ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಗ್ಗೇರಿಗೆ ನದಿ ನೀರು ಹರಿಸಲು ಆಗ್ರಹ

Last Updated 18 ಜುಲೈ 2017, 6:15 IST
ಅಕ್ಷರ ಗಾತ್ರ

ಹಾವೇರಿ: ವಾರದೊಳಗೆ ಹೆಗ್ಗೇರಿ ಕೆರೆಗೆ ನದಿ ನೀರು ಹರಿಸಬೇಕು ಎಂದು ಆಗ್ರಹಿಸಿ ಬಿಜೆಪಿ ಮತ್ತು ಜಯ ಕರ್ನಾಟಕ ಸಂಘಟನೆ ನೇತೃತ್ವದಲ್ಲಿ ಸೋಮವಾರ ನಗರದ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಯಿತು. ಪುರಸಿದ್ಧೇಶ್ವರ ಗುಡಿಯಿಂದ ಜಾಥಾ ಮೂಲಕ ಬಂದ ಜಯ ಕರ್ನಾಟಕ ಸಂಘಟನೆಯ ಜಿಲ್ಲಾ ಘಟಕ ಹಾಗೂ ಬಿಜೆಪಿ ನಗರ ರೈತ ಮೋರ್ಚಾದ ಸದಸ್ಯರು, ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನಾ ಪ್ರದರ್ಶನ ನಡೆಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ಸಜ್ಜನರ ಮಾತನಾಡಿ, ‘ನಗರದಲ್ಲಿ ನೀರಿನ ಸಮಸ್ಯೆ ತೀವ್ರವಾಗಿದೆ.  ಆದರೆ, ತುಂಗಭದ್ರಾ ಮತ್ತು ವರದಾ ನದಿಗಳು ತುಂಬಿ ಹರಿಯುತ್ತಿವೆ. ಈ ನದಿಗಳಿಂದ ನಗರಕ್ಕೆ ಹಾಗೂ ಹೆಗ್ಗೇರಿ ಕೆರೆಗೆ ನೀರು ಹರಿಸಲು ಪೈಪ್‌ಲೈನ್‌ಗಳಿವೆ. ಆದರೆ, ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹಾಗೂ ನಗರಸಭೆಯ ಇಚ್ಛಾಶಕ್ತಿಯ ಕೊರತೆಯಿಂದ ನೀರು ಹರಿಸುತ್ತಿಲ್ಲ’ ಎಂದು ದೂರಿದರು.

‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 4 ವರ್ಷಗಳು ಕಳೆದಿವೆ. ಆದರೆ, ಈ ತನಕ ನೀರಿನ ಸಮಸ್ಯೆ ಬಗೆಹರಿಸಲು ಸಾಧ್ಯವಾಗಿಲ್ಲ’ ಎಂದು ವಾಗ್ದಾಳಿ ನಡೆಸಿದರು. ‘ನಾಮಕಾವಸ್ತೆಗಾಗಿ ಕೆಲ ಹೊತ್ತು ನೀರು ಹರಿಸಿ, ಬಳಿಕ ನಿಲ್ಲಿಸಬಾರದು. ಒಂದೆರಡು ತಿಂಗಳ ಕಾಲ ನಿರಂತರವಾಗಿ ನೀರು ಹರಿಸಬೇಕು’ ಎಂದು ಆಗ್ರಹಿಸಿದ ಅವರು, ‘ವಾರದೊಳಗೆ ನೀರು ಹರಿಸದಿದ್ದರೆ,  ಹೊಸಮನಿ ಸಿದ್ದಪ್ಪ ವೃತ್ತದಲ್ಲೇ ಟೆಂಟ್‌ ಹಾಕಿ ಪ್ರತಿಭಟನೆ ಕುಳಿತುಕೊಳ್ಳುತ್ತೇವೆ’ ಎಂದರು.

ಮಾಜಿ ಶಾಸಕ ನೆಹರೂ ಓಲೇಕಾರ ಮಾತನಾಡಿ, ‘ನಾನು ಶಾಸಕನಾಗಿದ್ದಾಗ ಸರ್ಕಾರದಿಂದ ₹10 ಕೋಟಿ ಮಂಜೂರು ಮಾಡಿಸಿ, ವರದಾ ನದಿಯಿಂದ ಹೆಗ್ಗೇರಿ ಕೆರೆಗೆ ನೀರು ಸರಬರಾಜು ಮಾಡುವ ಪೈಪ್‌ಲೈನ್ ಹಾಕಿಸಲಾಗಿತ್ತು.  ಆದರೆ, ಆ ಬಳಿಕ ಶಾಸಕರಾದ ರುದ್ರಪ್ಪ ಲಮಾಣಿ ಈ ಪೈಪ್‌ಲೈನ್ ಬಳಸಿಕೊಂಡ ನೀರು ಹರಿಸಿಲ್ಲ. ಪಂಪ್‌ ಚಾಲು ಮಾಡಿಸಲೂ ಅವರಿಗೆ ಇಚ್ಛಾಶಕ್ತಿ ಇಲ್ಲ. ಇನ್ನು ₹10 ಕೋಟಿಯ ಯೋಜನೆ ತರಲು ಶತಮಾನ ಗಳೇ ಬೇಕಾಗಬಹುದು’ ಎಂದು ಲೇವಡಿ ಮಾಡಿದರು.

ಜಯ ಕರ್ನಾಟಕದ ಜಿಲ್ಲಾ ಘಟಕದ ಅಧ್ಯಕ್ಷ ಭರತ ಕಳಸೂರ ಮಾತನಾಡಿ, ‘ಹೆಗ್ಗೇರಿಗೆ ನದಿಯಿಂದ ನೀರು ಬಿಡು ವಂತೆ ಜುಲೈ 11ರಂದು ಜಯ ಕರ್ನಾಟಕ ಸಂಘಟನೆಯು ಜಿಲ್ಲಾಧಿಕಾರಿ ಅವರಿಗೆ ಮನವಿ ನೀಡಿತ್ತು.  ಮತ್ತೊಮ್ಮೆ ಎಚ್ಚರಿಕೆ ನೀಡುವ ನಿಟ್ಟಿನಲ್ಲಿ ಪ್ರತಿಭಟನೆ ಮಾಡಿದ್ದೇವೆ. ಈ ಬಾರಿ ನಿರ್ಲಕ್ಷ್ಯ ವಹಿಸಿದರೆ ಇದೇ 24ರಂದು ‘ಹಾವೇರಿ ಬಂದ್’ ಗೆ ಕರೆ ನೀಡಲಾಗುವುದು’ ಎಂದರು.

ಮನವಿ ಸ್ವೀಕರಿಸಿದ ಉಪವಿಭಾಗಾಧಿಕಾರಿ ಬಸವರಾಜ ಸೋಮಣ್ಣನವರ ಮಾತನಾಡಿ, ‘ಹೆಗ್ಗೇರಿಗೆ ನೀರು ಹರಿಸಲು ಆಡಳಿತವು ಸಿದ್ಧತೆ ನಡೆಸುತ್ತಿದೆ. ಇನ್ನೆರಡು ದಿನಗಳ ಒಳಗೆ ನೀರು ಹರಿಸಲಾಗುವುದು. ಅಲ್ಲದೇ, ತುಂಗಾ ಮೇಲ್ದಂಡೆ ಯೋಜನೆ ಕಾಲುವೆ ಕಾಮಗಾರಿ ಚಾಲ್ತಿಯಲ್ಲಿದೆ. ಕೆಲವು ರೈತರು ಪ್ರತಿರೋಧ ತೋರಿದ ಕಾರಣ ಹಿನ್ನಡೆಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹಾಗೂ ಶಾಸಕ ಬಸವರಾಜ ಶಿವಣ್ಣನವರ ರೈತರ ಜೊತೆ ಮಾತುಕತೆ ನಡೆಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ’ ಎಂದರು.

ಮುಖಂಡರಾದ ವಿಜಯಕುಮಾರ್ ಚಿನ್ನಿಕಟ್ಟಿ, ಸಿದ್ದರಾಜ ಕಲಕೋಟಿ,  ನಿರಂ ಜನ ಹೇರೂರ, ಶಿವಬಸವವನ್ನಳ್ಳಿ, ಮಂಜುಳಾ ಗುಂಡೇನಹಳ್ಳಿ, ಪರಮೇಶ್ವ ರಪ್ಪ ಮೇಗಳಮನಿ, ಈರಪ್ಪ ಲಮಾಣಿ, ಪ್ರಭು ಹಿಟ್ನಳ್ಳಿ, ಸುರೇಶ ಹೊಸ್ಮನಿ, ಹನುಮಂತಪ್ಪ ದೇವಗಿರಿ, ಕರಬಸಪ್ಪ ಹಳದೂರ, ವರುಣ ಆನವಟ್ಟಿ ಇದ್ದರು.

ಹೆಗ್ಗೇರಿಗೆ ನೀರು
ವರದಾ ನದಿಯಿಂದ ಹಗ್ಗೇರಿ ಕೆರೆಗೆ ಸೋಮವಾರದಿಂದಲೇ ನೀರು ಹರಿಸಲಾಗುತ್ತಿದೆ. ಬರದ ತೀವ್ರತೆಗೆ ನದಿ ಪಾತ್ರ ಬತ್ತಿ ಹೋದ ಪರಿಣಾಮ ಹರಿಸಿದ ನೀರು ಹೆಚ್ಚಿನ ಪ್ರಮಾಣದಲ್ಲಿ ಹೀರಿ ಹೋಗುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಕಚೇರಿ ತಿಳಿಸಿದೆ.

* * 

ಹೆಗ್ಗೇರಿ ಕೆರೆಗೆ ಸತತ ನೀರು ಹರಿಸಬೇಕು. ಈ ಬಗ್ಗೆ ಒಂದು ವಾರ ಕಾದು ನೋಡುತ್ತೇವೆ. ಕೊಟ್ಟ ಮಾತಿಗೆ ಆಡಳಿತ ವಿಫಲವಾದರೆ, ಉಗ್ರ ಪ್ರತಿಭಟನೆ ನಡೆಸುತ್ತೇವೆ
ಶಿವರಾಜ ಸಜ್ಜನರ
ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT