ಶನಿವಾರ, ಡಿಸೆಂಬರ್ 7, 2019
24 °C

ಹಾರುವ ಕನಸಿಗೆ ರೆಕ್ಕೆ ಮೂಡಿ...

Published:
Updated:
ಹಾರುವ ಕನಸಿಗೆ ರೆಕ್ಕೆ ಮೂಡಿ...

‘ಅಪ್ಪಾ.. ದೊಡ್ಡವಳಾದ ಮೇಲೆ ನಾನು ವಿಮಾನ ಓಡಿಸ್ತೀನಿ’ ಎಂದು ಕನಸು ಕಂಡಿದ್ದ ಹುಡುಗಿ ಆ್ಯನಿ ದಿವ್ಯಾ, ಇಂದು ವಿಶ್ವಪ್ರಸಿದ್ಧ ಪೈಲಟ್‌. ಅತಿ ಉದ್ದದ ‘ಬೋಯಿಂಗ್ 777’ ವಿಮಾನದ ಮೊದಲ ಮಹಿಳಾ ಕಮಾಂಡರ್ ಆಗಿದ್ದಾರೆ. ಭಾರತೀಯ ಹೆಣ್ಣುಮಗಳೊಬ್ಬಳು ಈ ಸಾಧನೆ ಮಾಡಿರುವುದು ಹೆಮ್ಮೆಯ ಸಂಗತಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಈಕೆಯ ಫೋಟೊ ವೈರಲ್ ಆಗಿದೆ.

ಮೂವತ್ತು ವರ್ಷದ ಆ್ಯನಿ ‘ಬೋಯಿಂಗ್ 777’ ವಿಮಾನದ ಅತ್ಯಂತ ಕಿರಿಯ ಮಹಿಳಾ ಕಮಾಂಡರ್ ಎಂಬ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಪಠಾಣ್ ಕೋಟ್ ಮೂಲದ ದಿವ್ಯಾ ಸಣ್ಣವರಿರುವಾಗಲೇ ಅವರ ಕುಟುಂಬ ಆಂಧ್ರಪ್ರದೇಶದ ವಿಜಯವಾಡಕ್ಕೆ ಬಂತು. ಮಧ್ಯಮ ವರ್ಗದ ಕುಟುಂಬದ ದಿವ್ಯಾಗೆ ಪೈಲಟ್‌ ಆಗಲು ಸಾಕಷ್ಟು ಹಣಕಾಸಿನ ಮುಗ್ಗಟ್ಟು ಎದುರಾಯಿತು.

ದಿವ್ಯಾ ಮೊದಲು ಪೈಲಟ್‌ ಆಗುತ್ತೇನೆ ಎಂದು ಹೇಳಿದಾಗ ಸಂಬಂಧಿಕರು ಇದನ್ನು ವಿರೋಧಿಸಿದ್ದರಂತೆ. ಆದರೂ ಪೋಷಕರು ಸಾಲ ಮಾಡಿ ದಿವ್ಯಾ ಆಸೆಯನ್ನು ಪೋಷಿಸುತ್ತಾ ಬಂದರು. ದಿವ್ಯಾಳ ಪರಿಶ್ರಮದಿಂದ ಓದಿ ವಿದ್ಯಾರ್ಥಿವೇತನವನ್ನೂ ಪಡೆದುಕೊಂಡರು.

‘ಅಪ್ಪನಿಗೆ ನಾನ್ನೊಂದು ದಿನ ಬಾನಿನಲ್ಲಿ ಹಾರುತ್ತೇನೆ ಎಂಬುದು ತಿಳಿದಿತ್ತು. ಹೀಗಾಗಿ ನನ್ನ ಕನಸಿಗೆ ನೀರೆರೆದರು’ ಎನ್ನುತ್ತಾರೆ ದಿವ್ಯಾ.

ವಿಜಯವಾಡದಲ್ಲಿ ಓದಿದ ನಂತರ 17ನೇ ವಯಸ್ಸಿಗೆ, ಉತ್ತರ ಪ್ರದೇಶದಲ್ಲಿರುವ ಇಂದಿರಾಗಾಂಧಿ ರಾಷ್ಟ್ರೀಯ ಉರಾನ್ ಅಕಾಡೆಮಿಗೆ (IGRUA) ಸೇರಿದರು. ‘ನಾನು ಪೈಲಟ್ ತರಬೇತಿ ಪಡೆಯಲು ವಿಜಯವಾಡದಲ್ಲಿ ಕೋಚಿಂಗ್ ವ್ಯವಸ್ಥೆ ಇರಲಿಲ್ಲ. ತಂದೆ ತಾಯಿ ನನ್ನ ಮೇಲೆ ಇರಿಸಿದ್ದ ಭರವಸೆಯೇ ಇಂದು ನಾನು ಈ ಸಾಧನೆ ಮಾಡಲು ಸಾಧ್ಯವಾಯಿತು’ ಎನ್ನುತ್ತಾರೆ.

ಇಂಗ್ಲಿಷ್ ಭಾಷೆಯ ಉಚ್ಚಾರಣೆ, ಕಠಿಣವಾದ ವಿದ್ಯಾಭ್ಯಾಸ, ಸ್ನೇಹಿತರ ಕೊರತೆ, ವಿದ್ಯಾರ್ಥಿಗಳ ವಿನೋದಗಳು ಆ್ಯನಿ ದಿವ್ಯಾಗೆ ಬೇಸರ ತರಿಸಿವೆ. ಈ ಬಗ್ಗೆ ಹೇಳಿಕೊಳ್ಳುವ ದಿವ್ಯಾ ‘ಇಂಗ್ಲಿಷ್‌ ಭಾಷಾ ಜ್ಞಾನ ನನಗೆ ಕಡಿಮೆ ಇತ್ತು. ಈ ವಿಚಾರಕ್ಕಾಗಿ ತರಗತಿಯಲ್ಲಿ ಗೇಲಿ ಮಾಡುತ್ತಿದ್ದರು’ ಎಂದು ನೆನಪಿಸಿಕೊಳ್ಳುತ್ತಾರೆ.

ಆದರೆ ಇದನ್ನೇ ಸವಾಲಾಗಿ ಸ್ವೀಕರಿಸಿದ ದಿವ್ಯಾ ಹೆಚ್ಚು ಹೆಚ್ಚು ಓದಲು ಆರಂಭಿಸಿದರು. ಏರ್ ಇಂಡಿಯಾ ತರಬೇತಿಗೆ ಸೇರಿಕೊಂಡಾಗ ಅವರಿಗೆ 19 ವರ್ಷ. ತದನಂತರ ತರಬೇತಿಗಾಗಿ ಸ್ಪೇನ್‌ ದೇಶಕ್ಕೆ ಹೋದರು. ಅಲ್ಲಿಂದ ಅವರ ಅದೃಷ್ಟ ಬದಲಾಯಿತು. ಭಾರತದಲ್ಲೇ ತರಬೇತಿ ಪಡೆದು ಸಣ್ಣ ವಿಮಾನ ಓಡಿಸುತ್ತಾ ಅಷ್ಟಕ್ಕೇ ಸಂತೋಷ ಪಡದೆ ಸ್ಪೇನ್‌ನಲ್ಲಿ ಉನ್ನತ ವಿದ್ಯಾಭ್ಯಾಸ ಪಡೆದರು. ಅಲ್ಲಿ ದಿವ್ಯಾ ಅವರಿಗೆ ವಿಶ್ವಮಟ್ಟದಲ್ಲಿ ಇರುವ ಅವಕಾಶಗಳ ಪರಿಚಯವಾಯಿತು.

21ನೇ ವಯಸ್ಸಿಗೆ ಮತ್ತಷ್ಟು ತರಬೇತಿಗಾಗಿ ಲಂಡನ್‌ಗೆ ಹೋದರು. ಅಲ್ಲೇ ಅವರಿಗೆ ಬೋಯಿಂಗ್ ವಿಮಾನ ಹಾರಿಸುವ ಅವಕಾಶ ಸಿಕ್ಕಿದ್ದು. ಅವರ ಕಾರ್ಯಕ್ಷಮತೆ, ವೃತ್ತಿಪರತೆ, ಶ್ರದ್ಧೆಯಿಂದಾಗಿ ಇಂದು ಅತ್ಯಂತ ಕಿರಿಯ ಮಹಿಳಾ ಕಮಾಂಡರ್ ಎನ್ನುವ ಖ್ಯಾತಿ ಪಡೆದಿದ್ದಾರೆ.

ಹಿರಿಯ ಏರ್ ಇಂಡಿಯಾ ಕಮಾಂಡರ್ ಹಾಗೂ ಬೋಧಕರು ಹೇಳುವ ಪ್ರಕಾರ ‘ಆ್ಯನಿ ದಿವ್ಯಾ ಅತ್ಯಂತ ಶ್ರದ್ಧೆಯಿಂದ ಕೆಲಸ ನಿರ್ವಹಿಸುವ ಪೈಲೆಟ್‌. ಇವಳು ಎಲ್ಲಾ ವಿಚಾರದಲ್ಲೂ ನುರಿತಳು, ಹಾಗೂ ಧೈರ್ಯವಂತೆ’ ಈಕೆ ಅತ್ಯಂತ ಪರಿಶ್ರಮದ ಪೈಲಟ್ ಎಂದು ಹೊಗಳಿದ್ದಾರೆ.

Photo Credit: Kamlesh Pednekar

ಪ್ರತಿಕ್ರಿಯಿಸಿ (+)