಿದ್ಯಾರ್ಥಿ

**

ಆಡಳಿತ ದೃಷ್ಟಿಯಿಂದ ಸಾರ್ವಜನಿಕರಿಗೆ ವಾಹನ ನಿಲುಗಡೆಗೆ ಅವಕಾಶ ಕಲ್ಪಿಸಿಕೊಡಬೇಕು. ಪಾರ್ಕಿಂಗ್‌ ವ್ಯವಸ್ಥೆ ಇಲ್ಲದೆ ರಸ್ತೆ ಬದಿ ನಿಲ್ಲಿಸಬೇಕಾದ ಅನಿರ್ವಾಯ ಸ್ಥಿತಿ ಬಂದಿದೆ.

-ಮಂಜುನಾಥ್‌, ತುಮಕೂರು ನಗರ ವಾಸಿ

ಪ್ರತಿಕ್ರಿಯಿಸಿ (+)