ಬುಧವಾರ, ಡಿಸೆಂಬರ್ 11, 2019
20 °C

ಸ್ಯಾನಿಟರಿ ನ್ಯಾಪ್‌ಕಿನ್‌ಗೆ ಶೇಕಡ 12 ಜಿಎಸ್‌ಟಿ: ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ನೋಟಿಸ್

ಏಜೆನ್ಸಿಸ್‌ Updated:

ಅಕ್ಷರ ಗಾತ್ರ : | |

ಸ್ಯಾನಿಟರಿ ನ್ಯಾಪ್‌ಕಿನ್‌ಗೆ ಶೇಕಡ 12 ಜಿಎಸ್‌ಟಿ: ಕೇಂದ್ರಕ್ಕೆ ದೆಹಲಿ ಹೈಕೋರ್ಟ್ ನೋಟಿಸ್

ನವದೆಹಲಿ: ಸ್ಯಾನಿಟರಿ ನ್ಯಾಪ್‌ಕಿನ್‌ಗೆ ಶೇಕಡ 12ರ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ನಿಗದಿಪಡಿಸಿರುವುದಕ್ಕೆ ಕೇಂದ್ರ ಸರ್ಕಾರಕ್ಕೆ ದೆಹಲಿ ಹೈಕೋರ್ಟ್‌ ನೋಟಿಸ್ ನೀಡಿದೆ.

ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಗೀತಾ ಮಿತ್ತಲ್ ಮತ್ತು ಸಿ ಹರಿಶಂಕರ್ ಅವರಿದ್ದ ನ್ಯಾಯಪೀಠ, ಪ್ರತಿಕ್ರಿಯೆ ನೀಡುವಂತೆ ಹಣಕಾಸು ಸಚಿವಾಲಯ ಮತ್ತು ತೆರಿಗೆ ಮಂಡಳಿಗೆ ಸೂಚಿಸಿದೆ.

‘ಸ್ಯಾನಿಟರಿ ನ್ಯಾಪ್‌ಕಿನ್‌ಗೆ ಶೇಕಡ 12ರ ಜಿಎಸ್‌ಟಿ ನಿಗದಿಪಡಿಸಿರುವ ಬಗ್ಗೆ ಪರಿಶೀಲನೆಯಾಗಬೇಕು. ಅಧಿಕಾರಿಗಳು ತಮ್ಮ ನಿಲುವನ್ನು ಸಮರ್ಥಿಸಬೇಕು’ ಎಂದು ನ್ಯಾಯಪೀಠ ಹೇಳಿದೆ.

ಜವಹರ್‌ಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿರುವ ಜರ್ಮಿನಾ ಇಸ್ರಾರ್ ಖಾನ್ ಎಂಬುವವರು ಸ್ಯಾನಿಟರಿ ನ್ಯಾಪ್‌ಕಿನ್‌ಗೆ ಶೇಕಡ 12ರ ಜಿಎಸ್‌ಟಿ ನಿಗದಿಪಡಿಸಿರುವುದನ್ನು ಪ್ರಶ್ನಿಸಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಸರ್ಕಾರದ ಕ್ರಮ ಅಸಾಂವಿಧಾನಿಕ ಮತ್ತು ಕಾನೂನುಬಾಹಿರ. ಆರ್ಥಿಕವಾಗಿ ಹಿಂದುಳಿದ ಮಹಿಳೆಯರ ಪರವಾಗಿ ಈ ಅರ್ಜಿ ಸಲ್ಲಿಸಲಾಗಿದೆ ಎಂದು ಖಾನ್ ತಿಳಿಸಿದ್ದಾರೆ.

ಕಾಡಿಗೆ, ಕುಂಕುಮ, ಬಿಂದಿ, ಸಿಂಧೂರ, ಪ್ಲಾಸ್ಟಿಕ್, ಗಾಜಿನ ಬಳೆ, ಪೂಜಾ ಸಾಮಗ್ರಿಗಳು, ಕಾಂಡೋಮ್‌, ಇತರ ಗರ್ಭ ನಿರೋಧಕಗಳಿಗೆ ಜಿಎಸ್‌ಟಿಯಿಂದ ವಿನಾಯಿತಿ ನೀಡಲಾಗಿದೆ. ಮಹಿಳೆಯರ ಆರೋಗ್ಯಕ್ಕೆ ಅತ್ಯಾವಶ್ಯಕವಾದ ಸ್ಯಾನಿಟರಿ ನ್ಯಾಪ್‌ಕಿನ್‌ಗಳಿಗೆ ಜಿಎಸ್‌ಟಿ ನಿಗದಿಪಡಿಸಲಾಗಿದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಪ್ರತಿಕ್ರಿಯಿಸಿ (+)