ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಥಟ್ಟನೆ ಹೇಳಿ ಇದು ಯಾವ ಬಾಳೆಯ ಗೊನೆ?

Last Updated 18 ಜುಲೈ 2017, 19:30 IST
ಅಕ್ಷರ ಗಾತ್ರ

ತಗಡಿನ ಶೆಡ್‌ ಒಳಗೆ ಕುಳಿತು ಆ ಮಹಿಳೆ ಏಕಾಗ್ರತೆಯಿಂದ ಕೃತಕ ಹೂವುಗಳಿಂದ ಹಾರ ಮಾಡುತ್ತಿದ್ದರು. ಒಂದು ಹೂವು ಮೇಲೆ ಕೆಳಗಾದರೂ ಹಾರದ ಅಂದವೇ ಬದಲಾಗುತ್ತದೆ ಎಂಬ ಆತಂಕ. ತಾಜಾ ಮಲ್ಲಿಗೆ ಹೂವುಗಳಿಂದಲೇ ಹಾರ ಮಾಡಿದ್ದಾರೆ ಎಂಬಂತೆ ಹಾರ ಕಂಗೊಳಿಸುತ್ತಿತ್ತು.

ಹಾರ ಮುಗಿದ ಮೇಲೆ ಸ್ಪಂಜ್‌ಗೆ ಬಣ್ಣದ ಬಟ್ಟೆ ಸುತ್ತಿ ಕೃತಕ ಬಾಳೇಹಣ್ಣು ಮಾಡುತ್ತಿದ್ದರು.‌ ಇಪ್ಪತ್ತೈದು, ಮೂವತ್ತು ಹಣ್ಣುಗಳಾದ ಮೇಲೆ ಉದ್ದದ ಕಡ್ಡಿಗೆ ಬಿಡಿಬಿಡಿ ಹಣ್ಣುಗಳನ್ನು ಅಂಟಿಸಿ ಗೊನೆಯ ರೂಪ ನೀಡುತ್ತಿದ್ದರು.

ಹಳೆ ವಿಮಾನ ನಿಲ್ದಾಣ ರಸ್ತೆಯ ಕೋನೇನ ಅಗ್ರಹಾರದ ನಿವಾಸಿ ಮಮತಾ ಅವರು ಆಲಂಕಾರಿಕ ವಸ್ತುಗಳು, ಹಬ್ಬಹರಿದಿನಗಳಿಗೆ ಬೇಕಾಗುವ ಸಾಮಗ್ರಿಗಳನ್ನು ಮಾಡುವುದರಲ್ಲಿ ನಿಪುಣೆ.

ಶ್ರಾವಣ ಮಾಸದಿಂದ ಹಬ್ಬಗಳು ಆರಂಭವಾಗುತ್ತವೆ. ಅದರಲ್ಲೂ ವರಮಹಾಲಕ್ಷ್ಮಿ ಹಬ್ಬ ನಗರದಲ್ಲಿ ಜೋರಾಗಿಯೇ ಆಚರಿಸುತ್ತಾರೆ. ಲಕ್ಷ್ಮಿಯ ವಿಗ್ರಹವನ್ನು ಕೂರಿಸುವುದೇ ಒಂದು ಸಡಗರ. ಆದರೆ ಬಹಳಷ್ಟು ಮಹಿಳೆಯರಿಗೆ ಸೀರೆಯಿಂದ ಲಕ್ಷ್ಮಿಯ ಅಲಂಕಾರ ಮಾಡಲು ಕಷ್ಟವಾಗಬಹುದು. ಅಂಥ ಮಹಿಳೆಯರಿಗೆ ಅನುಕೂಲವಾಗುವಂತೆ ಲಕ್ಷ್ಮಿ ವಿಗ್ರಹ ಅಲಂಕಾರ ಮಾಡಿಕೊಡುತ್ತಾರೆ ಮಮತಾ.

‘ಇಪ್ಪತ್ತೈದು ವರ್ಷಗಳಿಂದ ನಾನು ಆಲಂಕಾರಿಕ ವಸ್ತುಗಳನ್ನು ಮಾಡುತ್ತಿದ್ದೇನೆ. ಆರಂಭದಲ್ಲಿ ಟೆಡ್ಡಿಬೇರ್‌, ಪಾಟ್‌ ಪೇಂಟಿಂಗ್, ಥರ್ಮಾಕೋಲ್‌ನಿಂದ ಕಲಾಕೃತಿಗಳನ್ನು ಮಾಡುತ್ತಿದ್ದೆ. ಟೆಡ್ಡಿಬೇರ್‌ಗಳನ್ನು ರಸ್ತೆ ಬದಿಯಲ್ಲಿ ಮಾಡಿ, ಮಾರುವವರು ಬಂದ ಮೇಲೆ ಬೇರೆ ಬೇರೆ ಕಲೆಗಳನ್ನು ಕಲಿತೆ. ಟ್ರೆಂಡ್‌ ಬದಲಾದಂತೆ ನಾನೂ ಬದಲಾದೆ. ಅದಕ್ಕಾಗಿ ಹಬ್ಬಗಳಿಗೆ ಬೇಕಾಗುವ ಆಲಂಕಾರಿಕ ವಸ್ತುಗಳು, ಪೂಜಾ ಸಾಮಗ್ರಿ ಮಾಡುವುದನ್ನು ಕರಗತ ಮಾಡಿಕೊಂಡೆ.

ಇವುಗಳಿಗೆ ಯಾವಾಗಲೂ ಬೇಡಿಕೆ ಇದ್ದೇ ಇರುತ್ತದೆ. ಇದಕ್ಕೆಲ್ಲಾ ಕಾರಣ ನನ್ನ ಅಮ್ಮ. ಅವರೇ ನನ್ನ ಗುರು’ ಎನ್ನುತ್ತಾರೆ ಮಮತಾ.
ಬಾಗಿಲು ತೋರಣ, ಗೃಹಪ್ರವೇಶಕ್ಕೆ ಬೇಕಾಗುವ ಆಲಂಕಾರಿಕ ವಸ್ತುಗಳು, ಗೋಡೆಗೆ ಅಂಟಿಸುವ ಕಲಾಕೃತಿಗಳು, ತೋಮಾಲೆ, ಲಕ್ಷ್ಮಿ ಮುಖವಾಡ, ಆಭರಣಗಳು, ಪ್ರಭಾವಳಿ, ಮೊಗ್ಗಿನ ಜಡೆ, ಕುಚ್ಚು ಜಡೆ, ನವಿಲು, ತಾವರೆ ಹೂವಿನ ಆಕೃತಿಗಳನ್ನು ಮಮತಾ ಮಾಡುತ್ತಾರೆ.

ಜೊತೆಗೆ ತುಳಸಿ, ಚೆಂಡು, ಮಲ್ಲಿಗೆ, ಸೇವಂತಿಗೆ, ಗುಲಾಬಿ ಹಾರಗಳು ಇವರ ಕೈಯಲ್ಲಿ ರೂಪುಗೊಳ್ಳುತ್ತವೆ. ಬಾಗಿಲಿಗೆ, ದೇವರ ಫೋಟೊಗಳಿಗೆ ಹಾಗೂ ಗೃಹಾಲಂಕಾರಕ್ಕೆ ಹಾಕಲು ಗ್ರಾಹಕರು ಹೆಚ್ಚು ಖರೀದಿಸುತ್ತಾರಂತೆ.

ಆಕರ್ಷಕ ಬಾಳೆ ಗೊನೆ: ಮಮತಾ ಅವರು ಸ್ಪಂಜು ಹಾಗೂ ಬಣ್ಣದ ಬಟ್ಟೆಗಳಿಂದ ಮಾಡುವ ಪುಟ್ಟ ಬಾಳೆಹಣ್ಣಿನ ಗೊನೆ ವಿಶೇಷ ಅಲಂಕಾರಗಳಿಗೆ ಇದು ಥೇಟ್‌ ಬಾಳೆಗೊನೆಯಂತೆ ಇರುತ್ತದೆ. ನೀರಿನಿಂದ ಸ್ವಚ್ಛಮಾಡಿದರೂ ಹಾಳಾಗುವುದಿಲ್ಲ. ಗೋಡೆಗೆ ನೇತುಹಾಕಲು, ಸ್ಕ್ರೀನ್‌ ಹಾಕಿದಾಗ, ಬಾಗಿಲಿನ ಎರಡು ಬದಿಗೆ ಹಾಕಲು ಚಂದ ಕಾಣುತ್ತವೆ.

ಮಮತಾ ಅವರು, ವರಮಹಾಲಕ್ಷ್ಮಿ ಹಬ್ಬದ ಸಂದರ್ಭಗಳಲ್ಲಿ ಲಕ್ಷ್ಮಿ ವಿಗ್ರಹಗಳಿಗೆ ಅಲಂಕಾರ ಮಾಡಿಕೊಡುತ್ತಾರೆ. ‘ಇಂದಿನ ಬಹುತೇಕ ಯುವತಿಯರಿಗೆ ಸೀರೆ ಉಡಲು ಬರುವುದಿಲ್ಲ. ಹಾಗಿರುವಾಗ ಅವರು ವಿಗ್ರಹಗಳಿಗೆ ಹೇಗೆ ತೊಡಿಸುತ್ತಾರೆ. ಅದಕ್ಕೆಂದೇ ನಾನು ಲಕ್ಷ್ಮಿ ಅಲಂಕಾರ ಮಾಡಿಕೊಡುತ್ತೇನೆ. ಒಂದು ಗಂಟೆಯೊಳಗೆ ಅಲಂಕಾರ ಮಾಡಬಹುದು’ ಎನ್ನುತ್ತಾರೆ ಮಮತಾ.

ಒಂದು ವಿಗ್ರಹದ ಅಲಂಕಾರಕ್ಕೆ ₹200 ಶುಲ್ಕ. ಕಲಿಯಲು ಆಸಕ್ತಿ ಇರುವವರಿಗೆ ಹೇಳಿಕೊಡುತ್ತಾರೆ. ಬಡಾವಣೆಯಲ್ಲಿರುವ 20ಕ್ಕೂ ಹೆಚ್ಚು ಮಹಿಳೆಯರಿಗೆ ಉದ್ಯೋಗ ಕಲ್ಪಿಸಿಕೊಟ್ಟಿದ್ದಾರೆ. ಒಬ್ಬರು ದಿನಕ್ಕೆ 20 ಹಾರಗಳನ್ನು ಮಾಡುತ್ತಾರೆ. ಮೂರು ಮಂದಿ ಸೇರಿ ಹತ್ತು ದಿನಗಳ ಕಾಲ ಮಾಡುವ ‘ರೋಸ್‌ ಡೋರ್‌ಸೆಟ್‌’ಗೆ ಹೆಚ್ಚು ಬೇಡಿಕೆ ಇದೆಯಂತೆ. 

‘ನಾನು ಮನೆ ಕೆಲಸ ಮಾಡುತ್ತಿದ್ದೆ. ಆಲಂಕಾರಿಕ ವಸ್ತುಗಳನ್ನು ಮಾಡಲು ಆಸಕ್ತಿ ಇತ್ತು, ಹಾಗಾಗಿ ಇಲ್ಲಿ ಕೆಲಸಕ್ಕೆ ಸೇರಿಕೊಂಡೆ. ದಿನಕ್ಕೆ ₹300 ಸಿಗುತ್ತದೆ. ಹಾರಗಳಷ್ಟೇ ಅಲ್ಲದೇ ತೋರಣ, ಕಳಸ ಮಾಡುವುದನ್ನು ಕಲಿಯುತ್ತಿದ್ದೇನೆ’ ಎನ್ನುತ್ತಾರೆ ನೇಪಾಳದ ಸುನೀತಾ.
ಮಮತಾ ಅವರು ಮಾಡಿದ ವಸ್ತುಗಳನ್ನು ಮನೆಯಲ್ಲೇ ಪ್ರದರ್ಶನಕ್ಕಿಟ್ಟಿದ್ದಾರೆ. ಮಾರಾಟವನ್ನೂ ಮಾಡುತ್ತಾರೆ. ₹50ರಿಂದ ₹10 ಸಾವಿರ ಬೆಲೆಯ ವಸ್ತುಗಳಿವೆ.
ಮಾಹಿತಿಗೆ: 98868 95040

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT