ಭಾನುವಾರ, ಡಿಸೆಂಬರ್ 8, 2019
21 °C

ಮಾಯಾವತಿ ಅಬ್ಬರ: ಸದಸ್ಯತ್ವಕ್ಕೆ ರಾಜೀನಾಮೆ

ಪಿಟಿಐ Updated:

ಅಕ್ಷರ ಗಾತ್ರ : | |

ಮಾಯಾವತಿ ಅಬ್ಬರ: ಸದಸ್ಯತ್ವಕ್ಕೆ ರಾಜೀನಾಮೆ

ನವದೆಹಲಿ: ದಲಿತರ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡಲು ಬಿಜೆಪಿ ಮತ್ತು ಸಭಾಪತಿ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಅವರು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

ಉತ್ತರ ಪ್ರದೇಶದಲ್ಲಿ ದಲಿತರ ವಿರುದ್ಧ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಮಾಯಾವತಿ ಅವರು ರಾಜ್ಯಸಭೆಯಲ್ಲಿ ಮಂಗಳವಾರ ಬೆಳಿಗ್ಗೆ ಮಾತನಾಡಿದರು. ಮಾತನ್ನು ಉತ್ತರ ಪ್ರದೇಶದ ಸಹಾರನ್‌ಪುರದಲ್ಲಿ ನಡೆದ ಹಿಂಸಾಚಾರಕ್ಕೆ ಸೀಮಿತಗೊಳಿಸಬೇಕು ಎಂದು ಉಪಸಭಾಪತಿ ಸೂಚಿಸಿದರು.

ಇದರಿಂದ ಕೆರಳಿದ ಮಾಯಾವತಿ ಅವರು ‘ನನ್ನ ಸಮುದಾಯದ ಮೇಲೆ ಆಗುತ್ತಿರುವ ದೌರ್ಜನ್ಯದ ಬಗ್ಗೆ ಮಾತನಾಡಲು ಅವಕಾಶ ಇಲ್ಲ ಎಂದಾದರೆ ನಾನು ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತೇನೆ’ ಎಂದು ಆಕ್ರೋಶದಿಂದ ಹೇಳಿದರು. ಸಿಟ್ಟಿನಲ್ಲೇ ರಾಜ್ಯಸಭೆಯಿಂದ ಹೊರನಡೆದರು.

‘ನಾನು ಮಾತನಾಡಲು ಎದ್ದು ನಿಂತಾಗ ಆಡಳಿತ ಪಕ್ಷದ ಸದಸ್ಯರು ಎದ್ದು ನಿಂತು ಅಡ್ಡಿಪಡಿಸಿದರು.  ಅಡ್ಡಿ ಪಡಿಸುವವರನ್ನು ತಡೆಯುವುದರ ಬದಲಿಗೆ ಕೊಟ್ಟ ಮೂರು ನಿಮಿಷ ಪೂರ್ಣಗೊಳ್ಳುತ್ತಿದ್ದಂತೆಯೇ ಮಾತು ಮುಗಿಸಲು ಉಪಸಭಾಪತಿ ಸೂಚಿಸಿದರು.  ಸದಸ್ಯರು ಮೂರು ನಿಮಿಷಕ್ಕಿಂತ ಹೆಚ್ಚು ಮಾತನಾಡಬಾರದೆಂಬ ನಿಯಮವಿದೆಯೇ’ ಎಂದು ರಾಜೀನಾಮೆ ಪತ್ರದಲ್ಲಿ ಮಾಯಾವತಿ ಪ್ರಶ್ನಿಸಿದ್ದಾರೆ.

ಮಾಯಾವತಿ ಅವರ ರಾಜೀನಾಮೆಯನ್ನು ಅಂಗೀಕರಿಸುವುದು ಸಭಾಪತಿಯ ವಿವೇಚನೆಗೆ ಬಿಟ್ಟ ವಿಚಾರ ಎಂದು ರಾಜ್ಯಸಭಾ ಕಾರ್ಯಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ನಿಯಮ ಪ್ರಕಾರ, ರಾಜೀನಾಮೆ ಪತ್ರ ಸಂಕ್ಷಿಪ್ತವಾಗಿರಬೇಕು ಮತ್ತು ಕಾರಣ ನೀಡಿರಬಾರದು. ಆದರೆ ಮಾಯಾವತಿ ಅವರ ರಾಜೀನಾಮೆ ಪತ್ರ ಮೂರು ಪುಟಗಳಷ್ಟು ದೀರ್ಘವಾಗಿದೆ ಮತ್ತು ಕಾರಣಗಳನ್ನು ವಿವರಿಸಲಾಗಿದೆ.

ಅವರ ಸದಸ್ಯತ್ವದ ಅವಧಿ ಮುಂದಿನ ಏಪ್ರಿಲ್‌ಗೆ ಕೊನೆಗೊಳ್ಳಲಿದೆ.

ಕಲಾಪ ಬಲಿ!

ಉಭಯ ಸದನಗಳ ಮುಂಗಾರು ಅಧಿವೇಶನದ ಎರಡನೇ ದಿನದ ಕಲಾಪ ವಿರೋಧ ಪಕ್ಷಗಳ ಗದ್ದಲ, ಪ್ರತಿಭಟನೆಗೆ ಬಲಿಯಾಯಿತು.

ಪ್ರತಿಕ್ರಿಯಿಸಿ (+)