ಶನಿವಾರ, ಡಿಸೆಂಬರ್ 7, 2019
24 °C

ಐ.ಟಿ ರಿಟರ್ನ್ಸ್‌; ಇನ್ನಷ್ಟು ಸುಲಭ

Published:
Updated:
ಐ.ಟಿ ರಿಟರ್ನ್ಸ್‌; ಇನ್ನಷ್ಟು ಸುಲಭ

ಸಂಬಳ ಪಡೆಯುವ ನೌಕರರು ತಾವು ಪಡೆಯುವ ಆದಾಯದ ಲೆಕ್ಕಪತ್ರ ವಿವರಗಳನ್ನು (ಐ.ಟಿ ರಿಟರ್ನ್ಸ್‌) ಸುಲಭವಾಗಿ ಸಲ್ಲಿಸುವಂತೆ ‘ಐಟಿಆರ್1 ಸಹಜ’ ಫಾರಂ ರೂಪಿಸಲಾಗಿದೆ. ₹ 50 ಲಕ್ಷದವರೆಗೆ ಆದಾಯ ಹೊಂದಿರುವವರು ಮಾತ್ರ ಈ ಫಾರಂ ಬಳಸಲು ಅವಕಾಶವಿದೆ.

ಆದರೆ, ಸಂಬಳದ ಜತೆ ಒಂದು ಮನೆಗಿಂತ ಹೆಚ್ಚಿನ ಮನೆಯಿಂದ ದೊರೆಯುವ ಬಾಡಿಗೆ ಆದಾಯ, ಬಂಡವಾಳ ಹೂಡಿಕೆಯಿಂದ ದೊರೆಯುವ ಲಾಭ, ಕೃಷಿಯಿಂದ ದೊರೆಯುವ ಆದಾಯ, ವಿದೇಶದಲ್ಲಿನ ಆಸ್ತಿ ಅಥವಾ ಹಣ, ವ್ಯಾಪಾರ ವಹಿವಾಟಿನಲ್ಲಿ ಆದಾಯ, ಲಾಟರಿ ಅಥವಾ ಜೂಜಾಟದಿಂದ ಆದಾಯ ದೊರೆಯುತ್ತಿದ್ದರೆ ಈ ಫಾರಂ ಬಳಸಲು ಅವಕಾಶ ಇಲ್ಲ.

‘ಐಟಿಆರ್‌ 1 ಸಹಜ’ನಲ್ಲಿ ಕೆಲವು ವಿಭಾಗಗಳನ್ನಾಗಿ ಮಾಡಲಾಗಿದೆ.

ವಿಭಾಗ ‘ಎ’ನಲ್ಲಿ ಸಾಮಾನ್ಯ ಮಾಹಿತಿ ಮತ್ತು ವಿಭಾಗ ‘ಬಿ’ನಲ್ಲಿ ಒಟ್ಟು ಆದಾಯ, ವಿಭಾಗ ‘ಸಿ’ನಲ್ಲಿ ಕಡಿತ ಮತ್ತು ತೆರಿಗೆಗೆ ಒಳಪಡುವ ಒಟ್ಟು ಆದಾಯ, ವಿಭಾಗ ‘ಡಿ’ನಲ್ಲಿ ತೆರಿಗೆ ಪಾವತಿಸುವ ಲೆಕ್ಕಾಚಾರ, ವಿಭಾಗ ‘ಇ’ನಲ್ಲಿ ಇತರೆ ಮಾಹಿತಿ ಒಳಗೊಂಡಿದೆ.

ಇಲ್ಲಿ ಹಂತ ಹಂತವಾಗಿ ವಿಭಾಗಗಳಲ್ಲಿನ ಸಂಕ್ಷಿಪ್ತ ಮಾಹಿತಿ ನೀಡಲಾಗಿದೆ.

ವಿಭಾಗ ‘ಎ’– ಸಾಮಾನ್ಯ ಮಾಹಿತಿ

ಈ ವಿಭಾಗವು ಸಾಮಾನ್ಯ ಮಾಹಿತಿಯನ್ನು ಒಳಗೊಂಡಿದೆ. ಹೆಸರು, ಪ್ಯಾನ್‌, ಸಂಪರ್ಕಿಸುವ ವಿಳಾಸ, ಇ–ಮೇಲ್‌ ವಿಳಾಸವನ್ನು ಇದು ಒಳಗೊಂಡಿದೆ. ಪ್ಯಾನ್‌ ಕಾರ್ಡ್‌ನಲ್ಲಿರುವಂತೆ ಹೆಸರು ಬರೆಯಬೇಕು. ‘ಆಧಾರ್‌’ ಸಂಖ್ಯೆಗೆ ಕಾಲಂ ನೀಡಲಾಗಿದೆ. ‘ಆಧಾರ್‌’ ಕಾರ್ಡ್‌ ಇದ್ದರೆ ಸಂಖ್ಯೆಯನ್ನು ನಮೂದಿಸಬೇಕು. ಒಂದು ವೇಳೆ ‘ಆಧಾರ್‌’ ಕಾರ್ಡ್‌ ಹೊಂದಿಲ್ಲದವರು ಅರ್ಜಿ ಹಾಕಿದ್ದರೆ, ‘ಆಧಾರ್‌’ ಕಾರ್ಡ್‌ಗೆ ನೋಂದಣಿ ಮಾಡಿಸಿರುವ 28 ಅಂಕಿಗಳನ್ನು ನಮೂದಿಸಬೇಕು. ಶೀಘ್ರದಲ್ಲಿ ನಿಮ್ಮನ್ನು ಸಂಪರ್ಕಿಸುವ ಉದ್ದೇಶದಿಂದ ತಪ್ಪದೆ ಇ–ಮೇಲ್‌ ವಿಳಾಸ ನೀಡಬೇಕು.

2. ವಿಭಾಗ ಬಿ– ಒಟ್ಟು ಆದಾಯ

ಈ ವಿಭಾಗದಲ್ಲಿ ಮೂರು ಶೀರ್ಷಿಕೆಗಳ ಅಡಿಯಲ್ಲಿ ಆದಾಯದ ವಿವರ ಸಲ್ಲಿಸಬೇಕು. ಮೊದಲ ಕಾಲಂನಲ್ಲಿ ವೇತನ ಅಥವಾ ಪಿಂಚಣಿಯಿಂದ ದೊರೆಯುವ ಆದಾಯ. ಈ ವಿವರಗಳನ್ನು ಉದ್ಯೋಗದಾತರು ನೀಡುವ ಫಾರಂ 16 ಮೂಲಕ ಭರ್ತಿ ಮಾಡಬೇಕು. ಎರಡನೇ ಕಾಲಂನಲ್ಲಿ ಮನೆ ಆದಾಯದಿಂದ ದೊರೆಯುವ ವಿವರ ಭರ್ತಿ ಮಾಡಬೇಕು. ನೀವು ಮನೆ ಸಾಲ ಪಡೆದಿದ್ದರೆ ಇಲ್ಲಿ ವಿವರಗಳನ್ನು ನೀಡಬೇಕು. ನೆನಪಿನಲ್ಲಿಡಿ. ಆದಾಯ ಅಥವಾ ನಷ್ಟದ ವಿವರಗಳನ್ನು ಕೇವಲ ಒಂದು ಮನೆಯ ಬಗ್ಗೆ ಮಾತ್ರ ನೀಡಬೇಕು. ಮೂರನೇ ಕಾಲಂನಲ್ಲಿ ಇತರ ಮೂಲಗಳಿಂದ ದೊರೆಯುವ ಆದಾಯಗಳ ಬಗ್ಗೆ ವಿವರ ಸಲ್ಲಿಸಬೇಕು. ಇಲ್ಲಿ ಆದಾಯದ ಬಗ್ಗೆ ಮಾತ್ರ ವಿವರ ನೀಡಬೇಕು. ನಷ್ಟವಾಗಿದ್ದರೆ ‘ಐಟಿಆರ್‌ 2’ ಫಾರಂ ನೀಡಬೇಕು.

3. ವಿಭಾಗ ‘ಸಿ’– ಕಡಿತ ಮತ್ತು ಒಟ್ಟು ತೆರಿಗೆಗೆ ಒಳಪಡುವ ಆದಾಯ

ಒಟ್ಟು ಆದಾಯದಲ್ಲಿನ ಕಡಿತದ ಬಗ್ಗೆ ಇಲ್ಲಿ ವಿವರ ಸಲ್ಲಿಸಬೇಕು. ಇಲ್ಲಿ ಐದು ಕಾಲಂಗಳಿವೆ. ಮೊದಲನೇ ಕಾಲಂನಲ್ಲಿ ಸೆಕ್ಷನ್‌ 80 ಸಿ ಅಡಿಯಲ್ಲಿನ ಕಡಿತದ ಬಗ್ಗೆ ವಿವರ ನಮೂದಿಸಬೇಕು. ಭವಿಷ್ಯ ನಿಧಿಗೆ ಪಾವತಿಸುತ್ತಿರುವ ವಿವರ, ಮಕ್ಕಳ ಟ್ಯೂಷನ್‌ ಶುಲ್ಕ, ಎಲ್‌ಐಸಿ ಪ್ರಿಮಿಯಂ, ಎನ್‌ಎಸ್‌ಸಿ ಇತ್ಯಾದಿ ವಿವರಗಳನ್ನು ಸಲ್ಲಿಸಬೇಕು. ₹1.5ಲಕ್ಷದವರೆಗಿನ ಮೊತ್ತದವರೆಗೂ ಈ ವಿವರಗಳನ್ನು ಸಲ್ಲಿಸಲು ಅವಕಾಶವಿದೆ. ಎರಡನೇ ಕಾಲಂನಲ್ಲಿ ‘80 ಡಿ’ಗೆ ಮೀಸಲಿಡಲಾಗಿದೆ. ಪತ್ನಿ, ಮಕ್ಕಳು, ಅವಲಂಬಿತರಿಗೆ ಹಾಗೂ ಸ್ವಂತಕ್ಕೆ ಪಾವತಿಸಿರುವ ಆರೋಗ್ಯ ವಿಮೆ ಬಗ್ಗೆ ವಿವರ ಸಲ್ಲಿಸಬೇಕು. ₹60 ಸಾವಿರದವರೆಗಿನ ಮೊತ್ತದವರೆಗೂ ಮಾತ್ರ ವಿವರ ಸಲ್ಲಿಸಬೇಕು. ಮೂರನೇ ಕಾಲಂನಲ್ಲಿ ಸೆಕ್ಷನ್‌ ‘80 ಜಿ’ ಬಗ್ಗೆ ವಿವರ ಸಲ್ಲಿಸಬೇಕು. ಇಲ್ಲಿ ದೇಣಿಗೆ, ಸಾಮಾಜಿಕ ಸೇವೆಗೆ ನೀಡಿರುವ ಮೊತ್ತದ ಬಗ್ಗೆ ವಿವರ ನೀಡಬಹುದು. ನಾಲ್ಕನೇ ಕಾಲಂನಲ್ಲಿ ಸೆಕ್ಷನ್‌ 80ಟಿಟಿಎ ವಿವರ ನೀಡಬೇಕು. ಠೇವಣಿ ಮೇಲಿನ ಬಡ್ಡಿ ಬಗ್ಗೆ ವಿವರ ನೀಡಬೇಕು. ಇನ್ನೂ ಹೆಚ್ಚಿನ ವಿವರಗಳಿದ್ದರೆ ಐದನೇ ಕಾಲಂನಲ್ಲಿ ನಮೂದಿಸಬಹುದು.

ವಿಭಾಗ 4– ತೆರಿಗೆಗೆ ಒಳಪಡುವ ಮೊತ್ತದ ಲೆಕ್ಕಾಚಾರ

ಒಟ್ಟು ತೆರಿಗೆಗೆ ಒಳಪಡುವ ಆದಾಯದ ಬಗ್ಗೆ ಇಲ್ಲಿ ಲೆಕ್ಕಾಚಾರ ಹಾಕಬೇಕು. ಸೆಕ್ಷನ್‌ 87ಎ ಅಡಿಯಲ್ಲಿ ವಿನಾಯಿತಿ ಪಡೆಯಬಹುದು. ₹5ಲಕ್ಷ ಆದಾಯ ದಾಟಿದ್ದರೆ ಗರಿಷ್ಠ ₹5ಸಾವಿರವರೆಗೆ ವಿನಾಯಿತಿ ಪಡೆಯಬಹುದು.ಕೃಷಿ ಆದಾಯ ₹5ಸಾವಿರ ದಾಟಿದ್ದರೆ ಐಟಿಆರ್‌2 ಉಪಯೋಗಿಸಿ.

5 ವಿಭಾಗ ಇ– ಇತರೆ ಮಾಹಿತಿ

ಆಯಾ ವರ್ಷದಲ್ಲಿನ ಎಲ್ಲ ಉಳಿತಾಯಗಳ ಮತ್ತು ಚಾಲ್ತಿ ಖಾತೆಗಳ ವಿವರಗಳನ್ನು ಸಲ್ಲಿಸಬೇಕು. ಆದರೆ, ಕಳೆದ ಮೂರು ವರ್ಷಗಳಿಂದ ಯಾವುದೇ ರೀತಿ ವಹಿವಾಟು ನಡೆಸದ ಖಾತೆಗಳ ಬಗ್ಗೆ ವಿವರ ನೀಡುವುದು ಕಡ್ಡಾಯವಲ್ಲ. ಒಂದು ವೇಳೆ ನಿಮಗೆ ಮರುಪಾವತಿ ಮಾಡಲು ಯಾವ ಖಾತೆಗೆ ಹಣ ಜಮಾ ಮಾಡಬೇಕು ಎನ್ನುವ ಬಗ್ಗೆ ಬ್ಯಾಂಕ್‌ ಮತ್ತು ಖಾತೆಯ ಸಂಖ್ಯೆಯ ವಿವರ ನೀಡಬೇಕು. ಜತೆಗೆ 2016ರ ನವೆಂಬರ್‌ 9ರಿಂದ ಡಿಸೆಂಬರ್‌ 12ರ ಅವಧಿಯಲ್ಲಿ ₹2ಲಕ್ಷಕ್ಕಿಂತ ಹೆಚ್ಚು ನಗದು ಠೇವಣಿ ಮಾಡಿದ್ದರೆ ಅದರ ವಿವರ ಸಲ್ಲಿಸಬೇಕು.

6. ಷೆಡ್ಯೂಲ್ ಐಟಿ

ಈ ವಿಭಾಗದಲ್ಲಿ ಅಡ್ವಾನ್ಸ್‌ ತೆರಿಗೆ ಮತ್ತು ಸ್ವಯಂ ಪರಿಶೀಲನೆಗೆ ಒಳಪಡುವ ತೆರಿಗೆಯ ವಿವರ ಸಲ್ಲಿಸಬೇಕು. ಇಲ್ಲಿ ಬಿಎಸ್‌ಆರ್‌ ಕೋಡ್‌, ಪಾವತಿ, ಚಲನ್‌ನ ಸಿರಿಯಲ್‌ ಸಂಖ್ಯೆ ಮತ್ತು ತೆರಿಗೆ ಪಾವತಿಸಿರುವ ಕುರಿತು ವಿವರ ನೀಡಬೇಕು.

7. ಷೆಡ್ಯೂಲ್‌ ಟಿಡಿಎಸ್‌

ಇಲ್ಲಿ ಆದಾಯದ ಮೇಲಿನ ಟಿಡಿಎಸ್‌/ಟಿಸಿಎಸ್‌ ಕುರಿತು ಸಂಪೂರ್ಣ ವಿವರ ಸಲ್ಲಿಸಬೇಕು. ಫಾರಂ 16 ಮತ್ತು ಫಾರಂ 16 ಎ ಅನ್ವಯ ವಿವರಗಳನ್ನು ಸಲ್ಲಿಸಬೇಕು.

 

 

ಪ್ರತಿಕ್ರಿಯಿಸಿ (+)