ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬಸ್ ಚಾಲಕರ ಕೈಯಲ್ಲಿ ಮಕ್ಕಳ ಭವಿಷ್ಯ’

ದೇವನಹಳ್ಳಿಯಲ್ಲಿ ಖಾಸಗಿ ಶಾಲಾ ಬಸ್ ಚಾಲಕರ ಮತ್ತು ಮಾಲೀಕರಿಗೆ ಜಾಗೃತಿ ಕಾರ್ಯಕ್ರಮ
Last Updated 18 ಜುಲೈ 2017, 8:11 IST
ಅಕ್ಷರ ಗಾತ್ರ

ದೇವನಹಳ್ಳಿ: ಖಾಸಗಿ ಶಾಲೆ ಮಕ್ಕಳ ಭವಿಷ್ಯ ಆಯಾ ಶಾಲಾ ಬಸ್ ಚಾಲಕರ ಕೈಯಲ್ಲಿರುತ್ತದೆ. ಚಾಲಕರು ಬಸ್ ಚಾಲನೆ ಬಗ್ಗೆ ಎಚ್ಚರ ವಹಿಸುವ ಅಗತ್ಯವಿದೆ ಎಂದು ಸಂಚಾರ ಪೊಲೀಸ್ ಇನ್‌ಸ್ಪೆಕ್ಟರ್‌ ಮಹೇಶ್ ಕುಮಾರ್ ತಿಳಿಸಿದರು.

ಇಲ್ಲಿನ ನಗರದ ಲಯನ್ಸ್‌ ಸೇವಾ ಭವನದಲ್ಲಿ ಸೋಮವಾರ ಲಯನ್ಸ್‌  ಸಂಸ್ಥೆ ಹಾಗೂ ಸಂಚಾರ ಪೊಲೀಸ್ ಇಲಾಖೆ ಸಹಯೋಗದಲ್ಲಿ ಖಾಸಗಿ ಶಾಲಾ ಬಸ್ ಚಾಲಕರ ಮತ್ತು  ಮಾಲೀಕರಿಗೆ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಪುಟ್ಟ ಮಕ್ಕಳನ್ನು ಸುರಕ್ಷಿತವಾಗಿ ಕರೆ ತರಲು ಬಸ್ ಮಾಲೀಕರು ಚಾಲಕರಾದ ನಿಮ್ಮನ್ನು ನೇಮಿಸುತ್ತಾರೆ. ದೇಶದ ಸಂಪನ್ಮೂಲವಾದ ಎಳೆಯ ಮಕ್ಕಳ ಬಗ್ಗೆ ಅತ್ಯಂತ ಕಾಳಜಿ ಇರಬೇಕು’ ಎಂದರು.

ಚಾಲನಾ ಪರವಾನಗಿ ಮತ್ತು ರಸ್ತೆ ಸುರಕ್ಷತಾ ನಿಯಮ ಪರಿಣಾಮ ಕಾರಿಯಾಗಿ ಪಾಲಿಸಿದರೆ ಆರ್.ಟಿ.ಓ ಮತ್ತು ಸಂಚಾರ ಇಲಾಖೆ ಪೊಲೀಸರ ಅವಶ್ಯಕತೆ ಇರುತ್ತಿರಲಿಲ್ಲ ಎಂದರು.

ಶಾಲಾ ಬಸ್ ವೇಗ ಕನಿಷ್ಠ 40 ರಿಂದ 50 ಕಿ.ಮೀಗೆ ಮಿತಗೂಳಿಸಬೇಕು. ಎರಡು ಬಾರಿ ಸಂಚಾರ ನಿಯಮ ಉಲ್ಲಂಘಿಸಿದರೆ ಚಾಲಕರ ಪರವಾನಗಿ ರದ್ದು ಮಾಡಲಾಗುತ್ತದೆ ಎಂದು ಎಚ್ಚರಿಸಿದರು.

ಕೇಂದ್ರ ಸರ್ಕಾರ ರಸ್ತೆ ಸುರಕ್ಷತೆ ಬಗ್ಗೆ ಮತ್ತಷ್ಟು ಕಠಿಣ ನಿಯಮಗಳನ್ನು ಜಾರಿಗೂಳಿಸುತ್ತಿದೆ. ಅದು ಜಾರಿಯಾದರೆ ಒಂದು ಸಿಗ್ನಲ್ ಜಂಪ್‌ಗೆ ಒಂದು ಸಾವಿರ,  ಹೆಲ್ಮೆಟ್ ಇಲ್ಲದೆ ವಾಹನ ಸಂಚಾರ ಮಾಡಿದರೆ ₹10,000, ಮದ್ಯ ಸೇವಿಸಿ ವಾಹನ ಚಾಲನೆ ಮಾಡಿದರೆ 25 ಸಾವಿರ ದಂಡ, ಮೂರು ತಿಂಗಳು ಸೆರೆಮನೆ ವಾಸ ವಿಧಿಸಲಾಗುವುದು. ಇದನ್ನು ಚಾಲಕರು ಅರ್ಥ ಮಾಡಿಕೊಳ್ಳಬೇಕು ಎಂದರು.

ತಾಲ್ಲೂಕು ಖಾಸಗಿ ಶಾಲಾ ಆಡಳಿತ ಮಂಡಳಿ ಒಕ್ಕೂಟದ ಕಾರ್ಯದರ್ಶಿ ಶ್ರೀನಿವಾಸ್, ಖಜಾಂಚಿ ಧನಂಜಯ, ಮುಖ್ಯಶಿಕ್ಷಕ ಬಸವರಾಜ್, ಲಯನ್ಸ್‌  ಅಧ್ಯಕ್ಷ ಪಿ.ಗಂಗಾಧರ್, ಪದಾಧಿ ಕಾರಿಗಳಾದ ನಾಗರಾಜಯ್ಯ, ಸಿ.ಭಾಸ್ಕರ್, ಶ್ರೀರಾಮಯ್ಯ ಇದ್ದರು.

**

ಸುಪ್ರೀಂ ಕೋರ್ಟ್‌ ಆದೇಶ

1985ರ ಸುಪ್ರೀಂ ಕೋರ್ಟ್‌ ಆದೇಶದಂತೆ  ಪ್ರತಿಯೊಂದು ಶಾಲಾ ಬಸ್ ನಿರ್ದಿಷ್ಟವಾಗಿ ಹಳದಿ ಬಣ್ಣ ಹೊಂದಿರಬೇಕು. ವಾಹನ ಹಿಂದೆ ಮುಂದೆ ಶಾಲೆಯ ದೂರವಾಣಿ ಸಂಖ್ಯೆ ನಮೂದಿಸಿರಬೇಕು. ಬಸ್‌ಗಳಲ್ಲಿ ಪ್ರಥಮ ಚಿಕಿತ್ಸಾ ಪರಿಕರ ಪೆಟ್ಟಿಗೆ ಇರಲೇಬೇಕು ಎಂದು ಸಂಚಾರ ವಿಭಾಗದ ಇನ್‌ಸ್ಪೆಕ್ಟರ್‌ ಮಹೇಶ್ ಕುಮಾರ್ ತಿಳಿಸಿದರು.

ಗುಣಮಟ್ಟದ ವೇಗ ನಿಯಂತ್ರಕ ಅಳವಡಿಸಬೇಕು. ಬೆಂಕಿ ನಂದಿಸುವ ಚಿಕ್ಕ ಸಿಲಿಂಡರ್ ಬಾಗಲಿಗೆ ಲಾಕ್ ಸಿಸ್ಟಂ ಅಳವಡಿಸಬೇಕು. ಬಸ್ ಒಳಗೆ ಪ್ರತ್ಯೇಕ ಸಿಬ್ಬಂದಿ ನೇಮಕ ಮಾಡಿರಬೇಕು ಎಂದು ವಿವರಿಸಿದರು.

**

ಗಾಯಾಳು ಹೊತ್ತೊಯ್ಯವ ಆಂಬುಲೆನ್ಸ್‌ ಮತ್ತು ಖಾಸಗಿ ಶಾಲಾ ಬಸ್ ಚಾಲಕರು ಮದ್ಯ ಸೇವಿಸಿ ಚಾಲನೆ ಮಾಡುತ್ತಿದ್ದರೆ, ಯಾವ ರೀತಿ ಸುರಕ್ಷತೆ ನಿರೀಕ್ಷಿಸಲು ಸಾಧ್ಯ.
-ಮಹೇಶ್ ಕುಮಾರ್,  ಸಂಚಾರ ವಿಭಾಗದ ಇನ್‌ಸ್ಪೆಕ್ಟರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT