ಭಾನುವಾರ, ಡಿಸೆಂಬರ್ 8, 2019
25 °C
ತರೀಕೆರೆ ತಾಲ್ಲೂಕಿನ ಶಿವಪುರ ಗ್ರಾಮದಲ್ಲಿ ತೀವ್ರ ವಿರೋಧ: ಜಿಲ್ಲಾಧಿಕಾರಿಗೆ ಗ್ರಾಮಸ್ಥರ ಮನವಿ

ಕಲ್ಲು ಗಣಿಗಾರಿಕೆ: ನವಿಲುಗುಡ್ಡಕ್ಕೆ ಬಂತು ಆಪತ್ತು

ಬಿ.ಜೆ.ಧನ್ಯಪ್ರಸಾದ್‌ Updated:

ಅಕ್ಷರ ಗಾತ್ರ : | |

ಕಲ್ಲು ಗಣಿಗಾರಿಕೆ: ನವಿಲುಗುಡ್ಡಕ್ಕೆ ಬಂತು ಆಪತ್ತು

ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲ್ಲೂಕಿನ ಶಿವಪುರ ಗ್ರಾಮದ ಸರ್ವೆ ನಂ 51ರಲ್ಲಿನ ಗೋಮಾಳದ 15 ಎಕರೆಯಲ್ಲಿ ಅಲಂಕಾರಿಕ ಶಿಲೆ ಗಣಿಗಾರಿಕೆಗೆ ಸರ್ಕಾರ ಅನುಮತಿ ನೀಡಿದ್ದು, ಈ ಪ್ರದೇಶಕ್ಕೆ ಹೊಂದಿಕೊಂಡಿರುವ ನವಿಲುಗುಡ್ಡ, ದುರ್ಗದ ಕೋಟೆಗಳಿಗೆ ಕುತ್ತು ಎದುರಾಗಿದೆ.

ಗಣಿ ಮತ್ತು ಭೂವಿಜ್ಞಾನ ಇಲಾಖೆಯು ಮೂವರಿಗೆ ಪರವಾನಗಿ ನೀಡಿದೆ. ಹಸಿರು ಅಲಂಕಾರಿಕ ಶಿಲೆ (ಗ್ರೀನ್ ಮಾರ್ಬಲ್) ಗಣಿಗಾರಿಕೆ ನಡೆಸಲು ಈ ಜಾಗವನ್ನು 30 ವರ್ಷಕ್ಕೆ ಭೋಗ್ಯಕ್ಕೆ ನೀಡಲಾಗಿದೆ. ಪರವಾನಗಿ ಪಡೆದವರು ಕೆಲಸ ಆರಂಭಿಸಲು ಸಿದ್ಧತೆ ನಡೆಸಿದ್ದಾರೆ.

ಗಣಿಗಾರಿಕೆ ಆರಂಭವಾದರೆ ಈ ಭಾಗದ  ಕೆರೆಕಟ್ಟೆ, ಕೃಷಿ, ಅಂತರ್ಜಲ, ಕಾಡು, ವನ್ಯಜೀವಿ ಸಂಕುಲಕ್ಕೆ ಧಕ್ಕೆ ಉಂಟಾಗುವ ಭೀತಿ ಆವರಿಸಿದೆ. 

ಶಿವಪುರ, ಕುಡ್ಲೂರು, ಅಮೃತಾಪುರ ಸುತ್ತಲಿನ ಬೆಟ್ಟಗಳು ಪಶ್ಚಿಮಘಟ್ಟದ ಅಂಚಿನಲ್ಲಿವೆ. ದುರ್ಗದ ಕೋಟೆ, ನವಿಲುಗುಡ್ಡಗಳು ಮಾರುತಗಳಿಗೆ ತಡೆಯೊಡ್ಡಿ ಈ ಭಾಗದಲ್ಲಿ ಮಳೆ ಸುರಿಯಲು ಸಹಕಾರಿಯಾಗಿವೆ. ಇವು ಈ ಭಾಗದ ಮಳೆಗುಡ್ಡಗಳು ಎಂದೇ ಖ್ಯಾತ.

ಈ ಪ್ರದೇಶದಲ್ಲಿ ಕುರುಚಲು ಗಿಡಗಳ ಕಾಡು ಇದೆ. ಪುಟ್ಟೇಗೌಡನ ಕೆರೆ, ಚಟ್ನಳ್ಳಿ ಕೆರೆ, ದೊಡ್ಡಕೆರೆ, ಕೊಲ್ಲರಹಳ್ಳಿಕೆರೆ, ನಾಕಿನಕೆರೆ, ಅರಸಿನಕೆರೆಗಳು ಅಸುಪಾಸಿನಲ್ಲಿವೆ. ರಾಜಾ ಸರ್ಜಪ್ಪ ನಾಯಕನ ಕಾಲದಲ್ಲಿ ನಿರ್ಮಾಣವಾದ  ಐತಿಹಾಸಕ ಕೋಟೆಯೂ ಇಲ್ಲಿದೆ. ನವಿಲುಗಳು ಹೆಚ್ಚಾಗಿರುವುದರಿಂದ ಬೆಟ್ಟಕ್ಕೆ ನವಿಲುಗಡ್ಡ ಎಂಬ ಹೆಸರು ಬಂದಿದೆ. ಕರಡಿ, ಜಿಂಕೆ, ಚಿರತೆಗಳೂ ಇಲ್ಲಿವೆ.

ಗಣಿಗಾರಿಕೆ ಆರಂಭವಾದರೆ ಈ ಪ್ರದೇಶದ ಸುತ್ತಮುತ್ತಲಿನ ಜಮೀನುಗಳಲ್ಲಿನ ಬೆಳೆ ಹಾಳಾಗುತ್ತವೆ. ಪರಿಸರ ಮಾಲಿನ್ಯಕ್ಕೆ ಎಡೆಯಾಗುತ್ತದೆ ಎಂದು ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಪ್ರತಿಭಟನೆಯನ್ನೂ ನಡೆಸಿದ್ದಾರೆ. ಕುಡ್ಲೂರು, ಪುಂಡನಹಳ್ಳಿ, ಶಿವಪುರ, ಮುಂಡ್ರೆ, ಕೊರಟಿಕೆರೆ ಗ್ರಾಮಸ್ಥರು ಜಿಲ್ಲಾಧಿಕಾರಿ ಜಿ.ಸತ್ಯವತಿ ಅವರಿಗೆ ಮನವಿಯನ್ನೂ ಸಲ್ಲಿಸಿದ್ದಾರೆ.

ಉದ್ದೇಶಿತ ಗೋಮಾಳವು ಕುಡ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುತ್ತದೆ. ಗೋಮಾಳದಲ್ಲಿ ಕಲ್ಲು ಗಣಿಗಾರಿಕೆಗೆ ಅನುಮತಿ ದೊರೆತಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ ಎಂದು ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕುಮಾರ್‌ನಾಯಕ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಉದ್ದೇಶಿತ ಜಾಗವು ಡೀಮ್ಡ್‌ ಅರಣ್ಯ ವ್ಯಾಪ್ತಿಗೆ ಒಳಪಟ್ಟಿದೆ. ಅರಣ್ಯಾಧಿಕಾರಿಗಳು ದಾಖಲೆಗಳನ್ನು ತಿದ್ದಿ ಅದನ್ನು ಗೋಮಾಳ ಎಂದು ದಾಖಲಿಸಿದ್ದಾರೆ’ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.  ಆದರೆ ಇದು ಡೀಮ್ಡ್‌ ಅರಣ್ಯ ಪ್ರದೇಶವಲ್ಲ ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂಗರ್ಭ ವಿಜ್ಞಾನಿ ಡಾ.ಮಹೇಶ್‌ ಹೇಳಿದ್ದಾರೆ.

‘ಅರಣ್ಯ, ವನ್ಯಜೀವಿ, ಕಂದಾಯ, ಪಂಚಾಯತ್ ರಾಜ್ ಕಾಯ್ದೆಗಳನ್ನು ಉಲ್ಲಂಘಿಸಿ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ’ ಎಂದು ವೃಕ್ಷಲಕ್ಷ ಆಂದೋಲನದವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

‘ಕೆಮ್ಮಣ್ಣುಗುಂಡಿ ಗಣಿಗಾರಿಕೆಯಿಂದ ಅಪಾರ ಜೀವಸಂಕುಲ ನಾಶವಾಗಿದೆ. ಭದ್ರಾವತಿ ಅರಣ್ಯ ವಿಭಾಗದ ತರೀಕೆರೆ ತಾಲ್ಲೂಕಿನಲ್ಲಿ 1976ರಲ್ಲಿ ಶೇ 52 ರಷ್ಟು ದಟ್ಟ ಅರಣ್ಯ ಇತ್ತು. ಈಗ ಆದು ಶೇ 24ಕ್ಕೆ ಇಳಿದಿದೆ. ಗಣಿಗಾರಿಕೆ ಆರಂಭವಾದರೆ ಈಗಿರುವ ಕಾಡು ನಾಶವಾಗಲಿದೆ’ ಎಂದು ಪರಿಸರ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ. ನವಿಲುಗುಡ್ಡ ಉಳಿಸಲು ವೃಕ್ಷಲಕ್ಷ ಆಂದೋಲನದ ಅನಂತ ಹೆಗಡೆ ಅಶೀಸರ, ಪ್ರೊ.ಬಿ.ಎಂ.ಕುಮಾರಸ್ವಾಮಿ, ಡಾ.ಟಿ.ವಿ.ರಾಮಚಂದ್ರ ಹೋರಾಟಕ್ಕೆ ಮುಂದಾಗಿದ್ದಾರೆ.

* ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ನೀಡಿರುವ ನಿರಾಕ್ಷೇಪಣಾ ಪತ್ರ (ಎನ್‌ಒಸಿ) ಆಧರಿಸಿ ಅಲಂಕಾರಿಕ ಶಿಲೆ ಗಣಿಗಾರಿಕೆಗೆ ಅನುಮತಿ ನೀಡಲಾಗಿದೆ

–ಡಾ.ಮಹೇಶ್‌, ಹಿರಿಯ ಭೂಗರ್ಭ ವಿಜ್ಞಾನಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ

ಪ್ರತಿಕ್ರಿಯಿಸಿ (+)