ಸೋಮವಾರ, ಡಿಸೆಂಬರ್ 16, 2019
23 °C

ಕಡಬ ಭಾಗಶಃ ಬಂದ್: ಎಸ್‌ಪಿ ಭೇಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಡಬ ಭಾಗಶಃ ಬಂದ್: ಎಸ್‌ಪಿ ಭೇಟಿ

ಉಪ್ಪಿನಂಗಡಿ: ಕಡಬ ಸಿ.ಎ. ಬ್ಯಾಂಕ್‌ ಉಪಾಧ್ಯಕ್ಷ ರಮೇಶ್ ಕಲ್ಪುರೆ ಮೇಲೆ ಭಾನುವಾರ ನಡೆದ ಹಲ್ಲೆ ಪ್ರಕರಣವನ್ನು ಖಂಡಿಸಿ ಹಿಂದೂ ಪರ ಸಂಘಟನೆ ಹಾಗೂ ಬಿಜೆಪಿ ಸೋಮವಾರ ಕರೆ ನೀಡಿದ ಬಂದ್‌ಗೆ ಕಡಬ ಪೇಟೆ ಭಾಗಶಃ ಬಂದ್ ಆಗಿತ್ತು.

ಪೇಟೆಯಲ್ಲಿ ಕೆಲವೊಂದು ಅಂಗಡಿಗಳು ತೆರೆದುಕೊಂಡಿದ್ದು, ಬಹುತೇಕ ಅಂಗಡಿ, ಮುಂಗಟ್ಟುಗಳು ಮುಚ್ಚಿದ್ದವು. ಶಾಲಾ ಕಾಲೇಜುಗಳು ತೆರೆದಿದ್ದವು. ರಾಷ್ಟ್ರೀಕೃತ ಬ್ಯಾಂಕ್‌ಗಳು, ವಿಶೇಷ ತಹಶೀಲ್ದಾರ್ ಕಚೇರಿ, ಸರ್ಕಾರಿ ಕಚೇರಿಗಳು ಎಂದಿನಂತೆ ತೆರೆದಿದ್ದರೂ ಪೇಟೆಯಲ್ಲಿ ಜನ ಸಂಚಾರ ವಿರಳವಾಗಿತ್ತು. ಕೆಲವು ಆಟೋ ರಿಕ್ಷಾಗಳು ಬಾಡಿಗೆ ನಡೆತ್ತಿದ್ದವು. ಉಪ್ಪಿನಂಗಡಿ, ಮರ್ದಾಳ, ಕೊಂಬಾರು ಮೊದಲಾದ ಕಡೆಗೆ ಕಡಬದಿಂದ ಪ್ರಯಾಣಿಕರ ಸಾಗಾಟ ಮಾಡುವ ಸರ್ವೀಸ್ ವಾಹನಗಳು  ಸಂಚಾರ ಸ್ಥಗಿತಗೊಳಿಸಿದ್ದವು. ಕಡಬ ಮೂಲಕ ಹಾದು ಹೋಗುವ ಕೆಎಸ್‌ಆರ್‌ಟಿಸಿ ಬಸ್‌ಗಳು ಎಂದಿನಂತೆ ಸಂಚರಿಸಿದವು.

ಶಾಂತಿ ಕಾಪಾಡಲು ಮನವಿ:  ಕಡಬ ಶ್ರೀ ದುರ್ಗಾಂಬಿಕಾ ದೇವಸ್ಥಾನದ ವಠಾರದಲ್ಲಿ ಬಿಜೆಪಿ ಹಾಗೂ ಸಂಘಟನೆಯ ಕಾರ್ಯಕರ್ತರು ಜಮಾಯಿಸಿ ಸಭೆ ನಡೆಸಿದರು.

ಬಿಜೆಪಿ ಮುಖಂಡ ಕೃಷ್ಣ ಶೆಟ್ಟಿ ಮಾತನಾಡಿ ‘ಆರೋಪಿಗಳ ವಿರುದ್ದ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ ಅವರು ಸದಾ ಶಾಂತಿಯಲ್ಲಿರುವ ಕಡಬದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಲ್ಲರೂ ಸಹಕಾರ ನೀಡಬೇಕು’ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು.

ಕಡಬ ಸಿ.ಎ. ಬ್ಯಾಂಕ್‌ ಅಧ್ಯಕ್ಷ ಸುಂದರ ಗೌಡ ಮಂಡೆಕರ, ನಿರ್ದೇಶಕ ಸೀತಾರಾಮ ಗೌಡ ಪೊಸವಳಿಕೆ, ಎಪಿಎಂಸಿ ಸದಸ್ಯೆ ಪುಲಸ್ತ್ಯಾ ರೈ, ಬಿಜೆಪಿ ಮುಖಂಡರಾದ ಸತೀಶ್ ನಾಯಕ್,  ಎನ್.ಕೆ. ಪ್ರಕಾಶ್, ರವಿರಾಜ ಶೆಟ್ಟಿ, ವೆಂಕಟರಮಣ ಕುತ್ಯಾಡಿ ಮೊದಲಾದವರು ಇದ್ದರು.

6 ಮಂದಿ ವಿರುದ್ಧ ಕೊಲೆ ಯತ್ನ ಪ್ರಕರಣ ಕಡಬದಲ್ಲಿ ರಮೇಶ್ ಕಲ್ಪುರೆ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಬ ಪೊಲೀಸರು ಒಟ್ಟು 6 ಮಂದಿಯನ್ನು ಬಂಧಿಸಿದ್ದು, ಅವರ ವಿರುದ್ದ ಕೊಲೆ ಯತ್ನ, ದರೋಡೆ ಸೇರಿದಂತೆ ಹಲವು ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕುಟ್ರುಪ್ಪಾಡಿ ನಿವಾಸಿಗಳಾದ ಪ್ರಕಾಶ್, ತಿನ್ಸನ್, ಸನೋಷ್, ಲಿಜೋ, ಸಂತೋಷ್ ಮತ್ತು ಬಿಜೂ ಮ್ಯಾಥ್ಯೂ ಬಂಧಿತರು. ಇವರ ವಿರುದ್ಧ ಐಪಿಸಿ ಸೆಕ್ಷನ್ 143, 147, 341, 323, 326, 307, 395, 149ರನ್ವಯ ಪ್ರಕರಣ ದಾಖಲಾಗಿದೆ.   ಕಡಬ ಸಿ.ಎ.ಬ್ಯಾಂಕ್‌ ಉಪಾಧ್ಯಕ್ಷ ರಮೇಶ್ ಕಲ್ಪುರೆ ಭಾನುವಾರ ಕಡಬ ಪೇಟೆಯಲ್ಲಿ ಸಾಮಾನುಗಳನ್ನು ಖರೀದಿಸಿ, ತನ್ನ ಜೀಪಿಗೆ ತುಂಬಿಸುತ್ತಿದ್ದ ವೇಳೆ ಆರೋಪಿಗಳು  ಹಲ್ಲೆ ನಡೆಸಿದ್ದರು. ಈ ಬಗ್ಗೆ ಪೊಲೀಸ್ ಕೇಸು ದಾಖಲಾಗಿತ್ತು.

ಬಿಗಿ ಬಂದೋಬಸ್ತ್

ಕಡಬದಲ್ಲಿ ಭಾನುವಾರ ನಡೆದ ಹಲ್ಲೆ ಪ್ರಕರಣ ಮತ್ತು ತದ ನಂತರದ ಬೆಳವಣಿಗೆ ಹಿನ್ನೆಲೆಯಲ್ಲಿ ಕಡಬದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಸ್ಥಳದಲ್ಲಿ ಪುತ್ತೂರು ಡಿವೈಎಸ್‍ಪಿ ಶ್ರೀನಿವಾಸ್, ಉಪ್ಪಿನಂಗಡಿ ಸರ್ಕಲ್‌ ಇನ್‌ಸ್ಪೆಕ್ಟರ್‌ ಅನಿಲ್ ಕುಲಕರ್ಣಿ, ಹೆಚ್ಚುವರಿ ಪಡೆಯ ಎಸ್‌ಐ ಉಮೇಶ್ ಉಪ್ಪಳಿಕೆ, ಇಂಟಲಿಜೆನ್ಸ್ ಎಸ್ಐ ನಂದಕುಮಾರ್, ಸಂಪ್ಯ ಎಸ್‌ಐ ಖಾದರ್, ಕಡಬ ಎಸ್‌ಐ  ಪ್ರಕಾಶ್ ದೇವಾಡಿಗ ಹಾಹೂ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ.

ಶಾಂತಿ ಕದಡುವವರ ವಿರುದ್ದ ಕಠಿಣ ಕ್ರಮ: ಎಸ್.ಪಿ. ಸುಧೀರ್ ಕುಮಾರ್

ದ.ಕ. ಜಿಲ್ಲಾ ಎಸ್.ಪಿ. ಸುಧೀರ್ ಕುಮಾರ್ ರೆಡ್ಡಿ ಸೋಮವಾರ ಮಧ್ಯಾಹ್ನ ಕಡಬ ಠಾಣೆಗೆ ಭೇಟಿ ನೀಡಿ ಘಟನೆಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಘಟನೆಗೆ ಸಂಬಂಧ ಈಗಾಗಲೇ 6 ಮಂದಿಯನ್ನು ಬಂಧಿಸಲಾಗಿದ್ದು ತನಿಖೆ ಮುಂದುವರಿಯುತ್ತಿದೆ. ತಪ್ಪಿತಸ್ಥರ ವಿರುದ್ಧ ಮತ್ತು ಜಿಲ್ಲೆಯಲ್ಲಿ ಶಾಂತಿ ಕದಡುವವರನ್ನು ಯಾಪುದೇ ಕಾರಣಕ್ಕೂ, ಒತ್ತಡಕ್ಕೆ ಮಣಿಯದೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

 

ಪ್ರತಿಕ್ರಿಯಿಸಿ (+)