ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವಿರಾರು ಜನರಿಂದ ನಂದಗಿರಿ ಪ್ರದಕ್ಷಿಣೆ

ಭಜನೆ ಹಾಡಿಗೆ ಹೆಜ್ಜೆ ಹಾಕಿದ ಭಕ್ತ ಸಮೂಹ, ಭಾವನಾತ್ಮಕವಾಗಿ ಕೈಲಾಸ ಪರ್ವತ ಸುತ್ತಿದರು
Last Updated 18 ಜುಲೈ 2017, 7:34 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ಇಲ್ಲಿನ ನಂದಿ ಗಿರಿಪ್ರದಕ್ಷಿಣಾ ಸೇವಾ ಸಮಿತಿ ನೇತೃತ್ವದಲ್ಲಿ  ತಾಲ್ಲೂಕಿಗೆ ಸಮೀಪದ ನಂದಿ ಗಿರಿಯನ್ನು ಸೋಮವಾರ ಸಾವಿರಾರು ಮಂದಿ ಪ್ರದಕ್ಷಿಣೆ ಹಾಕಿ ಧನ್ಯತೆ ಪಡೆದರು.

ಧಾರ್ಮಿಕತೆಯ ನಂಟಿನೊಂದಿಗೆ ನಡೆದ ಈ ಪಾದಯಾತ್ರೆಯಲ್ಲಿ ದೊಡ್ಡಬಳ್ಳಾಪುರದ ಭಜನಾ ಮಂಡಳಿಗಳ ಭಜನೆ ಹಾಡುಗಳಿಗೆ ಭಖ್ತ ಸಮೂಹ ಹೆಜ್ಜೆ ಹಾಕಿತು. ಕೈಲಾಸ ಪರ್ವತವನ್ನು ಸುತ್ತಿದಂತೆ ಭಾವನಾತ್ಮಕವಾಗಿ  ಪ್ರದಕ್ಷಿಣೆ ಹಾಕಿದರು.

ಹಲವಾರು ಮಂದಿ ಕಾಲ್ನಡಿಗೆಯ ಉದ್ದೇಶದಿಂದ ಲೋಕಾಭಿರಾಮವಾಗಿ ಮಾತನಾಡುತ್ತಾ ಭಾಗವಹಿಸಿದ್ದರು. ದೊಡ್ಡಬಳ್ಳಾಪುರ ಸೇರಿದಂತೆ ಬೆಂಗಳೂರು, ಮೈಸೂರು, ಚಿಕ್ಕಬಳ್ಳಾಪುರ ಮೊದಲಾಗಿ ವಿವಿಧ ಕಡೆಗಳಿಂದ ಬಂದಿದ್ದ ಸಹಸ್ರಾರು ಜನ ನಂದಿ ಗಿರಿಯನ್ನು ಪ್ರದಕ್ಷಿಣೆ ಹಾಕುತ್ತಿದ್ದ ದೃಶ್ಯ ಜನಜಾತ್ರೆಯನ್ನು ಮೀರಿಸುವಂತಿತ್ತು.

ಬೆಳಿಗ್ಗೆ 6.30 ಗಂಟೆಗೆ ನಂದಿ ಗ್ರಾಮದ ಭೋಗ ನಂದೀಶ್ವರ ಸ್ವಾಮಿಗೆ ಪೂಜೆ ಸಲ್ಲಿಸಿ ಗಿರಿಪ್ರದಕ್ಷಿಣೆ ಆರಂಭಗೊಂಡಿತು. ದೊಡ್ಡಬಳ್ಳಾಪುರ ಸೇರಿದಂತೆ ವಿವಿಧೆಡೆಗಳಿಂದ ಬಂದ ಭಜನಾ ತಂಡಗಳೊಂದಿಗೆ ಭಕ್ತಾದಿಗಳು ಭಜನೆಗೆ ತಾಳ ಹಾಕುತ್ತಾ ಪ್ರದಕ್ಷಿಣೆ ಆರಂಭಿಸಿದರು. ನಂತರ ಇನ್ನಷ್ಟು ಜನ ಜೊತೆಗೂಡಿದರು.

ನಂದಿ ಗ್ರಾಮದಿಂದ ಆರಂಭವಾದ ಪ್ರದಕ್ಷಿಣೆ ತಂಡಗಳು ಕುಡುಮಗೆರೆ ಕ್ರಾಸ್, ಕಾರಹಳ್ಳಿ, ಕಣಿವೇಪುರ, ನಂದಿ ಕ್ರಾಸ್, ಹೆಗ್ಗಡಿಹಳ್ಳಿ ಕಣಿವೆ ಬಸವಣ್ಣ, ಸುಲ್ತಾನ್ ಪೇಟೆ ಮಾರ್ಗವಾಗಿ ನಂದಿ ಬೆಟ್ಟದ ಸುತ್ತಲಿನ ಸುಮಾರು 16 ಕಿಲೋ ಮೀಟರ್ ದೂರವನ್ನು ಕಾಲ್ನಡಿಗೆಯ ಮೂಲಕ ದೇವಾಲಯ ತಲುಪಿದರು.

ದೊಡ್ಡಬಳ್ಳಾಪುರದ ಗಿರಿ ಪ್ರದಕ್ಷಿಣಾ ಸಮಿತಿ ಮತ್ತು ಚಿಕ್ಕಬಳ್ಳಾಪುರ ತಾಲ್ಲೂಕು ನಂದಿ ಭೋಗನಂದೀಶ್ವರ ಸ್ವಾಮಿ ಸಮಿತಿ, ಅನ್ನ ದಾಸೋಹ ಸಮಿತಿ ನೇತೃತ್ವದಲ್ಲಿ ಕಾರ್ಯಕ್ರಮ ನಿರ್ವಹಿಸಲಾಗಿತ್ತು.

ವಿವಿಧ ಸಂಘ ಸಂಸ್ಥೆಗಳು ನಂದಿಗಿರಿ ಪ್ರದಕ್ಷಿಣೆಗೆ ಕೈ ಜೋಡಿಸಿದ್ದವು. ಪೂರ್ಣ ಪ್ರದಕ್ಷಿಣೆ ಆದ ನಂತರ ಸಮಿತಿಯಿಂದ ಭೋಜನ ವ್ಯವಸ್ಥೆ ಮಾಡಲಾಗಿತ್ತು.  ‘ಬಮೂಲ್’ ಅಧ್ಯಕ್ಷ ಎಚ್‌. ಅಪ್ಪಯ್ಯಣ್ಣ ಅವರಿಂದ ಮಜ್ಜಿಗೆ ವಿತರಿಸಲಾಯಿತು. ಅರಣ್ಯೀಕರಣ ಉದ್ದೇಶದಿಂದ ಪ್ರದಕ್ಷಿಣೆ ಮಾಡುವವರಿಗೆ ಯುವ ಸಂಚಲನದ ವತಿಯಿಂದ ವಿವಿಧ ಬೀಜದ ಉಂಡೆಗಳನ್ನು ಹಂಚಲಾಯಿತು.

**

ಡೆಂಗಿ ಪರಿಣಾಮ, ಜನ ಕಡಿಮೆ
ಕಳೆದ ಮೂರ್ನಾಲ್ಕು ವರ್ಷಗಳಿಗೆ ಹೋಲಿಸಿದರೆ ಈ ಬಾರಿ ನಂದಿಗಿರಿಯನ್ನು ಪ್ರದಕ್ಷಿಣೆ ಹಾಕುವವರ ಸಂಖ್ಯೆ ಕಡಿಮೆ ಇತ್ತು.

ಸಾಕಷ್ಟು ಪ್ರಚಾರ ಕೊರತೆ ಒಂದೆಡೆಯಾದರೆ, ತಾಲ್ಲೂಕಿನಲ್ಲಿ ಡೆಂಗಿ, ಚಿಕೂನ್ ಗುನ್ಯಾ ರೋಗಗಳು ಹೆಚ್ಚಾಗಿರುವುದು ಕಾರಣವಾಗಿವೆ. ಕಾಯಿಲೆ ಬಿದ್ದವರು ಬಂದಿರಲಿಲ್ಲ.  ಬಹಳಷ್ಟು ಕುಟುಂಬದಲ್ಲಿ ಯಾರಾದರೂ ಒಬ್ಬರು ರೋಗಿಗಳು ಇರುವುದರಿಂದ ಮಿಕ್ಕವರು ಬರುವುದಕ್ಕೂ ಕಷ್ಟವಾಗಿತ್ತು ಎನ್ನುತ್ತಾರೆ ಪ್ರದಕ್ಷಿಣೆ ಕಾರ್ಯಕ್ರಮಕ್ಕೆ ಬರದ ಸಾರ್ವಜನಿಕರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT