ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿ, ಸಾಂಪ್ರತ... ಮಕ್ಕಳು ಬರೆದ ಪತ್ರ

Last Updated 18 ಜುಲೈ 2017, 19:30 IST
ಅಕ್ಷರ ಗಾತ್ರ

‘ನಾ ಮೆಚ್ಚಿದ ಹುಡುಗನಿಗೆ.. ಪತ್ರದಿ ಬರೆದ ಪದಗಳನ್ನು ಚುಂಬಿಸಿ ಕಳುಹಿಸಿರುವೆ..’

– ಈ ಹಳೆಯ ಚಿತ್ರಗೀತೆಯನ್ನು ನೆನಪಿಸುವ ಕಾರ್ಯಕ್ರಮವೊಂದು ಚಾಮರಾಜಪೇಟೆಯ ಸೇಂಟ್‌ ಜೋಸೆಫ್‌ ಪ್ರೌಢಶಾಲೆಯಲ್ಲಿ ಇತ್ತೀಚೆಗೆ ನಡೆಯಿತು. ಹಾಡಿನಲ್ಲಿ ಪ್ರೇಮಿ ಪತ್ರ ಬರೆದಿದ್ದರೆ ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಅಪ್ಪ, ಅಮ್ಮ, ಪೋಷಕರಿಗೆ ಪತ್ರ ಬರೆದಿದ್ದರು. ನೀಲಿ ಬಣ್ಣದ ಆ ಇನ್‌ಲ್ಯಾಂಡ್‌ ಪತ್ರಗಳಲ್ಲಿ ತಮ್ಮ ಭಾವನೆಗಳನ್ನು ಅಕ್ಷರಕ್ಕಿಳಿಸಿದವರು ಸ್ವಲ್ಪ ದೂರದಲ್ಲಿರಿಸಿದ್ದ ಅಂಚೆ ಡಬ್ಬಾದೊಳಗೆ ಹಾಕುತ್ತಿದ್ದರು.

ಏನಿದು ಎಂದು ಕುತೂಹಲವಾಯಿತೇ? ಸೇಂಟ್‌ ಜೋಸೆಫ್‌ ಪ್ರೌಢಶಾಲೆಯಲ್ಲಿ ನಡೆದ ಇನ್‌ಲ್ಯಾಂಡ್‌ ಪತ್ರ ಬರೆಯುವ ಸ್ಪರ್ಧೆಯ ನೋಟಗಳಿವು.

ಅಂಚೆ ಕಚೇರಿಯಲ್ಲಿ ಸಿಗುವ ಪೋಸ್ಟು ಕಾರ್ಡ್, ಇನ್‌ಲ್ಯಾಂಡ್‌ ಲೆರ್, ಅಂಚೆ ಲಕೋಟೆ, ಅಂಚೆ ಚೀಟಿಗಳ ಜರೂರತ್ತು ಈ ಮೊಬೈಲ್ ಫೋನ್‌ ಮತ್ತು ಅಂತರ್ಜಾಲ ಯುಗದ ಮಂದಿಗೆ ಇಲ್ಲ. ಕೌಟುಂಬಿಕವಾಗಿ ಮತ್ತು ಆತ್ಮೀಯರ ಬಳಗದಲ್ಲಿಯೂ ಪತ್ರಗಳ ವ್ಯವಹಾರ ಅಕ್ಷರಶಃ ನಿಂತೇ ಹೋಗಿದೆ.

ಮಕ್ಕಳಿಗಂತೂ ಇದರ ಬಗ್ಗೆ ಜ್ಞಾನವೇ ಇಲ್ಲ. ಯಾವುದೇ ಊರಿನಲ್ಲಿ, ದೇಶದಲ್ಲಿ ಇದ್ದರೂ ಕ್ಷಣ ಮಾತ್ರದಲ್ಲಿ ‘ಡೆಲಿವರಿ’ ಆಗಬಲ್ಲ ತಂತ್ರಜ್ಞಾನಕ್ಕೆ ಒಗ್ಗಿಕೊಂಡವರಿಗೆ ಅಪ್ಪ, ಅಮ್ಮ, ಬಂಧುಗಳು, ಗೆಳೆಯ, ಗೆಳತಿಯರಿಗೆ ‘ಹಾರ್ಡ್‌ಕಾಪಿ’ಗಳನ್ನು ಬರೆಯುವ ಅಗತ್ಯವೂ ಇರುವುದಿಲ್ಲವೆನ್ನಿ.

ಬದಲಾದ ಈ ಜೀವನಶೈಲಿಯನ್ನು ಗಮನದಲ್ಲಿಟ್ಟುಕೊಂಡೇ ಸೇಂಟ್‌ ಜೋಸೆಫ್‌ ಪ್ರೌಢಶಾಲೆಯಲ್ಲಿ ಪತ್ರ ಬರೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ನೂರಾರು ಮಕ್ಕಳು ಪಾಲ್ಗೊಂಡಿದ್ದರು. ನೆಲದಲ್ಲಿ ಸಾಲಾಗಿ ಕುಳಿತ ಮಕ್ಕಳಿಗೆ ಒಂದೊಂದು ಇನ್‌ಲ್ಯಾಂಡ್ ಪತ್ರಗಳನ್ನು ಕೊಡಲಾಯಿತು. ಕೈಗೆ ಬಂದ ಪತ್ರವನ್ನು ಮಕ್ಕಳು ಅತ್ತ ಇತ್ತ ತಿರುಗಿಸಿ ತಿರುಗಿಸಿ, ಒಬ್ಬರ ಮುಖವನ್ನು ಇನ್ನೊಬ್ಬರು ನೋಡಿದರು. ಎಲ್ಲಿಂದ ಪತ್ರ ಬರೆಯಲು ಪ್ರಾರಂಭಿಸಬೇಕು ಎಂಬ ಗೊಂದಲ ಅವರಿಗೆ.

ಅಪ್ಪ, ಅಮ್ಮನಿಗೆ ಯಾವ ರೀತಿಯಲ್ಲಿ ವಿಷಯ ಪ್ರಸ್ತಾಪ ಮಾಡಬೇಕು, ಇಂಗ್ಲೀಷ್‌ನಲ್ಲಿ ಬರೆಯಬೇಕಾ, ಕನ್ನಡದಲ್ಲಾ? ಕಳುಹಿಸುವ ವಿಳಾಸ ಮತ್ತು ಬರೆದವನ ವಿಳಾಸ ಎಲ್ಲಿ ಬರೆಯಬೇಕು ಎಂದು ಗಲಿಬಿಲಿಗೊಂಡರು.

ಶಿಕ್ಷಕರೊಬ್ಬರು ವೇದಿಕೆ ಮೇಲೆ ಹೋಗಿ ಒಂದು ಇನ್‌ಲ್ಯಾಂಡ್‌ ಪತ್ರವನ್ನು ಹಿಡಿದುಎಲ್ಲಾ ಗೊಂದಲಗಳಿಗೆ ಪರಿಹಾರರೂಪದಲ್ಲಿ ವಿವರಣೆ ಕೊಟ್ಟರು. ನಿಮ್ಮ ನಿಮ್ಮ ಮಾತೃ ಭಾಷೆಯಲ್ಲಿಯೇ ಪತ್ರ ಬರೆದರೆ ಒಳ್ಳೆಯದು. ನಿಮ್ಮವರಿಗೆ ನೀವೇನು ಹೇಳಲು ಬಯಸಿದ್ದೀರಿ ಎಂಬುದು ಸುಲಭವಾಗಿ ತಿಳಿದುಕೊಳ್ಳಲು ಸಹಾಯವಾಗುತ್ತದೆ ಮತ್ತು ನಿಮ್ಮ ಮಾತೃ ಭಾಷೆಯನ್ನು ಉಳಿಸಿದಂತೆ ಆಗುತ್ತದೆ ಎಂದರು.

ಕೆಲವು ಮಕ್ಕಳು ನಾಲ್ಕೈದು ಸಾಲು ಬರೆದು ಮುಗಿಸಿದರೆ, ಇನ್ನು ಕೆಲವು ಮಕ್ಕಳು ಪುಟ ಪೂರ್ತಿ ಬರೆದರು. ಒಂದಷ್ಟು ಮಂದಿ ಏನೂ ಬರೆಯದೇ ಪತ್ರವನ್ನು ಬಂದ್‌ ಮಾಡಿ ‘ಟು’ ‘ಫ್ರಂ’ ವಿಳಾಸ ಬರೆದು ಅಂಚೆ ಡಬ್ಬಿಗೆ ಹಾಕಿದರು.

ಮುಂಬೈಯ ಇಂಡಿಯನ್‌ ಪೆನ್‌ಪಾಲ್ಸ್‌ ಲ್ಯಾಂಗ್ವೇಜ್‌ ಸಂಸ್ಥೆಯ ಸಹಯೋಗದಲ್ಲಿ ಈ ಸ್ಪರ್ಧೆ ನಡೆದಿತ್ತು. ಪತ್ರ ಬರೆಯುವ ಅಭ್ಯಾಸವೇ ಅಳಿವಿನಂಚಿನಲ್ಲಿರುವಾಗ ವಿದ್ಯಾರ್ಥಿಗಳಿಗೆ ಸ್ಪರ್ಧೆಯ ಮೂಲಕ ಅರಿವು ಮೂಡಿಸಿರುವುದು ಪೋಷಕರ ಮೆಚ್ಚುಗೆಗೆ ಪಾತ್ರವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT