ಸೋಮವಾರ, ಡಿಸೆಂಬರ್ 16, 2019
18 °C

ಪಾಲಿಕೆ ಅಂಗಳದಲ್ಲಿ ರಾಜಕಾರಣದ ರಂಗು!

ಡಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

ಪಾಲಿಕೆ ಅಂಗಳದಲ್ಲಿ ರಾಜಕಾರಣದ ರಂಗು!

ವಿಜಯಪುರ: ಮಹಾನಗರ ಪಾಲಿಕೆಯ ಮೂರನೇ ಅವಧಿಯ ಮೇಯರ್‌–ಉಪ ಮೇಯರ್‌ ಆಡಳಿತದ ಅವಧಿ ಇದೇ 29ಕ್ಕೆ ಪೂರ್ಣಗೊಳ್ಳಲಿದೆ. ಕಾಂಗ್ರೆಸ್‌ನ ಅನೀಸ್‌ ಫಾತಿಮಾ ಬಕ್ಷಿ, ಬಿಜೆಪಿಯ ಗೋಪಾಲ ಘಟಕಾಂಬಳೆ ಆಡಳಿತದ ಕೊನೆ ದಿನಗಳ ದಿನಗಣನೆ ನಡೆದಿದ್ದು, ಪಾಲಿಕೆ ಸದಸ್ಯರ ಚಿತ್ತ ನೂತನ ಮೇಯರ್‌– ಉಪ ಮೇಯರ್‌ ಚುನಾವಣೆಯತ್ತ ಹರಿದಿದೆ.

ಮೇಯರ್‌ ಸ್ಥಾನ ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿದೆ. ಬಿಜೆಪಿಯಿಂದ ಆಯ್ಕೆಯಾಗಿ, ಕಾಂಗ್ರೆಸ್‌ಗೆ ಸೇರ್ಪಡೆಯಾಗಿ ಎರಡನೇ ಅವಧಿಯ ಮೇಯರ್‌ ಆಗಿದ್ದ ಸಂಗೀತಾ ಪೋಳ ಒಬ್ಬರೇ ಪಾಲಿಕೆಯಲ್ಲಿ ಪರಿಶಿಷ್ಟ ಜಾತಿಯ ಮಹಿಳಾ ಸದಸ್ಯೆ.

ಮೇಯರ್‌ ಸ್ಥಾನಕ್ಕೆ ಪೈಪೋಟಿಯೇ ಇಲ್ಲದಂತಾಗಿದೆ. ನಿರೀಕ್ಷೆಯಂತೆ ನಡೆದರೆ ಅನಾಯಾಸವಾಗಿ ಸಂಗೀತಾ ಪೋಳ ಮತ್ತೊಂದು ಅವಧಿಗೆ ಮೇಯರ್‌ ಆಗಲಿದ್ದಾರೆ. ಆದರೆ ಮೇಯರ್‌ ಮೀಸಲಾತಿ ಪ್ರಶ್ನಿಸಿ, ಸದಸ್ಯರೊಬ್ಬರು ನ್ಯಾಯಾಲಯದ ಮೊರೆ ಹೊಕ್ಕಿದ್ದು, ಕುತೂಹಲ ಹೆಚ್ಚಿಸಿದೆ.

ಉಪ ಮೇಯರ್‌ ಸ್ಥಾನ ಹಿಂದುಳಿದ ವರ್ಗ ಬ ( 2 ಎ) ಮೀಸಲಿದ್ದು, ಆಕಾಂಕ್ಷಿಗಳ ಸಂಖ್ಯೆ ಹೆಚ್ಚಿದೆ. ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಪಕ್ಷಗಳಲ್ಲಿ ತಲಾ ಎರಡ್ಮೂರು ಆಕಾಂಕ್ಷಿಗಳಿದ್ದು, ವರಿಷ್ಠರಿಗೆ ತಲೆನೋವಾಗಿ ಕಾಡಲಾರಂಭಿಸಿದೆ.

ಪಾಲಿಕೆಯ ಮುಸ್ಲಿಂ ಸದಸ್ಯರು, ಗಾಣಿಗೇರ ಸಮುದಾಯದ ಸದಸ್ಯರು ಉಪ ಮೇಯರ್‌ ಹುದ್ದೆಗೆ ಅರ್ಹತೆ ಹೊಂದಿದ್ದು, ಪೈಪೋಟಿ ಬಿರುಸುಗೊಂಡಿದೆ. ಮೊದಲ ಅವಧಿಯಲ್ಲಿ ಸಜ್ಜಾದೆ ಪೀರಾ ಮುಶ್ರೀಫ್‌, ಮೂರನೇ ಅವಧಿಯಲ್ಲಿ ಅನೀಸ್ ಫಾತಿಮಾ ಬಕ್ಷಿ ಮೇಯರ್‌ ಆಗಿದ್ದು, ಎರಡು ಬಾರಿ ಮುಸ್ಲಿಂ ಸಮಾಜಕ್ಕೆ ಅವಕಾಶ ದೊರೆತಿದೆ.

ಇದೀಗ 2 ಎ ಮೀಸಲಾತಿ ಉಪ ಮೇಯರ್‌ ಸ್ಥಾನಕ್ಕಿದ್ದು, ಲಿಂಗಾಯತ ಸಮುದಾಯಕ್ಕೆ ನೀಡಬೇಕು ಎಂಬ ಕೂಗು ನಗರದ ಪ್ರಮುಖರು, ರಾಜಕೀಯ ನೇತಾರರ ವಲಯದಲ್ಲಿ ಕೇಳಿ ಬಂದಿದೆ. ಇದಕ್ಕೆ ಪೂರಕವಾಗಿ ಕೆಲ ಸದಸ್ಯರು ಈಗಾಗಲೇ ತೆರಮರೆಯ ಕಸರತ್ತು ಆರಂಭಿಸಿದ್ದಾರೆ. ಪಕ್ಷೇತರ ಸದಸ್ಯರು ಉಪ ಮೇಯರ್‌ ಪಟ್ಟಕ್ಕಾಗಿ ತಂತ್ರಗಾರಿಕೆ ನಡೆಸಿದ್ದು, ಯಾರಿಗೆ ಅದೃಷ್ಟ ಒಲಿಯಲಿದೆ ಎಂಬುದು ಕುತೂಹಲ ಮೂಡಿಸಿದೆ.

ಈ ಹಿಂದಿನ ಮೂರು ಮೇಯರ್ ಆಯ್ಕೆ ಸಂದರ್ಭ ಚಾಣಕ್ಷ ನಡೆಯಿಂದ ಕಾಂಗ್ರೆಸ್‌ ಮೇಲುಗೈ ಸಾಧಿಸುವಂತೆ ನೋಡಿಕೊಂಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ನಾಲ್ಕನೇ ಬಾರಿಗೆ ಯಾವ ದಾಳ ಉರುಳಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. ಜೆಡಿಎಸ್‌ನಲ್ಲಿರುವ ಬಸನಗೌಡ ಪಾಟೀಲ ಯತ್ನಾಳರ ಬೆಂಬಲಿಗರು, ಬಿಜೆಪಿ ಸದಸ್ಯರು ಯಾವ ನಿರ್ಧಾರಕ್ಕೆ ಬದ್ಧರಾಗಲಿದ್ದಾರೆ ಎಂಬುದು ಪದೇ ಪದೇ ಕಾಡುವ ಪ್ರಶ್ನೆಯಾಗಿದೆ.

ವರದಿ ಸಲ್ಲಿಕೆ: ‘ಮಹಾನಗರ ಪಾಲಿಕೆ ಆಯುಕ್ತರು 15 ದಿನಗಳ ಹಿಂದೆಯೇ ಹಾಲಿ ಮೇಯರ್‌ ಅವಧಿ ಪೂರ್ಣ ಗೊಳ್ಳಲಿರುವ ಕುರಿತಂತೆ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಿಗೆ ವರದಿ ಸಲ್ಲಿಸಿದ್ದು, ಯಾವ ಕ್ಷಣದಲ್ಲಾದರೂ ಮೇಯರ್‌–ಉಪ ಮೇಯರ್‌ ಚುನಾವಣೆಯ ವೇಳಾಪಟ್ಟಿ ಹೊರ ಬೀಳುವ ನಿರೀಕ್ಷೆಯಿದೆ. ‘ನಾಗರ ಪಂಚಮಿ ಆಸುಪಾಸು ಚುನಾವಣಾ ದಿನಾಂಕ ಘೋಷಣೆ ಯಾಗಲಿದೆ’ ಎಂದು ಪಾಲಿಕೆ ಆಡಳಿತದ ಮೂಲಗಳು ತಿಳಿಸಿವೆ.

* * 

ಜುಲೈ 29ಕ್ಕೆ ಹಾಲಿ ಮೇಯರ್‌–ಉಪ ಮೇಯರ್ ಅಧಿಕಾರದ ಅವಧಿ ಪೂರ್ಣಗೊಳ್ಳಲಿದೆ. ಪ್ರಾದೇಶಿಕ ಆಯುಕ್ತರಿಗೆ 15 ದಿನಗಳ ಹಿಂದೆಯೇ ವರದಿ ನೀಡಲಾಗಿದೆ

ಶ್ರೀಹರ್ಷ ಶೆಟ್ಟಿ

ಪಾಲಿಕೆ ಆಯುಕ್ತ

ಪ್ರತಿಕ್ರಿಯಿಸಿ (+)