ಶುಕ್ರವಾರ, ಡಿಸೆಂಬರ್ 13, 2019
20 °C

ವಾಹನ ಸವಾರರಿಗೆ ಮುಳ್ಳಾಗಿರುವ ಮುಲ್ಲಾ ಓಣಿ!

ಗುರು ಪಿ.ಎಸ್. Updated:

ಅಕ್ಷರ ಗಾತ್ರ : | |

ವಾಹನ ಸವಾರರಿಗೆ ಮುಳ್ಳಾಗಿರುವ ಮುಲ್ಲಾ ಓಣಿ!

ಹುಬ್ಬಳ್ಳಿ: ಪಿ.ಬಿ. ರಸ್ತೆಯಷ್ಟೇ ವಾಹನ ಮತ್ತು ಜನಸಂಚಾರವಿರುವ ರಸ್ತೆ ಈ ಮುಲ್ಲಾ ಓಣಿ. ನ್ಯೂ ಇಂಗ್ಲಿಷ್‌ ಮೀಡಿಯಂ ಶಾಲೆಯ ಮಾರ್ಗದಿಂದ ಕಾಳಮ್ಮನ ಅಗಸಿ ಮೂಲಕ ನಿತ್ಯ ಸಾವಿ­ರಾರು ವಾಹನಗಳು ಇಲ್ಲಿ ಸಂಚರಿ­ಸುತ್ತವೆ. ಆದರೆ, ಇಲ್ಲಿರುವ ಅವೈಜ್ಞಾನಿಕ ರಸ್ತೆ ಉಬ್ಬುಗಳು ವಾಹನ ಚಾಲಕರು ಮತ್ತು ಸವಾರರಿಗೆ ಸವಾಲಾಗಿ ಪರಿಣಮಿಸಿವೆ.

‘ಮುಲ್ಲಾ ಓಣಿಯ ಜಾಮಿಯಾ ಮಸೀದಿ ಎದುರು ಇರುವ ಉಬ್ಬು ತೀರಾ ಎತ್ತರವಾಗಿದೆ. ನಿತ್ಯ ಸವಾರರು ಇಲ್ಲಿ ಬಿದ್ದು ಗಾಯಗೊಳ್ಳುತ್ತಾರೆ. ಪಾಲಿಕೆ ಸದಸ್ಯರಿಗೆ ಈ ಬಗ್ಗೆ ಮನವಿ ಕೊಟ್ಟರೂ ಪ್ರಯೋಜನವಾಗಿಲ್ಲ’ ಎಂದು ನಿವಾಸಿ ನಜೀರ್‌ ಅಹ್ಮದ್‌ ಹೇಳಿದರು.

‘ನ್ಯೂ ಇಂಗ್ಲಿಷ್‌ ಮೀಡಿಯಂ ಶಾಲೆಯ ಮಾರ್ಗದಿಂದ ಇದೇ ರಸ್ತೆಯ ಮೂಲಕ ದುರ್ಗದ ಬೈಲ್‌, ಶಾ ಬಜಾರ್‌, ಸಿಬಿಟಿಗೆ ಹೋಗಬಹುದು. ಆದ್ದರಿಂದ ಹೆಚ್ಚು ಜನ ಇದೇ ಮಾರ್ಗವನ್ನು ಆಯ್ಕೆ ಮಾಡಿಕೊಳ್ಳು­ತ್ತಾರೆ. ಮುಂದೆ ನೆಹರೂ ಕಾಲೇಜು, ಶಾಂತಿನಿಕೇತನ ಕಾಲೇಜು ಇರುವುದ­ರಿಂದಲೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತಾರೆ. ಆದರೆ, ರಸ್ತೆ ಉಬ್ಬುಗಳು ಇರುವುದರಿಂದ ಸಂಚಾರಕ್ಕೆ ತುಂಬಾ ತೊಂದರೆ­ಯಾಗು­ತ್ತದೆ’ ಎಂದು ಅವರು ಹೇಳಿದರು.

ಸಂಚಾರ ದಟ್ಟಣೆ: ‘ದುರ್ಗದ ಬೈಲ್‌, ಅಕ್ಕಿಹೊಂಡದಂತಹ ಮಾರುಕಟ್ಟೆಗಳು ಹತ್ತಿರದಲ್ಲಿಯೇ ಇರುವುದರಿಂದ ಸರಕು–ಸಾಗಣೆ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತವೆ. ಹೆಚ್ಚು ಸರಕು ಹೊಂದಿರುವ ವಾಹನಗಳಿಗೆ ಈ ಉಬ್ಬುಗಳನ್ನು ದಾಟುವುದು ಕಷ್ಟ­ವಾಗು­ತ್ತದೆ. ಎಕ್ಸ್‌ಲೇಟರ್‌ ನಿಧಾನ ಮಾಡಿದಾಗ ಕೆಲವು ಬೈಕ್‌ಗಳು ನಿಂತುಬಿಡುತ್ತವೆ. ಸಂಚಾರದಟ್ಟಣೆ ಉಂಟಾಗುತ್ತದೆ’ ಎಂದು ಶಿವಕುಮಾರ ಹಿರೇಮಠ ಹೇಳಿದರು. 

‘ರಸ್ತೆಯಲ್ಲಿ ನಿರಂತರವಾಗಿ ಅಪ­ಘಾತ­ಗಳಾಗುತ್ತಿದ್ದರೂ ಸಂಬಂಧ­ಪಟ್ಟವರು ಇತ್ತ ಗಮನ ಹರಿಸುತ್ತಿಲ್ಲ. ರಸ್ತೆಉಬ್ಬುಗಳ ಎತ್ತರವನ್ನು ಕಡಿಮೆ ಮಾಡಿ, ವೈಜ್ಞಾನಿಕವಾಗಿ ನಿರ್ಮಿಸಿದರೆ ಅನುಕೂಲವಾಗುತ್ತದೆ’ ಎಂದರು.

ಅಂಗನವಾಡಿ ಇದೆ: ‘ಜಾಮಿಯಾ ಮಸೀದಿ ಪಕ್ಕದಲ್ಲಿಯೇ ಅಂಗನವಾಡಿ ಇದೆ. ಚಿಕ್ಕಮಕ್ಕಳು ಓಡಾಡುತ್ತಾರೆ. ಹೀಗಾಗಿ ಇಲ್ಲಿ ರಸ್ತೆ ಉಬ್ಬು ಇರಲೇಬೇಕು’ ಎಂದು ಹೇಳುತ್ತಾರೆ ಉಮಾ ಕಟ್ಟಿಮನಿ. ‘ಬೆಳಿಗ್ಗೆ ಮತ್ತು ಸಂಜೆಯ ವೇಳೆ ಯುವಕರು ವೇಗವಾಗಿ ಬೈಕ್‌ಗಳನ್ನು ಓಡಿಸುತ್ತಾರೆ. ರಸ್ತೆಯಲ್ಲಿ ಓಡಾಡು­ವುದಕ್ಕೆ ದೊಡ್ಡವರಿಗೇ ಹೆದರಿಕೆ­ಯಾಗು­ತ್ತದೆ. ರಸ್ತೆ ಉಬ್ಬು ಇರಬೇಕು. ಆದರೆ, ಅದರ ಎತ್ತರವನ್ನು ಕಡಿಮೆ ಮಾಡ­ಬೇಕು’ ಎಂದು ಅವರು ಹೇಳಿದರು.

‘ಅವೈಜ್ಞಾನಿಕ ರಸ್ತೆ ಉಬ್ಬುಗಳ ಬಗ್ಗೆ ಮತ್ತು ಒಳಚರಂಡಿ ಅವ್ಯವಸ್ಥೆ ಬಗ್ಗೆ ಪಾಲಿಕೆ ಸದಸ್ಯರಿಗೆ ಹಲವು ಬಾರಿ ಮನವಿ ಮಾಡಿದ್ದೇವೆ. ಆದರೆ, ಅವರು ಗಮನ ಹರಿಸುತ್ತಿಲ್ಲ’ ಎಂದು ಅಬ್ದುಲ್‌ ರಜಾಕ್‌ ಪಟೇಲ್‌ ಅಸಮಾಧಾನ ವ್ಯಕ್ತಪಡಿಸಿದರು.

ಹೇಳಿದರೂ ಕೇಳುವುದಿಲ್ಲ: ಕಮಲಾಕ್ಷಿ

‘ನಾನೂ ನಿತ್ಯ ಇದೇ ರಸ್ತೆಯಲ್ಲಿ ಓಡಾಡು­ತ್ತೇನೆ. ಎತ್ತರದ ರಸ್ತೆ ಉಬ್ಬುಗಳಿರುವುದರಿಂದ ಹಲವರು ಬಿದ್ದಿರುವುದನ್ನು ಕೇಳಿದ್ದೇನೆ. ಎರಡು–ಮೂರು ಬಾರಿ ನನ್ನ ಕಾರೇ ರಸ್ತೆ ಉಬ್ಬಿಗೆ ತಗುಲಿ ನಿಂತಿದೆ’ ಎನ್ನುತ್ತಾರೆ ಪಾಲಿಕೆ ಸದಸ್ಯೆ ಕಮಲಾಕ್ಷಿ ಸಜ್ಜನರ.

‘ಮುಲ್ಲಾ ಓಣಿಯ ನಿವಾಸಿಗಳೇ ಈ ಹಂಪ್‌ಗಳನ್ನು ಹಾಕಿಕೊಂಡಿದ್ದಾರೆ. ಇಷ್ಟು ಎತ್ತರದ ಉಬ್ಬುಗಳಿರುವುದು ಸರಿಯಲ್ಲ, ಅವುಗಳನ್ನು ತೆರವುಗೊಳಿಸಿ ಎಂದು ಹೇಳಿದರೂ ಕೇಳುವುದಿಲ್ಲ. ಹಟಕ್ಕೆ ಬಿದ್ದು ಹಾಕಿಕೊಳ್ಳುತ್ತಾರೆ’ ಎಂದರು.

‘ಸುಪ್ರೀಂಕೋರ್ಟ್‌ ಆದೇಶವಿದೆ. ರಸ್ತೆಉಬ್ಬು ವೈಜ್ಞಾನಿಕವಾಗಿ ಇರಬೇಕು ಎಂದು ಹೇಳಿದರೂ ಗಮನ ನೀಡುವುದಿಲ್ಲ.  ರಸ್ತೆ ಉಬ್ಬುಗಳನ್ನು ತೆರವುಗೊಳಿಸಲು ಕೂಡಲೇ ಅಧಿಕಾರಿಗಳಿಗೆ ಸೂಚಿಸುತ್ತೇನೆ’ ಎಂದು ಸಜ್ಜನರ ಹೇಳಿದರು.

ಅಪಘಾತ ಸಾಮಾನ್ಯ

ದಿನಕ್ಕೆ ಇಬ್ಬರಾದರೂ ಈ ರಸ್ತೆಯಲ್ಲಿ ಬೀಳುತ್ತಾರೆ. ರಸ್ತೆ ಉಬ್ಬು ತೀರಾ ಎತ್ತರವಾಗಿರು­ವುದರಿಂದ ಗಾಡಿ ಬೀಳುವುದು ಸಾಮಾನ್ಯ ಎನ್ನುವಂತಾಗಿದೆ. ರಸ್ತೆ ಉಬ್ಬನ್ನು ತೆರವುಗೊಳಿಸಬೇಕು

ನಜೀರ್‌ ಅಹ್ಮದ್‌, ಸ್ಥಳೀಯ ನಿವಾಸಿ

ಸಂಚಾರ ದಟ್ಟಣೆ ಕಿರಿಕಿರಿ

ಹೆಚ್ಚು ಲಗೇಜ್‌ ಹೊತ್ತುಕೊಂಡು ಬರುವ ವಾಹನಗಳಿಗೆ ಈ ರಸ್ತೆ ಉಬ್ಬು ದಾಟಲು ಕಷ್ಟವಾಗುತ್ತದೆ. ಒಂದು ವಾಹನ ಐದರಿಂದ ಹತ್ತು ನಿಮಿಷ ನಿಲ್ಲುವುದರಿಂದ ಸಂಚಾರ ದಟ್ಟಣೆ ಉಂಟಾಗುತ್ತಿದೆ

ರಫೀಕ್‌ ಲಕ್ಕುಂಡಿ, ವಾಹನ ಸವಾರ

ಬಿದ್ದು ಗಾಯಗೊಂಡಿದ್ದೇನೆ

ಕಳೆದ ರಂಜಾನ್‌ ತಿಂಗಳಲ್ಲಿ ಇದೇ ರಸ್ತೆಯಲ್ಲಿ ಬಿದ್ದು ಗಾಯ­ಗೊಂಡಿದ್ದೇನೆ. ಮುಂದೆ ಹೋಗು­ತ್ತಿದ್ದ ಕಾರು ಚಾಲಕ ರಸ್ತೆ ಉಬ್ಬಿನ ಕಾರಣ ದಿಢೀರ್‌ ಬ್ರೇಕ್‌ ಹಾಕಿದ್ದ­ರಿಂದ ಬೈಕ್‌ನಲ್ಲಿದ್ದ ನಾನು ಡಿಕ್ಕಿ ಹೊಡೆದು ಬಿದ್ದಿದ್ದೆ

ಮಾಬುಸಾಬ್‌ ಗುಡಗೇರಿ, ವಾಹನ ಸವಾರ 

ವೈಜ್ಞಾನಿಕ ರಸ್ತೆ ಉಬ್ಬು ಬೇಕು

ಈ ರಸ್ತೆಯಲ್ಲಿ ಅಂಗನವಾಡಿ ಇದೆ. ಅಕ್ಕ–ಪಕ್ಕ ಕಾಲೇಜುಗಳಿ­ರುವುದರಿಂದ ವಿದ್ಯಾರ್ಥಿಗಳು ಹೆಚ್ಚು ಓಡಾಡುತ್ತಾರೆ. ಇಲ್ಲಿ ರಸ್ತೆ ಉಬ್ಬು ಇರಲೇಬೇಕು, ಆದರೆ ಅದು ವೈಜ್ಞಾನಿಕವಾಗಿರಬೇಕು

ಮೈನುದ್ದೀನ್‌ ಮೈನಾಪುರ, ಸ್ಥಳೀಯ ನಿವಾಸಿ

ತಿಂಗಳಿಗೆ 20 ಅಪಘಾತ !

ಈ ರಸ್ತೆಯಲ್ಲಿ ತಿಂಗಳಿಗೆ 20 ಅಪಘಾತ­ಗಳಾಗುತ್ತವೆ. ಜನರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವುದೇ ಕೆಲಸವಾಗಿದೆ. ಜನನಿಬಿಡ ರಸ್ತೆಯಲ್ಲಿ ನಾಲ್ಕು ಉಬ್ಬುಗಳಿರುವುದು ಸರಿಯಲ್ಲ

ಜಲೀಲ್‌ ಅಹ್ಮದ್‌ ಜವಳಿ, ಸ್ಥಳೀಯ ನಿವಾಸಿ

ಪ್ರತಿಕ್ರಿಯಿಸಿ (+)