ಶುಕ್ರವಾರ, ಡಿಸೆಂಬರ್ 13, 2019
17 °C

ಕುತೂಹಲ ಮೂಡಿಸಿದ ನಿತೀಶ್–ತೇಜಸ್ವಿ ಭೇಟಿ

ಪಿಟಿಐ Updated:

ಅಕ್ಷರ ಗಾತ್ರ : | |

ಕುತೂಹಲ ಮೂಡಿಸಿದ ನಿತೀಶ್–ತೇಜಸ್ವಿ ಭೇಟಿ

ಪಟ್ನಾ : ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‌ ಅವರ ನೇತೃತ್ವದಲ್ಲಿ ಮಂಗಳವಾರ ನಡೆದ ರಾಜ್ಯ ಸಂಪುಟ ಸಭೆಯಲ್ಲಿ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಭಾಗವಹಿಸಿದ್ದರು. ಅಲ್ಲದೆ, ಸಂಪುಟ ಸಭೆಯ ನಂತರ ತೇಜಸ್ವಿ ಅವರು, ನಿತೀಶ್ ಅವರ ಕೊಠಡಿಗೆ ತೆರಳಿ ಮಾತುಕತೆ ನಡೆಸಿದರು.

ತೇಜಸ್ವಿ ಜತೆ ಅವರ ಸೋದರ ಮತ್ತು ಸಚಿವ ತೇಜ್ ಪ್ರತಾಪ್ ಯಾದವ್ ಮತ್ತು ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಅಶೋಕ್ ಚೌಧರಿ ಇದ್ದರು. ಈ ಭೇಟಿ ವೇಳೆ ಯಾವ ವಿಷಯವನ್ನು ಚರ್ಚಿಸಲಾಯಿತು ಎಂಬ ವಿವರ ಬಹಿರಂಗವಾಗಿಲ್ಲ.

ರೈಲ್ವೆ ಅಧೀನದ ಹೋಟೆಲ್‌ಗಳನ್ನು ಖಾಸಗಿಯವರಿಗೆ ಗುತ್ತಿಗೆ ನೀಡಿದ್ದಕ್ಕೆ ಪ್ರತಿಫಲವಾಗಿ ಲಾಲು ಪ್ರಸಾದ್ ಅವರು ಜಮೀನು ಪಡೆದಿದ್ದಾರೆ ಎಂಬ ಆರೋಪದ ಪ್ರಕರಣದಲ್ಲಿ ಸಿಬಿಐ, ತೇಜಸ್ವಿ ವಿರುದ್ಧವೂ ಎಫ್‌ಐಆರ್‌ ದಾಖಲಿಸಿದ ನಂತರ, ‘ತೇಜಸ್ವಿ ಆರೋಪಮುಕ್ತವಾಗಿ ಬರಲಿ’ ಎಂದು ನಿತೀಶ್ ಒತ್ತಾಯಿಸಿದ್ದರು.

ಆನಂತರ ನಿತೀಶ್ ಅಧ್ಯಕ್ಷತೆಯಲ್ಲಿ ಶನಿವಾರ ನಡೆದಿದ್ದ ಸರ್ಕಾರಿ ಕಾರ್ಯಕ್ರಮಕ್ಕೆ ತೇಜಸ್ವಿ ಗೈರು ಹಾಜರಾಗಿದ್ದರು. ಹೀಗಾಗಿ ಅವರು ಸಂಪುಟ ಸಭೆಗೆ ಹಾಜರಾಗುತ್ತಾರೆಯೇ ಎಂಬ ಅನುಮಾನ ಮೂಡಿತ್ತು. ಈಗ ಅವರು, ನಿತೀಶ್ ಅವರ ಕೊಠಡಿಗೆ ತೆರಳಿ ಮಾತುಕತೆ ನಡೆಸಿರುವುದು ಕುತೂಹಲ ಮೂಡಿಸಿದೆ.

26 ವರ್ಷಕ್ಕೆ 26 ಆಸ್ತಿ: ಬಿಜೆಪಿ

‘ಬಿಹಾರ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರು ದೆಹಲಿ ಮತ್ತು ಬಿಹಾರದಲ್ಲಿ ಒಟ್ಟು 26 ಆಸ್ತಿಗಳನ್ನು ಹೊಂದಿದ್ದಾರೆ’ ಎಂದು ಬಿಜೆಪಿ ಹಿರಿಯ ಮುಖಂಡ ಸುಶೀಲ್ ಮೋದಿ ಆರೋಪಿಸಿದ್ದಾರೆ. ಈ ಸಂಬಂಧ ಅವರು ಹಲವು ದಾಖಲೆಗಳನ್ನೂ ಬಿಡುಗಡೆ ಮಾಡಿದ್ದಾರೆ.

‘ಈ 26 ಆಸ್ತಿಗಳಲ್ಲಿ 13 ಆಸ್ತಿಗಳನ್ನು, ತೇಜಸ್ವಿ ಪ್ರೌಢಾವಸ್ಥೆಗೆ ಬರುವ ಮುನ್ನವೇ ಹೊಂದಿದ್ದರು. ಇನ್ನುಳಿದ 13 ಆಸ್ತಿಗಳು ಪ್ರೌಢಾವಸ್ಥೆ ತಲುಪಿದ ನಂತರ, ಅವರ ಹೆಸರಿಗೆ ಬಂದಿವೆ. ಈ ಆಸ್ತಿಗಳ ಮೂಲ ಯಾವುದು ಎಂಬುದನ್ನು ಅವರು ಬಹಿರಂಗಪಡಿಸಬೇಕು’ ಎಂದು ಸುಶೀಲ್ ಒತ್ತಾಯಿಸಿದ್ದಾರೆ. ಜತೆಗೆ ತೇಜಸ್ವಿ ಅವರನ್ನು ಸುಶೀಲ್, ‘26 ವರ್ಷಕ್ಕೆ 26 ಆಸ್ತಿ’ ಎಂದು ಲೇವಡಿ ಮಾಡಿದ್ದಾರೆ.

ಪ್ರತಿಕ್ರಿಯಿಸಿ (+)