ಶುಕ್ರವಾರ, ಡಿಸೆಂಬರ್ 6, 2019
17 °C
ವಿತರಣೆಯಾಗದ ಸಮವಸ್ತ್ರ, ಶೂ, ಬೈಸಿಕಲ್‌; ಇನ್ನೂ ಮುಗಿಯದ ಬೈಸಿಕಲ್‌ ಜೋಡಣೆ ಪ್ರಕ್ರಿಯೆ

ಮಕ್ಕಳಿಗೆ ಪೂರ್ಣ ತಲುಪದ ಪಠ್ಯ ಸಾಮಗ್ರಿ

ಅಮಿತ್ ಎಂ.ಎಸ್. Updated:

ಅಕ್ಷರ ಗಾತ್ರ : | |

ಮಕ್ಕಳಿಗೆ ಪೂರ್ಣ ತಲುಪದ ಪಠ್ಯ ಸಾಮಗ್ರಿ

ಚಾಮರಾಜನಗರ: ಶಾಲೆಗಳು ಆರಂಭವಾಗಿ ಎರಡು ತಿಂಗಳಾಗಿದ್ದರೂ, ಜಿಲ್ಲೆಯ ಪ್ರಾಥಮಿಕ ಮತ್ತು ಪ್ರೌಢಶಾಲೆ ಗಳ ವಿದ್ಯಾರ್ಥಿಗಳಿಗೆ ಅಗತ್ಯ ಪ್ರಮಾಣದ ಪಠ್ಯಪುಸ್ತಕ, ಸಮವಸ್ತ್ರ, ಶೂ ಮತ್ತು ಬೈಸಿಕಲ್‌ಗಳು ಇನ್ನೂ ಪೂರೈಕೆಯಾಗಿಲ್ಲ.

ಸರಬರಾಜಾದ ಪಠ್ಯಪುಸ್ತಕ ಮತ್ತು ಸಮವಸ್ತ್ರಗಳಲ್ಲಿ ಹೆಚ್ಚಿನ ಪಾಲು ವಿದ್ಯಾರ್ಥಿಗಳಿಗೆ ಹಂಚಿಕೆಯಾಗಿದೆ.

ಬರುತ್ತಲೇ ಇವೆ ಪುಸ್ತಕ: ಪ್ರಸಕ್ತ ವರ್ಷ 1 ರಿಂದ 10ನೇ ತರಗತಿಯವರೆಗಿನ ಪಠ್ಯಕ್ರಮ ಸಂಪೂರ್ಣ ಬದಲಾವಣೆಯಾ ಗಿರುವುದರಿಂದ ಮುದ್ರಣ ಕಾರ್ಯ ವಿಳಂಬವಾಗಿದೆ.

ಹೀಗಾಗಿ ಹಂತಹಂತ ವಾಗಿ ಶಾಲೆಗಳಿಗೆ ಪಠ್ಯಪುಸ್ತಕಗಳು ಸರಬರಾಜು ಆಗುತ್ತಿವೆ. ಜಿಲ್ಲೆಗೆ ಸುಮಾರು ಶೇ 14ರಷ್ಟು ಪುಸ್ತಕಗಳು ಪೂರೈಕೆಯಾಗಬೇಕಿವೆ.

10ನೆಯ ತರಗತಿಗೆ ಮಾತ್ರ ಎಲ್ಲ ವಿಷಯಗಳ ಪುಸ್ತಕಗಳು ಪೂರೈಕೆ ಯಾಗಿವೆ. ಈ ತಿಂಗಳ ಅಂತ್ಯದೊಳಗೆ ಎಲ್ಲ ಪಠ್ಯಪುಸ್ತಕಗಳೂ ಲಭ್ಯವಾಗಲಿವೆ ಎನ್ನುತ್ತಾರೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು.

ಪಠ್ಯಕ್ರಮ ಬದಲಿಸಿದ್ದರೂ, ಹಿಂದಿನ ವರ್ಷದ ಕೆಲವು ಅಧ್ಯಾಯಗಳನ್ನು ಉಳಿಸಿಕೊಳ್ಳಲಾಗಿದೆ.

ಇವುಗಳಿಗೆ ಹಳೆಯ ಪುಸ್ತಕಗಳನ್ನೇ ಬಳಸಿಕೊಳ್ಳ ಲಾಗುತ್ತಿದೆ. ಅಲ್ಲದೆ, ಎಲ್ಲ ಪಠ್ಯಗಳನ್ನೂ ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವುದರಿಂದ ಬೋಧಿಸಲು ಶಿಕ್ಷಕರಿಗೆ ತೊಂದರೆ ಯಾಗುತ್ತಿಲ್ಲ ಎನ್ನುತ್ತಾರೆ ಅವರು.

ಉಚಿತವಾಗಿ ನೀಡಲಾಗುವ ಪುಸ್ತಕಗಳು ಶೇ 89ರಷ್ಟು ಮತ್ತು ಮಾರಾಟಕ್ಕಾಗಿ ಶೇ 78ರಷ್ಟು  ಪುಸ್ತಕಗಳು ಸರಬರಾಜಾಗಿವೆ.

ಸಮವಸ್ತ್ರದ ಸಮಸ್ಯೆ: ಸಮವಸ್ತ್ರಗಳ ಅಳತೆ ಸಮರ್ಪಕವಾಗಿಲ್ಲ. ಚಿಕ್ಕ ಅಳತೆಯ ಬಟ್ಟೆಗಳನ್ನು ನೀಡಲಾಗಿದೆ ಎಂಬ ದೂರುಗಳು ಕೇಳಿಬಂದಿವೆ. ರಾಜ್ಯದ ಎಲ್ಲ ಶಾಲೆಗಳಿಗೆ ಸಮವಸ್ತ್ರಗಳನ್ನು ಪೂರೈಸುವ ಒಪ್ಪಂದವನ್ನು ರಾಜಸ್ಥಾನದ ಕಂಪೆನಿಯೊಂದು ಪಡೆದುಕೊಂಡಿದೆ.

1 ರಿಂದ 4, 5 ರಿಂದ 7 ಮತ್ತು 8–10ನೇ ತರಗತಿಗೆ ನಿರ್ದಿಷ್ಟ ಅಳತೆಗಳನ್ನು ನಿಗದಿಪಡಿಸಲಾಗಿದೆ.

ಇಲ್ಲಿ ಪ್ಯಾಕಿಂಗ್ ಅಥವಾ ಪೂರೈಕೆ ಸಮಯದಲ್ಲಿ ಗೊಂದಲ ಉಂಟಾಗಿ ಅಸಹಜ ಅಳತೆಯ ಸಮವಸ್ತ್ರಗಳು ವಿತರಣೆ ಆಗಿರಬಹುದು ಎಂದು ಅಧಿಕಾರಿಗಳು ವಿವರಿಸಿದರು.

ಎರಡನೆಯ ಹಂತದ ಸಮವಸ್ತ್ರಕ್ಕೆ ಪ್ರತಿ ವಿದ್ಯಾರ್ಥಿಗಾಗಿ ₹200 ಹಣ ನೀಡಲಾಗುತ್ತಿದೆ. ಈ ದರದಲ್ಲಿ ಬಟ್ಟೆ ಖರೀದಿಸಿ ಹೊಲಿಸಿ ಕೊಡುವುದು ಸಾಧ್ಯ ವಾಗುವುದಿಲ್ಲ ಎನ್ನುವುದು ಶಾಲೆಯ ಮುಖ್ಯ ಶಿಕ್ಷಕರು ಮತ್ತು ಎಸ್‌ಡಿಎಂಸಿ ಸಮಿತಿಯ ಅಳಲು.

ಶೂ ವಿತರಣೆಯಲ್ಲಿಯೂ ಗೋಳು: ಮಕ್ಕಳಿಗೆ ಅಗತ್ಯವಾದ ಶೂ ಮತ್ತು ಸಾಕ್ಸ್‌ ಪೂರೈಸುವ ಹೊಣೆಯನ್ನು ಸರ್ಕಾರ ಆಯಾ ಶಾಲೆಗಳಿಗೇ ನೀಡಿದೆ. ಕಳಪೆ ಗುಣಮಟ್ಟದ ಶೂಗಳನ್ನು ವಿತರಿಸ ಬಾರದು ಎಂದು ಕಂಪೆನಿಗಳಿಂದಲೇ ಖರೀದಿಸುವಂತೆ ಷರತ್ತು ಹಾಕಲಾಗಿದೆ.

ಕೆಲವು ಶಾಲೆಗಳಿಗೆ ಅನುದಾನ ತಲುಪಿಲ್ಲ. ಇನ್ನು ಕೆಲವು ಶಾಲೆಗಳಿಗೆ ಹೆಚ್ಚುವರಿ ಮೊತ್ತ ಬಿಡುಗಡೆಯಾಗಿದೆ. ಬದನಗುಪ್ಪೆ ಶಾಲೆ ಖಾತೆಗೆ ₹75,000 ಎರಡು ಬಾರಿ ಜಮೆ ಯಾಗಿದೆ.

ವಿತರಣೆಯಾಗದ ಬೈಸಿಕಲ್: ಸರ್ಕಾರದಿಂದ ನೀಡಲಾಗುವ ಉಚಿತ ಬೈಸಿಕಲ್ ಯಳಂದೂರು ತಾಲ್ಲೂಕು ಹೊರತು ಪಡಿಸಿ ಜಿಲ್ಲೆಯ ಯಾವ ಭಾಗದಲ್ಲಿಯೂ ವಿತರಣೆಯಾಗಿಲ್ಲ.

ಹನೂರು ಮತ್ತು ಚಾಮರಾಜನಗರ ತಾಲ್ಲೂಕುಗಳಲ್ಲಿ ಕೆಲವು ಬೈಸಿಕಲ್‌ಗಳು ಜೋಡಣೆಯಾಗಿವೆ. ಗುಂಡ್ಲುಪೇಟೆ ಮತ್ತು ಕೊಳ್ಳೇಗಾಲಗಳಲ್ಲಿ ಇನ್ನು ಜೋಡಣೆ ಕಾರ್ಯವೇ ಆರಂಭವಾಗಿಲ್ಲ. ಇದನ್ನು ತಮಿಳುನಾಡಿನ ಕಂಪೆನಿಗೆ ಗುತ್ತಿಗೆ ಪಡೆದಿದ್ದು, ಸೈಕಲ್ ಬಿಡಿಭಾಗಗಳ ಪೂರೈಕೆ ಮತ್ತು ಜೋಡಣೆ ಎರಡನ್ನೂ ಅಲ್ಲಿನವರೇ ನಿರ್ವಹಿಸುತ್ತಿದ್ದಾರೆ.

**

ಮಾದರಿ ತರಿಸಿಕೊಂಡ ಇಲಾಖೆ

ಚಾಮರಾಜನಗರ:
ಸಮವಸ್ತ್ರಗಳ ಗುಣಮಟ್ಟ ಚೆನ್ನಾಗಿಲ್ಲ. ಜಿಲ್ಲೆಯ ಕೊರಟಗೆರೆಯಲ್ಲಿ ತೆಳುವಾದ ಸ್ಕರ್ಟ್‌ ಬಟ್ಟೆ ನೀಡಲಾಗಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿತ್ತು.

ಹೀಗಾಗಿ, ಪ್ರತಿ ತಾಲ್ಲೂಕಿಗೆ ಸರಬರಾಜು ಆಗಿರುವ ಬಟ್ಟೆಗಳಲ್ಲಿ ಅಂಗಿ ಮತ್ತು ಸ್ಕರ್ಟ್‌ನ ತಲಾ 30 ಹಾಗೂ ಪ್ಯಾಂಟ್‌ನ 40 ಮಾದರಿ ರವಾನಿಸುವಂತೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರು ಸೂಚನೆ ನೀಡಿದ್ದರು.

ಅದರಂತೆ ಪ್ರತಿ ತಾಲ್ಲೂಕಿನಿಂದ 100 ಸಮವಸ್ತ್ರ ಮಾದರಿಗಳನ್ನು ಅವರ ಪರಿಶೀಲನೆಗೆ ಕಳುಹಿಸಲಾಗಿದೆ.

**

ಶೂ, ಸಮವಸ್ತ್ರ ಮತ್ತು ಬೈಸಿಕಲ್ ವಿತರಣೆಗಳಿಗೆ ಸಂಬಂಧಿಸಿ ಸಮಸ್ಯೆಗಳು ಇರುವುದು ನಿಜ. ಸರ್ಕಾರ ಕೆಲ ಜವಾಬ್ದಾರಿಗಳನ್ನು ನೇರವಾಗಿ ಶಾಲೆಗಳಿಗೇ ನೀಡಿದೆ

-ಮಂಜುಳಾ, ಉಪನಿರ್ದೇಶಕಿ, ಶಿಕ್ಷಣ ಇಲಾಖೆ

ಪ್ರತಿಕ್ರಿಯಿಸಿ (+)