ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಕ್‌ ಆಕ್ರಮಿತ ಕಾಶ್ಮೀರ ಯುವಕನಿಗೆ ವೀಸಾ

‘ವಿದೇಶಾಂಗ ವ್ಯವಹಾರಗಳ ಸಲಹೆಗಾರರ ಪತ್ರ ಬೇಕಾಗಿಲ್ಲ’
Last Updated 18 ಜುಲೈ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ಅನಾರೋಗ್ಯಕ್ಕೆ ಒಳಗಾಗಿರುವ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಯುವಕನಿಗೆ ವೀಸಾ ನೀಡುವುದಾಗಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ತಿಳಿಸಿದ್ದಾರೆ.

ವೀಸಾ ನೀಡಲು ಪಾಕಿಸ್ತಾನ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್‌ ಅಜೀಜ್‌ ಅವರ ಪತ್ರ ಬೇಕಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ರಾವಲ್ಕೋಟ್‌ನ ಒಸಮಾ ಅಲಿ (24) ಅವರಿಗೆ ನವದೆಹಲಿಯಲ್ಲಿ ಚಿಕಿತ್ಸೆ ಪಡೆಯಲು ಅನುಕೂಲವಾಗುವಂತೆ ವೀಸಾ ನೀಡುವುದಾಗಿ ತಿಳಿಸಿದ್ದಾರೆ.

ಯಕೃತ್ತುನಲ್ಲಿನ ಸಮಸ್ಯೆಯಿಂದ ಬಳಲುತ್ತಿರುವ ಅಲಿ ಅವರಿಗೆ ವೀಸಾ ಪಡೆಯಲು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಲಹೆಗಾರ ಸರ್ತಾಜ್‌ ಅಜೀಜ್‌ ಅವರಿಂದ ಶಿಫಾರಸು ಪತ್ರ ದೊರೆತಿರಲಿಲ್ಲ.

ಈ ಶಿಫಾರಸು ಪತ್ರದಿಂದ ವಿನಾಯಿತಿ ನೀಡುವಂತೆ ಅಲಿ ಅವರ ತಂದೆ ಜಾವೇದ್‌ ನಾಜ್‌ ಖಾನ್‌ ಅವರು ಸುಷ್ಮಾ ಸ್ವರಾಜ್‌ ಅವರನ್ನು ಕೋರಿದ್ದರು.
ವೈದ್ಯಕೀಯ ಚಿಕಿತ್ಸೆಗಾಗಿ ಭಾರತಕ್ಕೆ ಬರುವ ಪಾಕಿಸ್ತಾನ ನಾಗರಿಕರು ವೀಸಾ ಪಡೆಯಬೇಕಾದರೆ ಅಲ್ಲಿನ ವಿದೇಶಾಂಗ ವ್ಯವಹಾರಗಳ ಸಲಹೆಗಾರರ ಶಿಫಾರಸು ಪತ್ರ ಕಡ್ಡಾಯ ಎಂದು ಭಾರತ ತಿಳಿಸಿದೆ.

ಆದರೆ, ಅಜೀಜ್‌ ಅವರು ವೈದ್ಯಕೀಯ ವೀಸಾ ಬಯಸುವ ಪಾಕಿಸ್ತಾನ ನಾಗರಿಕರಿಗೆ ಯಾವುದೇ ರೀತಿಯ ಪತ್ರ ನೀಡುತ್ತಿಲ್ಲ.

ಕೆಲವು ಶಿಫಾರಸು ಪತ್ರಗಳನ್ನು ಪಾಕಿಸ್ತಾನ ವಿದೇಶಾಂಗ  ಸಚಿವಾಲಯದ ದಕ್ಷಿಣ ಏಷ್ಯಾ ವಿಭಾಗದ ಅಧಿಕಾರಿಗಳು ನೀಡಿದ್ದರು. ಆದರೆ, ಈ ಪತ್ರಗಳನ್ನು ಇಸ್ಲಾಮಾಬಾದ್‌ನಲ್ಲಿನ ಭಾರತದ ಹೈಕಮಿಷನ್‌ ತಿರಸ್ಕರಿಸಿತ್ತು.

‘ಭಾರತದಲ್ಲಿ ಚಿಕಿತ್ಸೆ ಪಡೆಯಲು ವೈದ್ಯಕೀಯ ವೀಸಾ ಬಯಸುತ್ತಿರುವ ಎಲ್ಲ ಪಾಕಿಸ್ತಾನ ನಾಗರಿಕರ ಬಗ್ಗೆ ನನಗೆ ಅನುಕಂಪವಿದೆ’ ಎಂದು ಸುಷ್ಮಾ ಸ್ವರಾಜ್‌ ಈ ಮೊದಲು ಟ್ವೀಟ್‌ ಮಾಡಿದ್ದರು.

ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯಲು ಭಾರತಕ್ಕೆ ಬರಲು ಪಾಕಿಸ್ತಾನ ವೀಸಾ ನಿರಾಕರಿಸಿದ್ದಕ್ಕೆ ಪ್ರತಿಕ್ರಿಯಿಸಿದ್ದ ಅವರು, ‘ವೈದ್ಯಕೀಯ ವೀಸಾ ನೀಡಲು ಅಜೀಜ್‌ ಅವರ ಶಿಫಾರಸು ಪತ್ರ ಅಗತ್ಯ. ಆದರೆ, ಅವರು ತಮ್ಮ ರಾಷ್ಟ್ರದ ನಾಗರಿಕರಿಗೆ ಪತ್ರ ನೀಡಲು ಹಿಂಜರಿಯುತ್ತಿದ್ದಾರೆ. ಇದಕ್ಕೆ ಕಾರಣಗಳು ಗೊತ್ತಿಲ್ಲ’ ಎಂದು ಟ್ವೀಟ್‌ ಮಾಡಿದ್ದರು.

* ಅಲಿ ವಾಸಿಸುತ್ತಿರುವ ಸ್ಥಳ ಭಾರತದ ಅವಿಭಾಜ್ಯ ಅಂಗ. ಪಾಕಿಸ್ತಾನ ಅಕ್ರಮವಾಗಿ ಈ ಪ್ರದೇಶವನ್ನು ವಶಪಡಿಸಿಕೊಂಡಿದೆ. ಹೀಗಾಗಿ ಅಲಿಗೆ ವೀಸಾ ನೀಡಲಾಗುವುದು

–ಸುಷ್ಮಾ ಸ್ವರಾಜ್‌, ವಿದೇಶಾಂಗ ಸಚಿವೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT