ಸೋಮವಾರ, ಡಿಸೆಂಬರ್ 16, 2019
25 °C
ಆಷಾಢ ಮಾಸದ ಕಾರಣ ಬೇಡಿಕೆ ಕಳೆದುಕೊಂಡ ಘಮಘಮಿಸುವ ಹೂವುಗಳು

ಗಗನಕ್ಕೇರಿದ ಟೊಮೆಟೊ, ಕ್ಯಾರೆಟ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗಗನಕ್ಕೇರಿದ ಟೊಮೆಟೊ, ಕ್ಯಾರೆಟ್‌

ತುಮಕೂರು: ಟೊಮೆಟೊ, ಕ್ಯಾರೆಟ್‌ ಬೆಲೆ ಗಗನಮುಖಿಯಾಗಿದೆ. ಕೆಜಿ ಟೊಮೆಟೊ ಕೊಳ್ಳುತ್ತಿದ್ದ ಗ್ರಾಹಕರು ಬೆಲೆ ಕೇಳಿ ಕಾಲು ಕೆಜಿ ಹಣ್ಣು ಖರೀದಿಸಿ ಮುಂದೆ ಹೋಗುವ ದೃಶ್ಯ ಸೋಮವಾರ ವಸಂತನರಾಸಪುರ ಎಪಿಎಂಸಿಯ ತರಕಾರಿ, ಹೂವು ಮತ್ತು ಹಣ್ಣಿನ ಮಾರುಕಟ್ಟೆ ಕಾಣಿಸಿತು.

ಒಂದು ಕೆ.ಜಿ ಟೊಮೆಟೊ ₹ 70 ಇದ್ದರೆ, ಕ್ಯಾರೆಟ್‌ಗೆ ಕೆ.ಜಿಗೆ ₹ 55  ಸಗಟು  ಮಾರುಕಟ್ಟೆಯಲ್ಲಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿ ಈ ಬೆಲೆ ಇನ್ನೂ ಹೆಚ್ಚಿದೆ. ಕೆಲವು ಕಡೆಗಳಲ್ಲಿ ಉತ್ತಮ ಟೊಮೆಟೊ ಹಣ್ಣನ್ನು ಕೆಜಿಗೆ ₹ 100ರವರೆಗೂ ಮಾರಾಟ ಮಾಡಲಾಗುತ್ತಿದೆ.

ಹಣ್ಣುಗಳ ಗುಣಮಟ್ಟವೂ ಕುಸಿದಿದೆ. ಬೆಲೆ ಹೆಚ್ಚಿರುವ ಕಾರಣ ಕಳಪೆ ಹಣ್ಣು ಕೂಡ ಮಾರುಕಟ್ಟೆ ಪ್ರವೇಶಿಸಿದೆ. ಇಂಥ ಹಣ್ಣಿಗೂ ಕೆಜಿಗೆ ₹ 50–60ರ ದರದಲ್ಲೂ ಮಾರಾಟ ಮಾಡಲಾಗುತ್ತಿದೆ.

‘ಮುಂಗಾರು ಕೈಕೊಟ್ಟಿರುವ ಕಾರಣ ತರಕಾರಿ ಬೆಳೆಯಲು ರೈತರಿಗೆ ಸಾಧ್ಯವಾಗುತ್ತಿಲ್ಲ. ಅಂತರ್ಜಲ ಕುಸಿತು ಕೊಳವೆಬಾವಿಗಳಲ್ಲೂ ನೀರು ಕಡಿಮೆಯಾಗಿದೆ. ಈ ವೇಳೆಯಲ್ಲಿ ಸಾಮಾನ್ಯವಾಗಿ ಬೆಲೆ ಕಡಿಮೆ ಇರುವುದರಿಂದ ಬೆಳೆದರ ಸಂಖ್ಯೆಯೂ ಕಡಿಮೆ ಇದೆ. ಈ ಎಲ್ಲ ಕಾರಣಗಳು ಟೊಮೆಟೊ ಬೆಲೆಯನ್ನು ಏರಿಕೆ ಮಾಡಿವೆ’ ಎಂದು ವರ್ತಕರೊಬ್ಬರು ತಿಳಿಸಿದರು.

ತಮಿಳುನಾಡು, ಮಹಾರಾಷ್ಟ್ರ, ಗೋವಾ ರಾಜ್ಯಗಳಿಗೆ ಟೊಮೆಟೊ, ಕ್ಯಾರೆಟ್‌ ರಫ್ತಾಗುತ್ತಿದೆ. ಹೊರ ರಾಜ್ಯಗಳಿಂದ ಬರುವ ವರ್ತಕರು ಲೋಡುಗಟ್ಟಲೆ ಖರೀದಿ ಮಾಡುತ್ತಿದ್ದಾರೆ.

ಪ್ರತಿ ವರ್ಷ ಈ ಸಮಯದಲ್ಲಿ ತರಕಾರಿಗಳ ಬೆಲೆ ಕಡಿಮೆ ಇರುತ್ತಿತ್ತು. ಆದರೆ ಕಳೆದ ಎರಡು ವಾರಗಳಿಂದ  ಟೊಮೆಟೊ ದರದಲ್ಲಿ ಏರಿಕೆಯಾಗಿದೆ. ಕ್ಯಾರೆಟ್‌ ದರದಲ್ಲಿ ಕೂಡ ಏರಿಕೆಯಾಗಿದ್ದು ಸಾಮಾನ್ಯ ಜನರಿಗೆ ಹೊರೆಯಾಗಿ ಪರಿಣಮಿಸಿದೆ.

‘ಬೆಲೆ ಹೆಚ್ಚಾಗಿದ್ದರೂ, ರೈತರಿಗೆ ಯಾವುದೇ  ಹೆಚ್ಚಿನ ಬೆಲೆ ಸಿಗುತ್ತಿಲ್ಲ. ಆದರೆ ವ್ಯಾಪಾರಸ್ಥರು ಇದರ ಪ್ರಯೋಜನ ಪಡೆದುಕೊಳ್ಳುತ್ತಿದ್ದಾರೆ. ರೈತರಿಂದ ಕಡಿಮೆ ಬೆಲೆಗೆ ಬೆಳೆಗಳನ್ನು ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿ ಲಾಭ ಮಾಡಿಕೊಳ್ಳುತ್ತಿದ್ದಾರೆ’ ಎಂದು ತರಕಾರಿ ಮಾರಾಟ ಮಾಡಲು ಬಂದ ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.

ತಗ್ಗಿದ ಹೂವಿನ ಬೆಲೆ: ಆಷಾಢ ಮಾಸದ ಕಾರಣ ಮಾರುಕಟ್ಟೆಯಲ್ಲಿ ಹೂವಿನ ದರದಲ್ಲಿ ಇಳಿಕೆಯಾಗಿದೆ. ಘಮಘಮ ವಾಸನೆ ಬೀರುವ ಸುಗಂಧರಾಜ, ಸೇವಂತಿ, ಕನಕಾಂಬರ, ಕಾಕಡ ಸೇರಿದಂತೆ ಎಲ್ಲ ಹೂವುಗಳ ದರ ಕಡಿಮೆ ಆಗಿದೆ.

ಸೇವಂತಿ ಹೂವು ಮಂಡಿ ಮಾರಿಗೆ ₹ 60 ರಿಂದ 80, ಕನಕಾಂಬರಿ ಮಾರಿಗೆ ₹ 20–30, ಕಾಕಡ ಮಾರಿಗೆ ₹ 20 ರಿಂದ 30, ಸುಗಂಧರಾಜ ಹೂವು ಕೆ.ಜಿ ಗೆ ₹ 40ಕ್ಕೆ ಮಾರಾಟವಾಗುತ್ತಿದೆ.

ಹೂವಿನ ಬೆಲೆ ಕಡಿಮೆಯಾಗಿರುವ ಕಾರಣ ಟೆಂಟೊಗಳಲ್ಲಿ ತುಂಬಿಕೊಂಡು ನಗರದ ರಸ್ತೆಗಳಲ್ಲಿ ಹೂವಿನ ಮಾರಾಟ ಮಾಡುವವರ ಸಂಖ್ಯೆ ಹೆಚ್ಚಿದೆ.

ಹಣ್ಣುಗಳ ದರದಲ್ಲಿ ಯಾವುದೇ ಇಳಿಕೆ ಕಂಡುಬಂದಿಲ್ಲ. ಸೇಬು ಹಣ್ಣು  ಕೆ.ಜಿ ₹ 150 ಆಗಿದೆ. ಮಾವು ಕೆ.ಜಿ ₹ 50, ದಾಳಿಂಬೆ ಕೆ.ಜಿಗೆ ₹ 80, ದ್ರಾಕ್ಷಿ ಕೆ.ಜಿಗೆ ₹ 120, ಮೂಸಂಬಿ ಕೆ.ಜಿಗೆ ₹ 60 ಆಗಿದೆ ಎಂದು ಹಣ್ಣಿನ ವ್ಯಾಪಾರಸ್ಥರೊಬ್ಬರು ತಿಳಿಸಿದರು.

ನಗರಕ್ಕೆ ಮಾವು ಮತ್ತು ಮೊಸಂಬಿ ಹಣ್ಣು ಆಂಧ್ರ ಪ್ರದೇಶದಿಂದ ಬರುತ್ತಿದೆ.  ದಾಳಿಂಬೆ ಮತ್ತು ದ್ರಾಕ್ಷಿ ಸುತ್ತಮುತ್ತಲಿನ ತಾಲ್ಲೂಕುಗಳಿಂದ  ಬರುತ್ತಿದೆ.

**

ಅಂಕಿ ಅಂಶ

₹70 ಒಂದು ಕೆ.ಜಿ ಟೊಮೆಟೊ ಬೆಲೆ

₹55 ಒಂದು ಕೆ.ಜಿ ಕ್ಯಾರೆಟ್‌ ಬೆಲೆ

₹40 ಒಂದು ಕೆ.ಜಿ ಸುಗಂಧರಾಜ ಹೂವಿನ ಬೆಲೆ

**

ಮಳೆ ಇಲ್ಲದ ಕಾರಣ ಅಂತರ್ಜಲ ಸಹ ಕುಸಿದಿದೆ. ಚೆನ್ನಾಗಿ ನೀರಿನ ಸೌಲಭ್ಯ ಇರುವವರು ಮಾತ್ರ ಟೊಮೆಟೊ ಬೆಳೆಯುತ್ತಿದ್ದಾರೆ. ಹೊರ ರಾಜ್ಯಗಳಿಗೆ ಹಣ್ಣು ರಫ್ತು ಆಗುತ್ತಿದೆ. ಇದು ಬೆಲೆ ಹೆಚ್ಚಳಕ್ಕೆ ಕಾರಣ.

–ವಿನಯ್‌, ಮಂಡಿ ಮಾಲೀಕರು

**

ಪ್ರತಿ ವಾರ ಇಲ್ಲಿ ಹೂಗಳನ್ನು ಖರೀದಿಸಿ ಶಿರಾದಲ್ಲಿ ಮಾರಾಟ ಮಾಡುತ್ತೇನೆ. ಆಷಾಢದ ಕಾರಣ ಹೂವಿಗೆ ಬೇಡಿಕೆ ಕಡಿಮೆ. ಹೀಗಾಗಿ ಬೆಲೆಯೂ ಕಡಿಮೆಯಾಗಿದೆ. 

–ಭೂತೇಶ್,

ಶಿರಾ ಹೂವಿನ ವ್ಯಾಪಾರಿ

ಪ್ರತಿಕ್ರಿಯಿಸಿ (+)