ಭಾನುವಾರ, ಡಿಸೆಂಬರ್ 8, 2019
21 °C

ಆರೋಗ್ಯಕರ ತಂಗಾಳಿ ಬೇಕೇ ಬನ್ನಿ ‘ಧನ್ವಂತರಿ ವನ’ಕ್ಕೆ

Published:
Updated:
ಆರೋಗ್ಯಕರ ತಂಗಾಳಿ ಬೇಕೇ ಬನ್ನಿ ‘ಧನ್ವಂತರಿ ವನ’ಕ್ಕೆ

ಅತ್ಯಧಿಕ ವಾಯುಮಾಲಿನ್ಯ ಇರುವ ನಗರವೆಂಬುದು ಬೆಂಗಳೂರಿನ ‘ಹೆಗ್ಗಳಿಕೆ’. ಹಾಗಂತ ಮರಗಳನ್ನು ಬಲಿ ತೆಗೆದುಕೊಳ್ಳದೇ ಯಾವುದೇ ಅಭಿವೃದ್ಧಿ ಯೋಜನೆಗಳ ನೀಲಿ ನಕ್ಷೆ ಇಲ್ಲಿ ತಯಾರಾಗುವುದಿಲ್ಲ. ಮತ್ತೊಂದೆಡೆ ಉದ್ಯಾನಗಳ ಒಳಗೂ ಕಾಂಕ್ರಿಟೀಕರಣ ಹೆಚ್ಚುತ್ತಿದೆ.

ಪರಿಸ್ಥಿತಿ ಹೀಗಿರುವಾಗ, ಜೀವಸಂಕುಲಕ್ಕೆ ಸಂಜೀವಿನಿಯಾಗುವಂತಹ ಉದ್ಯಾನಗಳು ಸೌತ್‌ ಎಂಡ್‌ ವೃತ್ತದ ಬಳಿ ನಿರ್ಮಾಣವಾಗಿವೆ. ನಿಜ, ಜಯನಗರ ಬಳಿಯ ಸೌತ್‌ ಎಂಡ್‌ ವೃತ್ತದ ಬಳಿಯಿರುವ ಔಷಧೀಯ ಗಿಡಗಳ ‘ಧನ್ವಂತರಿ ವನ' ಹಾಗೂ ‘ಸಂಜೀವಿನಿ ವನ’ ಶುದ್ಧ ಗಾಳಿಯನ್ನು, ಸಮೃದ್ಧ ಆಮ್ಲಜನಕವನ್ನು ಮೊಗೆದುಕೊಡುತ್ತಿದೆ.

ವಾಯುಮಾಲಿನ್ಯ ಸಮಸ್ಯೆಗೆ ಕೊಂಚ ಮಟ್ಟಿಗಾದರೂ ಪರಿಹಾರ ಒದಗಿಸಬೇಕೆಂಬ ಉದ್ದೇಶದಿಂದ ಯಡಿಯೂರು ವಾರ್ಡ್‌ನ ಪಾಲಿಕೆ ಸದಸ್ಯೆ ಪೂರ್ಣಿಮಾ ಮತ್ತು ಅವರ ಪತಿ ಎನ್.ಆರ್.ರಮೇಶ್ಅವರ ಮುತುವರ್ಜಿಯಿಂದ ನಿರ್ಮಾಣವಾದ ಉದ್ಯಾನವಿದು. ಸಸ್ಯ ತಜ್ಞರನ್ನು ಭೇಟಿ ಮಾಡಿ ಗಿಡಗಳನ್ನು ಆಯ್ದು ನೆಟ್ಟಿರುವುದು ವಿಶೇಷ.

ಒಂದೂವರೆ ಎಕರೆಯ ಉದ್ಯಾನದಲ್ಲಿ ಹತ್ತಾರು ಬಗೆಯ ಔಷಧೀಯ ಸಸಿಗಳಿವೆ. ಚರ್ಮರೋಗ, ಶ್ವಾಸಕೋಶದ ಸಮಸ್ಯೆ, ಮಧುಮೇಹ ಮತ್ತಿತರ ಕಾಯಿಲೆಗಳ ನಿವಾರಣೆಗೆ ರಾಮಬಾಣವಾಗುವಂತಹ ಗಿಡಗಳಿವು. ಇಲ್ಲಿನ ಔಷಧೀಯ ಸಸಿಗಳ ವನದಲ್ಲಿ ನಿತ್ಯ ಸಾರ್ವಜನಿಕರು ವಾಯು ವಿಹಾರ ಮಾಡುವುದರಿಂದ ಅವರ ಪಾಲಿಗೆ ‘ಸಂಜೀವಿನಿ’ಯಾಗುತ್ತಿದೆ.

ಯೋಗಾಭ್ಯಾಸಕ್ಕೂ ಅವಕಾಶವಿದೆ:ಸುಮಾರು 35ರಿಂದ 40 ಮಂದಿ ಏಕಕಾಲದಲ್ಲಿ ಧ್ಯಾನ ಮಾಡಬಹುದಾದ ‘ಯೋಗ ಸ್ಥಾನ’ವನ್ನೂ ಈ ವನದಲ್ಲಿ ನಿರ್ಮಿಸಲಾಗಿದೆ. ಇದರ ಪಕ್ಕದಲ್ಲಿಯೇ ಸಂಜೀವಿನಿ ವನವಿದೆ. ಅದಕ್ಕೂ ಧನ್ವಂತರಿ ವನಕ್ಕೂ ಸಂಪರ್ಕ ಮಾರ್ಗ ಕಲ್ಪಿಸಲಾಗಿದೆ.

ಆಗುಂಬೆ, ಅಘನಾಶಿನಿ ನದಿ ಪ್ರದೇಶ ಮತ್ತು ಸಹ್ಯಾದ್ರಿ ಪರ್ವತ ಶ್ರೇಣಿಗಳಿಂದ ತರಿಸಲಾಗಿರುವ 160 ಹೆಚ್ಚು ಬಗೆಯ ಔಷಧಿಯ ಸಸ್ಯಗಳಿಂದ ‘ಧನ್ವಂತರಿ ವನ’ ಹಾಗೂ 130 ಪ್ರಭೇದ ಗಿಡಮೂಲಿಕೆಗಳ ‘ಸಂಜೀವಿನಿ ವನ’ ನಿರ್ಮಿಸಲಾಗಿದೆ. ಪರಿಸರವಾದಿ ಸುರೇಶ್‌ ಹೆಬ್ಳೀಕರ್‌ ಮತ್ತು ಅವರ ಪುತ್ರ ಅಕ್ಷಯ್‌ ಹೆಬ್ಳೀಕರ್‌ ಮಾರ್ಗದರ್ಶನದಲ್ಲಿ ಔಷಧೀಯ ಸಸಿಗಳ ಆಯ್ಕೆ ಮತ್ತು ವನ ನಿರ್ಮಾಣ ಮಾಡಲಾಗಿದೆ. ಇಲ್ಲಿ ಬೆಳೆಸಲಾಗುತ್ತಿರುವ ‘ಸಂಜೀವಿನಿ’ ಎಂಬ ಸಸ್ಯವನ್ನು ಹಿಮಾಲಯದ ತಪ್ಪಲು, ದಾಂಡೇಲಿ, ಆಗುಂಬೆ, ಪಶ್ಚಿಮ ಘಟ್ಟದ ಪ್ರದೇಶದಲ್ಲಿ ಶೋಧನೆ ನಡೆಸಿ ತಂದು ನೆಡಲಾಗಿದೆ. ಜತನದಿಂದ ಬೆಳೆಸಲಾಗುತ್ತಿದೆ ಎಂದು ರಮೇಶ್‌ ಮಾಹಿತಿ ನೀಡುತ್ತಾರೆ.

ಶೀತ, ಕೆಮ್ಮು, ನೆಗಡಿ ಬೆಂಗಳೂರಿಗರಿಗೆ ವರ್ಷಕಾಲ ಕಾಡುವ ಸಾಮಾನ್ಯ ಕಾಯಿಲೆಗಳು. ಅತಿಯಾದ ವಾಹನ ದಟ್ಟಣೆಯಿಂದಾಗಿ ಮಹಾನಗರ ಮಾಲಿನ್ಯದಿಂದ ಕೂಡಿದ್ದು, ನಗರವಾಸಿಗಳ ಆರೋಗ್ಯದ ಮೇಲೆ ವ್ಯತ್ತಿರಿಕ್ತ ಪರಿಣಾಮ ಬೀರಿದೆ. ಇಲ್ಲಿನ ಶೇ23ರಷ್ಟು ಜನ ಆಸ್ತಮಾ ಪೀಡಿತರಾಗಿದ್ದಾರೆ ಹಾಗೂ ಶೇ17ರಷ್ಟು ಜನ ವಿವಿಧ ರೀತಿಯ ಚರ್ಮವ್ಯಾಧಿ, ಸೋಂಕು, ಅಲರ್ಜಿಯಿಂದ ಬಳಲುತ್ತಿದ್ದಾರೆ ಎಂದು ಸಮೀಕ್ಷೆಗಳು ತಿಳಿಸಿವೆ. ಪರಿಸ್ಥಿತಿ ಹೀಗಿರುವಾಗ ಪೂರ್ಣ ಪ್ರಮಾಣದಲ್ಲಿ ಆಮ್ಲಜನಕವನ್ನು ಮೊಗೆದುಕೊಡುವ ಇಂತಹ ಪಾರ್ಕ್‌ಗಳ ಸಂಖ್ಯೆ ನಗರದ ಎಲ್ಲಾ ವಾರ್ಡ್‌ಗಳಲ್ಲೂ ನಿರ್ಮಾಣವಾದರೆ ಎಷ್ಟು ಚಂದ. ನೀವೆನಂತೀರಿ?

***

ಸಸ್ಯಗಳ ಉಪಯೋಗ

ಉದ್ಯಾನದಲ್ಲಿ ‘ಆಡುಸೋಗೆ’ ಗಿಡವಿದೆ. ಇದರ ಬೀಜ ಸೇವನೆಯಿಂದ ಉಸಿರಾಟದ ತೊಂದರೆ ನಿವಾರಣೆಯಾಗಲಿದೆ. ಹಾವು ಕಡಿತಕ್ಕೆ ‘ಬಾತುಕೋಳಿ ಹೂವು’, ಕ್ಯಾನ್ಸರ್‌ಗೆ ರಾಮಬಾಣವಾದ ‘ಶತಾವರಿ’ ಮತ್ತು ‘ಸರ್ಪಬಂಧ’, ಕ್ಷಯರೋಗಕ್ಕೆ ‘ವಿಷ ಮಧುರ’, ಚೇಳುಕಡಿತ ನೋವು ನಿವಾರಣೆಗೆ ಬಳಸುವ ‘ನೀರು ಕಣಗಲು’, ಬೊಜ್ಜು ಕರಗಿಸಲು ‘ಕುದುರೆಗೋಟು’, ಸೌಂದರ್ಯವರ್ಧಕ ‘ಸುರಹೊನ್ನೆ’ ಸೇರಿದಂತೆ 160 ಬಗೆಯ ಗಿಡಮೂಲಿಕೆ ಸಸ್ಯಗಳನ್ನು ಇಲ್ಲಿ ಬೆಳೆಸಲಾಗಿದೆ. 1800ಕ್ಕೂ ಹೆಚ್ಚು ಕಾಯಿಲೆ ಗುಣ ಪಡಿಸುವಂತಹ ಗಿಡಮೂಲಿಕೆ, ತೊಗಟೆ, ಒಣಎಲೆ, ಬೇರು, ಕಾಂಡ ಮತ್ತಿತರ ಪುಡಿ ಮಾರಾಟ ಮಳಿಗೆ ಸೆಪ್ಟೆಂಬರ್‌ನಲ್ಲಿ ಉದ್ಯಾನದಲ್ಲೇ ಉದ್ಘಾಟನೆಗೊಳ್ಳಲಿದೆ .

***

ಶುದ್ಧವಾದ ಗಾಳಿಯ ಸೇವನೆಗೆಂದೇ ಉದ್ಯಾನಗಳಿಗೆ ವಾಯುವಿಹಾರಕ್ಕೆ ಹೋಗುವವರಿದ್ದಾರೆ. ಸಮೃದ್ಧವಾದ ಆಮ್ಲಜನಕವನ್ನು ಮೊಗೆದುಕೊಡುವಂತಾಗಬೇಕು ಎಂಬ ಕಾಳಜಿಯೊಂದಿಗೆ ಸೌತ್‌ ಎಂಡ್‌ ವೃತ್ತದ ಬಳಿ ಎರಡು ಉದ್ಯಾನಗಳನ್ನು ನಿರ್ಮಿಸಲಾಗಿದೆ. ಈ ಮಹಾನಗರದ ಕಾಂಕ್ರೀಟ್‌ ಕಾಡಿಗೆ ಇಂತಹ ಆಮ್ಲಜನಕದ ಬ್ಯಾಂಕುಗಳ ಅಗತ್ಯ ಖಂಡಿತಾ ಇದೆ

***

ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾವ ಉದ್ಯಾನದಲ್ಲೂ ಇಂತಹ ಪ್ರಯತ್ನ ನಡೆದಿಲ್ಲ. ಮುಂದಿನ ದಿನಗಳಲ್ಲಿ ಗಿಡ ಮೂಲಿಕೆ ಸಸ್ಯಗಳ ಉದ್ಯಾನ ನಿರ್ಮಾಣದ ಉದ್ದೇಶವನ್ನು  ಪಾಲಿಕೆ ಹೊಂದಿದೆ.

ನಿರಂಜನ್, ಬಿಬಿಎಂಪಿ ತೋಟಗಾರಿಕೆ ಇಲಾಖೆ ಅಧಿಕಾರಿ

***

ಮಹಾನಗರಪಾಲಿಕೆಯ ಅನುದಾನ  ಬಳಸಿಕೊಂಡು ₹1ಕೋಟಿ 85ಲಕ್ಷ  ವೆಚ್ಚದಲ್ಲಿ ‘ಧನ್ವಂತರಿ’ ಹಾಗೂ ‘ಸಂಜೀವಿನಿ ವನ’ ಅಭಿವೃದ್ಧಿಪಡಿಸಲಾಗಿದ್ದು, ಸಾರ್ವಜನಿಕರಿಗೆ ಇದರಿಂದ ಅನುಕೂಲವಾಗಿದೆ.

ಪೂರ್ಣಿಮಾ ಎನ್.ಆರ್.ರಮೇಶ್, ಯಡಿಯೂರು ವಾರ್ಡ್ ಸದಸ್ಯೆ

ಪ್ರತಿಕ್ರಿಯಿಸಿ (+)