ಶುಕ್ರವಾರ, ಡಿಸೆಂಬರ್ 6, 2019
18 °C

ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಬೇಕು ಎಂದ ರಾಜ್ಯ ಸರ್ಕಾರ; ಸರ್ಕಾರದ ನಡೆಗೆ ಬಿಜೆಪಿ ಆಕ್ಷೇಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕಕ್ಕೆ ಪ್ರತ್ಯೇಕ ಧ್ವಜ ಬೇಕು ಎಂದ ರಾಜ್ಯ ಸರ್ಕಾರ; ಸರ್ಕಾರದ ನಡೆಗೆ ಬಿಜೆಪಿ ಆಕ್ಷೇಪ

ಬೆಂಗಳೂರು: ಕೇಂದ್ರದಲ್ಲಿ ಆಡಳಿತರೂಢ ಬಿಜೆಪಿ ಸರ್ಕಾರ ಒಂದೇ ರಾಷ್ಟ್ರ ಒಂದೇ ಧ್ವಜ ಎಂಬ ಘೋಷವಾಕ್ಯ ಮೊಳಗಿಸಿರುವ ಹೊತ್ತಲ್ಲಿ ಕರ್ನಾಟಕ ರಾಜ್ಯಕ್ಕೆ ಪ್ರತ್ಯೇಕ ಧ್ವಜ ಬೇಕು ಎಂಬ ಕೂಗು ಮತ್ತೆ ಕೇಳಿ ಬಂದಿದೆ. ಸದ್ಯ ಕರ್ನಾಟಕ ಸರ್ಕಾರ ಹಳದಿ, ಕೆಂಪು ಮಿಶ್ರಿತ ಧ್ವಜವನ್ನು ನಾಡಧ್ವಜವನ್ನಾಗಿ ಸ್ವೀಕರಿಸಿದೆ. ಆದರೆ ಇದಕ್ಕೆ ಅಧಿಕೃತವಾದ ಮಾನ್ಯತೆ ಇಲ್ಲ.

ದೇಶದಲ್ಲಿರುವ ಎಲ್ಲ ರಾಜ್ಯಗಳು ತ್ರಿವರ್ಣ ಧ್ವಜವನ್ನು ಮಾತ್ರ ಹೊಂದಬೇಕೆಂಬ ನಿಯಮವಿದೆ. ಇತ್ತ ಜಮ್ಮು ಕಾಶ್ಮೀರ ಮಾತ್ರ ಸಂವಿಧಾನದ 370ನೇ ವಿಧಿ ಪ್ರಕಾರ ಪ್ರತ್ಯೇಕ ಧ್ವಜ ಹೊಂದಿದೆ. ದೇಶದಲ್ಲೇ ಎರಡು ಧ್ವಜಗಳನ್ನು ಅಧಿಕೃತವಾಗಿ ಹೊಂದಿರುವ ರಾಜ್ಯ ಜಮ್ಮು ಕಾಶ್ಮೀರ ಮಾತ್ರ. ಈ ನಡುವೆ ಕರ್ನಾಟಕದ ನಾಡಧ್ವಜವನ್ನು ಅಧಿಕೃತ ನಾಡಧ್ವಜವಾಗಿ ಮಾನ್ಯ ಮಾಡಲು ರಾಜ್ಯ ಸರ್ಕಾರ 9 ಮಂದಿಯ ಸಮಿತಿಯೊಂದನ್ನು ರಚಿಸಿದೆ. ಈ ಸಮಿತಿಯು ಅಧ್ಯಯನ ನಡೆಸಿ ಈಗಿರುವ ಧ್ವಜವನ್ನೇ ಅಂಗೀಕರಿಸಬೇಕೆ ಇಲ್ಲವೇ ಹೊಸತೊಂದು ಧ್ವಜವನ್ನು ವಿನ್ಯಾಸಗೊಳಿಸಬೇಕೆ ಎಂಬುದರ ಬಗ್ಗೆ ರಾಜ್ಯ ಸರ್ಕಾರಕ್ಕೆ ವರದಿ ನೀಡಲಿದೆ. ಒಂದು ವೇಳೆ ಈ ಸಮಿತಿ ಮುಂದಿರಿಸುವ ಶಿಫಾರಸುಗಳಿಗೆ ಮಾನ್ಯತೆ ಲಭಿಸುವುದಾದರೆ ಜಮ್ಮು ಕಾಶ್ಮೀರದ ನಂತರ ಅಧಿಕೃತ ನಾಡಧ್ವಜ ಹೊಂದುವ ಎರಡನೇ ರಾಜ್ಯವಾಗಲಿದೆ ಕರ್ನಾಟಕ. 

ಜೂನ್ 6ರಂದು ರಾಜ್ಯ ಸರ್ಕಾರ ಹೊರಡಿಸಿರುವ ಆದೇಶದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಧಾನ ಕಾರ್ಯದರ್ಶಿಯನ್ನು ಸಮಿತಿಯ ಅಧ್ಯಕ್ಷರನ್ನಾಗಿ ಘೋಷಿಸಿದೆ. ರಾಜ್ಯಪಾಲರ ಪರವಾಗಿ ಜಿ.ಅನ್ನಪೂರ್ಣ ಸಹಿ ಮಾಡಿರುವ ಆದೇಶದಲ್ಲಿ ಈ ಸಮಿತಿ ರಾಜ್ಯ ಧ್ವಜವನ್ನು ವಿನ್ಯಾಸಗೊಳಿಸಿ ಅದಕ್ಕೆ ಕಾನೂನು ಮಾನ್ಯತೆ ನೀಡುವ ಸಂಬಂಧ ವರದಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ ಎಂದು ಟೈಮ್ಸ್ ಆಫ್ ಇಂಡಿಯಾ ಪತ್ರಿಕೆ ವರದಿ ಮಾಡಿದೆ.

ಬಿಜೆಪಿಯಿಂದ ವಿರೋಧ
2012ರಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ರಾಜ್ಯಕ್ಕೆ ಎರಡು ಧ್ವಜ ಬೇಕು ಎಂಬ ಬೇಡಿಕೆಯನ್ನು ತಿರಸ್ಕರಿಸಿತ್ತು. ಆಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾಗಿದ್ದ ಗೋವಿಂದ ಕಾರಜೋಳ ಒಂದೇ ರಾಷ್ಟ್ರ ಒಂದೇ ಧ್ವಜ  ಎಂಬ ನೀತಿಯನ್ನು ಅಳವಡಿಸಿಕೊಂಡಿರುವ ಕಾರಣ ಎರಡು ಧ್ವಜಗಳನ್ನು ಅಂಗೀಕಾರ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರು. ಆದಾಗ್ಯೂ, ಭಾರತವೆಂಬುದು ಒಂದು ದೇಶ ಇಲ್ಲಿರುವ ರಾಜ್ಯಕ್ಕೊಂದು ಪ್ರತ್ಯೇಕ ಧ್ವಜ ಬೇಕು ಎಂಬ ಒತ್ತಾಯವನ್ನು ಸ್ವೀಕರಿಸಲಾಗುವುದಿಲ್ಲ ಎಂದು ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದ್ದಾರೆ. 

ಈ ವಿಷಯದ ಬಗ್ಗೆ ಪ್ರತಿಕ್ರಿಯಿಸಿದ ಬಿಜೆಪಿ ಸಂಸದೆ  ಶೋಭಾ ಕರಂದ್ಲಾಜೆ, ಕರ್ನಾಟಕದಲ್ಲಿರುವ ಕಾಂಗ್ರೆಸ್ ಸರ್ಕಾರ ದೇಶದ ಐಕ್ಯತೆಯ ವಿರುದ್ಧ ನಡೆಯುತ್ತಿದೆ. ನಮ್ಮ ಪಕ್ಷ ಎಂದಿಗೂ ಒಂದು ರಾಷ್ಟ್ರ ಒಂದು ಧ್ವಜಕ್ಕಾಗಿ ಹೋರಾಟ ನಡೆಸಿದೆ. ಪ್ರತ್ಯೇಕ ಧ್ವಜದ ಬೇಡಿಕೆ ತಪ್ಪು. ನಾವು ಇದಕ್ಕೆ ಒಪ್ಪಲ್ಲ, ಕಾಶ್ಮೀರದಲ್ಲಿಯೂ ಅಂಥಾ ಧ್ವಜವಿಲ್ಲ. ಸಿದ್ದರಾಮಯ್ಯ ಈಗ ಮಾಡುತ್ತಿರುವುದು ತಪ್ಪು. ಸಿದ್ದರಾಮಯ್ಯ ವೋಟ್ ಬ್ಯಾಂಕ್‍ನ್ನು ಗುರಿಯಾಗಿರಿಸಿ ಎಲ್ಲರನ್ನೂ ಓಲೈಸಲು ಯತ್ನಿಸುತ್ತಿದ್ದಾರೆ ಎಂದಿದ್ದಾರೆ.

ರಾಜ್ಯಕ್ಕೆ ಪ್ರತ್ಯೇಕ ಧ್ವಜ ಬೇಕು ಎಂದು ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಸಮಿತಿ ರೂಪಿಸಿರುವುದಕ್ಕೆ ಆಕ್ಷೇಪ ವ್ಯಕ್ತ ಪಡಿಸಿರುವ ಬಿಜೆಪಿ ಇದು ರಾಷ್ಟ್ರ ವಿರೋಧಿ ನಡೆ ಎಂದು ಹೇಳಿದೆ.

ಸಿದ್ದರಾಮಯ್ಯ ಸವಾಲು
ಏಪ್ರಿಲ್‍ನಲ್ಲಿ ಚುನಾವಣೆ ಇದೆ, ಬಿಜೆಪಿಯವರು ತಮಗೆ ಧ್ವಜ ಬೇಡ ಎಂದು ಹೇಳಿಕೆ ನೀಡಲಿ ಎಂದು ಸಿದ್ದರಾಮಯ್ಯ ವಿಪಕ್ಷಗಳಿಗೆ ಸವಾಲು ಎಸೆದಿದ್ದಾರೆ.

ಇವರೇನಂತಾರೆ?
ಶಶಿ ತರೂರ್ ಬೆಂಬಲ
ರಾಷ್ಟ್ರಧ್ವಜಕ್ಕೆ ಅವಮಾನವಾಗದಂತೆ ರಾಜ್ಯವೊಂದಕ್ಕೆ ಪ್ರತ್ಯೇಕ ಧ್ವಜ ಹೊಂದುವ ಅವಕಾಶವಿದೆ ಎಂದು ಕೇರಳದ ಕಾಂಗ್ರೆಸ್ ಸಂಸದ ಶಶಿ ತರೂರ್  ಅಭಿಪ್ರಾಯ ಪಟ್ಟಿದ್ದಾರೆ.

ಕಾನೂನು ಚೌಕಟ್ಟಿನಲ್ಲಿದ್ದುಕೊಂಡೇ ಪ್ರತ್ಯೇಕ ಅಸ್ಮಿತೆ ಹೊಂದುವುದರಲ್ಲಿ ತಪ್ಪೇನಿಲ್ಲ ಎಂದು ಕರ್ನಾಟಕ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಟ್ವೀಟ್ ಮಾಡಿದ್ದಾರೆ.

ಸಾಮಾಜಿಕ ತಾಣದಲ್ಲಿ ಬಿಸಿ ಬಿಸಿ ಚರ್ಚೆ

ರಾಜ್ಯದಲ್ಲಿ ಹಿಂದಿ ಹೇರಿಕೆ ವಿರುದ್ಧ ಹೋರಾಟಗಳು ನಡೆಯುತ್ತಿರುವ ಹೊತ್ತಿನಲ್ಲೇ ಇದೀಗ ನಾಡಧ್ವಜದ ಮಾನ್ಯತೆ ಬಗ್ಗೆ ಪರ-ವಿರೋಧ ಚರ್ಚೆಗಳು ಆರಂಭವಾಗಿವೆ.

 

ಪ್ರತಿಕ್ರಿಯಿಸಿ (+)