ಶುಕ್ರವಾರ, ಡಿಸೆಂಬರ್ 6, 2019
17 °C

ಡಿಸೆಂಬರ್‌ಗೆ ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಡಿಸೆಂಬರ್‌ಗೆ ದಾವಣಗೆರೆಯಲ್ಲಿ ವಿಶ್ವ ಕನ್ನಡ ಸಮ್ಮೇಳನ

ಬೆಂಗಳೂರು: ‘ಮೂರನೇ ವಿಶ್ವ ಕನ್ನಡ ಸಮ್ಮೇಳನವನ್ನು ಇದೇ ವರ್ಷದ ಡಿಸೆಂಬರ್‌ ಮೊದಲ ಅಥವಾ ಎರಡನೇ ವಾರದಲ್ಲಿ ದಾವಣಗೆರೆಯಲ್ಲಿ ನಡೆಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.

ಸಮ್ಮೇಳನ ಏರ್ಪಡಿಸುವ ಸಂಬಂಧ ವಿಧಾನಸೌಧದಲ್ಲಿ ಮಂಗಳವಾರ ನಡೆದ ನಾಡಿನ ಗಣ್ಯರು, ಹಿರಿಯ ಸಾಹಿತಿಗಳು, ಕಲಾವಿದರ ಸಭೆಯಲ್ಲಿ ಮಾತನಾಡಿದ ಕೆಲವರು, ‘ರಾಜ್ಯದಲ್ಲಿ ಬರಗಾಲ ಇರುವುದರಿಂದ ಸಮ್ಮೇಳನ ಮುಂದೂಡುವುದು ಸೂಕ್ತ’ ಎಂದು ಅಭಿಪ್ರಾಯಪಟ್ಟರು.

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ಸಂಭಾವ್ಯ ಬರಗಾಲವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ. ಬರ ಪರಿಸ್ಥಿತಿ ಹಾಗೂ ಕನ್ನಡ ಸಮ್ಮೇಳನಕ್ಕೆ ತಳಕು ಹಾಕುವುದು ಬೇಡ. ವಿಜೃಂಭಣೆಯಿಂದ ಸಮ್ಮೇಳನ ನಡೆಸದೇ ಇದ್ದರೂ ಕನ್ನಡದ ಕಂಪು ಹರಡಲು ಸರ್ಕಾರ ಪ್ರಾಮಾಣಿಕ ಪ್ರಯತ್ನ  ಮಾಡಲಿದೆ’ ಎಂದು ಹೇಳಿದರು.

ಸರ್ಕಾರಿ ಶಾಲೆಯಲ್ಲಿ ಓದಿ, ವಿಶ್ವದಾದ್ಯಂತ ಹೆಸರು ಮಾಡಿರುವ, ಭಾರತ ರತ್ನ ಪುರಸ್ಕೃತ ಕನ್ನಡಿಗ ವಿಜ್ಞಾನಿ ಪ್ರೊ. ಸಿ.ಎನ್. ಆರ್‌. ರಾವ್ ಅವರಿಂದ ಸಮ್ಮೇಳನ ಉದ್ಘಾಟಿಸಿದರೆ, ಕನ್ನಡದಲ್ಲಿ ಓದುವವರಿಗೆ ಪ್ರೇರಣೆ ನೀಡಿದಂತಾಗುತ್ತದೆ ಎಂದು ಅನೇಕರು ಸಲಹೆ ನೀಡಿದರು.

ಆದರೆ, ಈ ಕುರಿತು ಸಭೆ ಯಾವುದೇ ತೀರ್ಮಾನಕ್ಕೆ ಬರಲಿಲ್ಲ.

ಸಭೆಯ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ, ‘ಸಮ್ಮೇಳನ ಮುಂದೂಡುವ ಪ್ರಶ್ನೆಯಿಲ್ಲ. ಹಿಂದಿನ ಸಮ್ಮೇಳನದ ಅತಿಥಿಗಳ ಕುರಿತು ಕೆಲವರು ಆಕ್ಷೇಪ ವ್ಯಕ್ತಪಡಿಸಿದರು. ಅಂತಹ ಲೋಪವಾಗದಂತೆ ಸರ್ಕಾರ ಮುನ್ನೆಚ್ಚರಿಕೆ ವಹಿಸಲಿದೆ’ ಎಂದು ಹೇಳಿದರು.

ಸಭೆಯನ್ನು ಕಾಡಿದ ಬರ, ಹಿಂದಿ ಹೇರಿಕೆ:  ಸಮ್ಮೇಳನ ಕುರಿತು ಸಲಹೆ ಪಡೆಯಲು ಕರೆದಿದ್ದ ಸಭೆಯಲ್ಲಿ ರಾಜ್ಯವನ್ನು ಕಾಡುತ್ತಿರುವ ಬರಗಾಲ, ಕೋಮುಗಲಭೆ, ಹಿಂದಿ ಹೇರಿಕೆಯ ವಿಷಯಗಳು ಪ್ರಮುಖವಾಗಿ ಪ್ರಸ್ತಾಪವಾದವು.

ಕವಿ ಪ್ರೊ. ಚಂದ್ರಶೇಖರ ಪಾಟೀಲ(ಚಂಪಾ) ಅವರು, ನಿರಂತರ ಬರಗಾಲ ರಾಜ್ಯವನ್ನು ಕಾಡುತ್ತಿದ್ದು ರೈತರು ಆತ್ಮಹತ್ಯೆ ಹಾದಿ ಹಿಡಿದಿದ್ದಾರೆ.  ದಕ್ಷಿಣ ಕನ್ನಡದಲ್ಲಿ ಕೋಮು ಸಾಮರಸ್ಯ ಹದಗೆಟ್ಟಿದೆ. ಕೇಂದ್ರ ಸರ್ಕಾರ ಹಿಂದಿ ಹೇರಲು ಪ್ರಯತ್ನಿಸುವ ಮೂಲಕ ಭಾಷಾ ಸಾಮರಸ್ಯಕ್ಕೂ ಧಕ್ಕೆ ತಂದಿದೆ. ಇದು ಕೇವಲ ಸಾಹಿತ್ಯ ಸಮ್ಮೇಳನವಲ್ಲ. ಕನ್ನಡಿಗರ ಹಬ್ಬ. ‘ ಹಾಡುವ ಸಭೆಯಲ್ಲಿ ನರಳುವುದುಂಟೇ’ ಎಂದು ಕವಿ ದ.ರಾ. ಬೇಂದ್ರೆ ಹೇಳುತ್ತಾರೆ. ಬರ ಇರುವುದರಿಂದ ಸಮ್ಮೇಳನ ಮುಂದೂಡುವುದು ಒಳ್ಳೆಯದು’  ಎಂದು ಪ್ರತಿಪಾದಿಸಿದರು.

ಇದಕ್ಕೆ ಧ್ವನಿಗೂಡಿಸಿದ ಕಾದಂಬರಿಕಾರ ಕುಂ. ವೀರಭದ್ರಪ್ಪ, ‘ಹಿಂದಿ ಹೇರಿಕೆ ತಡೆಯಲು ಸರ್ಕಾರ ಮುಂದಾಗಬೇಕು. ರಾಷ್ಟ್ರೀಯ ಪಕ್ಷಗಳು ಇದರ ಬಗ್ಗೆ ತನ್ನ ನಿಲುವು ಸ್ಪಷ್ಟಪಡಿಸಬೇಕು’ ಎಂದರು.

ರೈತ ಹೋರಾಟಗಾರ ಕಡಿದಾಳ್‌ ಶಾಮಣ್ಣ, ‘ಕೊಬ್ಬರಿ ಚೀಲಗಳಲ್ಲಿಯೂ ಕನ್ನಡದ ಅಕ್ಷರಗಳು ಕಾಣಿಸುತ್ತಿಲ್ಲ. ಕನ್ನಡ, ಕೃಷಿ ಉಳಿಸುವ ಕೆಲಸ ಆಗಬೇಕಾಗಿದೆ’ ಎಂದು ಅಭಿಪ್ರಾಯಪಟ್ಟರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್‌.ಜಿ. ಸಿದ್ದರಾಮಯ್ಯ, ‘ರಾಜ್ಯವು ಬರದ ಛಾಯೆಯಲ್ಲಿರುವಾಗ ಸಾರಸ್ವತ ಲೋಕದಲ್ಲಿರುವ ಜನರು ಸೂಕ್ಷ್ಮತೆ ಹಾಗೂ ಸಂವೇದನಾಶೀಲತೆ ಕಳೆದುಕೊಳ್ಳಬಾರದು’ ಎಂದು ಸಲಹೆ ನೀಡಿದರು.

ನಾರಾಯಣಮೂರ್ತಿ ಕನ್ನಡ ದ್ರೋಹಿ–ಚಂಪಾ: ‘ಇನ್ಪೊಸಿಸ್‌ ಸಂಸ್ಥಾಪಕ ಎನ್.ಆರ್‌. ನಾರಾಯಣಮೂರ್ತಿ ಕನ್ನಡ ವಿರೋಧಿ ಮಾತ್ರವಲ್ಲ ಕನ್ನಡದ್ರೋಹಿ. ಅಂತಹವರನ್ನು  ಸಮ್ಮೇಳನಕ್ಕೆ ಕರೆಯಬೇಡಿ’ ಎಂದು ಪ್ರೊ. ಚಂಪಾ ಆಗ್ರಹಿಸಿದರು.

ಮೈಸೂರಿನಲ್ಲಿ ನಡೆದ ಮೊದಲ ಸಮ್ಮೇಳನ ಉದ್ಘಾಟಿಸಿದ್ದ ಕುವೆಂಪು ಅವರು, ಪೂರ್ವ ಪ್ರಾಥಮಿಕ ಶಾಲೆಯಿಂದ ಸ್ನಾತಕೋತ್ತರ ಪದವಿಯವರೆಗೂ ಕನ್ನಡ  ಮಾಧ್ಯಮದಲ್ಲೇ ಶಿಕ್ಷಣ ನೀಡಬೇಕು ಎಂದು ಕರೆ ನೀಡಿದ್ದರು. ಬೆಳಗಾವಿಯಲ್ಲಿ ನಡೆದಿದ್ದ ಎರಡನೇ ಸಮ್ಮೇಳನ ಉದ್ಘಾಟಿಸಿದ್ದ ನಾರಾಯಣಮೂರ್ತಿ ಇಂಗ್ಲಿಷ್‌ ಮಾಧ್ಯಮ ಇರಬೇಕು ಎಂದು ಪ್ರತಿಪಾದಿಸಿ, ಕನ್ನಡಕ್ಕೆ ದ್ರೋಹ ಎಸಗಿದರು ಎಂದು ಜರಿದರು. ಇದಕ್ಕೆ  ಕುಂ.ವೀರಭದ್ರಪ್ಪ ಧ್ವನಿಗೂಡಿಸಿದರು.

ವಾರದೊಳಗೆ ಸಾಂಸ್ಕೃತಿಕ  ನೀತಿ ಜಾರಿ: ಮುಖ್ಯಮಂತ್ರಿ

‘ಇನ್ನು ಒಂದು ವಾರದೊಳಗೆ ಸಾಂಸ್ಕೃತಿಕ ನೀತಿಯನ್ನು ಜಾರಿ ಮಾಡಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಸಾಹಿತಿ ಕೆ.ವೈ. ನಾರಾಯಣಸ್ವಾಮಿ ಅವರ ಸಲಹೆಗೆ ಪ್ರತಿಕ್ರಿಯಿಸಿದ ಅವರು, ವಿವಿಧ ಅಕಾಡೆಮಿಗಳ ಅಧ್ಯಕ್ಷ, ಸದಸ್ಯ ಸ್ಥಾನ ಕೂಡಲೇ ಭರ್ತಿ ಮಾಡಲಾಗುವುದು ಎಂದು ಹೇಳಿದರು.

ಐಶ್ವರ್ಯಾ ರೈ, ದೀಪಿಕಾ ಬೇಡ

ಕನ್ನಡದ ಒಂದು ಶಬ್ದವನ್ನೂ ಉಚ್ಚರಿಸದ ಐಶ್ವರ್ಯಾ ರೈ, ದೀಪಿಕಾ ಪಡುಕೋಣೆ ಅಂತಹ ವರನ್ನು ಸಮ್ಮೇಳನಕ್ಕೆ ಕರೆಯುವುದು ಬೇಡ ಎಂದು ಅನೇಕರು ಸಭೆಯಲ್ಲಿ ಆಗ್ರಹಿಸಿದರು. ರೈ ವಿಶ್ವಸುಂದರಿ ಅಲ್ಲ, ನಿಜವಾದ ಸುಂದರಿ ಸಾಲುಮರದ ತಿಮ್ಮಕ್ಕ. ಅಂತಹ ಸಾಧಕರನ್ನು ಕರೆಯಬೇಕು ಎಂಬ ಆಗ್ರಹ ವ್ಯಕ್ತವಾಯಿತು.

ಬಾರದ ಕಾರ್ನಾಡ, ಕಂಬಾರ

ಸಮ್ಮೇಳನ ಕುರಿತು ಚರ್ಚಿಸಲು ಮುಖ್ಯಮಂತ್ರಿ ನಡೆಸಿದ ಸಭೆಗೆ ಜ್ಞಾನಪೀಠ ಪುರಸ್ಕೃತ ಸಾಹಿತಿಗಳಾದ ಗಿರೀಶ ಕಾರ್ನಾಡ, ಚಂದ್ರಶೇಖರ ಕಂಬಾರ ಬಂದಿರಲಿಲ್ಲ.

‘ಸಭೆಗೆ ಬರುವಂತೆ ಪತ್ರ ಕಳುಹಿಸಲಾಗಿತ್ತು. ಅವರು ಗೈರು ಹಾಜರಿಗೆ ಕಾರಣ ಗೊತ್ತಿಲ್ಲ’ ಎಂದು ಮುಖ್ಯಮಂತ್ರಿ ಸಚಿವಾಲಯದ ಮೂಲಗಳು ತಿಳಿಸಿವೆ.

ಯಾರು ಏನೆಂದರು?

*ಆಗ್ನೇಯ ಏಷ್ಯಾ, ಮಲೇಷ್ಯಾ ಮತ್ತು ಇಂಡೋನೇಷ್ಯಾದಲ್ಲಿರುವ ಕನ್ನಡಿಗರನ್ನು ಆಮಂತ್ರಿಸಬೇಕು.

–ಡಾ. ಎಂ. ಚಿದಾನಂದಮೂರ್ತಿ

ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿ, ವಿಶ್ವ ವಿಜ್ಞಾನಿಯಾಗಿ ಭಾರತರತ್ನ ಪಡೆದ ಪ್ರೊ. ಸಿ.ಎನ್.ಆರ್‌. ರಾವ್ ಅವರನ್ನು ಸಮ್ಮೇಳನದ ಉದ್ಘಾಟಕರಾಗಿ ಪರಿಗಣಿಸಿ

–ಡಾ. ಹಂಪ ನಾಗರಾಜಯ್ಯ

* ಕಳೆದ ಸಮ್ಮೇಳನದಲ್ಲಿ ಹೈದರಾಬಾದ್– ಕರ್ನಾಟಕ ಪ್ರದೇಶದ ಸಾಹಿತಿಗಳ ಮೂರು ಪುಸ್ತಕಗಳನ್ನು ಮಾತ್ರ ಪ್ರಕಟಿಸಲಾಗಿತ್ತು. ಈ ಬಾರಿ ಸೂಕ್ತ ನ್ಯಾಯ ಒದಗಿಸಬೇಕು

–ಡಾ. ಬಸವರಾಜ ಸಬರದ

ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಷೆ ಮತ್ತು ಕೋಮು ಸಾಮರಸ್ಯ  ಕಾಪಾಡುವ ಕುರಿತ ಕಾರ್ಯಕ್ರಮಗಳಿಗೆ ಹೆಚ್ಚು ಆದ್ಯತೆ ಇರಬೇಕು

–ಡಾ.ಕೆ. ಮರುಳಸಿದ್ದಪ್ಪ

ರಾಷ್ಟ್ರದ ವಿವಿಧ ಭಾಷೆಗಳಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಸಮಗ್ರ ಚಿತ್ರಣ ನೀಡುವ ಸಾಕ್ಷ್ಯಚಿತ್ರ ನಿರ್ಮಿಸಿ, ಎಲ್ಲೆಡೆ ಪ್ರಸಾರ ಮಾಡಬೇಕು.

–ಪ್ರೊ. ಕಮಲಾ ಹಂಪನಾ

* ಕನ್ನಡವು ಸೌಂದರ್ಯದ ಭಾಷೆಯಾಗಿ, ಘನತೆಯ ಭಾಷೆಯಾಗಿ ಉಳಿಯಬೇಕಾದರೆ ಡಿಜಿಟಲ್ ಸ್ವರೂಪ ನೀಡುವ ಕೆಲಸ ಮಾಡಬೇಕು

–ಟಿ.ಎನ್. ಸೀತಾರಾಂ

***

ಅವಧಿಗೆ ಮುನ್ನ ಚುನಾವಣೆ ಇಲ್ಲ–ಸಿದ್ದರಾಮಯ್ಯ ಸ್ಪಷ್ಟನೆ

‘ಅವಧಿಗೆ ಮುನ್ನ ಚುನಾವಣೆಗೆ ಹೋಗುವುದಿಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರುಚ್ಚರಿಸಿದರು.

ಸಭೆಯಲ್ಲಿ  ವಿಷಯ ಪ್ರಸ್ತಾಪಿಸಿದ ಕಲಾವಿದ ‘ಮುಖ್ಯಮಂತ್ರಿ’ ಚಂದ್ರು, ಡಿಸೆಂಬರ್‌ನಲ್ಲಿಯೇ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ ಎಂಬ ಚರ್ಚೆ ನಡೆಯುತ್ತಿದೆ. ಹಾಗಾದಲ್ಲಿ ನವೆಂಬರ್‌ ಅಥವಾ ಡಿಸೆಂಬರ್‌ನಲ್ಲಿ ಸಮ್ಮೇಳನ ನಡೆಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

‘ನಿಗದಿಯಂತೆ ಏಪ್ರಿಲ್‌–ಮೇ ನಲ್ಲಿಯೇ ಚುನಾವಣೆಗೆ ಹೋಗುತ್ತೇವೆ. ಅವಧಿಗೆ ಮುನ್ನ ಚುನಾವಣೆಗೆ ಹೋಗುವ ಪ್ರಶ್ನೆಯೇ ಇಲ್ಲ. ಅದೆಲ್ಲ ವದಂತಿ ಅಷ್ಟೆ’ ಎಂದು  ಸಿದ್ದರಾಮಯ್ಯ ಸಮಜಾಯಿಷಿ ನೀಡಿದರು.

ಪ್ರತಿಕ್ರಿಯಿಸಿ (+)