ಭಾನುವಾರ, ಡಿಸೆಂಬರ್ 8, 2019
21 °C

ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಸಿಬಿಎಫ್‌ಸಿ ಅಂಕುಶ ಖಂಡನೀಯ

Published:
Updated:
ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಸಿಬಿಎಫ್‌ಸಿ ಅಂಕುಶ ಖಂಡನೀಯ

ಭಾರತ ಮೂಲದ ವಿಶ್ವದ ಪ್ರಸಿದ್ಧ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್‍ ಕುರಿತಾದ ‘ದಿ ಆರ್ಗ್ಯುಮೆಂಟೇಟಿವ್ ಇಂಡಿಯನ್’ ಸಾಕ್ಷ್ಯಚಿತ್ರದ ಕುರಿತಂತೆ ‘ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ’ (ಸಿಬಿಎಫ್‌ಸಿ) ತಳೆದಿರುವ ನಿಲುವು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನ ಹಾಗೂ ಸೃಜನಶೀಲ ಪ್ರಕ್ರಿಯೆಯಲ್ಲಿ ವಿನಾಕಾರಣ ನಡೆಸಿರುವ ಹಸ್ತಕ್ಷೇಪವೂ ಆಗಿದೆ. ಸುಮನ್‍ ಘೋಷ್‍ ನಿರ್ದೇಶನದ ಈ ಸಾಕ್ಷ್ಯಚಿತ್ರದಲ್ಲಿ ಬಳಕೆಯಾಗಿರುವ ‘ಕೌ’ (ಗೋವು), ‘ಗುಜರಾತ್‍’, ‘ಹಿಂದೂ ಇಂಡಿಯಾ’ ಹಾಗೂ ‘ಹಿಂದುತ್ವ ವ್ಯೂ ಆಫ್‍ ಇಂಡಿಯಾ’ ಎನ್ನುವ ಪದಗಳನ್ನು ‘ಮ್ಯೂಟ್‍’ ಮಾಡುವಂತೆ ಸೂಚಿಸಿರುವುದು ಅಪ್ರಬುದ್ಧ ನಡವಳಿಕೆಯಾಗಿದ್ದು, ಇದು ಪ್ರಸ್ತುತ ಚಾಲ್ತಿಯಲ್ಲಿರುವ ಎಲ್ಲವನ್ನೂ ‘ಹಿಂದೂ’ಮಯಗೊಳಿಸುವ ಚಿಂತನೆಯ ಭಾಗದಂತಿದೆ. ಮಂಡಳಿ ತಕರಾರು ಎತ್ತಿರುವ ಪದಗಳಲ್ಲಿ ದೇಶ ಅಥವಾ ಸಮಾಜದ ಹಿತಕ್ಕೆ ವಿರುದ್ಧವಾದುದು ಏನಿದೆ ಎನ್ನುವುದನ್ನು ಸಂಬಂಧಪಟ್ಟವರೇ ಸ್ಪಷ್ಟಪಡಿಸಬೇಕಾಗಿದೆ. ಗುಜರಾತ್‌ನಂಥ ನಾಮಪದಗಳ ಬಳಕೆಯನ್ನು ನಿಯಂತ್ರಿಸಲು ಬಯಸುವುದು ಮೂರ್ಖತನವೂ ಪ್ರಭುತ್ವವನ್ನು ಓಲೈಸುವ ಕ್ಷುಲ್ಲಕ ರಾಜಕೀಯ ತಂತ್ರವೂ ಆಗಿದೆ. ಅಂತರರಾಷ್ಟ್ರೀಯ ಖ್ಯಾತಿಯ ವಿದ್ವಾಂಸರ ಮಾತುಗಳನ್ನು ನಿಯಂತ್ರಿಸುವ ಪ್ರಯತ್ನಗಳು ನಡೆಯುವಾಗ, ಜನಸಾಮಾನ್ಯರ ಅಭಿವ್ಯಕ್ತಿ ಸ್ವಾತಂತ್ರ್ಯದ ಪಾಡನ್ನು ಊಹಿಸಿಕೊಳ್ಳುವುದು ಆತಂಕ ಹುಟ್ಟಿಸುತ್ತದೆ.

ಮಂಡಳಿಯ ನಿರ್ಧಾರ ತಮಗೆ ಆಘಾತ ತಂದಿರುವುದಾಗಿ ಹೇಳಿರುವ ಸುಮನ್‍ ಘೋಷ್‍, ‘ಅಮರ್ತ್ಯ ಸೇನ್‍ ಹಾಗೂ ಕೌಶಿಕ್‍ ಬಸು ಅವರ ಸಂವಾದದಲ್ಲಿನ ಪದಗಳನ್ನು ತೆಗೆದರೆ ಸಾಕ್ಷ್ಯಚಿತ್ರದ ಆತ್ಮವೇ ನಾಶವಾಗುತ್ತದೆ’ ಎಂದು ಪ್ರತಿಕ್ರಿಯಿಸಿದ್ದಾರೆ. ಈಗಾಗಲೇ ನ್ಯೂಯಾರ್ಕ್‍ ಮತ್ತು ಲಂಡನ್‌ಗಳಲ್ಲಿ ಸಾಕ್ಷ್ಯಚಿತ್ರ ಪ್ರದರ್ಶನಗೊಂಡಿದ್ದು, ಅದನ್ನು ಈ ತಿಂಗಳ 14ರಿಂದ ಭಾರತದಲ್ಲಿ ಪ್ರದರ್ಶಿಸಲು ಅವರು ಉದ್ದೇಶಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ತಾವು ಬಿಡುಗಡೆ ಮಾಡಿರುವ ಸಾಕ್ಷ್ಯಚಿತ್ರದ ಟ್ರೈಲರ್‍ ಅನ್ನು ‘ಕಾನೂನುಬಾಹಿರ’ ಎಂದು ಹೇಳಿರುವ ಸಿಬಿಎಫ್‌ಸಿ ಅಧ್ಯಕ್ಷರ ಹೇಳಿಕೆಗೆ ಅಚ್ಚರಿ ವ್ಯಕ್ತಪಡಿಸಿರುವ ಅವರು, ಆಕ್ಷೇಪಾರ್ಹ ಪದಗಳನ್ನು ಉಳಿಸಿಕೊಂಡು ತಮ್ಮ ಚಿತ್ರವನ್ನು ಎರಡು ತಿಂಗಳ ಬಳಿಕ ಅಂತರ್ಜಾಲದಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ವರ್ತಮಾನದ ತವಕತಲ್ಲಣಗಳನ್ನು ದಾಖಲುಗೊಳಿಸುವ ಹಾಗೂ ವಿಮರ್ಶಿಸುವ ಪ್ರಯತ್ನಗಳನ್ನು ಪ್ರಭುತ್ವ ಕಿಸುರುಗಣ್ಣಿನಿಂದ ನೋಡಿರುವುದು ಇತಿಹಾಸದುದ್ದಕ್ಕೂ ಇದೆ. ಇಂಥ ಪ್ರಯತ್ನಗಳ ಭಾಗವಾಗಿಯೇ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿಯಂತ್ರಿಸಲು ಬಯಸುವ ಸಿಬಿಎಫ್‌ಸಿ ಪ್ರಯತ್ನಗಳನ್ನು ನೋಡಬಹುದಾಗಿದೆ.

ಪಹಲಾಜ್ ನಿಹಲಾನಿ ಅವರು ಸಿಬಿಎಫ್‌ಸಿ ಅಧ್ಯಕ್ಷರಾದಾಗಿನಿಂದ ಎರಡು ವರ್ಷಗಳ ಅವಧಿಯಲ್ಲಿ ಭಾರತೀಯ ದೃಶ್ಯಮಾಧ್ಯಮ ಎದುರಿಸಿರುವ ಪ್ರಹಸನಗಳು ಒಂದೆರಡಲ್ಲ. ‘ಉಡ್ತಾ ಪಂಜಾಬ್‍’ ಹಿಂದಿ ಚಿತ್ರಕ್ಕೆ ಸಂಬಂಧಿಸಿದಂತೆ 89 ಕಟ್‌ಗಳನ್ನು ಮಂಡಳಿ ಸೂಚಿಸಿತ್ತು. ಆ ಕಟ್‌ಗಳಲ್ಲಿ ಪಂಜಾಬ್ ಹಾಗೂ ಅಲ್ಲಿನ ನಗರಗಳ ಹೆಸರು ಸೇರಿದಂತೆ ಎಂಪಿ, ಎಂಎಲ್‌ಎ, ಪಾರ್ಲಿಮೆಂಟ್ ಎನ್ನುವ ಶಬ್ದಗಳೂ ಸೇರಿದ್ದವು. ‘ಉಡ್ತಾ ಪಂಜಾಬ್‍’ ಪ್ರಕರಣದಲ್ಲಿ ‘ನಿಮ್ಮ ಕೆಲಸ ಸಿನಿಮಾಗಳಿಗೆ ಯಾವ ಪ್ರಮಾಣಪತ್ರ ನೀಡಬೇಕು ಎನ್ನುವುದೇ ಹೊರತು ಕತ್ತರಿಸುವುದಲ್ಲ. ನಿಮ್ಮ ಕೈಯಲ್ಲಿ ಇರುವ ರಿಮೋಟ್ ಅನ್ನು ಜನರ ಕೈಗೆ ಕೊಡಿ. ಯಾವುದನ್ನು ನೋಡಬೇಕು ಎನ್ನುವುದನ್ನು ಅವರೇ ತೀರ್ಮಾನಿಸುತ್ತಾರೆ’ ಎಂದು ಮುಂಬೈ ಹೈಕೋರ್ಟ್‍, ಮಂಡಳಿಗೆ ಸ್ಪಷ್ಟವಾಗಿ ಹೇಳಿತ್ತು. ಆ ಕಪಾಳಮೋಕ್ಷದಿಂದ ಬುದ್ಧಿ ಕಲಿಯದ ನಿಹಲಾನಿ ಬಳಗ, ತನ್ನ ರಾಜಕೀಯ–ಧರ್ಮಾಧಾರಿತ ಕತ್ತರಿಯನ್ನು ಬಳಸಲು ಆಗಾಗ ಪ್ರಯತ್ನಿಸುತ್ತಲೇ ಇದೆ. ಇತ್ತೀಚೆಗಷ್ಟೇ ‘ಲಿಫ್‌ಸ್ಟಿಕ್‍ ಅಂಡರ್‍ ಮೈ ಬುರ್ಖಾ’ ಚಿತ್ರಕ್ಕೆ ಪ್ರಮಾಣಪತ್ರ ನೀಡಲು ನಿರಾಕರಿಸಿದ ತೀರ್ಮಾನ ಕೂಡ ವ್ಯಾಪಕ ಟೀಕೆಗೊಳಗಾಗಿತ್ತು. ಕೇಂದ್ರ ಸರ್ಕಾರದ ಬಗೆಗಿನ ತನ್ನ ‘ಭಕ್ತಿ’ಯನ್ನು ನಿಹಲಾನಿ ಅವರು ಅವಕಾಶ ಸಿಕ್ಕಾಗಲೆಲ್ಲ ನಿರೂಪಿಸುತ್ತಲೇ ಬಂದಿದ್ದಾರೆ. ಪುಣೆಯ ‘ಫಿಲ್ಮ್‍ ಅಂಡ್‍ ಟೆಲಿವಿಷನ್‍ ಇನ್‌ಸ್ಟಿಟ್ಯೂಟ್‍ ಆಫ್‍ ಇಂಡಿಯಾ’ (ಎಫ್‌ಟಿಐಐ) ಅಧ್ಯಕ್ಷರಾಗಿ ಗಜೇಂದ್ರ ಚೌಹಾಣ್‍ ನೇಮಕವನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳನ್ನು ದೇಶದ್ರೋಹಿಗಳು ಎಂದು ಅವರು ಬಣ್ಣಿಸಿದ್ದರು. ಸಾಂಪ್ರದಾಯಿಕ ನೋಟ ಹಾಗೂ ಸಂಸ್ಕೃತಿ ರಕ್ಷಣೆಯ ಆವೇಶವನ್ನು ಅವರು ಹಾಗೂ ಅವರ ನೇತೃತ್ವದ ಮಂಡಳಿ ವ್ಯಕ್ತಪಡಿಸುತ್ತಲೇ ಬಂದಿದೆ. ಸಂಸ್ಕೃತಿಯ ಹೆಸರಿನಲ್ಲಿ ವರ್ತಮಾನದ ಬಿಕ್ಕಟ್ಟುಗಳನ್ನು ವಿಮರ್ಶಿಸುವ ಪ್ರಯತ್ನಕ್ಕೆ ತಡೆಯೊಡ್ಡುವ ಪ್ರಯತ್ನಗಳು ಖಂಡನೀಯ. ಕಾನೂನನ್ನು ಕೈಗೆತ್ತಿಕೊಳ್ಳುವ ಗೋರಕ್ಷಕರ ಅತಿರೇಕದ ನಡವಳಿಕೆಯ ಬಗ್ಗೆ ಪ್ರಧಾನಮಂತ್ರಿ ಎಚ್ಚರಿಕೆ ನೀಡಿರುವ ಸಂದರ್ಭದಲ್ಲೇ, ಸಿಬಿಎಫ್‌ಸಿ ತನ್ನ ‘ಗೋ ಪ್ರಿಯತೆ’ಯನ್ನು ಸಾಬೀತುಪಡಿಸಲು ಹೊರಟಿರುವುದು ನಾಚಿಕೆಗೇಡು ಹಾಗೂ ತನ್ನ ಕಾರ್ಯವ್ಯಾಪ್ತಿಯ ಸ್ಪಷ್ಟ ಉಲ್ಲಂಘನೆಯಾಗಿದೆ.

ಪ್ರತಿಕ್ರಿಯಿಸಿ (+)