ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನು ಪ್ರತಿ ತಿಂಗಳು ‘ಬಸ್‌ ಡೇ’

Last Updated 18 ಜುಲೈ 2017, 7:08 IST
ಅಕ್ಷರ ಗಾತ್ರ

ಬಾಗಲಕೋಟೆ: ಸಮೂಹ ಸಾರಿಗೆ ವ್ಯವಸ್ಥೆ ಬಳಕೆ ಮಾಡುವಂತೆ ಸಾರ್ವಜನಿಕರನ್ನು ಉತ್ತೇಜಿಸಲು ಸೆಪ್ಟೆಂಬರ್‌ 20ರಂದು ಬಾಗಲಕೋಟೆ ನಗರದಲ್ಲಿ ‘ಬಸ್ ಡೇ’ ಆಚರಣೆಗೆ ವಾಯವ್ಯ ಸಾರಿಗೆ ಸಂಸ್ಥೆ ಸಿದ್ಧತೆ ನಡೆಸಿದೆ. ಇಂಧನ ಉಳಿತಾಯ ಹಾಗೂ ಪರಿಸರ ಸಂರಕ್ಷಣೆಗೆ ಸ್ಕೂಟರ್‌, ಕಾರು ಸೇರಿದಂತೆ ವೈಯಕ್ತಿಕ ವಾಹನಗಳ ಬಳಕೆ  ಕಡಿಮೆ ಮಾಡಿ ಬಸ್‌ಗಳಲ್ಲಿ ಓಡಾಡುವಂತೆ ಸಾರ್ವಜನಿಕರನ್ನು ಪ್ರೇರೇಪಿಸಲು ಈ ಕಾರ್ಯಕ್ರಮದ ಉದ್ದೇಶವಾಗಿದೆ.  ಸೆಪ್ಟೆಂಬರ್‌ ನಂತರ ಪ್ರತೀ ತಿಂಗಳು 20ರಂದು ‘ಬಸ್‌ ದಿನ’ ಆಚರಿಸಲಾಗುತ್ತಿದೆ ಎಂದು ವಾಯವ್ಯ ಸಾರಿಗೆ ಸಂಸ್ಥೆ ಅಧ್ಯಕ್ಷ ಸದಾನಂದ ಡಂಗನವರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇದೇ 20ರಂದು ಹುಬ್ಬಳ್ಳಿ–ಧಾರವಾಡದಲ್ಲಿ ಬಸ್ ಡೇಗೆ ಚಾಲನೆ ನೀಡಲಾಗುತ್ತಿದೆ. ಆಗಸ್ಟ್ ತಿಂಗಳಿನಿಂದ ಬೆಳಗಾವಿಯಲ್ಲಿ ಆಚರಣೆ ಮಾಡಲಾಗುವುದು. ತಿಂಗಳಿಗೆ ಒಂದು ದಿನವಾದರೂ ಸ್ವಂತ ವಾಹನಗಳ ಬಳಕೆ ಬಿಟ್ಟು ಸಮೂಹ ಸಾರಿಗೆ ಬಳಕೆ ಮಾಡುವಂತೆ ಸಾರ್ವಜನಿಕರು, ಸರ್ಕಾರಿ ನೌಕರರಿಗೆ  ಮನವಿ ಮಾಡಲಾಗುವುದು’ ಎಂದರು.
ಲೋಕಾರ್ಪಣೆಗೆ ಸಿದ್ಧ: ಇಲ್ಲಿನ ನವನಗರ, ಬಾಗಲಕೋಟೆ, ಬೀಳಗಿ ತಾಲ್ಲೂಕು ಬಾಡಗಂಡಿ, ಬಾದಾಮಿ ಹಾಗೂ ಹುನಗುಂದ ತಾಲ್ಲೂಕು ಗುಡೂರಿನ ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ ನಿರ್ಮಿಸಿರುವ ನೂತನ ಬಸ್‌ ನಿಲ್ದಾಣಗಳು ಪ್ರಯಾಣಿಕರ ಬಳಕೆಗೆ ಸಿದ್ಧವಾಗಿವೆ.

‘ಬಾಗಲಕೋಟೆ ಬಸ್ ನಿಲ್ದಾಣವನ್ನು ₹2.92 ಕೋಟಿ ವೆಚ್ಚದಲ್ಲಿ ಪುನರ್‌ನವೀಕರಿಸಲಾಗಿದೆ. ನವನಗರದಲ್ಲಿ ₹8 ಕೋಟಿ ವೆಚ್ಚದಲ್ಲಿ ಹೊಸ ಬಸ್ ನಿಲ್ದಾಣ ಸಿದ್ಧವಾಗಿದೆ. ಬಾಡಗಂಡಿಯಲ್ಲಿ ₹80 ಲಕ್ಷ ಹಾಗೂ ಗುಡೂರಿನಲ್ಲಿ ಬಸ್ ನಿಲ್ದಾಣ ನಿರ್ಮಾಣಕ್ಕೆ ₹40 ಲಕ್ಷ ವೆಚ್ಚ ಮಾಡಲಾಗಿದೆ. ಶೀಘ್ರ ಎಲ್ಲವೂ ಪ್ರಯಾಣಿಕರ ಬಳಕೆಗೆ ಮುಕ್ತವಾಗಲಿವೆ’ ಎಂದು ವಾಯವ್ಯ ಸಾರಿಗೆ ಸಂಸ್ಥೆ ಬಾಗಲಕೋಟೆ ವಿಭಾಗೀಯ ನಿಯಂತ್ರಣಾಧಿಕಾರಿ ನಿತಿನ್ ಹೆಗಡೆ ‘ಪ್ರಜಾವಾಣಿ’ಗೆ ತಿಳಿಸಿದರು.

ಕೇಂದ್ರ ಕಚೇರಿಗೆ ಪತ್ರ: ‘ಹುಬ್ಬಳ್ಳಿ–ಸೊಲ್ಲಾಪುರ ಮಾರ್ಗದಲ್ಲಿ ಓಡಾಡುವ ಸಾರಿಗೆ ಸಂಸ್ಥೆಯ ಬಸ್‌ಗಳು ಈಗ ಬೀಳಗಿ ಕ್ರಾಸ್‌ ಮೂಲಕ ಓಡಾಡುತ್ತಿವೆ. ಆ ಬಸ್‌ಗಳು ಪಟ್ಟಣದ ಒಳಗೆ ಬಂದು ಹೋಗಲಿ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. ಬೀಳಗಿ ಕ್ರಾಸ್‌ನಿಂದ ಪಟ್ಟಣಕ್ಕೆ ಈಗ ನಗರಸಾರಿಗೆ ಬಸ್ ಸೇವೆ ನೀಡಿದ್ದರೂ ಅದು ರಾತ್ರಿ 10 ಗಂಟೆಗೆ ಕೊನೆಗೊಳ್ಳುತ್ತದೆ. ಇದರಿಂದ ತಡರಾತ್ರಿ ಓಡಾಡುವವರಿಗೆ ಪಟ್ಟಣಕ್ಕೆ ತೆರಳಲು ಅನಾನುಕೂಲವಾಗುತ್ತಿದೆ ಎಂಬುದು ಸ್ಥಳೀಯರ ಅಳಲು.

ಅದನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಬೀಳಗಿ ಜನತೆಯ ಬೇಡಿಕೆ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರ ಗಮನ ಸೆಳೆಯಲು ಹುಬ್ಬಳ್ಳಿಯ ಕೇಂದ್ರ ಕಚೇರಿಗೆ ಪತ್ರ ಬರೆದಿರುವುದಾಗಿ’ ನಿತಿನ್ ತಿಳಿಸಿದರು. ‘ಇದಕ್ಕೆ ಪೂರಕವಾಗಿ ಬಾಗಲಕೋಟೆ ವಿಭಾಗದಿಂದ ಆ ಮಾರ್ಗದಲ್ಲಿ ಸಂಚರಿಸುವ 58 ಬಸ್‌ಗಳೂ ಈಗಾಗಲೇ ಬೀಳಗಿ ಪಟ್ಟಣದ ಒಳಗೆ ಹೋಗಿ ಬರುತ್ತಿವೆ’ ಎನ್ನುತ್ತಾರೆ.

ರಾತ್ರಿ ಬಸ್ ನವನಗರಕ್ಕೆ ಕಡ್ಡಾಯ
‘ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಎಂಟಕ್ಕೂ ಹೆಚ್ಚು ಬಸ್‌ಗಳು ತಡರಾತ್ರಿ ಬಾಗಲಕೋಟೆ ಮೂಲಕ ಹಾದು ಹೋಗುತ್ತವೆ. ಆದರೆ ಆ ಬಸ್‌ಗಳು ನವನಗರದ ಒಳಗೆ ಬಾರದೇ ಕಾಳಿದಾಸ ವೃತ್ತದಿಂದ ಬೈಪಾಸ್ ಮೂಲಕ ಹಳೇ ಬಾಗಲಕೋಟೆ ಬಸ್‌ ನಿಲ್ದಾಣಕ್ಕೆ ಹೋಗುತ್ತಿವೆ. ಇದರಿಂದ ನವನಗರ ಭಾಗದ ಪ್ರಯಾಣಿಕರಿಗೆ  ತೊಂದರೆಯಾಗುತ್ತಿದೆ.

ಸಾಕಷ್ಟು ದೂರುಗಳೂ ಬಂದಿವೆ. ಅದನ್ನು ತಪ್ಪಿಸಲು ರಾತ್ರಿ ಸೇವೆಯ ಎಲ್ಲಾ ಬಸ್‌ಗಳೂ ನವನಗರದ ಮೂಲಕ ಸಂಚರಿಸಲು ಆದೇಶಿಸಲಾಗಿದೆ. ಅದರ ಕಡ್ಡಾಯ ಪಾಲನೆಗೆ ನಿಗಾ ವಹಿಸಲು ವಿಶೇಷ ದಳ ರಚಿಸಲಾಗುವುದು’ ಎಂದು ನಿತಿನ್ ಹೆಗಡೆ ಹೇಳುತ್ತಾರೆ.

ರಸ್ತೆಯೇ ಇಲ್ಲ: ‘ಜಿಲ್ಲೆಯಲ್ಲಿ ಬೇಡಿಕೆ ಇರುವ ಎಲ್ಲಾ ಕಡೆಗೂ ಬಸ್ ವ್ಯವಸ್ಥೆ ಮಾಡಲಾಗಿದೆ. ಆದರೆ ಬಾದಾಮಿ ತಾಲ್ಲೂಕು ಅನಂತಗಿರಿ, ಹುನಗುಂದ ತಾಲ್ಲೂಕು ಒಡೆಯರ ಗೋನಾಳ ಹಾಗೂ ಮುಧೋಳ ತಾಲ್ಲೂಕು ಕಣಕಗಿರಿಗೆ ರಸ್ತೆ ಸೌಕರ್ಯ ಇಲ್ಲದ ಕಾರಣ ಬಸ್ ಬಿಡಲು ಸಾಧ್ಯವಾಗಿಲ್ಲ’ ಎಂದು ನಿತಿನ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT