ಶನಿವಾರ, ಡಿಸೆಂಬರ್ 7, 2019
16 °C

‘ಹಾರರ್‌’ಗೆ ತಂತ್ರಜ್ಞಾನದ ಸ್ಪರ್ಶ

Published:
Updated:
‘ಹಾರರ್‌’ಗೆ ತಂತ್ರಜ್ಞಾನದ ಸ್ಪರ್ಶ

ಥ್ರಿಲ್ಲರ್‌, ಹಾರರ್‌ ಸಿನಿಮಾ ಎಂದಾಕ್ಷಣ ಬಿಳಿಯ ಸೀರೆಯುಟ್ಟ ದೆವ್ವ, ರಕ್ತದ ಕಲೆಗಳು, ಮೈ ಜುಮ್ಮೆನ್ನಿಸುವ ಹಿನ್ನೆಲೆ ಸಂಗೀತದ ಅಬ್ಬರ ಜೋರಿರುತ್ತದೆ. ಆದರೆ, ಈ ನಿರ್ದೇಶಕರು ಇಂತಹ ಯಾವುದೇ ಅಂಶವನ್ನು ಚಿತ್ರದಲ್ಲಿ ತೋರಿಸುವುದಿಲ್ಲವಂತೆ. ಕೇವಲ ತಂತ್ರಜ್ಞಾನದ ಮೂಲಕ ‘ಪ್ರೊಡಕ್ಷನ್ ನಂ. 1’ ಹಾರರ್ ಚಿತ್ರ ಶುರು ಮಾಡುತ್ತಿದ್ದಾರೆ.

ಕತೆಗೆ ಸೂಕ್ತ ಶೀರ್ಷಿಕೆ ಇಟ್ಟಿಲ್ಲ. ಸದ್ಯದಲ್ಲೇ ಇಡಲಾಗುತ್ತದೆ ಎನ್ನುವುದು ಅವರ ಉತ್ತರ. ಸೂರ್ಯಕಿರಣ್‌ ತೆಲುಗು ಚಿತ್ರರಂಗದಲ್ಲಿ 250ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಬಾಲನಟನಾಗಿ ಅಭಿನಯಿಸಿದ್ದಾರೆ. ಆದರೆ, ಅವರು ನಿರ್ದೇಶಿಸಿರುವ ಎಲ್ಲ ಚಿತ್ರಗಳು ಪಡೆದುಕೊಂಡಿರುವುದು ‘ಯು’ ಪ್ರಮಾಣ ಪತ್ರ.

ಈ ಸಿನಿಮಾಕ್ಕೆ ‘ಎ’ ಸರ್ಟಿಫಿಕೇಟ್ ಲಭಿಸುವುದು ಖಚಿತ ಎಂಬ ನಂಬಿಕೆ ಸೂರ್ಯಕಿರಣ್ ಅವರದು. ಕತೆ ಬರೆದು ನಿರ್ದೇಶಕನಾಗಿ ಚಂದನವನದಲ್ಲಿ ಗುರುತಿಸಿಕೊಳ್ಳುವುದು ಅವರ ಸದ್ಯದ ಬಯಕೆ.

‘ಈ ಚಿತ್ರದಲ್ಲಿ ನಾಯಕ, ನಾಯಕಿ ಇರುವುದಿಲ್ಲ. ಎಲ್ಲ ಪಾತ್ರಗಳು ಮುಖ್ಯವಾಗಿವೆ. ಚಿತ್ರದಲ್ಲಿ ರಾಜನಾಗಿ ನಟ ರವಿಶಂಕರ್ ನಟಿಸುತ್ತಿದ್ದಾರೆ’ ಎಂದರು.

ಚೇತನ್‌ಚಂದ್ರ, ರಾಗಿಣಿ, ಚೈತನ್ಯ, ಶಾಂತಿ, ಸುಪ್ರಿಯಾ, ಭವ್ಯ ಶ್ರೀ ನಟಿಸುತ್ತಿದ್ದಾರೆ. ಇವರೊಂದಿಗೆ ಸಾಯಿತೇಜ್, ಆನಂದ್‌ ನಂದಾ, ಪರ್ವಿನ್‌ರಾಜ್, ರಾಹುಲ್, ಅಮರೇಶ್‌ರಾಜ್ ತಾರಬಳಗದಲ್ಲಿದ್ದಾರೆ.

ಮಡಿಕೇರಿ, ಸಕಲೇಶಪುರ, ಕೋಲಾರ, ಚಿತ್ರದುರ್ಗದಲ್ಲಿ ಚಿತ್ರೀಕರಣಕ್ಕೆ ಚಿತ್ರತಂಡ ಯೋಜನೆ ರೂಪಿಸಿಕೊಂಡಿದೆ. ಘಂಟಾಡಿ ಕೃಷ್ಣ ಅವರ ಸಂಗೀತವಿದೆ. ಮಲ್ಲಿಕ್ ಛಾಯಾಗ್ರಹಣ ಮಾಡಲಿದ್ದಾರೆ. ಆಂಧ್ರದ ಪರಿಟಾಲ ರಾಮ್‌ಬಾಬು ಈ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದಾರೆ.

ಪ್ರತಿಕ್ರಿಯಿಸಿ (+)