ಭಾನುವಾರ, ಡಿಸೆಂಬರ್ 15, 2019
17 °C

‘ತೀರ್ಥೇಗೌಡ’ಗೆ ₹ 25 ಸಾವಿರ ದಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ತೀರ್ಥೇಗೌಡ’ಗೆ  ₹ 25 ಸಾವಿರ ದಂಡ

ಬೆಂಗಳೂರು:  ‘ನನ್ನ ಬಾರ್‌ಗೆ ಸಮೀಪದಲ್ಲಿ ಒಂದು ಶಾಲೆ ಇದೆ. ಅದರಿಂದ ನನ್ನ ವ್ಯವಹಾರಕ್ಕೆ ತೊಂದರೆಯಾಗುತ್ತಿದ್ದು, ಶಾಲಾ ಅನುಮತಿ ರದ್ದುಗೊಳಿಸಲು ನಿರ್ದೇಶಿಸಬೇಕು..!’ ಎಂದು ಕೋರಿ ರಿಟ್‌ ಅರ್ಜಿ ಸಲ್ಲಿಸಿದ್ದ ಬಾರ್‌ ಮಾಲೀಕನಿಗೆ ಹೈಕೋರ್ಟ್‌ ₹ 25 ಸಾವಿರ ದಂಡ ವಿಧಿಸಿದೆ ಮತ್ತು ಅರ್ಜಿ ವಜಾ ಮಾಡಿದೆ.

ಬೆಂಗಳೂರು ದಕ್ಷಿಣ ವ್ಯಾಪ್ತಿ ಬೇಗೂರು ಹೋಬಳಿಯ ದೇವರಚಿಕ್ಕನಹಳ್ಳಿಯಲ್ಲಿರುವ ‘ಶ್ರೀದೇವಿ ಬಾರ್ ಅಂಡ್‌ ರೆಸ್ಟೋರೆಂಟ್’ ಮಾಲೀಕ ಎನ್‌.ಎಂ.ತೀರ್ಥೇಗೌಡ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ವಿನೀತ್‌ ಕೊಠಾರಿ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ ವಿಚಾರಣೆ ನಡೆಸಿತು.

‘ಏನಿದು..? ಎಂತಹ ವಿಚಿತ್ರ ಮತ್ತು ವಿಲಕ್ಷಣ ಅರಿಕೆ’ ಎಂದು ಅರ್ಜಿದಾರರ ವಕೀಲ ಜಿ.ಕೆ.ಭಟ್‌ ಅವರನ್ನು ಪ್ರಶ್ನಿಸಿದ ನ್ಯಾಯಮೂರ್ತಿಗಳು, ‘ಅರ್ಜಿದಾರರ ಕೋರಿಕೆ ಹೇಸಿಗೆ ಉಂಟು ಮಾಡುವಂತಿದೆ’ ಎಂದು ತೀವ್ರ ಬೇಸರ ವ್ಯಕ್ತಪಡಿಸಿದರು.

ಅರ್ಜಿಯಲ್ಲೇನಿದೆ..? : ‘ನಿಮ್ಮ ಬಾರ್ ಆಕ್ಷೇಪಾರ್ಹ ಸ್ಥಳದಲ್ಲಿದೆ. ಇದು ಕರ್ನಾಟಕ ಅಬಕಾರಿ ಪರವಾನಗಿ (ಸಾಮಾನ್ಯ ಷರತ್ತುಗಳು) ನಿಯಮ 5ಕ್ಕೆ ವಿರುದ್ಧವಾಗಿದೆ. ಆದ್ದರಿಂದ ನಿಮ್ಮ ಬಾರ್‌ ಅಂಡ್‌ ರೆಸ್ಟೋರೆಂಟ್‌ ಅನ್ನು ಆಕ್ಷೇಪಾರ್ಹವಲ್ಲದ ಸ್ಥಳಕ್ಕೆ 60 ದಿನಗಳಲ್ಲಿ ವರ್ಗಾಯಿಸಬೇಕು ಎಂಬ ಬೆಂಗಳೂರು ನಗರ ಜಿಲ್ಲೆಯ ಅಬಕಾರಿ ಉಪ ಆಯುಕ್ತರು ನೀಡಿರುವ ಆದೇಶ ರದ್ದುಗೊಳಿಸಲು ನಿರ್ದೇಶಿಸಬೇಕು’ ಎಂದು ತೀರ್ಥೇಗೌಡ ಕೋರಿದ್ದರು.

‘ನನ್ನ ಬಾರ್ ಅಂಡ್‌ ರೆಸ್ಟೋರೆಂಟ್‌ ಶಾಲಾ ವಲಯದ 100 ಮೀಟರ್‌ ವ್ಯಾಪ್ತಿಯ ಒಳಗೆ ಇದೆ ಎಂದು ಆಯುಕ್ತರು ಆಕ್ಷೇಪಿಸಿದ್ದಾರೆ. ಆದರೆ ವಾಸ್ತವದಲ್ಲಿ, ಬೆಂಗಳೂರು ದಕ್ಷಿಣ ವಲಯ–3ರ ಕ್ಷೇತ್ರ ಶಿಕ್ಷಣಾಧಿಕಾರಿಯು ಸೀತಮ್ಮ ಮಂಜಪ್ಪ ಟ್ರಸ್ಟ್‌ಗೆ ಪೂರ್ವ ಪ್ರಾಥಮಿಕ ಶಾಲೆ ನಡೆಸಲು ನೀಡಿರುವ ಅನುಮತಿಯೇ ಕಾನೂನು ಬಾಹಿರ. ಶಾಲೆಯ ಕಟ್ಟಡವು ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು (ಬಿಡಿಎ) ನಾಗರಿಕರ ಬಳಕೆಗೆ ಮೀಸಲಿಟ್ಟಿರುವ ಸಿ.ಎ ನಿವೇಶನವಾಗಿದೆ’ ಎಂದು ಅರ್ಜಿಯಲ್ಲಿ ವಿವರಿಸಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸರ್ಕಾರಿ ವಕೀಲ ಎ.ಎಂ.ಸುರೇಶ ರೆಡ್ಡಿ, ‘ಅರ್ಜಿದಾರರ ವಾದದಲ್ಲಿ ಹುರುಳಿಲ್ಲ. ಆದ್ದರಿಂದ ಇದನ್ನು ವಜಾ ಮಾಡಬೇಕು’ ಎಂದರು.

ಪೇಚಾಟಕ್ಕೆ ಸಿಲುಕಿದ ಸಾರ್ವಜನಿಕರು

‘ಶಾಲಾ ಕಟ್ಟಡವನ್ನು ಬಿಡಿಎಗೆ ಸೇರಿದ ನಿವೇಶನದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ. ಅಂತೆಯೇ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಪ್ರವೇಶಕ್ಕೆ ಅನುಮತಿ ನೀಡಿದರೆ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತದೆ. ಸಾರ್ವಜನಿಕರೂ ಇದರಿಂದ ಪೇಚಾಟಕ್ಕೆ ಸಿಲುಕಲಿದ್ದಾರೆ’ ಎಂದು ಅರ್ಜಿಯಲ್ಲಿ ವಿವರಿಸಲಾಗಿತ್ತು.

‘ಕೂಡಲೇ ಶಿಕ್ಷಣ ಇಲಾಖೆಯ ಆದೇಶಕ್ಕೆ ತಡೆ ನೀಡಬೇಕು. ಈ ಅರ್ಜಿ ಇತ್ಯರ್ಥವಾಗುವರೆಗೆ ನಾನು ಬಾರ್ ಅಂಡ್ ರೆಸ್ಟೋರೆಂಟ್‌ ನಡೆಸಲು ಅನುಮತಿ ನೀಡುವಂತೆ ಅಬಕಾರಿ ಉಪ ಆಯುಕ್ತರ ಆದೇಶಕ್ಕೆ  ತಡೆ  ನೀಡಬೇಕು’ ಎಂದು  ಕೋರಲಾಗಿತ್ತು.

**

ಇದೊಂದು ಹೇಸಿಕೆ ಹುಟ್ಟಿಸುವ ಅರ್ಜಿ.  ಇದು ನ್ಯಾಯದಾನದ ಮೂಲ ತತ್ವಕ್ಕೇ ವಿರುದ್ಧವಾಗಿದ್ದು ವಿಲಕ್ಷಣ ಅರಿಕೆಯಿಂದ ಕೂಡಿದೆ.

-ವಿನೀತ್ ಕೊಠಾರಿ, ನ್ಯಾಯಮೂರ್ತಿ

ಪ್ರತಿಕ್ರಿಯಿಸಿ (+)