ಶನಿವಾರ, ಡಿಸೆಂಬರ್ 7, 2019
26 °C

ಹಳೆ ರೂಪಾಯಿಗೆ ಹೊಸ ಬೆಲೆ!

Published:
Updated:
ಹಳೆ ರೂಪಾಯಿಗೆ ಹೊಸ ಬೆಲೆ!

‘ಸಿನಿಮಾ ಬಿಡಗಡೆಯಾಗಲು ತಡವಾಗಿದೆ. ಇದನ್ನು ಮೊದಲು ಒಪ್ಪಿಕೊಂಡುಬಿಡುತ್ತೇನೆ’ ಎಂದು ಮೊದಲಿಗೇ ಹೇಳಿಕೊಂಡು ನಂತರ ಅದಕ್ಕೆ ಕಾರಣವಾದ ಅಂಶಗಳನ್ನು ಪಟ್ಟಿಮಾಡುತ್ತ ಹೋದರು ದಯಾಳ್‌ ಪದ್ಮನಾಭನ್‌.

ದಯಾಳ್‌ ಪದ್ಮನಾಭನ್‌ ಅವರ ನಿರ್ದೇಶನದಲ್ಲಿ 2012ರಲ್ಲಿ ಶುರುವಾಗಿದ್ದ ‘ಒಂದು ರೂಪಾಯಿ ಎರಡು ಪ್ರೀತಿ’ ಎಂಬ ಸಿನಿಮಾ ನಡುವೆ ನಿಂತು ಹೋಗಿತ್ತು. ಆದರೆ ಕೆಲವು ತಿಂಗಳುಗಳ ಹಿಂದೆ ಮತ್ತದಕ್ಕೆ ಮರುಜೀವ ಸಿಕ್ಕಿ ಇದೀಗ ’ಟಾಸ್‌’ ಆಗಿ ಹೆಸರು ಬದಲಾಯಿಸಿಕೊಂಡು ಬಿಡುಗಡೆಗೆ ಸಿದ್ಧವಾಗಿದೆ.

‘ಹೇಳಿಕೊಳ್ಳಲು ಸಾಧ್ಯವಾಗದ ಕಾರಣಗಳಿಂದ ಸಿನಿಮಾ ತಡವಾಗಿದೆ’ ಎಂದು ಅವರು ಹೇಳಿದರೂ ನಂತರ ಎಳೆಎಳೆಯಾಗಿ ಎಲ್ಲವನ್ನೂ ಹೇಳಿಕೊಂಡರು.

ಸಾಮಾನ್ಯವಾಗಿ ಒಂದು ನಾಯಕನಿಗೆ ಎರಡು ಮೂರು ನಾಯಕಿಯರು ಸಿಗುವ ಕಥೆಗಳು ಬರುತ್ತಲೇ ಇರುತ್ತವೆ. ಆದರೆ ಈ ಸಿನಿಮಾದಲ್ಲಿ ಅದು ಉಲ್ಟಾ. ಒಬ್ಬಳು ನಾಯಕಿಗೆ ಇಬ್ಬರು ನಾಯಕರು. ವಿಜಯರಾಘವೇಂದ್ರ ಮತ್ತು ಸಂದೀಪ್‌ ಇಬ್ಬರು ನಾಯಕರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮೊದಲಿಗೆ ಸಂದೀಪ್‌ ಅವರೇ ಈ ಚಿತ್ರಕ್ಕೆ ಹಣವನ್ನೂ ಹೂಡಿದ್ದರು.

ನಂತರ ಕುಟುಂಬದ ಸಮಸ್ಯೆಯ ಕಾರಣದಿಂದ ಅವರು ಈ ಸಿನಿಮಾದಿಂದ ಹಿಂದೆ ಸರಿದ ಕಾರಣದಿಂದ ಸಿನಿಮಾ ನಿಂತುಹೋಗಿತ್ತು. ಈಗ ವರ್ಷದ ಹಿಂದೆ ದಯಾಳ್‌ ಅವರು ಸಂದೀಪ್‌ ಅನ್ನು ಮತ್ತೆ ಸಂಪರ್ಕಿಸಿದಾಗ ಅವರು ಸಿನಿಮಾ ಪೂರ್ತಿಗೊಳಿಸಲು ಒಪ್ಪಿಕೊಂಡರು. ಸಿನಿಮಾಕ್ಕೆ ಆರ್ಥಿಕವಾಗಿ ಮರುಜೀವ ನೀಡಿದವರು ಅವಿನಾಶ್‌ ಶೆಟ್ಟಿ.

ಮನೆಯವರ ವಿರೋಧದ ನಡುವೆಯೇ ಪಿಕ್‌ನಿಕ್‌ ಹೋಗುತ್ತಿದ್ದೇನೆಂದು ಸುಳ್ಳು ಹೇಳಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾರೆ ಸಂದೀಪ್‌. ಇಷ್ಟೆಲ್ಲ ಕಸರತ್ತುಗಳ ನಂತರ ಪೂರ್ಣಗೊಂಡ ’ಟಾಸ್‌’ ಸಿನಿಮಾ ಬಗ್ಗೆ ದಯಾಳ್‌ ಅವರಿಗೆ ಅಪಾರ ವಿಶ್ವಾಸವಿದೆ. ನಟ ಪುನೀತ್‌ ರಾಜಕುಮಾರ್‌ ಈ ಸಿನಿಮಾ ನೋಡಿ ಪ್ರಶಂಸಿಸಿರುವುದೂ ಅವರ ವಿಶ್ವಾಸವನ್ನು ಹೆಚ್ಚಿಸಿದೆ.

‘ನನಗೆ ಯಾವ ಒತ್ತಡವೂ ಇಲ್ಲ. ಹಾಗೆಯೇ ಯಾವ ಭ್ರಮೆಗಳೂ ಇಲ್ಲ. ಈ ಸಿನಿಮಾ ಎಷ್ಟು ದಿನ ಓಡಿದರೆ ಏನು ಲಾಭ ಬರಬಹುದು ಎಂಬುದು ಸ್ಪಷ್ಟವಾಗಿ ಗೊತ್ತಿದೆ’ ಎಂದು ಲೆಕ್ಕಾಚಾರದ ಮಾತುಗಳನ್ನೂ ಆಡಿದರು. ಈ ಚಿತ್ರದಲ್ಲಿ ಅವರು ಸೆಕೆಂಡ್‌ ಹ್ಯಾಂಡ್‌ ಕಾರು ಮಾರಾಟಗಾರನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಸ್ನೇಹಿತನಾಗಿ ವಿಜಯ ರಾಘವೇಂದ್ರ ನಟಿಸಿದ್ದಾರೆ.

ಗೌತಮ್‌ ಸಂಗೀತ, ರಾಕೇಶ್‌ ಛಾಯಾಗ್ರಹಣ ಈ ಸಿನಿಮಾಕ್ಕಿದೆ. ಸಂದೀಪ್‌ ಬಿಟ್ಟರೆ ಚಿತ್ರದ ಯಾವ ಕಲಾವಿದರೂ ಪತ್ರಿಕಾಗೋಷ್ಠಿಯಲ್ಲಿ ಹಾಜರಿರಲಿಲ್ಲ. ಜುಲೈ 21ಕ್ಕೆ ಚಿತ್ರವನ್ನು ಬಿಡುಗಡೆ ಮಾಡಲು ದಯಾಳ್‌ ಸಿದ್ಧತೆ ಮಾಡಿಕೊಂಡಿದ್ದಾರೆ.

ಪ್ರತಿಕ್ರಿಯಿಸಿ (+)