ಶುಕ್ರವಾರ, ಡಿಸೆಂಬರ್ 6, 2019
19 °C

ಬ್ಯಾಡ್ಮಿಂಟನ್‌: ಸಮೀರ್‌ ಮೇಲೆ ನಿರೀಕ್ಷೆ

Published:
Updated:
ಬ್ಯಾಡ್ಮಿಂಟನ್‌: ಸಮೀರ್‌ ಮೇಲೆ ನಿರೀಕ್ಷೆ

ಅನಹೀಮ್‌, ಅಮೆರಿಕ (ಪಿಟಿಐ): ಪ್ರತಿಭಾನ್ವಿತ ಆಟಗಾರರಾದ ಸಮೀರ್‌ ವರ್ಮಾ ಮತ್ತು ಎಚ್‌.ಎಸ್‌. ಪ್ರಣಯ್‌ ಅವರು ಮಂಗಳವಾರದಿಂದ ನಡೆಯುವ  ಅಮೆರಿಕ ಓಪನ್‌ ಗ್ರ್ಯಾನ್‌ ಪ್ರಿ ಗೋಲ್ಡ್‌ ಬ್ಯಾಡ್ಮಿಂಟನ್‌ ಟೂರ್ನಿಯಲ್ಲಿ ಭಾರತದ ಸವಾಲು ಎತ್ತಿ ಹಿಡಿಯಲಿದ್ದಾರೆ.

ಈ ವರ್ಷದ ಆರಂಭದಲ್ಲಿ ನಡೆದಿದ್ದ ಸೈಯದ್‌ ಮೋದಿ ಗ್ರ್ಯಾನ್‌ ಪ್ರಿ ಗೋಲ್ಡ್‌ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದ ಸಮೀರ್‌ ಅವರು ಭುಜಕ್ಕೆ ಗಾಯವಾಗಿದ್ದರಿಂದ ಹಿಂದಿನ ಕೆಲ ಟೂರ್ನಿಗಳಲ್ಲಿ ಆಡಿರಲಿಲ್ಲ. ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿ ರುವ ಅವರು ಅಮೆರಿಕ ಓಪನ್‌ನಲ್ಲಿ ಟ್ರೋಫಿ ಗೆಲ್ಲುವ ಮಹಾದಾಸೆ ಹೊತ್ತಿದ್ದಾರೆ.

22 ವರ್ಷದ ಸಮೀರ್‌ ಅವರು ವಿಯೆಟ್ನಾಂನ ಹಾವೊಂಗ್‌ ನಾಮ್‌ ಗುಯೆನ್‌ ವಿರುದ್ಧ ಆಡುವ ಮೂಲಕ ಟೂರ್ನಿಯಲ್ಲಿ ಅಭಿಯಾನ ಆರಂಭಿಸಲಿದ್ದಾರೆ.

ಪ್ರಣಯ್‌ ಮತ್ತು ಪರುಪಳ್ಳಿ ಕಶ್ಯಪ್‌ ಅವರೂ ಟೂರ್ನಿಯಲ್ಲಿ ಶ್ರೇಷ್ಠ ಸಾಮರ್ಥ್ಯ ತೋರುವ ಭರವಸೆ ಹೊಂದಿದ್ದಾರೆ.

ಕಶ್ಯಪ್‌ ಅವರಿಗೆ ಆರಂಭದಲ್ಲೇ ಕಠಿಣ ಪೈಪೋಟಿ ಎದುರಾಗಲಿದೆ. ಅವರು ಮೊದಲ ಸುತ್ತಿ ನಲ್ಲಿ ಕೊರಿಯಾದ ಅಗ್ರಶ್ರೇಯಾಂಕಿತ ಆಟ ಗಾರ ಲೀ ಹ್ಯೂನ್‌ ವಿರುದ್ಧ ಆಡಲಿದ್ದಾರೆ.

ಇಲ್ಲಿ ಎರಡನೇ ಶ್ರೇಯಾಂಕ ಹೊಂದಿರುವ ಪ್ರಣಯ್‌ ಅವರು ಆಸ್ಟ್ರಿಯಾದ ಲುಕಾ ವ್ರಾಬರ್‌ ಎದುರು ಪೈಪೋಟಿ ನಡೆಸಲಿದ್ದು ಶುಭಾರಂಭದ ನಿರೀಕ್ಷೆಯಲ್ಲಿದ್ದಾರೆ.

ಕರ್ನಾಟಕದ ಅಭಿಷೇಕ್‌ ಎಲಿಗಾರ   ಅವರಿಗೆ ಫ್ರಾನ್ಸ್‌ನ ಮೂರನೇ ಶ್ರೇಯಾಂಕಿತ ಆಟಗಾರ ಬ್ರೈಸ್‌ ಲಿವರ್‌ಡೆಜ್‌ ಅವರ ಸವಾಲು ಎದುರಾಗಲಿದೆ.

ಲಖಾನಿ ಸರಂಗ್‌ ಮತ್ತು ಹರ್ಷಿಲ್‌ ದಾನಿ ಅವರೂ ಸಿಂಗಲ್ಸ್‌ ವಿಭಾಗದ ಕಣದಲ್ಲಿದ್ದಾರೆ. ಲಖಾನಿ ಅವರು ಮೊದಲ ಸುತ್ತಿನಲ್ಲಿ ಜಪಾನ್‌ನ ಕೆಂಟಾ ನಿಶಿಮೊಟೊ ವಿರುದ್ಧ ಆಡಲಿದ್ದರೆ, ಹರ್ಷಿಲ್‌, ಮೆಕ್ಸಿಕೊದ ಅರ್ತುರೊ ಹೆರ್ನಾಂಡೆಜ್‌ ಎದುರು ಸೆಣಸಲಿದ್ದಾರೆ.

ಮಹಿಳೆಯರ ಸಿಂಗಲ್ಸ್‌ ವಿಭಾಗದಲ್ಲಿ   ರಿತುಪರ್ಣ ದಾಸ್‌ ಮತ್ತು ರುತ್ವಿಕಾ ಶಿವಾನಿ ಅವರ ಮೇಲೆ ನಿರೀಕ್ಷೆ ಇಡಲಾಗಿದೆ.

ಸೈನಾ ನೆಹ್ವಾಲ್‌ ಮತ್ತು ಪಿ.ವಿ. ಸಿಂಧು ಅವರ ಅನುಪಸ್ಥಿತಿಯಲ್ಲಿ ಇವರು ಮಿಂಚುವ ವಿಶ್ವಾಸ ಹೊಂದಿದ್ದಾರೆ.

ಶಿವಾನಿ ಮೊದಲ ಸುತ್ತಿನಲ್ಲಿ ಜಪಾನ್‌ನ ಅಯಾ ಒಹೊರಿ ವಿರುದ್ಧ ಪೈಪೋಟಿ ನಡೆಸಲಿದ್ದಾರೆ.  ರಿತುಪರ್ಣ, ರಚೆಲ್‌ ಹೊಂಡೆರಿಚ್‌ ವಿರುದ್ಧ ಆಡಲಿದ್ದಾರೆ.

ಶ್ರೀಕೃಷ್ಣಪ್ರಿಯ ಕುದರವಳ್ಳಿ, ಅಮೆರಿಕದ ಮಾಯಾ ಚೆನ್‌ ಎದುರೂ, ಸಾಯಿ ಉತ್ತೇಜಿತಾ ರಾವ್ ಚುಕ್ಕಾ, ನೆದರ್ಲೆಂಡ್ಸ್‌ನ ಗೇಲ್‌ ಮಹುಲೆಟ್ಟೆ ವಿರುದ್ಧವೂ, ರೇಷ್ಮಾ ಕಾರ್ತಿಕ್‌, ಡೆನ್ಮಾರ್ಕ್‌ನ ಸೋಫಿ ಹೊಂಬೊಯ್‌ ದಾಹ್ಲ್‌ ವಿರುದ್ಧವೂ ಆಡುವರು.

ಪುರುಷರ ಡಬಲ್ಸ್‌ ವಿಭಾಗದಲ್ಲಿ ಭಾರತದ ಭರವಸೆಯಾಗಿರುವ  ಮನು ಅತ್ರಿ ಮತ್ತು ಬಿ. ಸುಮಿತ್‌ ರೆಡ್ಡಿ ಅವರು ಕೆನಡಾದ ಜೇಸನ್‌ ಅಂಥೋನಿ ಹೊ ಶುಯ್ ಮತ್ತು ನೈಲ್‌ ಯಕುರಾ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸುವರು.

ಪ್ರತಿಕ್ರಿಯಿಸಿ (+)